ಅಮೆರಿಕ ಕೃಷ್ಣ ದೇಗುಲಕ್ಕೆ ಮೂಡುಬಿದಿರೆಯ ಟಚ್‌!

By ಸಂದೀಪ್ ವಾಗ್ಲೆFirst Published Jun 18, 2017, 10:59 AM IST
Highlights

ಎಲ್ಲಿಯ ಅಮೆರಿಕ, ಎಲ್ಲಿಯ ಮೂಡುಬಿ ದಿರೆ? ಅಮೆರಿಕದಲ್ಲಿ ನಿರ್ಮಾಣವಾದ ಭವ್ಯ ಕೃಷ್ಣ ದೇವಾಲಯಕ್ಕೆ ಸಂಪೂರ್ಣ ಕಾಷ್ಠ ಮಯ ಗರ್ಭಗುಡಿ ನಿರ್ಮಾಣವಾದದ್ದು ಕರಾವಳಿಯ ಹಳ್ಳಿಗಾಡು ಮೂಡುಬಿದಿರೆಯಲ್ಲಿ. ಅದೂ ಅಪ್ಪಟ ಹಳ್ಳಿಯ ಯುವ ಕಾಷ್ಠಶಿಲ್ಪಿಯ ಪ್ರಥಮ ಕೈಚಳಕದಲ್ಲಿ.

ಮಂಗಳೂರು: ಎಲ್ಲಿಯ ಅಮೆರಿಕ, ಎಲ್ಲಿಯ ಮೂಡುಬಿ ದಿರೆ? ಅಮೆರಿಕದಲ್ಲಿ ನಿರ್ಮಾಣವಾದ ಭವ್ಯ ಕೃಷ್ಣ ದೇವಾಲಯಕ್ಕೆ ಸಂಪೂರ್ಣ ಕಾಷ್ಠ ಮಯ ಗರ್ಭಗುಡಿ ನಿರ್ಮಾಣವಾದದ್ದು ಕರಾವಳಿಯ ಹಳ್ಳಿಗಾಡು ಮೂಡುಬಿದಿರೆಯಲ್ಲಿ. ಅದೂ ಅಪ್ಪಟ ಹಳ್ಳಿಯ ಯುವ ಕಾಷ್ಠಶಿಲ್ಪಿಯ ಪ್ರಥಮ ಕೈಚಳಕದಲ್ಲಿ.

ಹೌದು, ಮೊದಲ ಪ್ರಯತ್ನದಲ್ಲೇ ಅಪೂರ್ವ ಕೆತ್ತನೆಗಳ ಕುಸುರಿ ಕೆಲಸದಲ್ಲಿ ಮೂಡು​ಬಿದಿರೆ ಸಮೀಪದ ಸಂಪಿಗೆ ಎಂಬ ಗ್ರಾಮದ ಕಾಷ್ಠಶಿಲ್ಪಿ ಹರೀಶ್‌ ಆಚಾರ್ಯ (30) ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಮೆ​ರಿಕದ ಭಕ್ತರೂ ಈ ಗರ್ಭಗುಡಿಯ ಸೌಂ​ದರ್ಯಕ್ಕೆ ಶಿರಬಾಗುತ್ತಿದ್ದಾರೆ.

ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಮೆರಿಕದ ನ್ಯೂಜೆರ್ಸಿಯಲ್ಲಿ ಹಿಂದೆ ಚಚ್‌ರ್‍ ಇದ್ದ 4.50 ಎಕರೆ ಜಾಗ ಖರೀದಿಸಿದ್ದು, ಅದರೊಳಗೆ ರೂ.8.50 ಕೋಟಿ ವೆಚ್ಚದಲ್ಲಿ ಭವ್ಯ ಶ್ರೀಕೃಷ್ಣನ ದೇವಾಲಯ ನಿರ್ಮಿಸಿದ್ದಾರೆ. ಕಳೆದ ವಾರವಷ್ಟೇ ಅದು ಲೋಕಾರ್ಪಣೆಯಾಗಿದೆ. ಈ ದೇವಾಲಯದ ಗರ್ಭ ಗುಡಿಯ ಪಂಚಾಂಗ ಕಲ್ಲಿನಿಂದ ಕಟ್ಟಿದ್ದು ಬಿಟ್ಟರೆ ಗೋಡೆ ಸೇರಿದಂತೆ ಇಡೀ ಗರ್ಭಗುಡಿ ಕೇವಲ ಬರ್ಮಾ ಟೀಕ್‌ (ಸಾಗುವಾನಿ) ಮರದ ಮೋಪಿನಿಂದಲೇ ತಯಾರಿಸಿದ್ದು ವಿಶೇಷ. ಈ ವೈಶಿಷ್ಟ್ಯವನ್ನು ಸಾಕಾರಗೊ ಳಿಸಿದ್ದು ಹರೀಶ್‌ ಆಚಾರ್ಯ, ತಂಡ.

