ರಾಜ್ಯಕ್ಕೆ ಹೆಮ್ಮೆ; ಚಿತ್ರದುರ್ಗದಲ್ಲಿ ಕ್ಷಿಪಣಿ, ಜೆಟ್ ಪರೀಕ್ಷಾ ಘಟಕ

By Suvarna Web DeskFirst Published May 28, 2017, 11:51 AM IST
Highlights

ಈಗಾಗಲೇ ಕಳೆದ ಆರು ತಿಂಗಳಿನಿಂದ ಡಿಆರ್‌'ಡಿಓ ವೈಮಾನಿಕ ಪರೀಕ್ಷಾ ವಲಯವನ್ನು ಪರೀಕ್ಷಾರ್ಥವಾಗಿ ಬಳಸುತ್ತಿದ್ದು, ಇದೀಗ ಅಧಿಕೃತವಾಗಿ ಬಳಕೆಗೆ ಮುಕ್ತಗೊಳ್ಳಲಿದೆ. ಡಿಆರ್‌'ಡಿಓ ಸಂಶೋಧನೆ ನಡೆಸುವ ಎಲ್ಲ ಬಗೆಯ ವೈಮಾನಿಕ ಪರಿಕರಗಳು, ಮಾನವ ರಹಿತ ವಿಮಾನಗಳು, ಅಪಾಯದ ಮುನ್ಸೂಚನೆ ನೀಡುವ ವೈಮಾನಿಕ ವಾಹನಗಳು, ಯುದ್ಧ ವಿಮಾನಗಳು, ಯುದ್ಧ ಸಂಬಂಧಿ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಹೊತ್ತ ವಿಮಾನಗಳು, ವಾಹನಗಳು ಹಾಗೂ ವೈಮಾನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಬಗೆಯ ಹೊಸ ಸಂಶೋಧನೆಗಳನ್ನು ಪರೀಕ್ಷಿಸಲು ಈ ವೈಮಾನಿಕ ಪರೀಕ್ಷಾ ವಲಯ ಬಳಕೆಯಾಗಲಿದೆ.

ಬೆಂಗಳೂರು(ಮೇ 28): ಅಮೃತ್‌ ಮಹಲ್‌ ರಾಸುಗಳಿಗೆ ಖ್ಯಾತಿವೆತ್ತ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಇನ್ನುಮುಂದೆ ದೇಶದ ರಕ್ಷಣಾ ಕ್ಷೇತ್ರದ ವೈಮಾನಿಕ ಪರೀಕ್ಷಾ ವಲಯದಿಂದಲೂ ತನ್ನ ಹಿರಿಮೆ ಹೆಚ್ಚಿಸಿಕೊಳ್ಳಲಿದೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಾಗಿ (ಡಿಆರ್‌ಡಿಒ) ಏರೋನಾಟಿಕಲ್‌ ಡೆವಲೆಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ (ಎಡಿಇ) ಸಂಸ್ಥೆ ನೂತನವಾಗಿ ಸ್ಥಾಪಿಸಿರುವ ವೈಮಾನಿಕ ಪರೀಕ್ಷಾ ವಲಯ (ಏರೊನಾಟಿಕಲ್‌ ಟೆಸ್ಟ್‌ ರೇಂಜ್‌-ಎಟಿಆರ್‌) ಬೆಂಗಳೂರು ನಗರದಿಂದ 200 ಕಿ.ಮೀ. ದೂರದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಇಂದು ಲೋಕಾರ್ಪಣೆಗೊಳ್ಳಲಿದೆ. ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಇದನ್ನು ಉದ್ಘಾಟಿಸಲಿದ್ದಾರೆ.

