SP ರವಿ ಚನ್ನಣ್ಣನವರ ಕೃಷಿಕನೂ ಹೌದು! ಜನಮೆಚ್ಚಿದ ಖಡಕ್ ಪೊಲೀಸ್'ಗೆ ಮಣ್ಣಿನ ಮಗನಾಗುವ ಆಸೆ

By Suvarna Web DeskFirst Published Apr 25, 2017, 4:55 AM IST
Highlights

ದೇವನೂರ ಮಹಾದೇವರ ‘ಕುಸುಮಬಾಲೆ' ಕೃತಿಯ ಆರಂಭ ‘ಬೆಟ್ಟದ ನೆಲ್ಲಿಕಾಯಿ, ಸಮುದ್ರದೊಳಗಣ ಉಪ್ಪು.. ಎತ್ತಣಿಂದೆತ್ತ ಸಂಬಂಧವಯ್ಯ' ಎಂದು ಆರಂಭವಾಗಿ, ‘ಸಂಬಂಜಾ ಅನ್ನೋದು ದೊಡ್ದುಕನಾ' ಎಂಬುದಾಗಿ ಕೊನೆಯಾಗುತ್ತದೆ. ಇಂತಹದ್ದೇ ರೂಪಕವನ್ನು ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ಅವರಿಗೂ ಹೋಲಿಸಿದಲ್ಲಿ ಹೌದೆನಿಸುತ್ತದೆ.

ದೇವನೂರ ಮಹಾದೇವರ ‘ಕುಸುಮಬಾಲೆ' ಕೃತಿಯ ಆರಂಭ ‘ಬೆಟ್ಟದ ನೆಲ್ಲಿಕಾಯಿ, ಸಮುದ್ರದೊಳಗಣ ಉಪ್ಪು.. ಎತ್ತಣಿಂದೆತ್ತ ಸಂಬಂಧವಯ್ಯ' ಎಂದು ಆರಂಭವಾಗಿ, ‘ಸಂಬಂಜಾ ಅನ್ನೋದು ದೊಡ್ದುಕನಾ' ಎಂಬುದಾಗಿ ಕೊನೆಯಾಗುತ್ತದೆ. ಇಂತಹದ್ದೇ ರೂಪಕವನ್ನು ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ಅವರಿಗೂ ಹೋಲಿಸಿದಲ್ಲಿ ಹೌದೆನಿಸುತ್ತದೆ.

ನಕ್ಸಲ್‌ಪೀಡಿತ ಜಿಲ್ಲೆ ಶಿವಮೊಗ್ಗದಲ್ಲಿದ್ದಾಗ ಅಕ್ರಮ ಚಟುವಟಿಕೆಯನ್ನು ತಹಬದಿಗೆ ತಂದು, ಪೊಲೀಸ್‌ ಇಲಾಖೆಯಲ್ಲಿ ಶಿಸ್ತು ಮೂಡಿಸಿದ್ದ ರವಿ ಚನ್ನಣ್ಣನವರ ಮೈಸೂರಿಗೆ ವರ್ಗವಾದರು. ಬರುಬರುತ್ತಿದ್ದಂತೆ ತಮ್ಮ ಕೈಯಲ್ಲಿ ಕಳೆದ ಹತ್ತು ವರ್ಷಗಳ ಎಲ್ಲಾ ದಾಖಲೆಗಳೂ ಪಕ್ಕಾ ಇರಬೇಕೆನ್ನುವಷ್ಟರೊಳಗೆ, ಈಗ ಅವರ ಕೈಯಲ್ಲಿ ಮೈಸೂರು- ಚಾಮರಾಜನಗರ ಮಣ್ಣಲ್ಲಿ ತೆಂಗು ಬೆಳೆಯಬಹುದೇ? ಬೇಡವೇ? ಎಂಬ ಮಾಹಿತಿಯೂ ಇದೆ!! ಪೊಲೀಸ್‌ ಇಲಾಖೆಗೂ- ಕೃಷಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ!!!