ಗರ್ಭಗುಡಿ ವಿನ್ಯಾಸ ಮಾಡಿದ್ದು ನನಗೆ ದೊರೆತ ಸುವರ್ಣಾವಕಾಶ. ನನ್ನ ತಂದೆ ನಾರಾಯಣಾಚಾರ್ಯರು ಕಲಿಸಿದ ವಿದ್ಯೆಯನ್ನೆಲ್ಲ ಇದಕ್ಕೆ ಧಾರೆ ಎರೆದಿದ್ದೇನೆ. ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಅತಿ ಮುಖ್ಯವಾಗಿ ಪುತ್ತಿಗೆ ಶ್ರೀಗಳಿಗೆ ತೃಪ್ತಿ ತಂದಿದೆ.
ಹರೀಶ್‌ ಆಚಾರ್ಯ ಕಾಷ್ಠಶಿಲ್ಪಿ, ಮೂಡುಬಿದಿರೆ 

ಒಂದೂವರೆ ವರ್ಷದ ಪರಿಶ್ರಮ: 2015ರ ನವೆಂಬರ್‌ ತಿಂಗಳಿನಿಂದಲೇ ದೇವಾಲಯದ ಯೋಜನೆ ಆರಂಭವಾಗಿತ್ತು. ಗರ್ಭಗುಡಿಯ ಉಸ್ತುವಾರಿ ಮತ್ತು ರಫ್ತು ಗುತ್ತಿಗೆಯನ್ನು ಉಡುಪಿಯ ‘ನಿಧಿ ಕನ್ಸ್‌ಸ್ಟ್ರಕ್ಷನ್‌'ನ ಸಂತೋಷ್‌ ಶೆಟ್ಟಿ ಅವರಿಗೆ ವಹಿಸಲಾಗಿತ್ತು. ಗರ್ಭಗುಡಿ ನಿರ್ಮಿಸುವ ಹೊಣೆಯನ್ನು ಕಲ್ಲಮುಂಡ್ಕೂರಿನ ಹರೀಶ್‌ ಆಚಾರ್ಯ ಅವರಿಗೆ ನೀಡಲಾಗಿತ್ತು. ಇವರೊಂದಿಗೆ ಸುಮಾರು 25 ಮಂದಿ ಕಾಷ್ಠಶಿಲ್ಪಿಗಳ ತಂಡದ ಒಂದೂವರೆ ವರ್ಷದ ಪ್ರಯತ್ನದ ಫಲವಾಗಿ ಅಮೆರಿಕವೂ ತಲೆದೂಗುವಂಥ ದೇವಾಲಯ ನಿರ್ಮಾಣವಾಗಿದೆ.

