ಬೆಂಗಳೂರು ದಾಹ ಇಂಗಿಸಲು ಲಿಂಗನಮಕ್ಕಿ ಮೇಲೆ ಕಣ್ಣು

Published : Jun 21, 2019, 08:28 AM ISTUpdated : Jun 21, 2019, 08:52 AM IST
ಬೆಂಗಳೂರು ದಾಹ ಇಂಗಿಸಲು  ಲಿಂಗನಮಕ್ಕಿ ಮೇಲೆ ಕಣ್ಣು

ಸಾರಾಂಶ

ಬೆಂಗಳೂರು ದಾಹ ಇಂಗಿಸಲು ಲಿಂಗನಮಕ್ಕಿ ಮೇಲೆ ಕಣ್ಣು |  300 ಕಿ.ಮೀ. ದೂರದಿಂದ ನೀರು ತರುವ ಯೋಜನೆ | ಡಿಪಿಆರ್‌ ಸಿದ್ಧಪಡಿಸಲು ಡಿಸಿಎಂ ಪರಮೇಶ್ವರ್‌ ಸೂಚನೆ

ಬೆಂಗಳೂರು (ಜೂ. 21): ಉದ್ಯಾನ ನಗರಿ ಬೆಂಗಳೂರಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರು ತರುವ ವಿವಾದಿತ ಯೋಜನೆಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ಬಗ್ಗೆ  ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸೂಚನೆ ನೀಡಿದ್ದಾರೆ.

ಬಿಡಿಎ ಮಾಸ್ಟರ್‌ ಪ್ಲಾನ್‌ ಪ್ರಕಾರ 2031ರ ವೇಳೆಗೆ ಬೆಂಗಳೂರು ನಗರದ ಜನಸಂಖ್ಯೆ 2.01 ಕೋಟಿಯಷ್ಟಾಗಲಿದೆ. ಈಗಾಗಲೇ ಕಾವೇರಿ ನೀರಿನ ಮೂಲದಿಂದ ಗರಿಷ್ಠ ಪ್ರಮಾಣದ ನೀರನ್ನು ಪಡೆಯಲು ಅಗತ್ಯ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.

ಅಲ್ಲದೆ, ಕಾವೇರಿ ಜಲಾನಯನ ಪ್ರದೇಶವಾಗಿರುವ ಕೊಡಗು ಭಾಗದಲ್ಲಿ ಮಳೆಯ ಪ್ರಮಾಣವೂ ಕುಸಿಯುತ್ತಿದೆ. ಹೀಗಾಗಿ ಕಾವೇರಿ ಬದಲಿಗೆ ಪಶ್ಚಿಮ ಘಟ್ಟದ ಕೇಂದ್ರ ಭಾಗದತ್ತ ರಾಜ್ಯ ಸರ್ಕಾರ ಪರ್ಯಾಯ ನೀರಿನ ಮೂಲಗಳಿಗಾಗಿ ಮುಖ ಮಾಡಿದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಡಿಪಿಆರ್‌ ಸಿದ್ಧಪಡಿಸಲು ಗುರುವಾರ ಸೂಚನೆ ನೀಡಿದೆ.

2014ರಲ್ಲಿ ತ್ಯಾಗರಾಜ ಸಮಿತಿಯು ವರದಿ ನೀಡಿ, ಲಿಂಗನಮಕ್ಕಿಯಿಂದ ನೀರು ಬಳಸಿಕೊಳ್ಳಬಹುದು ಎಂದು ಶಿಫಾರಸು ಮಾಡಿತ್ತು. ಇದರ ಬೆನ್ನಲ್ಲೇ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದ ಪರಿಸರ ತಜ್ಞರು ಹಾಗೂ ಸ್ಥಳೀಯ ನಾಗರಿಕರು, ಪಶ್ಚಿಮಘಟ್ಟಗಳ ಸೂಕ್ಷ್ಮತೆ ಹಾಳಾಗಲಿದೆ ಎಂದು ವಾದಿಸಿದ್ದರು. ಕೆಲ ಅಧಿಕಾರಿಗಳು ವಿದ್ಯುತ್‌ ತಯಾರಿಕೆಗೂ ಸಮಸ್ಯೆ ಆಗಬಹುದು ಎಂದಿದ್ದರು.

ಬೆಂಗಳೂರಿಂದ 300 ಕಿ.ಮೀ. ದೂರ:

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ.ಪರಮೇಶ್ವರ್‌, ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಪ್ರಸ್ತುತ ಕಾವೇರಿಯಿಂದ 1400 ಎಂಎಲ್‌ಡಿ ನೀರನ್ನು ನಗರಕ್ಕೆ ಹರಿಸಲಾಗುತ್ತಿದೆ. ಆದಾಗ್ಯೂ ನಗರದಲ್ಲಿ ನೀರಿನ ಸಮಸ್ಯೆ ನಿಯಂತ್ರಣಕ್ಕೆ ಬಂದಿಲ್ಲ. ನಗರದ ಹಲವು ಪ್ರದೇಶಗಳಿಗೆ ಇನ್ನೂ ಕಾವೇರಿ ನೀರು ಪೂರೈಸಲಾಗುತ್ತಿಲ್ಲ. ಇನ್ನು ಕಾವೇರಿ ಐದನೇ ಹಂತದ ಯೋಜನೆಯಿಂದ ಹೆಚ್ಚೆಂದರೆ 800 ಎಂಎಲ್‌ಡಿ ನೀರು ಮಾತ್ರ ಬರಬಹುದು. ಆದರೂ, ಭವಿಷ್ಯದ ಬೆಂಗಳೂರಿನ ನೀರಿನ ಸಮಸ್ಯೆ ನೀಗಿಸಲು ಹಿಂದೆ ತ್ಯಾಗರಾಜ ಸಮಿತಿಯು ಲಿಂಗನಮಕ್ಕಿಯಿಂದಲೂ ನೀರು ಹರಿಸಬಹುದು ಎಂದು ವರದಿ ನೀಡಿದ್ದರು. ಈ ವರದಿಯನ್ನು ಅಧ್ಯಯನ ನಡೆಸಿ ನೀರು ತರುವ ಸಾಧ್ಯತೆಯನ್ನು ಕಂಡುಕೊಳ್ಳಲಾಗಿದೆ. ಹೀಗಾಗಿ ಡಿಪಿಆರ್‌ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

