ಅಮಿತ್ ಶಾಗೆ ಆರೆಸ್ಸೆಸ್ ನೀಡಿದ ಸಂದೇಶವೇನು..?

By Suvarna Web DeskFirst Published Dec 20, 2017, 7:29 AM IST
Highlights

ಬರುವ ಸಂಕ್ರಾಂತಿ ಹಬ್ಬದ ಒಳಗಾಗಿ ಪಕ್ಷದ ರಾಜ್ಯ ಘಟಕದಲ್ಲಿರುವ ಹಲವು ಬಿಕ್ಕಟ್ಟುಗಳನ್ನು ಬಗೆಹರಿಸದಿದ್ದರೆ ಕರ್ನಾಟಕ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರುವ ಕನಸು ನನಸಾಗುವುದು ಕಷ್ಟ ಎಂಬ ಎಚ್ಚರಿಕೆ ರೂಪದ ಸಲಹೆಯನ್ನು ಬಿಜೆಪಿಯ ಮಾತೃ ಸಂಸ್ಥೆ ಎಂದೇ ಕರೆಯಲ್ಪಡುವ ಸಂಘ ಪರಿವಾರದ ಮುಖಂಡರು ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ.

ಬೆಂಗಳೂರು (ಡಿ.20): ಬರುವ ಸಂಕ್ರಾಂತಿ ಹಬ್ಬದ ಒಳಗಾಗಿ ಪಕ್ಷದ ರಾಜ್ಯ ಘಟಕದಲ್ಲಿರುವ ಹಲವು ಬಿಕ್ಕಟ್ಟುಗಳನ್ನು ಬಗೆಹರಿಸದಿದ್ದರೆ ಕರ್ನಾಟಕ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರುವ ಕನಸು ನನಸಾಗುವುದು ಕಷ್ಟ ಎಂಬ ಎಚ್ಚರಿಕೆ ರೂಪದ ಸಲಹೆಯನ್ನು ಬಿಜೆಪಿಯ ಮಾತೃ ಸಂಸ್ಥೆ ಎಂದೇ ಕರೆಯಲ್ಪಡುವ ಸಂಘ ಪರಿವಾರದ ಮುಖಂಡರು ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ.

ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಕರ್ನಾಟಕದಲ್ಲೂ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿರುವ ಮಧ್ಯೆ ಸಂಘ ಪರಿವಾರದ ಈ ಸಂದೇಶ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಚುನಾವಣೆಯಲ್ಲಿ ಎದುರಿಸಲು ಬೇಕಾದಷ್ಟು ಪೂರ್ವ ಸಿದ್ಧತೆ ಬಿಜೆಪಿಯಲ್ಲಿ ನಡೆಯುತ್ತಿಲ್ಲ.

Latest Videos

ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ ಚೆನ್ನಾಗಿಯೇ ನಡೆಯುತ್ತಿದೆ. ಆದರೆ, ಅದು ಕೇವಲ ಯಾತ್ರೆಯಾಗಿರದೆ ಪಕ್ಷದ ಕಾರ್ಯಕರ್ತರನ್ನು ಜೋಡಿಸುವ ಮತ್ತು ತಳಮಟ್ಟದಲ್ಲಿ ಪಕ್ಷದ ಸಂಘಟನೆ ಬಲಪಡಿಸುವುದಕ್ಕೆ ಪೂರಕವಾಗಿರ ಬೇಕು ಎಂಬ ಸಲಹೆಯನ್ನು ನೀಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಕಳೆದ ಆಗಸ್ಟ್‌ನಲ್ಲಿ ನೀವು ಮೂರು ದಿನಗಳ ಕಾಲ ರಾಜ್ಯಕ್ಕೆ ಭೇಟಿ ಕೊಟ್ಟಿದ್ದ ವೇಳೆ ನೀಡಿದ ಎಲ್ಲ ಸಲಹೆ-ಸೂಚನೆಗಳೂ ಪಾಲನೆಯಾಗಿಲ್ಲ.

ಆದಷ್ಟು ಶೀಘ್ರ ನೀವು ಆಗಮಿಸಿ ಮತ್ತೊಮ್ಮೆ ಎಲ್ಲ ಮುಖಂಡರೊಂದಿಗೆ ಸಭೆ ನಡೆಸುವ ಮೂಲಕ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಅಡ್ಡಿ ಉಂಟಾಗಲಿದೆ ಎಂಬ ಮಾತನ್ನು ಅಮಿತ್ ಶಾ ಅವರಿಗೆ ತಲುಪಿಸಲಾಗಿದೆ ಎನ್ನಲಾಗಿದೆ.

ನೀವು ಏನೇ ಕ್ರಮ, ನಿರ್ಧಾರ ರಣತಂತ್ರ ಮಾಡುವುದಿದ್ದರೂ ಆದಷ್ಟು ಬೇಗನೆ ಮಾಡಿ.ಪಕ್ಷದ ರಾಜ್ಯ ಘಟಕದಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂಬಂತೆ ಕಂಡು ಬಂದರೂ ವಾಸ್ತವ ಪರಿಸ್ಥಿತಿ ಹಾಗಿಲ್ಲ ಎಂಬ ಅಂಶವೂ ಅಮಿತ್ ಶಾ ಅವರಿಗೆ ರವಾನೆಗೊಂಡಿದೆ ಎನ್ನಲಾಗಿದೆ.

ವರದಿ: ವಿಜಯ್ ಮಲಗಿಹಾಳ - ಕನ್ನಡಪ್ರಭ

click me!