ಬರ ಪರಿಹಾರದ ಬದಲು ರಾಜ್ಯಕ್ಕೆ ಮೋದಿ ಕೊಟ್ಟದ್ದು ಖಾಲಿ ಚೊಂಬು: ರಾಹುಲ್‌ ಗಾಂಧಿ

By Kannadaprabha NewsFirst Published Apr 27, 2024, 4:27 AM IST
Highlights

ಬಿಜೆಪಿ (ಭಾರತೀಯ ಜನತಾ ಪಕ್ಷ)ಯನ್ನು ‘ಭಾರತೀಯ ಚೊಂಬು ಪಕ್ಷ’ ಎಂದು ಮೂದಲಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ದೇಶಕ್ಕೆ ಹಾಗೂ ರಾಜ್ಯಕ್ಕೆ ನರೇಂದ್ರ ಮೋದಿ ಅವರ ಪಕ್ಷ ಖಾಲಿ ಚೊಂಬು ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಬಳ್ಳಾರಿ (ಏ.27): ಬಿಜೆಪಿ (ಭಾರತೀಯ ಜನತಾ ಪಕ್ಷ)ಯನ್ನು ‘ಭಾರತೀಯ ಚೊಂಬು ಪಕ್ಷ’ ಎಂದು ಮೂದಲಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ದೇಶಕ್ಕೆ ಹಾಗೂ ರಾಜ್ಯಕ್ಕೆ ನರೇಂದ್ರ ಮೋದಿ ಅವರ ಪಕ್ಷ ಖಾಲಿ ಚೊಂಬು ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ‘ಪ್ರಜಾಧ್ವನಿ’ ಸಮಾವೇಶದಲ್ಲಿ ಮಾತನಾಡಿದ ರಾಹುಲ್‌, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ಕರ್ನಾಟಕ ಕೇಂದ್ರಕ್ಕೆ ₹100 ತೆರಿಗೆ ನೀಡಿದರೆ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಬರೀ ₹13ಗಳನ್ನಷ್ಟೇ ಮರಳಿ ನೀಡುತ್ತದೆ. ಬರಗಾಲದಿಂದ ರೈತಾಪಿ ಜನರು ತೊಂದರೆ ಅನುಭವಿಸುತ್ತಿದ್ದರೂ ಬರ ಪರಿಹಾರವಾಗಿ ₹18 ಸಾವಿರ ಕೋಟಿ ನೀಡುವ ಬದಲು ಖಾಲಿ ಚೊಂಬು ನೀಡಿದೆ.

ಹಣಕಾಸು ಆಯೋಗವೂ ಏನೂ ನೀಡದೆ ಚೊಂಬು ನೀಡಿದೆ. ಕೇಂದ್ರ ಸರ್ಕಾರಕ್ಕೆ ಬಡಜನರ ಕಲ್ಯಾಣ ಬೇಕಾಗಿಲ್ಲ. ದೊಡ್ಡ, ದೊಡ್ಡ ಶ್ರೀಮಂತರನ್ನಷ್ಟೇ ಉದ್ಧಾರ ಮಾಡಿ, ಬಡವರಿಗೆ ಬರೀ ಖಾಲಿ ಚೊಂಬು ನೀಡಿದೆ. ಭಾರತೀಯ ಚೊಂಬು ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಇದು ಸಕಾಲವಾಗಿದೆ ಎಂದು ಹೇಳಿದರು. ಕಾಂಗ್ರೆಸ್‌ ನುಡಿದಂತೆ ನಡೆದುಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಭರವಸೆ ನೀಡಿದಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ನಾವು ಹೇಳಿದ ಮೇಲೆ ಖಂಡಿತವಾಗಿಯೂ ಮಾಡುತ್ತೇವೆ ಎಂದು ಹೇಳಿದರು.