12 ಸಾವಿರ ಕೋಟಿ ವೆಚ್ಚ:

ಲಿಂಗನಮಕ್ಕಿಯು ಬೆಂಗಳೂರಿಗೆ 300 ಕಿ.ಮೀ. ದೂರವಿದೆ. 12 ಸಾವಿರ ಕೋಟಿ ರು. ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ವೆಚ್ಚದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮೊದಲ ಹಂತದಲ್ಲಿ 10 ಟಿಎಂಸಿ ನೀರನ್ನು ತರಲು ಯೋಜಿಸಲಾಗಿದೆ. ಡಿಪಿಆರ್‌ ಬಳಿಕ ಯೋಜನೆಯ ಸಾಧಕ- ಬಾಧಕವನ್ನು ಪರಿಶೀಲಿಸಲಾಗುವುದು. ಪರಿಸರ, ನೀರು ಪಂಪ್‌ ಮಾಡಲು ಇರುವ ಸವಾಲುಗಳ ಬಗ್ಗೆ ಅವಲೋಕಿಸಲಾಗುವುದು ಎಂದು ಮಾಹಿತಿ ನೀಡಿದರು.

ಅಲ್ಲದೆ, ಕೆಲವು ಅಧಿಕಾರಿಗಳು ಲಿಂಗನಮಕ್ಕಿ ಸಾಮರ್ಥ್ಯ 151 ಟಿಎಂಸಿ. 2014ರಿಂದ ಗರಿಷ್ಠ ಮಿತಿ ತಲುಪಿಯೇ ಇಲ್ಲ. ಇದೀಗ 30 ಟಿಎಂಸಿ ನೀರನ್ನು ಬೆಂಗಳೂರಿಗೆ ಹರಿಸಿದರೆ ವಿದ್ಯುತ್‌ ಉತ್ಪಾದನೆಗೂ ಸಮಸ್ಯೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದರು.

ಇದರ ನಡುವೆಯೇ ಬೆಂಗಳೂರು ನಗರದ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಬೆಂಗಳೂರಿಗೆ ತರುವ ಯೋಜನೆ ರೂಪರೇಷೆ ಕುರಿತು ಬಿಎಂಆರ್‌ಡಿಎ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು.

12 ಸಾವಿರ ಕೋಟಿ ವೆಚ್ಚ:

ಲಿಂಗನಮಕ್ಕಿಯು ಬೆಂಗಳೂರಿಗೆ 300 ಕಿ.ಮೀ. ದೂರವಿದೆ. 12 ಸಾವಿರ ಕೋಟಿ ರು. ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ವೆಚ್ಚದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮೊದಲ ಹಂತದಲ್ಲಿ 10 ಟಿಎಂಸಿ ನೀರನ್ನು ತರಲು ಯೋಜಿಸಲಾಗಿದೆ. ಡಿಪಿಆರ್‌ ಬಳಿಕ ಯೋಜನೆಯ ಸಾಧಕ- ಬಾಧಕವನ್ನು ಪರಿಶೀಲಿಸಲಾಗುವುದು. ಪರಿಸರ, ನೀರು ಪಂಪ್‌ ಮಾಡಲು ಇರುವ ಸವಾಲುಗಳ ಬಗ್ಗೆ ಅವಲೋಕಿಸಲಾಗುವುದು ಎಂದು ಮಾಹಿತಿ ನೀಡಿದರು.

ಲಿಂಗನಮಕ್ಕಿ ಜಲಾಶಯದ ನೀರು ಕೇವಲ ವಿದ್ಯುತ್‌ ಉತ್ಪಾದನೆಗಷ್ಟೇ ಬಳಕೆಯಾಗುತ್ತಿದೆ. ಬಳಿಕ ಈ ನೀರು ಸಮುದ್ರದ ಪಾಲಾಗುತ್ತಿದೆ. ಈ ಜಲಾಶಯದಿಂದ ಯಾವುದೇ ನೀರಾವರಿ ಯೋಜನೆ ಕೈಗೊಂಡಿಲ್ಲ. ಹೀಗಾಗಿ ಈ ಮೂಲದಿಂದ ನೀರು ತರುವುದರಿಂದ ಯಾವುದೇ ರೈತರಿಗೂ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎತ್ತಿನಹೊಳೆ ಯೋಜನೆ ಮೂಲಕ 2.5 ಟಿಎಂಸಿ ನೀರು ತರಲಾಗುತ್ತದೆ. ಇಷ್ಟುಬೆಂಗಳೂರಿಗೆ ಸಾಲದು. ಹೀಗಾಗಿ ಲಿಂಗನಮಕ್ಕಿಯಿಂದಲೂ ನೀರು ತರಲು ಯೋಜಿಸಲಾಗಿದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