ಇಂದು ರಾಷ್ಟ್ರಪತಿ ಚುನಾವಣೆ: ದೇಶದ ಪ್ರಥಮ ಪ್ರಜೆ ಸ್ಥಾನ ಯಾರ ಪಾಲಿಗೆ? ಇಲ್ಲಿದೆ ಅಭ್ಯರ್ಥಿಗಳ ಸಂಪೂರ್ಣ ವಿವರ

By Suvarna Web DeskFirst Published Jul 17, 2017, 8:23 AM IST
Highlights

ರಾಷ್ಟ್ರಪತಿ ಚುನಾವಣಾ ಅಖಾಡಲ್ಲಿರುವುದು ಘಟಾನುಘಟಿ ಅಭ್ಯರ್ಥಿಗಳು. NDA ಬೆಂಬಲಿತ ಅಭ್ಯರ್ಥಿ ಕೋವಿಂದ್​​ ವಕೀಲ, ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದವರು. ಅದೇ ರೀತಿ UPA ಅಭ್ಯರ್ಥಿ ಮೀರಾ ಕುಮಾರ್ ಬೆನ್ನಿಗೂ ದೊಡ್ಡ ಪ್ರಭಾವಳಿ ಸೇರಿಕೊಂಡಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ನವದೆಹಲಿ(ಜು.17): ರಾಷ್ಟ್ರಪತಿ ಚುನಾವಣಾ ಅಖಾಡಲ್ಲಿರುವುದು ಘಟಾನುಘಟಿ ಅಭ್ಯರ್ಥಿಗಳು. NDA ಬೆಂಬಲಿತ ಅಭ್ಯರ್ಥಿ ಕೋವಿಂದ್​​ ವಕೀಲ, ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದವರು. ಅದೇ ರೀತಿ UPA ಅಭ್ಯರ್ಥಿ ಮೀರಾ ಕುಮಾರ್ ಬೆನ್ನಿಗೂ ದೊಡ್ಡ ಪ್ರಭಾವಳಿ ಸೇರಿಕೊಂಡಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಪ್ರಣಬ್ ಮುಖರ್ಜಿ ಉತ್ತರಾಧಿಕಾರಿ  ಅಂತಲೇ ಬಿಂಬಿತರಾಗಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಭ್ಯರ್ಥಿ ರಾಮನಾಥ್ ಕೋವಿಂದ್​. ತೀರಾ ಇತ್ತೀಚನವರೆಗೆ ಬಿಹಾರದ ಗವರ್ನರ್​ ಆಗಿದ್ದರು. ಇವರ ಕುರಿತಾಗಿ ನೋಡುವುದಾದರೆ.

ರಾಮನಾಥ್ ಕೋವಿಂದ್ ಯಾರು?  

ಅಕ್ಟೋಬರ್ 1, 1945ರಲ್ಲಿ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ದೇರಾಪುರ ಪರೌಂಖ್ ಗ್ರಾಮದಲ್ಲಿ ಜನಿಸಿದ ಕೋವಿಂದ್​ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ಥಳೀಯವಾಗಿ ಪಡೆದರು. ಆಮೇಲೆ  ಕಾನ್ಪುರ ವಿಶ್ವವಿದ್ಯಾನಿಲಯದಿಂದ ಬಿ.ಕಾಂ, ಎಲ್ಎಲ್ ಬಿ ಪದವಿ ಪಡೆದರು. ರಾಮನಾಥ್​ ಕೋವಿಂದ್ ದಲಿತ ಸಮುದಾಯದ ‘ಕೋಲಿ’ ಸಮಾಜಕ್ಕೆ ಸೇರಿದವರು. ಮೊದಲಿಂದಲೂ ಓದಿನಲ್ಲಿ ಮುಂದಿದ್ದ ಕೋವಿಂದ್, ವಕೀಲಿಕೆಯಲ್ಲಿ ಖ್ಯಾತಿ ಗಳಿಸಿದ್ದರು. ಹಿಂದುತ್ವ ಸಿದ್ಧಾಂತಗಳ ಪ್ರತಿಪಾದಕರಾಗಿ ಆರ್​​ಎಸ್​​ಎಸ್​​ ಮತ್ತು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಗುರ್ತಿಸಿಕೊಂಡಿದ್ದರು. ಉತ್ತರ ಪ್ರದೇಶ, ಬಿಹಾರದಲ್ಲಿ ಬಿಜೆಪಿ, RSS ಸಿದ್ಧಾಂತಗಳನ್ನು ರಾಮನಾಥ್ ಕೋವಿಂದ್ ಜನಪ್ರಿಯಗೊಳಿಸಿದರು..ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾ, ಅಖಿಲ ಭಾರತ ಕೋಲಿ ಸಮಾಜದ ಮುಖ್ಯಸ್ಥರಾಗಿ ಕಾರ್ಯ ಮಾಡಿರೋ ಕೋವಿಂದ್​, 2002ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ  ಭಾರತವನ್ನು ಪ್ರತಿನಿಧಿಸಿ ಭಾಷಣ ಮಾಡಿದ ಹಿರಿಮೆ ಕೂಡ ಇದೆ. ಇನ್ನು ಲಕ್ನೋ ಅಂಬೇಡ್ಕರ್ ವಿಶ್ವವಿದ್ಯಾಲಯ, ಕೋಲ್ಕತ್ತ ಭಾರತೀಯ ಮ್ಯಾನೇಜ್‌ಮೆಂಟ್‌ ಸದಸ್ಯರಾಗಿ ಸೇವೆ ಸಲ್ಲಿಸುವ ಜತೆಗೆ ದೆಹಲಿ ಹೈಕೋರ್ಟ್, ಸುಪ್ರೀಂಕೋರ್ಟ್ ನಲ್ಲಿ 16 ವರ್ಷ ವಕೀಲರಾಗಿ ಫೇಮಸ್ ಆಗಿದ್ದರು. ಆಗಸ್ಟ್ 8, 2015ರಲ್ಲಿ ಬಿಹಾರದ ರಾಜ್ಯಪಾಲರಾಗಿ ರಾಮನಾಥ್ ಕೋವಿಂದ್ ಆಯ್ಕೆಯಾಗಿದ್ದರು. ಅಲ್ದೆ, 1994-2000, 2000-2006 ಎರಡು ಅವಧಿಗೆ ಉತ್ತರಪ್ರದೇಶದಿಂದ ರಾಜ್ಯಸಭೆಗೂ ರಾಮನಾತ್ ಕೋವಿಂದ್​ ಆಯ್ಕೆ  ಆಗಿದ್ದರು.

