ಬರ ಪರಿಹಾರಕ್ಕೆ ಕೇಂದ್ರಕ್ಕೆ ಮೊರೆ ಹೋದ ರಾಜ್ಯ ಸರ್ಕಾರ

By Web DeskFirst Published Oct 30, 2018, 9:04 AM IST
Highlights

2424 ಕೋಟಿ ನೆರೆ, ಬರ ಪರಿಹಾರಕ್ಕೆ ರಾಜ್ಯ ಮೊರೆ | ಕೇಂದ್ರ ಕೃಷಿ, ಗೃಹ ಸಚಿವರಿಗೆ ದೇಶಪಾಂಡೆ ಪತ್ರ | ಪರಿಸ್ಥಿತಿ ಅವಲೋಕನಕ್ಕೆ ಕೇಂದ್ರ ತಂಡ ಕಳಿಸಲು ಕೋರಿಕೆ

ಬೆಂಗಳೂರು (ಅ. 30): ರಾಜ್ಯದಲ್ಲಿ ಅತಿವೃಷ್ಟಿಹಾಗೂ ಅನಾವೃಷ್ಟಿಯಿಂದ ಉಂಟಾಗಿರುವ ಕೃಷಿ, ತೋಟಗಾರಿಕಾ ನಷ್ಟಹಾಗೂ ಬರ ಪರಿಹಾರ ಕಾರ್ಯಕ್ಕಾಗಿ 2,424 ಕೋಟಿ ರು. ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾಗೂ ಪರಿಸ್ಥಿತಿ ಅವಲೋಕಿಸಲು ಕೇಂದ್ರದಿಂದ ವಿಶೇಷ ತಂಡವನ್ನು ರಾಜ್ಯಕ್ಕೆ ಕಳುಹಿಸಬೇಕು ಎಂದು ಮನವಿ ಮಾಡಿ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ರಾಧಾ ಮೋಹನ್‌ಸಿಂಗ್‌ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ ಅವರಿಗೆ ಜಂಟಿ ಪತ್ರ ಬರೆದಿರುವ ಅವರು, ನೈಋುತ್ಯಮುಂಗಾರು-2018 ಮಳೆಯು ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ಸುರಿಯದೆ ಉತ್ತರ ಹಾಗೂ ದಕ್ಷಿಣ ಒಳ ನಾಡು ಕರ್ನಾಟಕ ಭಾಗದಲ್ಲಿ ಬರ ಸೃಷ್ಟಿಸಿದೆ. ಇದರಿಂದ 26.18 ಲಕ್ಷ ಹೆಕ್ಟೇರ್‌ ಕೃಷಿ ಹಾಗೂ 1.94 ಲಕ್ಷ ಹೆಕ್ಟೇರ್‌ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಒಟ್ಟು ಬೆಳೆಯ ಶೇ.33ರಷ್ಟುಹಾಳಾಗಿದ್ದು, ಅಂದಾಜು 16,500 ಕೋಟಿ ರು. ನಷ್ಟಉಂಟಾಗಿದೆ ಎಂದಿದ್ದಾರೆ.

ಹೀಗಾಗಿ ರಾಜ್ಯ ಸರ್ಕಾರ ಬರ ನಿರ್ವಹಣೆ - 2016ರ ಪ್ರಕಾರ ರಾಜ್ಯ ಸರ್ಕಾರವು 24 ಜಿಲ್ಲೆಗಳ 100 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳಾಗಿ ಘೋಷಣೆ ಮಾಡಿದೆ. ತಕ್ಷಣದ ಪರಿಹಾರ ಕ್ರಮವಾಗಿ ರಾಜ್ಯ ಸರ್ಕಾರವು ಪ್ರತಿ ಜಿಲ್ಲೆಗೆ 50 ಲಕ್ಷ ರು.ಗಳಂತೆ 50 ಕೋಟಿ ರು. ಘೋಷಿಸಿದ್ದು, ಇದರಲ್ಲಿ 25 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರು ಪೂರೈಕೆ, ಹೊಸ ಬೋರ್‌ವೆಲ್‌ ಕೊರೆಯಲು ಬಳಸಿಕೊಳ್ಳಲು ಸೂಚಿಸಲಾಗಿದೆ.

ಜತೆಗೆ, ನಷ್ಟಕ್ಕೆ ಗುರಿಯಾಗಿರುವ ಸಣ್ಣ, ಮಧ್ಯಮ ರೈತರು ಪುನಃ ಬೆಳೆಗೆ ಬಂಡವಾಳ ಹೂಡಲು ಅನುವಾಗುವಂತೆ 48 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದ್ದೇವೆ. ರಾಜ್ಯದ ಶೇ.80 ರಷ್ಟು(145 ತಾಲೂಕುಗಳು) ಅತಿವೃಷ್ಟಿಅಥವಾ ಅನಾವೃಷ್ಟಿಯಿಂದ ಸಮಸ್ಯೆಗೆ ಗುರಿಯಾಗಿದ್ದು, ಒಟ್ಟು 20 ಸಾವಿರ ಕೋಟಿಗೂ ಹೆಚ್ಚು ನಷ್ಟಉಂಟಾಗಿದೆ.

ಹೀಗಾಗಿ ಎರಡೂ ಸಚಿವಾಲಯದ ಜಂಟಿ ಕೇಂದ್ರ ತಂಡವನ್ನು ರಾಜ್ಯಕ್ಕೆ ಕಳುಹಿಸಿ ರಾಜ್ಯದಲ್ಲಾಗಿರುವ ಕೃಷಿ ಹಾಗೂ ತೋಟಗಾರಿಕಾ ನಷ್ಟವನ್ನು ಅಂದಾಜು ಮಾಡಬೇಕು. ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 2,424 ಕೋಟಿ ರು. ಪರಿಹಾರ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. 

click me!