ಅಂಬಿಗೆ ಲೋಕಸಭೆ ಅವಮಾನ: 2 ದಿನವಾದರೂ ಇಲ್ಲ ಸಂತಾಪ!

By Web DeskFirst Published Dec 12, 2018, 3:16 PM IST
Highlights

ಮಂಡ್ಯದ ಗಂಡು ಅಂಬರೀಶ್‌ಗೆ ಲೋಕಸಭೆಯಲ್ಲಿ ಅವಮಾನ| ಕಲಾಪ ಆರಂಭವಾಗಿ ಎರಡು ದಿನವಾದರೂ ಇನ್ನೂ ಸೂಚಿಸಿಲ್ಲ ಸಂತಾಪ| ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಅವರಿಗೂ ಸಂತಾಪ ಸೂಚನೆ ಇಲ್ಲ| ಕೇವಲ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಮಾತ್ರ ಸಂತಾಪ ಸೂಚನೆ| ಅಂಬರೀಶ್, ಜಾಫರ್ ಶರೀಫ್ ಅವರಿಗೆ ಸಂತಾಪ ಸೂಚಿಸದ ಕಾರಣಕ್ಕೆ ದೇವೇಗೌಡ ಅಸಮಾಧಾನ| ಬಿಜೆಪಿಯಿಂದ ಸಣ್ಣ ತಣ್ಣತನ ಪ್ರದರ್ಶನ ಎಂದು ಹರಿಹಾಯ್ದ ಸಿಎಂ ಕುಮಾರಸ್ವಾಮಿ

ನವದೆಹಲಿ(ಡಿ.12): ಇತ್ತೀಚಿಗೆ ನಿಧನರಾದ ಚಿತ್ರನಟ, ಅಭಿಮಾನಿಗಳ ಪಾಲಿನ ಕಲಿಯುಗದ ಕರ್ಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಜಿ ಸಚಿವ ಅಂಬರೀಶ್ ಅವರಿಗೆ ಸಂಸತ್ತು ಅವಮಾನಿಸಿದೆ.

ಹೌದು, ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಿ ಎರಡು ದಿನ ಕಳೆದರೂ ಅಂಬರೀಶ್ ನಿಧನಕ್ಕೆ ಲೋಕಸಬೆಯಲ್ಲಿ ಸಂತಾಸ ಸೂಚಿಸಲಾಗಿಲ್ಲ. ಕಲಾಪ ಆರಂಭದ ಮೊದಲ ದಿನ ನಿಧನ ಹೊಂದಿದ ಸಂಸತ್ತಿನ ಸದಸ್ಯರುಗಳಿಗೆ ಸಂತಾಪ ಸೂಚಿಸುವ ಸಂಪ್ರದಾಯವಿದೆ.

"

ಆದರೆ ಅಂಬರೀಶ್ ಅವರಿಗೆ ಇದುವರೆಗೂ ಸಂತಾಪ ಸೂಚಿಸದೇ ಇರುವುದು ರಾಜ್ಯ ಸಂಸದರ ಅಸಮಾಧಾನಕ್ಕೆ ಕಾರಣವಾಗಿದೆ. ಕಲಾಪ ಆರಂಭವಾದಾಗ ಇತ್ತೀಚಿಗೆ ನಿಧನರಾದ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಲೋಕಸಭೆಯಲ್ಲಿ ಸಂತಾಪ ಸೂಚಿಸುವ ನೀರ್ಣಯವನ್ನು ಮಂಡಿಸಲಾಗಿತ್ತು.

ಆದರೆ ಸಂತಾಪ ಸೂಚಕ ಪಟ್ಟಿಯಲ್ಲಿ ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಮತ್ತು ಅಂಬರೀಶ್ ಅವರ ಹೆಸರಿಲ್ಲದೇ ಇರುವುದನ್ನು ಕಂಡ ಮಾಜಿ ಪ್ರಧಾನಿ ದೇವೇಗೌಡ, ಈ ವಿಚಾರವನ್ನು ಪ್ರಸ್ತಾಪಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಎಚ್ಚೆತ್ತ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಬುಧವಾರದ ಕಲಾಪದಲ್ಲಿ ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಲಾಗುವುದು ಎಂದು ಭರವಸೆ ನೀಡಿದ್ದರು.

ಆದರೆ ಇಂದೂ ಕೂಡ ಲೋಕಸಭೆಯಲ್ಲಿ ಅಂಬರೀಶ್ ಮತ್ತು ಜಾಫರ್ ಶರೀಫ್ ಅವರಿಗೆ ಸಂತಾಪ ಸೂಚಿಸದೇ ಕೇವಲ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಮಾತ್ರ ಸಂತಾಪ ಸೂಚಿಸಲಾಯಿತು.

ಇನ್ನು ಲೋಕಸಭೆಯಲ್ಲಿ ಅಂಬರೀಶ್ ಮತ್ತು ಜಾಫರ್ ಶರೀಫ್ ಅವರಿಗೆ ಸಂತಾಪ ಸೂಚಿಸದ ಕೇಂದ್ರ ಸರ್ಕಾರದ ಕ್ರಮವನ್ನು ಸಿಎಂ ಕುಮಾರಸ್ವಾಮಿ ಕೂಡ ಖಂಡಿಸಿದ್ದು, ಇದು ಬಿಜೆಪಿಯ ಸಣ್ಣತನವನ್ನು ತೋರಿಸುತ್ತದೆ ಎಂದು ಹರಿಹಾಯ್ದಿದ್ದಾರೆ.

click me!