ಗೃಹ ವಿಮೆ ಮಾಡಿಸಬೇಕೆಂದಿದ್ದೀರಾ? ಈ 5 ವಿಷಯಗಳನ್ನು ಗಮನದಲ್ಲಿಡಿ

By ಆಧಿಲ್ ಶೆಟ್ಟಿFirst Published Oct 16, 2017, 5:49 PM IST
Highlights

ದುರದೃಷ್ಟಕರ ಸಂದರ್ಭಗಳಲ್ಲಿ ಇತರ ವಿಮೆಗಳಂತೆ ಗೃಹ ವಿಮೆಯು ಕೂಡಾ ಬಹಳ ಪ್ರಯೋಜನಕಾರಿ ಸೌಲಭ್ಯವಾಗಿದೆ. ಗೃಹ ವಿಮೆಯನ್ನು ಮಾಡಿಸುವಾಗ ಯಾವ್ಯಾವ ಅಂಶಗಳನ್ನು ನೆನಪಿಡಬೇಕು ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ:

ಮನೆ ಖರೀದಿಸುವವರಿಗೆ,  ಗೃಹ ವಿಮೆಯು ರಿಸ್ಕ್’ನ್ನು ಕಡಿಮೆ ಮಾಡುವ ಒಂದು ಪ್ರಮುಖವಾದ ಸಾಧನ.  ಜಾಗತಿಕ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ನಗರಗಳಲ್ಲಿ ನೆರೆ, ಪ್ರವಾಹ, ಭೂಕುಸಿತ ಮುಂತಾದ ಪೃಕೃತಿ ವಿಕೋಪಗಳ ಸಂಭವಿಸುವಿಕೆಯನ್ನು ನಿರಾಕರಿಸುವಂತಿಲ್ಲ. ಆಕಸ್ಮಿಕ/ ವಿಕೋಪಗಳಿಂದಾಗುವ  ಹಣಕಾಸು ನಷ್ಟವನ್ನು ತಮ್ಮ ಪಾಲಿಸಿಗೆ ಅನುಗುಣವಾಗಿ ಗೃಹ ವಿಮೆಗಳು ಭರಿಸುತ್ತವೆ.

ಗೃಹವಿಮೆಗಳಲ್ಲಿ 2 ವಿಧಗಳಿವೆ; ಬೆಂಕಿ ಅವಘಡ  ವಿಮಾ ಪಾಲಿಸಿ (FIP) ಹಾಗೂ  ಕಾಂಪ್ರಹೆನ್ಸಿವ್ ವಿಮಾ ಪಾಲಿಸಿ (CIP).  ಬೆಂಕಿ ಆಕಸ್ಮಿಕ, ಚಂಡಮಾರುತ, ನೆರೆ ಇತ್ಯಾದಿಗಳಿಂದ ಮನೆ ಕಟ್ಟಡಕ್ಕೆ ಹಾನಿ ಸಂಭವಿಸಿದ್ದಲ್ಲಿ FIPಯು ನಷ್ಟವನ್ನು ಭರಿಸುತ್ತದೆ. CIPಯು 2 ಅಂಶಗಳನ್ನೊಳಗೊಂಡಿರುತ್ತದೆ.  ಒಂದರ ವ್ಯಾಪ್ತಿಯಲ್ಲಿ ಕಟ್ಟಡ ಮಾತ್ರವಿದ್ದರೆ, ಇನ್ನೊಂದರಲ್ಲಿ ಮನೆಯಲ್ಲಿರುವ ಸಾಮಾನುಗಳು ಒಳಗೊಂಡಿರುತ್ತವೆ.

ಗೃಹ ವಿಮೆಗಳನ್ನು ಆಯ್ಕೆಮಾಡಿಕೊಳ್ಳುವ ಮುನ್ನಾ ಯಾವ್ಯಾವ 5 ಅಂಶಗಳನ್ನು ಗಮನದಲ್ಲಿಡಬೇಕು ಎಂಬುದರ ಬಗ್ಗೆ ಕೆಳಗೆ ವಿವರಿಸಲಾಗಿದೆ.

