ಸೇನೆಗೆ ಅಪಾಚೆ ಬಲ, ಆರ್ಥಿಕ ಕ್ಷೇತ್ರ ವಿಲವಿಲ, ರಾಮುಲು ಹೇಳಿಕೆಯ ಕೋಲಾಹಲ: ಟಾಪ್ 10 ಸುದ್ದಿಯ ಕಲರವ!

By Web DeskFirst Published Sep 3, 2019, 7:57 PM IST
Highlights

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಸೆ.03ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

ಬೆಂಗಳೂರು(ಸೆ.03): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ.

ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ ನಿಮ್ಮ ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ವಾಯುಸೇನೆಗೆ ಹೆಲಿಕಾಪ್ಟರ್ ಅಪಾಚೆ: ಕೆಣಕಿದರೆ ಆಕಾಶದಲ್ಲೇ ಅಪ್ಪಚ್ಚಿ!

ಭಾರತದ ಸೇನಾ ಶಕ್ತಿಯನ್ನು ವೃದ್ಧಿಸುವ ಮೋದಿ ಸರ್ಕಾರದ ಬದ್ಧತೆಗೆ ಮತ್ತಷ್ಟು ಮೆರುಗು ಬಂದಿದ್ದು, ಅಮೆರಿಕದ 8 ಅಪಾಚೆ ಯುದ್ಧ ಹೆಲಿಕಾಪ್ಟರ್'ಗಳು ಇಂದು ಭಾರತೀಯ ವಾಯುಸೇನೆಯ ಬತ್ತಳಿಕೆ ಸೇರಿವೆ. ಅಮೆರಿಕ ಸೇನೆಯಲ್ಲಿ ಪ್ರಬಲ ಯುದ್ಧ ಹೆಲಿಕಾಪ್ಟರ್'ಗಳಲ್ಲಿ ಒಂದಾದ ಅಪಾಚೆ ಯುದ್ಧ ಹೆಲಿಕಾಪ್ಟರ್'ಗಳನ್ನು, ಪಂಜಾಬ್‌ನ ಪಠಾಣ್'ಕೋಟ್ ವಾಯುನೆಲೆಯಲ್ಲಿ ಅಧಿಕೃತವಾಗಿ ವಾಯುಸೇನೆಗೆ ಹಸ್ತಾಂತರಿಸಲಾಯಿತು.

2. ಕಾಣದಾಗಿದೆ ಪರಿಹಾರ: ಗುರಿ ಕಡಿತಗೊಳಿಸಿದ ಮೋದಿ ಸರ್ಕಾರ!

ಆರ್ಥಿಕ ಹಿನ್ನೆಡೆ ಕೈಗಾರಿಕಾ ಕ್ಷೇತ್ರದ ಪ್ರಮುಖ ವಲಯಗಳ ಮೇಲೆ ಭಾರೀ ದುಷ್ಪರಿಣಾಮ ಬೀರಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ನಿರಾಶಾದಾಯಕವಾಗಿವೆ. ಆರ್ಥಿಕ ಕುಸಿತದಿಂದಾಗಿ ವಿದ್ಯುತ್, ಕಚ್ಚಾ ತೈಲ, ಸಿಮೆಂಟ್ ಸೇರಿದಂತೆ ಪ್ರಮುಖ 8 ಕೈಗಾರಿಕಾ ವಲಯಗಳ ಆರ್ಥಿಕ ಬೆಳವಣಿಗೆ ಪ್ರಮಾಣ ಜುಲೈನಲ್ಲಿ ಶೇ 2.1ಕ್ಕೆ ಕುಸಿದಿದೆ ಎಂದು ಕೇಂದ್ರದ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

3. ಕೈ ಮುಗಿದು ಕೇಳುತ್ತೇನೆ-ಡಿಕೆಶಿ ಅಣ್ಣಾ ಕ್ಷಮಿಸಿ ಎಂದ ಶ್ರೀರಾಮುಲು

ವಿಚಾರಣೆ ಹಿನ್ನೆಲೆಯಲ್ಲಿ ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಶ್ರೀರಾಮುಲು ಕ್ಷಮೆ ಯಾಚಿಸಿದ್ದಾರೆ. ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ತಂದೆಯ ಪೂಜಾ ಕಾರ್ಯಕದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮರುಕ ವ್ಯಕ್ತಪಡಿಸಿದ್ದು, ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಕ್ಷಮಿಸಿ ಎಂದು ಹೇಳಿದ್ದಾರೆ.

4. T20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಮಿಥಾಲಿ ರಾಜ್

ಟೀಂ ಇಂಡಿಯಾ ಅನುಭವಿ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಮಂಗಳವಾರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ಗೆ ವಿದಾಯ ಘೋಷಿಸಿದ್ದಾರೆ. ಮುಂಬರುವ 2021ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ಮಿಥಾಲಿ ರಾಜ್ ತಿಳಿಸಿದ್ದಾರೆ.

5. ಬೆಂಗಳೂರಿನಲ್ಲಿ ಬಾರ್​, ಪಬ್ ಬಂದ್ : 1 ದಿನ ಎಣ್ಣೆ ಸಿಗಲ್ಲ..!

ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಸೆ. 7ರಂದು ಬೆಂಗಳೂರಿನ ಉತ್ತರ ಭಾಗದ ಏರಿಯಾಗಳಲ್ಲಿ ಬಾರ್ ಬಂದ್ ಮಾಡುವಂತೆ  ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನೆ ಇರುವ ಹಿನ್ನೆಲೆ ಈ ಆದೇಶವನ್ನು ಹೊರಡಿಸಲಾಗಿದೆ.   ಸೆ.7ರಂದು 57 ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಐದು ಸಾವಿರ ಜನ ಪಾಲ್ಗೊಳ್ಳುವ ಸಾಧ್ಯತೆ ಇದೆ.

6. ‘ಪೈಲ್ವಾನ್’ಗೆ ಸ್ಪೆಷಲ್ ಸರ್ಪ್ರೈಸ್ ನೀಡಿದ ‘ದಬಾಂಗ್ 3' ಟೀಂ

ಸ್ಯಾಂಡಲ್ ವುಡ್ ಸುಲ್ತಾನ್ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಪ್ರವಾಹದ ಪ್ರಯುಕ್ತ ಸರಳವಾಗಿ ಆಚರಿಸಿಕೊಂಡಿದ್ದಾರೆ. ಬಾಲಿವುಡ್ ದಬಾಂಗ್ -3 ಟೀಂ ವಿಶೇಷವಾಗಿ ವಿಶ್ ಮಾಡಿದೆ. ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್, ಸ್ಯಾಂಡಲ್ ವುಡ್ ಸುಲ್ತಾನ್ ಕಿಚ್ಚ ಸುದೀಪ್ ಒಳ್ಳೆಯ ಸ್ನೇಹಿತರು. ‘ಪೈಲ್ವಾನ್’ ಬರ್ತಡೇಗೆ ದಬಂಗ್ ಟೀಂ ತುಂಬಾ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.

7. ಚಂದ್ರಯಾನ2: ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮ್ಯಾನೋವರ್ ಯಶಸ್ವಿ!

ಚಂದ್ರಯಾನ-2 ನೌಕೆ ದಿನದಿಂದ ದಿನಕ್ಕೆ ಚಂದ್ರನಿಗೆ ಹತ್ತಿರವಾಗುತ್ತಿದ್ದು, ಮೊದಲ ಹಂತದ ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮ್ಯಾನೋವರ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ನಿನ್ನೆಯಷ್ಟೇ ಚಂದ್ರಯಾನ 2 ಆರ್ಬಿಟರ್'ನಿಂದ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದ ವಿಜ್ಞಾನಿಗಳು, ಇದೀಗ ಚಂದ್ರನ ಮೇಲ್ಮೈನತ್ತ ಮೂನ್ ಲ್ಯಾಂಡರ್ ಅನ್ನು ತಳ್ಳುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

8. ಮುಕೇಶ್ ಅಂಬಾನಿ ಆ್ಯಂಟಿಲಿಯಾದಲ್ಲಿ ವಿಜೃಂಭಣೆಯ ಗಣೇಶ ಹಬ್ಬ; ಒಂದು ಝಲಕ್

ಇಡೀ ದೇಶದಲ್ಲಿ ಗಣೇಶ ಚತುರ್ಥಿಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ ನಿವಾಸದಲ್ಲೂ ಬಹಳ ವಿಜೃಂಭಣೆಯಿಂದ ವಿನಾಯಕ ಹಬ್ಬವನ್ನು ಆಚರಿಸಲಾಯ್ತು. ನೀತಾ ಅಂಬಾನಿ ನೇತೃತ್ವದಲ್ಲಿ ನಡೆದ ಈ ಸಮಾರಂಭದ ಒಂದು ಝಲಕ್ ಇಲ್ಲಿದೆ....

9. ಯುದ್ಧದ ಕನವರಿಕೆಯಿಂದ ಹೊರಬಂದ ಪಾಕ್ ಪ್ರಧಾನಿ: ನಾಲಿಗೆ ಮೇಲೆ ಶಾಂತಿಯ ಹೊಸ ಕಹಾನಿ!

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೊನೆಗೂ ಮೆತ್ತಗಾಗಿದ್ದಾರೆ. ಯಾವುದೇ ಕಾರಣಕ್ಕೂ ಪಾಕಿಸ್ತಾನ ಭಾರತದೊಂದಿಗೆ ಯುದ್ಧ ಆರಂಭಿಸುವುದಿಲ್ಲ ಎಂದು ಹೇಳಿರುವ ಇಮ್ರಾನ್, ಯಾವುದೇ ಸಮಸ್ಯೆಗೆ ಯುದ್ಧ ಪರಿಹಾರವಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

10. ಮಹಾ ಸಿಎಂ ಫಡ್ನವಿಸ್, ಯಡಿಯೂರಪ್ಪ ಕೈಗೊಂಡ ಮಹತ್ವದ ನಿರ್ಧಾರಗಳು

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಮಂಗಳವಾರ) ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿ, ಹಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಸಭೆಯಲ್ಲಿ ಕೈಗೊಂಡ ಕೆಲ ತೀರ್ಮಾನಗಳು ಈ ಕೆಳಗಿನಂತಿವೆ. 

click me!