ಐಎಎಸ್ ಟಾಪರ್ ತನ್ನ ತಂದೆಯನ್ನು ವಿಶ್ವಕ್ಕೆ ಪರಿಚಯಿಸಿದ್ದು ಹೀಗೆ

By Web DeskFirst Published Oct 6, 2018, 9:26 AM IST
Highlights

ಕಲ್ಕತ್ತಾ ಮೂಲದ ಐಎಎಸ್ ಟಾಪರ್ ತನ್ನ ತಂದೆಯನ್ನು ಜಗತ್ತಿಗೆ ಪರಿಚಯಿಸಿದ್ದು ಕೊಂಚ ಭಿನ್ನವಾಗಿ | ಈ ಟ್ವೀಟನ್ನು ಕಾಂಗ್ರೆಸ್ ಸಂಸದರಾದ ಶಶಿತರೂರ್ ಕೂಡ ರೀಟ್ವೀಟ್ ಮಾಡಿದ್ದಾರೆ | ಅಷ್ಟಕ್ಕೂ ಏನಿದೆ ಅದರಲ್ಲಿ? 

ಕೊಲ್ಕತ್ತಾ (ಸೆ. 06): ಐಎಎಸ್ ಟಾಪರ್ ತನ್ನ ತಂದೆಯನ್ನು ಜಗತ್ತಿಗೆ ತೋರಿಸಿದ್ದು ಹೀಗೆ ಎಂಬ ಒಕ್ಕಣೆಯೊಂದಿಗೆ ಹುಡಿಗಿಯೋರ್ವಳು ವಯೋವೃದ್ಧರೊಬ್ಬರನ್ನು ಕೈಗಾಡಿ ಆಟೋರಿಕ್ಷಾದಲ್ಲಿ ಕುಳ್ಳಿರಿಸಿ ತಾನು ಗಾಡಿ ಎಳೆದುಕೊಂಡು ಬರುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಂಗ್ರೆಸ್‌ನ ಆಸ್ಮಾ ಬಾಷಾ ಈ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅದು 2600 ಬಾರಿ ಲೈಕ್ ಮಾಡಿದ್ದಾರೆ. ಅವರ ಟ್ವೀಟನ್ನು ಕಾಂಗ್ರೆಸ್ ಸಂಸದರಾದ ಶಶಿತರೂರ್ ಕೂಡ ರೀಟ್ವೀಟ್ ಮಾಡಿದ್ದಾರೆ. ಆದರೆ ಫೋಟೋದಲ್ಲಿರುವಾಕೆ ಐಎಎಸ್ ಟಾಪರ್ ನಿಜವೇ ಎಂದು ‘ಬೂಮ್’ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ. ವಾಸ್ತವವಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋ ಶ್ರಮೋನಾ ಪೊದ್ದಾರ್ ಎಂಬುವರು ಕಳೆದ ಏಪ್ರಿಲ್‌ನಲ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಫೋಟೋ.

ಆಟೋರಿಕ್ಷಾದಲ್ಲಿ ಕುಳಿತಿರುವ ವ್ಯಕ್ತಿಗೂ ಈ ಹುಡುಗಿಗೂ ಯಾವುದೇ ಸಂಬಂಧ ಇಲ್ಲ. ರಿಕ್ಷಾವಾಲಾಗಳತ್ತ ಇರುವ ಸಹಾನುಭೂತಿ ಮತ್ತು ರಿಕ್ಷಾ ಎಳೆಯಲು ಬೇಕಾಗಿರುವ ದೈಹಿಕ ಶಕ್ತಿಯನ್ನು ಶ್ಲಾಘಿಸಿ ಹೀಗೊಂದು ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಫೋಟೋಗೆ 14,000 ಕ್ಕಿಂತಲೂ ಹೆಚ್ಚಿನ ಲೈಕ್ಸ್ ಸಿಕ್ಕಿದೆ.

ಈ ಬಗ್ಗೆ ಬೂಮ್ ಸ್ವತಃ ಪೊದ್ದಾರ್ ಅವರನ್ನೇ ಸಂಪರ್ಕಿಸಿ ಸ್ಪಷ್ಟನೆ ಪಡೆದಿದ್ದು, ‘ನಾನು ಟ್ರಾವೆಲ್ ಬ್ಲಾಗರ್ ಆಗಿದ್ದು, ಐಎಎಸ್ ಟಾಪರ್ ಅಲ್ಲ. ಕೆಲವು ತಿಂಗಳ ಹಿಂದೆ ಕ್ಲಿಕ್ಕಿಸಿದ ಫೋಟೋ ಇದಾಗಿದೆ. ಆಗಲೂ ಈ ಫೋಟೋ ವೈರಲ್ ಆಗಿತ್ತು. ಆದರೆ ಇಂಥ ತಪ್ಪು ಶೀರ್ಷಿಕೆಯೊಂದಿಗೆ ಅಲ್ಲ’ ಎಂದಿದ್ದಾರೆ. 

 -ವೈರಲ್ ಚೆಕ್

click me!