ಮಂಗಳೂರಿನಲ್ಲಿ ಕುಂಭದ್ರೋಣ ಮಳೆ, ನೆರೆ ಹೊಸತು, ಯಾಕೆ ಹೀಗೆ?

First Published May 29, 2018, 7:05 PM IST
Highlights

ಮಂಗಳೂರು-ಉಡುಪಿಯಲ್ಲಿ ಸುರಿದ ಮುಂಗಾರು ಮಳೆಗೆ ಕರಾವಳಿ ನಗರ ತಲ್ಲಣಿಸಿದೆ. ಬಾರಿ ಮಳೆಯನ್ನೇ ಕಂಡಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜನರಿಗೆ ಇದೀಗ ಒಂದೇ ಮಳೆ ಸಾಕು ಸಾಕು ಅನ್ನುವಂತಾಗಿರೋದು ಮಾತ್ರ ದುರಂತ.

ಮಂಗಳೂರು (ಮೇ .29) : ಮಂಗಳೂರಿಗರಿಗೆ ಮಳೆ ಹೊಸದಲ್ಲ. ಕರ್ನಾಟಕದಲ್ಲಿ ಗರಿಷ್ಠ ಮಳೆ ಬೀಳೋ ಪ್ರದೇಶಗಳಲ್ಲಿ ಮಂಗಳೂರು-ಉಡುಪಿ ಕೂಡ ಸ್ಥಾನ ಪಡೆದಿದೆ.  ಧಾರಾಕಾರ ಮಳೆಗೆ ಪ್ರತಿ ವರ್ಷ ತನ್ನ ಸೌಂದರ್ಯವನ್ನ ಹೆಚ್ಚಿಸುತ್ತಾ ಬಂದಿದ್ದ ಮಂಗಳೂರು ಹಾಗೂ ಉಡುಪಿ ಇದೀಗ ಒಂದೇ ಮಳೇ ಕೊಚ್ಚಿ ಹೋಗಿದೆ. ಯಾಕೆ ಹೀಗೆ? ಈ ಪ್ರಶ್ನೆಗೆ ಒಂದೇ ಉತ್ತರ ನಗರೀಕರಣ.

ಹೌದು, ನಗರೀಕರಣ ಪರಿಣಾಮ ಮಂಗಳೂರು ಹಾಗೂ ಉಡುಪಿ ಇಂದು ಅಕ್ಷರಶಃ ದ್ವೀಪದಂತಾಗಿದೆ.  ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಮಂಗಳೂರು-ಉಡುಪಿ ಅದೆಂತಾ ಬಿರುಗಾಳಿ ಮಳೆಗೆ ಜಗ್ಗಿಲ್ಲ. ಆದರೆ ಈ ಬಾರಿ ಮುಂಗಾರು ಪ್ರವೇಶಕ್ಕೇ ಜನ ಜೀವನ ಅಸ್ತವ್ಯಸ್ತವಾಗಿದೆ.  ಇಷ್ಟು ವರ್ಷ ಬಿದ್ದ ಮಳೆ ನೀರು ನೇರವಾಗಿ ನದಿ ಸೇರುತ್ತಿತ್ತು. ಇಲ್ಲಿನ ಅಂತರ್ಜಲ ಮಟ್ಟ ಹೆಚ್ಚಬೇಕಾದರೆ ಧಾರಾಕಾರ ಮಳೆ ಅಗತ್ಯ.  ಆದರೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಈ ಎರಡು ನಗರಗಳಲ್ಲಿ ಇದೀಗ ನೀರು ಹರಿಯಲು ಜಾಗವಿಲ್ಲ. ಹಿಂದಿನಂತೆ ತೋಡು, ಹಳ್ಳ ಕೊಳ್ಳಗಳು ಈಗ ಉಳಿದಿಲ್ಲ. ಇರೋ ಪ್ರದೇಶಗಳಲ್ಲಿ ಅಪಾರ್ಟಮೆಂಟ್, ಕಾಂಕ್ರೀಡ್ ಕಾಡು ತಲೆ ಎತ್ತಿದೆ. ಹೀಗಾಗಿ ಬಿದ್ದ ನೀರು ಹರಿಯಲು ಜಾಗವಿಲ್ಲದೆ ನಗರವನ್ನೇ ಮುಳುಗಿಸಿದೆ.


ಮಂಗಳೂರು ಹಾಗು ಉಡುಪಿ ಸಮತಟ್ಟಾದ ಪ್ರದೇಶಗಳಲ್ಲ. ಬೆಟ್ಟ ಗುಡ್ಡ ಹಾಗು ದಟ್ಟ ಅರಣ್ಯಹೊಂದಿರುವ ನಾಡು. ಆದರೆ ಅಭಿವೃದ್ದಿ ಹಾಗು ನಗರೀಕರಣದಿಂದ ಬೆಟ್ಟ ಗುಡ್ಡಗಳು ನೆಲಸಮವಾಗಿದೆ. ದಟ್ಟ ಅರಣ್ಯ ಇಲ್ಲದಾಗಿದೆ. ಹೀಗಿರುವಾಗಿ ಕರಾವಳಿ ನಗರಗಳಲ್ಲಿ ಬಿದ್ದ ಮಳೆ ನೀರು ಹರಿಯಲು ಒಂದಿಂಚು ಜಾಗ ಅಲ್ಲಿಲ್ಲ. ಇದೇ ನೀರು ಸಮುದ್ರ ಸೇರಿ ಕಡಲ್ಕೊರೆತೆ ಸೇರಿದಂತೆ ಸಮುದ್ರದ ರೌದ್ರನರ್ತನಗಳು ಜನರನ್ನ ಹೈರಾಣಾಗಿಸೋದು ಸುಳ್ಳಲ್ಲ. 