ಒಟ್ಟು ಮೌಲ್ಯ ಎಷ್ಟು?

ಅನಾಹುತ ಸಂಭವಿಸಿದಾಗ ಮನೆ ಕಟ್ಟಡ ಅಥವಾ ಮನೆಯೊಳಗಡೆ ಇರುವ ಸಾಮಾನುಗಳಿಗೆ ಕೂಡಾ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಆದುದರಿಂದ ಗೃಹ ವಿಮೆ ಖರೀದಿಸುವಾಗ, ಈಗ ಅಂತಹದ್ದೇ ಮನೆ ಕಟ್ಟಲು ಎಷ್ಟು ಹಣ ಖರ್ಚಾಗುತ್ತದೆ ಎಂಬುದುನ್ನು ತಿಳಿದುಕೊಳ್ಳಿ.  ಅದೇ ರೀತಿ ಮನೆಯೊಳಗಡೆ ಇರುವ ವಸ್ತುಗಳನ್ನು ಪಟ್ಟಿಮಾಡಿ, ಹಾಗೂ ಇಂದಿನ ಮಾರುಕಟ್ಟೆ ಬೆಲೆಯನ್ನು ಲೆಕ್ಕ ಹಾಕಿ.  ಅವುಗಳ ಆಧಾರದಲ್ಲಿ ವಿಮಾಮೊತ್ತವು ಎಷ್ಟು ಬೇಕಾಗುತ್ತದೆ ಎಂಬುವುದನ್ನು ನಿರ್ಧರಿಸಿ.

ಯಾವ ವಿಧದ ಗೃಹ ವಿಮೆಯನ್ನು ಖರೀದಿಸಬೇಕು?

ಗೃಹ ವಿಮೆ ಖರೀದಿಸುವಾಗ, ಮೌಲ್ಯ-ಇಳಿಕೆ (Depreciated)  ಹಾಗೂ ಪುನರ್ನಿರ್ಮಾಣ (Reinstatement) ಮಾದರಿ ಎಂಬ 2 ಆಯ್ಕೆಗಳು ನಿಮ್ಮ ಮುಂದಿರುತ್ತವೆ.   ಮೌಲ್ಯ-ಇಳಿಕೆ ಮಾದರಿಯಲ್ಲಿ ನಿಮ್ಮ ವಿಮಾ ಮೊತ್ತವು ಕಡಿಮೆಯಿರುವುದು. ಪುನರ್ನಿರ್ಮಾಣ ಮಾದರಿಯಲ್ಲಿ ವಿಮಾ ಮೊತ್ತವು ಹೊಸ ಮನೆ ಕಟ್ಟಲು ಬೇಕಾಗುವಷ್ಟು ಹೆಚ್ಚಾಗಿರುವುದು. ಆದುದರಿಂದ ಪುನರ್ನಿರ್ಮಾಣ ವಿಮಾ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳುವುದು ಲೇಸು.

ಬೇರೆ ಬೇರೆ ಉದ್ದೇಶಗಳಿಗೆ ಬೇರೆ ಬೇರೆ ವಿಮೆಗಳು ವರ್ಸಸ್ ಎಲ್ಲಾದ್ದಕ್ಕೇ ಒಂದೇ ವಿಮೆ:

