ಬಿಎಸ್‌ಪಿ ಮುಖಂಡನಿಂದ ದಲಿತ ಮಹಿಳೆ ಮೇಲೆ ಹಲ್ಲೆ?

By Web DeskFirst Published Nov 9, 2018, 9:18 AM IST
Highlights

ಬಿಎಸ್‌ಪಿ ಮುಖಂಡನಿಂದ ದಲಿತ ಮಹಿಳೆ ಮೇಲೆ ಹಲ್ಲೆ | ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಆಯ್ತು ವೈರಲ್ | 

ಬೆಂಗಳೂರು (ನ. 09): ಮಹಿಳೆಯೊಬ್ಬರ ಸೀರೆ ಹಿಡಿದು ಎಳೆದಾಡಿ, ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವಂತೆ ಭಾಸವಾಗುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅದರೊಂದಿಗೆ ‘ಇದು ಸಿನಿಮಾ ತುಣುಕಲ್ಲ ದಲಿತ ಬಾಂಧವರೇ.. ಬಿಎಸ್‌ಬಿ ಮುಖಂಡರೊಬ್ಬರು ಅವರ ಗೂಂಡಾಗಳೊಡಗೂಡಿ ದಲಿತ ಮಹಿಳೆಯ ಸೀರೆ ಹಿಡಿದು ಎಳೆದಾಡಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ. ಹೀಗೆ ವೈರಲ್ ಆಗಿರುವ ಫೋಟೋದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಸೀರೆ ಹಿಡಿದು ಎಳೆಯುತ್ತಿರುವ ದೃಶ್ಯವಿದೆ.

ಈ ಫೋಟೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಓಡಾಡುತ್ತಿದೆ. ‘ನಮೋ ನಾರಾಯಣ್ ಹಿಂದು’ ಇತ್ಯಾದಿ ಹೆಸರಿನ ಫೇಸ್‌ಬುಕ್ ಪೇಜ್‌ಗಳು ಇದನ್ನು ಶೇರ್ ಮಾಡಿವೆ. ಲಕ್ಷಾಂತರ ಸಂಖ್ಯೆಯಲ್ಲಿ ಇದು ಶೇರ್ ಆಗುತ್ತಿದೆ. ಆದರೆ ನಿಜಕ್ಕೂ ಬಿಎಸ್‌ಪಿ ಮುಖಂಡರೊಬ್ಬರು ದಲಿತ ಮಹಿಳೆಯೊಂದಿಗೆ ಹೀಗೆ ವರ್ತಿಸಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ.

ವಾಸ್ತವವಾಗಿ ಹೀಗೆ ವೈರಲ್ ಆಗಿರುವ ಚಿತ್ರ ನೈಜವಲ್ಲ. 2014 ರಲ್ಲಿ ಬಿಡುಗಡೆಯಾದ ‘ಔರತ್ ಖಿಲೋನಾ ನಾಹಿನ್’ ಎಂಬ ಭೋಜ್ಪುರಿ ಚಲನಚಿತ್ರದ ದೃಶ್ಯವಿದು. ಈ ಸಿನಿಮಾದ ಪೋಸ್ಟರ್‌ನಲ್ಲಿ ಇದೇ ಫೋಟೋ ಇದೆ. ಸಿನಿಮಾದಲ್ಲಿ   ದೃಶ್ಯವು ಸುಮಾರು 2 ಗಂಟೆ 11 ನಿಮಿಷದಲ್ಲಿ ಕಾಣಸಿಗುತ್ತದೆ.

ಇದೇ ದೃಶ್ಯವು 2017 ರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆಗ ಪಶ್ಚಿಮ ಬಂಗಾಳದ ಬೇಸಿರತ್ ಘರ್ಷಣೆ ವೇಳೆ ಮುಸ್ಲಿಂ ಸಮುದಾಯದ ವ್ಯಕ್ತಿ, ಹಿಂದು ಮಹಿಳೆಯೊಂದಿಗೆ ಈ ರೀತಿ ಅಮಾನವೀಯವಾಗಿ ವರ್ತಿಸಿದ್ದಾರೆ
ಎಂಬ ಒಕ್ಕಣೆ ಬರೆಯಲಾಗಿತ್ತು. ಈಗಲೂ ಕೂಡ ಅದೇ ಫೋಟೋ ಬಳಸಿಕೊಂಡು ಸುಳ್ಳುಸುದ್ದಿ ಹರಡಲಾಗಿದೆ.

-ವೈರಲ್ ಚೆಕ್ 

click me!