ಕಳೆದ 24 ಗಂಟೆಗಳಲ್ಲಿ ಮಂಗಳೂರಿನಲ್ಲಿ 146 ಮಿಮಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಲ್ಲಿಮ ಮಹಾನಗರ ಪಾಲಿಕೆ ರಸ್ತೆ, ಲಾಲ್‌ಬಾಗ್, ನಂತೂರು, ಅತ್ತಾವರ, ಬಲ್ಮಠ, ಜ್ಯೋತಿ ಸೇರಿತಂದೆ ಪ್ರಮುಖ ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ರಸ್ತೆಗಳೆಲ್ಲಾ ಜಲಾವೃತವಾಗಿದೆ. ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ ಹೇಳತೀರದಾಗಿದೆ. ನಗರದಲ್ಲಿ ವಿದ್ಯುತ್ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಕಛೇರಿಗಳು, ಕಾರ್ಖಾನೆಗಳು ಸ್ಥಗಿತಗೊಂಡಿದೆ.  ಹಲವೆಡೆ ಮರಳಗಳು ಧರೆಗುರುಳಿದೆ.   ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಷ್ಟು ದಿನ ಸಮುದ್ರದ ಅಲೆಗಳ ಶಬ್ದವನ್ನ ಆನಂದಿಸುತ್ತಿದ್ದ ಕರಾವಳಿಗರಿಗೆ ಇಂದು ಮಳೆ ಹಾಗು ಪ್ರವಾಹದ ಶಬ್ದ ನಿದ್ದೆಗೆಡಿಸಿದೆ. 


ದುಬೈ ಮನಿ, ಅರಬ್ ಮಳೆ..ಇದು ಸದ್ಯಕ್ಕೆ ಮಂಗಳೂರಿನಲ್ಲಿ ಚಾಲ್ತಿಯಲ್ಲಿರೋ ಮಾತು. ಮಂಗಳೂರು ಹಾಗು ಉಡುಪಿ ಈಗ ಮುಂಬೈ ನಗರಕ್ಕಿಂತಲೂ ವೇಗವಾಗಿ ಬೆಳೆಯುತ್ತಿದೆ. ಆದರೆ ಅಭಿವೃದ್ದಿ ನೆಪದಲ್ಲಿ ಮಂಗಳೂರು ಹಾಳಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ನೀರು ಹರಿಯುತ್ತಿದ್ದ ಹಳ್ಳಗಳ ಮೇಲೆ ಕಾಂಕ್ರೀಟ್ ಕಟ್ಟಡಗಳು ನಿರ್ಮಾಣಗೊಂಡಿದೆ. ಫ್ಲೈ ಓವರ್, ಅಂಡರ್ ಪಾಸ್ ಕಾಮಕಾರಿಗಳು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ಹೀಗಾಗಿ ಸಮುದ್ರ ಕಿನಾರೆಯ ಈ ಎರಡು ನಗರಗಳು ಇಂದು ಮಳೆರಾಯನ ಆರ್ಭಟಕ್ಕೆ ನಲುಗಿಹೋಗಿದೆ.

 ಮಂಗಳೂರು -ಉಡುಪಿ ಇದಕ್ಕಿಂತ ಹೆಚ್ಚಿನ ಮಳೆಯನ್ನ ಕಂಡಿದೆ. ಆದರೆ ಹಿಂದೆಂದೂ ಇತಂಹ ಪರಿಸ್ಥಿತಿಯನ್ನ ಕರಾವಳಿ ಜನ ಎದುರಿಸಿಲ್ಲ. ಇದೇ ಮೊದಲ ಬಾರಿಗೆ ಬುದ್ದಿವಂತರ ನಾಡು ಮಳೆಗೆ ಬೆಚ್ಚಿಬಿದ್ದಿದೆ.  2016ರಲ್ಲಿ ತಮಿಳುನಾಡಿನ ಚೆನ್ನೈ ಮಳೆಯಿಂದಾಗಿ ಮುಳುಗಡೆಯಾಗಿತ್ತು. ಸುಮಾರು 15ಸಾವಿರ ಕೋಟಿ ರೂಪಾಯಿಗಿಂತಲು ಹೆಚ್ಚು ನಷ್ಟ ಅನುಭವಿಸಿದ ಚೆನ್ನೈ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇನ್ನು 2017ರಲ್ಲಿ ಬೆಂಗಳೂರು ಬಾರಿ ಮಳೆಗೆ ತತ್ತರಿಸಿದ್ದು ಇನ್ನೂ ಯಾರು ಮರೆತಿಲ್ಲ. ಇದೀಗ 2018ರಲ್ಲಿ ನಗರೀಕರಣದ ಶಾಪ ಮಂಗಳೂರು ಹಾಗೂ ಉಡುಪಿಯನ್ನೂ ಬಿಟ್ಟಿಲ್ಲ. 


ಇದು ಮಂಗಳೂರು ಹಾಗೂ ಉಡುಪಿಗೆ ಮಾತ್ರವಲ್ಲ ದೇಶದ ಎಲ್ಲಾ ನಗರಗಳಿಗೆ ಎಚ್ಚರಿಕೆಯ ಕರೆಗಂಟೆ. ನಗರಗಳನ್ನ ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ದಿಪಡಿಸಬೇಕಿದೆ.  ಈ ಮೂಲಕ ಸುರಕ್ಷಿತ ನಗರಗಳನ್ನಾಗಿ ಮಾಡೋ ಜವಾಬ್ದಾರಿ ಎಲ್ಲರಲ್ಲೂ ಇದೆ.

click me!