ತರಕಾರಿ ಬೆಳೆಯುವ ಆಸೆ 

ಅವರೇ ಹೇಳುವ ಹಾಗೆ ‘ಮೈಸೂರು, ಚಾಮರಾಜನಗರ ಮಣ್ಣು ತೆಂಗು ಬೆಳೆಗೆ ಒಪ್ಪುವುದಿಲ್ಲ, ಇದು ಸಾಂಪ್ರದಾಯಿಕ ಕೃಷಿಗೇ ವೇದ್ಯವಾಗಿದೆ. ಆದರೆ ನಮ್ಮ ರೈತರಿಗೆ ಯಾಕೆ ಇದು ಗೊತ್ತಾಗುತ್ತಿಲ್ಲ' ಎನ್ನುವ ಚನ್ನಣ್ಣನವರ ಮನಸ್ಸು ಮರಳಿ ಮಣ್ಣಿನತ್ತವೇ ಹರಿಯುತ್ತದೆ. ತಮ್ಮೂರಿನಲ್ಲಿ ಇರುವ 17 ಎಕರೆ ಒಣ ಜಮೀನಿನಲ್ಲಿ ನೀರುಣಿಸಿ ಕೃಷಿ ಮಾಡಬೇಕೆಂದು ಬಯಸಿದ್ದಾರೆ. ಹೆಸರು, ಉದ್ದು, ಶೇಂಗಾ ಬೆಳೆಯುತ್ತಿದ್ದ ಜಾಗದಲ್ಲಿ ಪಾಲಿಹೌಸ್‌ ಮಾಡಿ ತರಕಾರಿ ಬೆಳೆಯಬೇಕೆಂದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಐದು ಕಡೆಗಳಲ್ಲಿ ಗ್ರಾಮವಾಸ್ತವ್ಯ ಹೂಡಿದ್ದಾಗಲೂ ಅಲ್ಲಿನ ಜನರ ದುಃಖ ದುಮ್ಮಾನ ಆಲಿಸಲಷ್ಟೇ ಸೀಮಿತವಾಗದೆ, ಕೃಷಿಯಲ್ಲಿ ಪ್ರಗತಿಯನ್ನು ನೋಡಲು ವಿಸ್ತರಿಸಿಕೊಂಡಿದ್ದಾರೆ. ಕೃಷಿ ಭೂಮಿಯಲ್ಲೇ ‘ನಮ್ಮೊಳಗೊಬ್ಬ ಸಾಧಕ'ನನ್ನು ಗುರುತಿಸಲೂ ತಂಡ ರಚಿಸಿದ್ದಾರೆ.

ಬಾಲ್ಯದಲ್ಲಿ ಕೃಷಿ ಕೆಲಸ

18ನೇ ವಯಸ್ಸಿನವರೆಗೂ ತಂದೆ, ತಾಯಿ, ತಮ್ಮನ ಜತೆಗೂಡಿ ಒಣಭೂಮಿಯಲ್ಲಿ ದುಡಿದಿದ್ದನ್ನು ಇನ್ನೂ ಮರೆತಿಲ್ಲ. ಟಿ. ನರಸೀಪುರದಲ್ಲಿ ಕೃಷಿ ಮಾಡುತ್ತಿರುವ ನಿವೃತ್ತ ಯೋಧ ನಮಿತ್‌ ಅವರಿಂದಲೂ ಸ್ಫೂರ್ತಿ ಪಡೆದಿರುವ ರವಿ ಅವರು ತನಗೆ ಚಿಕ್ಕ ಚಿಕ್ಕ ಅಂಶಗಳೇ ಖುಷಿ ಎನ್ನುತ್ತಾರೆ. ಕೈಖರ್ಚಿಗೆ ಹಣವಿಲ್ಲದಿದ್ದಾಗ ಹೋಟೆಲ್‌ ಸೇರಿ ಮಾಣಿಯಾಗಿದ್ದು, ಬಾರ್‌ನಲ್ಲಿ ಲೋಟಕ್ಕೆ ಸೋಡಾ ಬಿಡುವುದನ್ನು ‘ಕಾಯಕವೇ ಕೈಲಾಸ'ವೆಂಬಂತೆ ದುಡಿದಿದ್ದೇನೆ. ಕಷ್ಟವೆನಿಸಿದ್ದನ್ನೇ (ಡಿಫಿಕಲ್ಟ್‌) ಆಯ್ಕೆ ಮಾಡಿಕೊಂಡರೆ ಉಳಿದದ್ದು ಕಷ್ಟವಲ್ಲ; ಪ್ರಾಮಾಣಿಕತೆ ಇದ್ದೇ ಇರುತ್ತದೆ, ನನ್ನ ತತ್ವದೊಂದಿಗೆ ಎಂದೂ ರಾಜಿಮಾಡಿಕೊಂಡವನಲ್ಲ. ಅದೇ ರೀತಿ ಕೃಷಿಯೂ ಕೂಡ ಎನ್ನುವ ರವಿ ಚನ್ನಣನವರ ಮಾತುಗಳು ಪಚ್ಚೆ ಪೈರಾಗಿದ್ದವು.