ಮನೆ ಹಾಗೂ ಮನೆ ಸಾಮಾಗ್ರಿಗಳಿಗೆ ಪ್ರತ್ಯೇಕವಾಗಿ ವಿಮೆ ಮಾಡಬೇಕೆಂದರೆ ನೀವು ಬೇರೆ ಬೇರೆಯಾಗಿ ಕಾಂಪ್ರಹೆನ್ಸಿವ್ ವಿಮೆಯನ್ನು ಮಾಡಿಸಿಕೊಳ್ಳಬಹುದು. ಈ ರೀತಿಯ ವಿಮೆ ಖರೀದಿಸುವಾಗ ವಿಮೆ ಪಾಲಿಸಿಯ ಷರತ್ತು ಹಾಗೂ ನಿಬಂಧನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವುದು ಅತ್ಯವಶ್ಯ. ಯಾವ್ಯಾವ ವಸ್ತುಗಳು ವಿಮಾ ವ್ಯಾಪ್ತಿಯೊಳಗೆ ಬರುತ್ತವೆ ಎಂದು ತಿಳಿದುಕೊಳ್ಳಿ. ಹೆಚ್ಚು ವಸ್ತುಗಳನ್ನು ವಿಮಾವ್ಯಾಪ್ತಿಯಲ್ಲಿ ತರಲು ಪ್ರತ್ಯೇಕ ಪಾಲಿಸಿಯನ್ನು ಖರೀದಿಸುವ ಅಗತ್ಯವಿರಲೂ ಬಹದು. ಈ ರೀತಿ ಪ್ರತ್ಯೇಕ ಪಾಲಿಸಿಗಳನ್ನು ಖರೀದಿಸುವುದು ದುಬಾಯರಿಯಾಗುವುದಲ್ಲದೇ, ಅವುಗಳನ್ನು  ಇತ್ಯರ್ಥಗೊಳಿಸುವ ಸಂದರ್ಭದಲ್ಲಿ ಪ್ರತ್ಯೇಕವಾಗಿಯೇ ವ್ಯವಹರಿಸಬೇಕು.

ಇಂತಹ ಪಾಲಿಸಿಗೆ ಹೋಲಿಸಿದಾಗ ಎಲ್ಲಾವನ್ನೂ ಒಳಗೊಂಡ ಒಂದು ವಿಮೆಯನ್ನು ಖರೀದಿಸುವುದು ಹೆಚ್ಚು ಸೂಕ್ತ; ಆರ್ಥಿಕ ದೃಷ್ಟಿಯಿಂದಲೂ ಉತ್ತಮ. ಜತೆಗೆ ಇಂತಹ ಪಾಲಿಸಿಗಳನ್ನು ಇತ್ಯರ್ಥ ಮಾಡುವುದು ಕೂಡಾ ಸುಲಭ, ಕೇವಲ ಒಂದರ ಹಿಂದೆ ಪರಿಶ್ರಮ ಪಟ್ಟರೆ ಸಾಕು. ಆದುದರಿಂದ, ಯಾವ್ಯಾವುದನ್ನು ವಿಮೆ ಮಾಡಿಸಬೇಕು/ಬಾರದು ಎಂಬ ನಿಮ್ಮ ಅಗತ್ಯಗಳನ್ನು ಸರಿಯಾಗಿ ಯೋಚಿಸಿ ಯಾವ ವಿಮೆಯನ್ನು ಖರೀದಿಸಬೇಕು ಎಂಬುವುದನ್ನು ತೀರ್ಮಾನಿಸಿ.

ಅನಗತ್ಯ ಅಂಶಗಳನ್ನು ಕೈಬಿಡಿ:

ಕೆಲವೊಮ್ಮೆ , ನಿಮಗೆ ಅಗತ್ಯವಿಲ್ಲದ ಅಂಶಗಳನ್ನು ವಿಮಾ ಪಾಲಿಸಿಯು ಒಳಗೊಂಡಿರಬಹುದು.  ಆದುದರಿಂದ ಅವುಗಳನ್ನು ವಿಮಾ ವ್ಯಾಪ್ತಿಯಿಂದ ಹೊರಗಿಟ್ಟರೆ ವಿಮೆಯ ಖರ್ಚನ್ನು ಕಡಿಮೆ ಮಾಡಬಹುದು. ಉದಾಹರಣೆಗೆ, ನೀವು ವಾಸಿಸುವ ಸ್ಥಳದಲ್ಲಿ ನೆರೆ ಬರುವ ಸಾಧ್ಯತೆಗಳು ಕಡಿಮೆ ಇರಬಹುದು.  ಆದುದರಿಂದ ನಿಮಗೆ ಅವಶ್ಯಕತೆ ಇಲ್ಲದ ಅಂಶಗಳನ್ನು ವಿಮೆಯಿಂದ ಹೊರಗಿಡುವುದರಿಂದ ಹಣವನ್ನು ಉಳಿಸಬಹುದು.