ನ್ಯೂಜೆರ್ಸಿ ದೇವಾಲಯದ ಮುಖ್ಯ ಅರ್ಚಕ ಯೋಗೀಂದ್ರ ಭಟ್‌ ಉಲಿ ಅವರು ಗರ್ಭಗುಡಿಯ ಸಂಪೂರ್ಣ ಅಳತೆ ನೀಡಿದ್ದರು. ಅದಕ್ಕೆ ಅನುಗುಣವಾಗಿ ಪುತ್ತಿಗೆ ಶ್ರೀಗಳ ಕಲ್ಪನೆಗೆ ತಕ್ಕಂತೆ ಕಾಷ್ಠ ಶಿಲ್ಪ ವಿನ್ಯಾಸ ಮಾಡಿದೆವು. ಈವರೆಗೆ ಗೋಡೆ ಮೇಲೆ ಚಾವಣಿ ಕಟ್ಟುವ ಕೆಲಸ ಮಾತ್ರ ಮಾಡುತ್ತಿದ್ದ ನನಗೆ ಇದೀಗ ಪ್ರಥಮ ಬಾರಿಗೆ ಗೋಡೆಯನ್ನೂ ಮರದ ವಿನ್ಯಾಸದಿಂದಲೇ ತಯಾರಿಸಿದ್ದು ಹೊಸತು. ಎಲ್ಲ ಕೆತ್ತನೆ ಕೆಲಸ ಮುಗಿಸಿದ ಬಳಿಕ ಅವೆಲ್ಲವನ್ನೂ ಜೋಡಿಸಿ ನಾವು ಕೆಲಸ ಮಾಡುತ್ತಿದ್ದ ಸಂಪಿಗೆ ಊರಿನಲ್ಲೇ ಗರ್ಭಗುಡಿ ನಿರ್ಮಿಸಿ ಸ್ವಾಮೀಜಿಗೆ ತೋರಿಸಿದೆವು. ಅವರು ತೃಪ್ತಿ ವ್ಯಕ್ತಪಡಿಸಿದ ಬಳಿಕವೇ ಎಲ್ಲ ಕೆತ್ತನೆಗಳನ್ನು ರಫ್ತು ಮಾಡಲಾಯಿತು ಎಂದು ಹರೀಶ್‌ ಆಚಾರ್ಯ ‘ಕನ್ನಡ ಪ್ರಭ'ದೊಂದಿಗೆ ಅನುಭವ ಹಂಚಿಕೊಂಡರು.

ಅಪೂರ್ವ ದಶಾವತಾರ ವಿನ್ಯಾಸ: ಈ ಗರ್ಭಗುಡಿಯ ಇಂಚಿಂಚನ್ನೂ ಬಿಡದೆ ಕಾಷ್ಠಶಿಲ್ಪ ಕಲೆ ಮೈದಾಳಿದೆ. ಶ್ರೀಕೃಷ್ಣನ ದಶಾವತಾರ, ಕೃಷ್ಣ ಲೀಲಾಮೃತ, ಜಯವಿಜಯರ ವಿಗ್ರಹಗಳು, ಬಕಾಸುರ ವಧೆಯ ಚಿತ್ರಣ, ಗೋಮುಖಗಳೆಲ್ಲವನ್ನೂ ಮರದ ಕೆತ್ತನೆಗಳಿಂದಲೇ ಅಭಿವ್ಯಕ್ತಿಗೊಳಿಸಲಾಗಿದೆ. ಇವೆಲ್ಲವನ್ನೂ ಯಂತ್ರ ಬಳಸದೆ ಕೈಯಿಂದಲೇ ಕೆತ್ತಿರುವುದು ವಿಶೇಷ.

ಗರ್ಭಗುಡಿಯ ಸುತ್ತಲಿನ ಕಾಷ್ಠ ಗೋಡೆ, ಅದರ ಮೇಲೆ ಚಾವಣಿ, ಅದರ ಮೇಲೆ ಮತ್ತೊಂದು ಗೋಡೆ-ಚಾವಣಿ ಮಾಡಿರು ವುದು, ಗರ್ಭಗುಡಿ ಎದುರಿನ ಭಾಗವನ್ನು ಕಂಬದ ನೆರವಿಲ್ಲದೆ, ಹಿಂಭಾಗದ ಪಂಚಾಂಗ ಆಧಾರದ ಮೇಲೆಯೇ ನಿಲ್ಲಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಮಾತ್ರವಲ್ಲ ಚಾವಣಿಯನ್ನು ಎರಡು ಕಾಷ್ಠ ಮಯೂರಗಳ ಆಧಾರದ ಮೇಲೆ ನಿಲ್ಲಿಸಿದ್ದು ಕೂಡ ಸವಾಲಿನ ಕೆಲಸವೇ ಎಂದು ಹರೀಶ್‌ ಆಚಾರ್ಯ ಹೇಳುತ್ತಾರೆ.

click me!