ಉಸಿರಾಡುವುದು ಪೊಲೀಸ್‌ ಗಾಳಿ

ಕೃಷಿಯ ಮೆಲುಕು ಅವರಿಗಿದ್ದರೂ ಉಸಿರಾಡುವುದು ಪೊಲೀಸ್‌ ಗಾಳಿ. ವ್ಯವಸ್ಥೆಯೊಳಗೆ ಪೊಲೀಸರೆಂದರೆ ದೊಡ್ಡವರಿಗೆ ರಕ್ಷಣೆ ನೀಡು­ವುದಕ್ಕೆ, ದುಡ್ಡಿದ್ದವರ ಹಿತ ಕಾಯುವುದಕ್ಕೆ ಎಂಬ ಪೂರ್ವಗ್ರಹವನ್ನೇ ಬದಲಿಸಬೇಕು. ಒಬ್ಬ ದುರ್ಬಲನಿಗೆ ನ್ಯಾಯ ದೊರಕಲಿಲ್ಲ ಎಂದರೆ ಅದು ಆತನ ಅಸಹಾಯಕತೆಯಲ್ಲ, ಇಡೀ ವ್ಯವಸ್ಥೆಯ ತಪ್ಪಾಗುತ್ತದೆ. ಅದನ್ನು ಸಹಿಸುವುದು ನನ್ನ ಜಾಯಮಾನದಲ್ಲಿಲ್ಲ. ಭಾರತ ಎಂದಿಗೂ ಮೋಸಮಾಡಲ್ಲ. ಯಾಕೆಂದರೆ ಇಲ್ಲಿ ಮಾನವೀಯ ವ್ಯಕ್ತಿಗಳ ಹುಟ್ಟಿಗೆ ಕೊರತೆ ಇಲ್ಲ. ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿ, ಸುಭಾಷ್‌ಚಂದ್ರ ಬೋಸ್‌, ಸ್ವಾಮಿ ವಿವೇಕಾನಂದ, ಭಗತ್‌ ಸಿಂಗ್‌ವರೆಗೂ ನಮಗೆ ತಿಳಿಯುತ್ತದೆ. ಆದರೆ ಇದ್ದ ವ್ಯವಸ್ಥೆಯನ್ನು ನಾವು ಒಪ್ಪಿಕೊಂಡು ಹೋಗುವುದಕ್ಕೆ ಆಗುವುದಿಲ್ಲ ಎನ್ನುವಾಗ ರಾಷ್ಟ್ರಪ್ರೇಮವೇ ಅಂತಿಮ ಎಂಬ ನಿಲುವಿಗೆ ಚನ್ನಣ್ಣನವರ ಬಂದೇ ಬಿಡುತ್ತಾರೆ.

ಖಡಕ್‌ ಅಧಿಕಾರಿಗೆ ‘ಮೂಗಿನ ತುದಿಯಲ್ಲಿ ಕೋಪ' ನಾಟಕ ವರವಾಯಿತು. ಕುರುಕ್ಷೇತ್ರದಲ್ಲಿ ದುರ್ಯೋಧನ, ಶೂದ್ರ ತಪಸ್ವಿಯಲ್ಲಿ ಬ್ರಾಹ್ಮಣನ ಪಾತ್ರ ನಿರ್ವಹಿಸಿದ್ದಾರೆ. ಕವಿಯ ಮನಸ್ಸಿದ್ದರೂ ಗೀಚಿಡದೆ, ಆತ್ಮಾವಲೋಕನದ ಅಕ್ಷರಗಳನ್ನಷ್ಟೇ ಡೈರಿಗಿಳಿಸುವ ರವಿ, ಸಾಹಿತ್ಯದ ಗೀಳು ಹಚ್ಚಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ದೇವನೂರ ಮಹಾದೇವ ಹಾಗೂ ಮೈಸೂರಿನಲ್ಲಿರುವ ದಿ. ಆರ್‌.ಕೆ. ನಾರಾಯಣ್‌ ಮನೆ, ಕುವೆಂಪು ಅವರ ಉದಯರವಿ ರಸ್ತೆ ಮನೆಗೆ ಭೇಟಿ ನೀಡುವುದು ಬಾಕಿ ಇದೆ

-ರವಿ ಚನ್ನಣ್ಣನವರ.