ಡಿಆರ್‌'ಡಿಓದ 10 ವರ್ಷಗಳ ಶ್ರಮದ ಫಲವಾಗಿ ಸ್ಥಾಪನೆಗೊಂಡಿರುವ ವೈಮಾನಿಕ ಪರೀಕ್ಷಾ ವಲಯವು 2.2 ಕಿ.ಮೀ. ಉದ್ದದ ರನ್‌'ವೇ, ಆರು ಅಂತಸ್ತುಗಳ ರೇಂಜ್‌ ಕಂಟ್ರೋಲ್‌ ಕೇಂದ್ರ, 2 ಮಾನವ ರಹಿತ ವಿಮಾನಗಳ ನಿಲುಗಡೆ, ರಾಡಾರ್‌ ಕೇಂದ್ರ ಮತ್ತು ಸಂಚಾರಿ ಟೆಲಿಮೆಟ್ರಿ ವ್ಯಾನ್‌'ಗಳನ್ನು ಒಳಗೊಂಡಿದೆ. ಇದಲ್ಲದೇ ಡಿಆರ್‌'ಡಿಓಗೆ ಸಂಬಂಧಿಸಿದ ತಾಂತ್ರಿಕ ಕೇಂದ್ರ, ಕೆಫೆಟೇರಿಯಾ, ಮೆಡಿಕಲ್‌ ಸೆಂಟರ್‌ ಮತ್ತು ಬಾಲವಿಹಾರ ಕೂಡ ಇಲ್ಲಿ ನಿರ್ಮಾಣಗೊಳ್ಳಲಿದ್ದು, ಸುಮಾರು 200 ಎಕರೆ ಪ್ರದೇಶದಲ್ಲಿ ಡಿಆರ್‌ಡಿಓ ಟೌನ್‌ಶಿಪ್‌ ಕೂಡ ಸಿದ್ಧಗೊಳ್ಳಲಿದೆ. 

ಡಿಆರ್‌'ಡಿಓನ ಬೆಂಗಳೂರಿನ ಏರೋ ಕ್ಲಸ್ಟರ್‌ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 200 ವಿಜ್ಞಾನಿಗಳು ಕೂಡ ವೈಮಾನಿಕ ಪರೀಕ್ಷಾ ವಲಯಕ್ಕೆ ಸ್ಥಳಾಂತರಗೊಳ್ಳುವ ನಿರೀಕ್ಷೆ ಇದೆ. ವೈಮಾನಿಕ ಪರೀಕ್ಷಾ ವಲಯದ ಮೂಲಸೌಕರ್ಯಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ 330 ಕೋಟಿ ರು. ವೆಚ್ಚ ಮಾಡಿದ್ದು, ಸುಮಾರು 10 ಸಾವಿರ ಎಕರೆ ಪ್ರದೇಶವನ್ನು ಬಳಸಿಕೊಂಡಿದೆ.

ಈಗಾಗಲೇ ಕಳೆದ ಆರು ತಿಂಗಳಿನಿಂದ ಡಿಆರ್‌'ಡಿಓ ವೈಮಾನಿಕ ಪರೀಕ್ಷಾ ವಲಯವನ್ನು ಪರೀಕ್ಷಾರ್ಥವಾಗಿ ಬಳಸುತ್ತಿದ್ದು, ಇದೀಗ ಅಧಿಕೃತವಾಗಿ ಬಳಕೆಗೆ ಮುಕ್ತಗೊಳ್ಳಲಿದೆ. ಡಿಆರ್‌'ಡಿಓ ಸಂಶೋಧನೆ ನಡೆಸುವ ಎಲ್ಲ ಬಗೆಯ ವೈಮಾನಿಕ ಪರಿಕರಗಳು, ಮಾನವ ರಹಿತ ವಿಮಾನಗಳು, ಅಪಾಯದ ಮುನ್ಸೂಚನೆ ನೀಡುವ ವೈಮಾನಿಕ ವಾಹನಗಳು, ಯುದ್ಧ ವಿಮಾನಗಳು, ಯುದ್ಧ ಸಂಬಂಧಿ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಹೊತ್ತ ವಿಮಾನಗಳು, ವಾಹನಗಳು ಹಾಗೂ ವೈಮಾನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಬಗೆಯ ಹೊಸ ಸಂಶೋಧನೆಗಳನ್ನು ಪರೀಕ್ಷಿಸಲು ಈ ವೈಮಾನಿಕ ಪರೀಕ್ಷಾ ವಲಯ ಬಳಕೆಯಾಗಲಿದೆ.

ಡಿಆರ್‌'ಡಿಓ ವಿಜ್ಞಾನಿಗಳು ಕಳೆದ ನವೆಂಬರ್‌ನಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಈ ಮೊದಲು ರುಸ್ತುಂ-2 ಎಂದು ಗುರುತಿಸಲಾಗುತ್ತಿದ್ದ ‘ತಪಸ್‌-201' ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟವನ್ನು ಇದೇ ವೈಮಾನಿಕ ಪರೀಕ್ಷಾ ವಲಯದಲ್ಲಿ ನಡೆಸಿದ್ದಾರೆ. ಅಲ್ಲದೇ ಮೇ 21ರಂದು ಎಡಿಇ ಎಂಜಿನಿಯರ್‌'ಗಳು ಮತ್ತೊಮ್ಮೆ ತಪಸ್‌ ಮಾದರಿಯ ವಿಮಾನಗಳ ಹಾರಾಟ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ
epaper.kannadaprabha.in

click me!