ಕೋವಿಂದ್​ಗೆ ಎದುರಾಳಿ ಕಾಂಗ್ರೆಸ್​'ನ ಹಿರಿಯ ಸಂಸದೆ ಮೀರಾಕುಮಾರ್​​. ಮಾಜಿ ಪ್ರಧಾನಿ ಬಾಬು ಜಗಜೀವನ್ ರಾಂ ಪುತ್ರಿ ಎನ್ನುವ ಪ್ರಭಾವಳಿ ಹೊತ್ತವರು..

ಮೀರಾ ಕುಮಾರ್ ಯಾರು?

ಮೀರಾಕುಮಾರ್ ರಕ್ತರಕ್ತದಲ್ಲಿ ಕಾಂಗ್ರೆಸ್​​​​ ಝೇಂಕರಿಸುತ್ತಿದೆ. ಮಾರ್ಚ್ 31, 1945ರಲ್ಲಿ ಬಿಹಾರದ ಅರಾ ಜಿಲ್ಲೆಯಲ್ಲಿ ಜನಿಸಿದ ಮೀರಾ, ಪ್ರಾಥಮಿಕ ಶಿಕ್ಷಣ ಪಡೆದದ್ದು ಡೆಹ್ರಾಡೂನ್‌ನ ವೆಲ್ಲಾಮ್'ನಲ್ಲಿ. ಓದಿನಲ್ಲಿ ಚುರುಕಾಗಿದ್ದ  ಈಕೆ, ಎಂಎ, ಎಲ್ಎಲ್‌ಬಿ ಪದವೀಧರೆ. 2010ರಲ್ಲಿ  ಬನಶ್ತಾಲಿ ವಿದ್ಯಾಪೀಠದಿಂದ ಗೌರವ ಡಾಕ್ಟರೇಟ್ ಪಡೆದರು. ಸ್ವತಂತ್ರ ಹೋರಾಟಗಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಪುತ್ರಿ ಮೀರಾ ಕುಮಾರ್, ರಾಜಕೀಯ ಜೀವನದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. 72 ವರ್ಷದ ಹಿರಿಯ ನಾಯಕಿ ಕೇಂದ್ರ ಸರ್ಕಾರದ ಸಚಿವೆಯಾಗಿ, ಲೋಕಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿರುವ ಅನುಭವವಿದೆ. 1970ರಲ್ಲಿ ಭಾರತೀಯ ವಿದೇಶ ಸೇವೆಗೆ ಸೇರ್ಪಡೆಗೊಂಡು ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ನಾನಾ ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಘಟಾನುಘಟಿಗಳನ್ನು ಸೋಲಿಸಿ ಉತ್ತರ ಪ್ರದೇಶದ ಬಿಜ್ನೋರ್‌ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಮೀರಾ, ಹಾಲಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಬಹುಜನ ಸಮಾಜ ಪಾರ್ಟಿ  ನಾಯಕಿ ಮಾಯಾವತಿಗೆ ಮಣ್ಣು ಮುಕ್ಕಿಸಿದ್ದರು. ಬಿಹಾರದ ಸಸಾರಾಮ್, ದೆಹಲಿಯ ಕರ್ನೊಲ್ ಭಾಗ್ ಕ್ಷೇತ್ರದಿಂದಲೂ ನಿರಾಯಾಸವಾಗಿ ಸಂಸತ್​ ಪ್ರವೇಶಿಸಿದ್ದರು. 1999ರ ಚುನಾವಣೆಯಲ್ಲಿ ಸೋತರೂ, 2004ರಲ್ಲಿ  ಬಿಹಾರದ ಸಸಾರಾಮ್ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದರು. ಈ ಟೈಮ್ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್​ ಸಂಪುಟದಲ್ಲಿ ಸಚಿವರಾಗಿದ್ದರು. ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ಸಚಿವೆಯಾಗಿ ಸೇವೆ ಸಲ್ಲಿಸಿದ್ದ ಮೀರಾಕುಮಾರ್​, 2009ರಲ್ಲಿ ಲೋಕಸಭೆಯ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ್ರು. ಈ ಮೂಲಕ  ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದ ದೇಶದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆ ಇವರದ್ದು.

ಒಟ್ಟಿನಲ್ಲಿ 14ನೇ ರಾಷ್ಟ್ರಪತಿ ಯಾರಾಗಲಿದ್ದಾರೆ ಎನ್ನುವುದನ್ನು 776 ಸಂಸದರು, 4120 ಶಾಸಕರು ನಿರ್ಧರಿಸಿ ಮತಪೆಟ್ಟಿಗೆಯಲ್ಲಿ ಭದ್ರ ಮಾಡಲಿದ್ದಾರೆ.

 

click me!