ಶಿಕ್ಷಣವೇ ಪ್ರಬಲಾಸ್ತ್ರ

 

ಈ ಸಮಾಜದಲ್ಲಿ ಏನಾದರೂ ಬದಲಾವಣೆ ಸಾಧ್ಯವಿದ್ದರೆ ಅದು ಶಿಕ್ಷಣದಿಂದ. ಕನ್ನಡ ಮಾಧ್ಯಮ, ಬಿಎ ಓದಿದವರಲ್ಲಿರುವ ಕೀಳರಿಮೆ ಹೋಗಲಾಡಿಸಿ ಅವರನ್ನು ಯುಪಿಎಸ್ಸಿಗೆ ತಯಾರು ಮಾಡಬೇಕು. ಅದಕ್ಕಾಗಿಯೇ ಮೇ ಮಾಸದಿಂದ ಮೂರು ತಿಂಗಳ ತರಬೇತಿ ಶಿಬಿರ ಆರಂಭಿಸಬೇಕೆಂದುಕೊಂಡಿದ್ದೇನೆ. ನನ್ನ ಗುರುಗಳಾದ ಜಿ.ಜಿ. ಚೌಡಿ, ಆರ್‌.ಆರ್‌. ಪಟ್ಟಣ್‌, ಎಸ್‌. ಚಂದ್ರಶೇಖರ್‌, ಆರ್‌.ಎಸ್‌. ಪಾಟೀಲ, ನಿರ್ಭಯಾನಂದ ಸರಸ್ವತಿ ಅವರಿಂದ ಕಲಿತಿದ್ದು ಇದೇ ಸ್ಫೂರ್ತಿಯನ್ನು ಎನ್ನುತ್ತಿದ್ದಂತೆ, ಪಕ್ಕದಲ್ಲಿಯೇ ಇದ್ದ ಓದಲು ಇಟ್ಟಿದ್ದ ‘ಸಾಫ್ಟ್‌ವೇರ್‌ನಿಂದ ಸಾಕ್ಷಾತ್ಕಾರದೆಡೆಗೆ', ‘ನೀನು ನಿನ್ನನ್ನು ತಿಳಿಯುವುದು ಹೇಗೆ' ಪುಸ್ತಕಗಳನ್ನು ತಿರುವಿ ಮತ್ತೆ ಮಾತು ಮುಂದುವರಿಸಿದರು. 


ಸಹೋದ್ಯೋಗಿಗಳ ಮೇಲೆ ಕೋಪ, ಪ್ರೀತಿ

 

 

ಸಹೋದ್ಯೋಗಿಗಳಿಗೆ ವಹಿಸಿದ ಕೆಲಸ ಆಗದಿದ್ದಾಗ ಕೋಪ ಬರುವಂತೆ, ಅಚ್ಚುಕಟ್ಟಾಗಿ ನಿರ್ವಹಿಸಿದ ಕೆಲಸಕ್ಕಾಗಿ ತಿಂಗಳ ಪೊಲೀಸ್‌ ಎಂಬ ಗೌರವ, 5000 ನಗದು ಪುರಸ್ಕಾರ, ಕೆಲಸದಿಂದ ವೈಯಕ್ತಿಕ ಜೀವನ ನೋಡಿಕೊಳ್ಳಲು ಕುಟುಂಬದೊಂದಿಗೆ ಪ್ರವಾಸ ತೆರಳಲು 3 ದಿನಗಳ ಭಕ್ಷೀಸ್‌ ನೀಡುವುದನ್ನೂ ರವಿ ಅವರು ಮರೆತಂತಿಲ್ಲ. ತಾನು, ತನ್ನ ಕುಟುಂಬ ಚೆನ್ನಾಗಿದ್ದರೆ ಸಾಲದು ನನಗೆ ಕ್ರೆಡಿಟ್‌ ತಂದುಕೊಡುವ ಸಿಬ್ಬಂದಿ ಬದುಕೂ ನಮ್ಮಂತೆಯೇ ಆಗಬೇಕೆಂಬುದು ಅವರ ಕಾಳಜಿಯಲ್ಲಿ ವ್ಯಕ್ತವಾಗುತ್ತಿತ್ತು. ಇಷ್ಟೆಲ್ಲ ಹೇಳುವ ಹೊತ್ತಿಗೆ ಎರಡೂವರೆ ತಾಸಿಗಿಂತಲೂ ಹೆಚ್ಚು ಸಮಯ ಮೀರಿತ್ತು. ಊರಿನಲ್ಲಿ ತಂಗಿ ಮದುವೆಯ ತವಕದ ಜತೆ, ಹೊಲದಲ್ಲಿ ಪಂಪ್‌ಸೆಟ್‌ ಹಾಕಿಸಲು 15 ದಿನಗಳ ರಜೆ ತೆಗೆದುಕೊಂಡಿರುವ ರವಿ ಅವರು ಹೊರಡುವ ತರಾತುರಿಯಲ್ಲಿದ್ದರು. ನನ್ನ ಹಸ್ತಲಾಘವ ಕೃಷಿಯ ದುಡಿಮೆಗೆ ಶುಭ ಹಾರೈಸಿತು.

- ಉತ್ತನಹಳ್ಳಿ ಮಹದೇವ, ಕನ್ನಡಪ್ರಭ

click me!