ಹೋಲಿಕೆ ಮಾಡಲು ಆನ್’ಲೈನ್ ವಿಮಾ ಟೂಲ್’ಗಳನ್ನು ಬಳಸಿ:

ಸ್ಥಳೀಯ ವಿಮಾ ಏಜೆಂಟ್ ನಿಮಗೆ ಆಕರ್ಷಕ ಆಫರ್’ಗಳನ್ನು ನೀಡಿರಬಹುದು. ಅದಾಗ್ಯೂ ನೀವು ಬೇರೆ ಬೇರೆ ಕಂಪನಿಗಳ ಬೇರೆ ಬೇರೆ ವಿಮಾ ಯೋಜನೆಗೆಳನ್ನು ಹೋಲಿಕೆ ಮಾಡುವುದು ಉತ್ತಮ. ಅದಕ್ಕಾಗಿ ಆನ್’ಲೈನ್ ವಿಮಾ ಟೂಲ್’ಗಳನ್ನು ಬಳಸಿ ವಿಮೆಯ ಬೆಲೆ, ಅವುಗಳ ವ್ಯಾಪ್ತಿ, ಮತ್ತಿತರ ವಿಷಯಗಳನ್ನು ತಿಳಿದುಕೊಳ್ಳಬಹುದು.  ಅದಕ್ಕನುಗುಣವಾಗಿ ಸ್ಥಳೀಯ ಏಜೆಂಟ್’ನೊಂದಿಗೆ ವ್ಯವಹರಿಸಬಹದುದು.

ಕೊನೆಗೆ...

ಗೃಹ ವಿಮೆಯನ್ನು ಖರೀದಿಸುವಾಗ/ ಇತ್ಯರ್ಥಪಡಿಸುವಾಗ ಸರಿಯಾದ ಮತ್ತು ನಿಖರ ಮಾಹಿತಿಯನ್ನು ಒದಗಿಸುವುದು ಅತ್ಯಗತ್ಯ. ವಿಮೆಯನ್ನು ಇತ್ಯರ್ಥಗೊಳಿಸುವಾಗ ವಿಮೆ ಮಾಡಲ್ಪಟ್ಟ ವಸ್ತುಗಳ ಒಡೆತನ ಹಾಗೂ ಮೌಲ್ಯದ ಬಗ್ಗೆ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳಿ.  ಸಾಮಾನುಗಳ ರಸೀದಿಗಳನ್ನು ಸುರಕ್ಷಿತವಾಗಿಡಿ. ಅದೇ ರೀತಿ ಮನೆ ಕಟ್ಟಡವನ್ನು ಕೂಡಾ ಉತ್ತಮವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಅದಕ್ಕಾಗಿ ಬೇಕಾದ  ರಿಪೇರಿ ಹಾಗೂ ಇತರ ನಿರ್ವಹಣೆ ಕೆಲಸಗಳನ್ನು ತಪ್ಪದೇ ಮಾಡಿಸಿ. ಕಟ್ಟಡ ದುಸ್ಥಿತಿಯಲ್ಲಿದ್ದರೆ ನಿಮ್ಮ ಕ್ಲೇಮ್ ತಿರಸ್ಕೃತವಾಗುವ ಸಾದ್ಯತೆಗಳೂ ಇವೆ.

ಆಧಿಲ್ ಶೆಟ್ಟಿ, 

ಸಿಇಓ -ಬ್ಯಾಂಕ್ ಬಝಾರ್

https://www.bankbazaar.com/

[ಬ್ಯಾಂಕ್ ಬಝಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು  ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು  ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.]

click me!