ಬಳ್ಳಾರಿ ಜನತೆಗೆ ರಾಹುಲ್‌ ಗಾಂಧಿ ನೀಡಿದ್ದ ಭರವಸೆ ಮೊದಲು ಈಡೇರಿಸಲಿ: ಶ್ರೀರಾಮುಲು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನುಡಿದಂತೆ ನಡೆದುಕೊಂಡಿದೆ. ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ನಾವು ಹೇಳಿದ ಮೇಲೆ ಖಂಡಿತ ಮಾಡುತ್ತೇವೆ ಎಂದು ತಿಳಿಸಿದರು. ಬಿಜೆಪಿಯವರು ಸಂವಿಧಾನ ಬದಲಿಸುವುದಾಗಿ ಆಗಾಗ್ಗೆ ಹೇಳುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ಸಿಕ್ಕರೆ ಖಂಡಿತ ಆ ಕೆಲಸ ಮಾಡುತ್ತಾರೆ ಎಂದರು.

ಇಂಡಿಯಾ ಗೆದ್ದರೆ ರೈತರ ಸಾಲ ಮನ್ನಾ: ಇದಕ್ಕೂ ಮೊದಲು ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ, ಮೋದಿ ಇಲ್ಲಿಯವರೆಗೆ ಒಂದೇ ಒಂದು ರುಪಾಯಿ ರೈತರ ಸಾಲ ಮನ್ನಾ ಮಾಡಿಲ್ಲ. ಎಂಎಸ್‌ಪಿ ಆಧರಿಸಿದ ದರ ನೀಡಿಲ್ಲ. ಆದರೆ, ಇಂಡಿಯಾ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದ ತಕ್ಷಣವೇ ರೈತರ ಸಾಲ ಮನ್ನಾ ಮಾಡಿ, ರೈತರು ಬೆಳೆದ ಬೆಳೆಗಳಿಗೆ ಎಂಎಸ್‌ಪಿ ಆಧರಿಸಿದ ದರ ನೀಡುತ್ತೇವೆ ಎಂದು ಭರವಸೆ ನೀಡಿದರು. ಉದ್ಯೋಗ ಸೃಷ್ಟಿಗೆ ಯಾವುದೇ ಕ್ರಮ ವಹಿಸದೆ ಮೋದಿಯವರು ಬರೀ ಸುಳ್ಳು ಹೇಳಿಕೊಂಡು ಬಂದಿದ್ದಾರೆ. 

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೊಗ ಸೃಷ್ಟಿ ಮಾಡಲಾಗುವುದು. ಪದವಿ ಪೂರ್ಣಗೊಳಿಸಿದ ನಿರುದ್ಯೋಗಿ ಯುವಕರಿಗೆ ಮಾಸಿಕ ₹8,500ಗಳಷ್ಟು ಒಂದು ವರ್ಷದವರೆಗೆ ಭತ್ಯೆ ನೀಡಲಾಗುವುದು. ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಂಭಾವನೆ ದ್ವಿಗುಣ ಮಾಡಲಾಗುವುದು. ಕೇಂದ್ರ ಜಾರಿಗೆ ತಂದಿರುವ ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಲಾಗುವುದು. ತೆರಿಗೆ ಪದ್ಧತಿಯನ್ನು ಸರಳೀಕರಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಮೋದಿ ಭೀತರಾಗಿದ್ದಾರೆ: ಇಂದು ಮೋದಿಜಿ ಅವರು ಸಂಪೂರ್ಣ ಭೀತರಾಗಿದ್ದಾರೆ. ಕೆಲವೇ ದಿನದಲ್ಲಿ ವೇದಿಕೆಯಲ್ಲಿಯೇ ಕಣ್ಣೀರು ಸುರಿಸುತ್ತಾರೆ. ವೇದಿಕೆ ಮೇಲೆ ಪಾಕಿಸ್ತಾನ, ತಾಲಿಬಾನ್, ಚೀನಾ ಬಗ್ಗೆ ಮಾತಾಡಬಹುದು. ಮೊಬೈಲ್ ಫೋನ್ ಲೈಟ್ ಆನ್ ಮಾಡಿ ಇಲ್ಲವೇ ಚಪ್ಪಾಳೆ ಹೊಡೆಯಿರಿ ಎಂದು ಹೇಳುವ ದಿನ ದೂರವಿಲ್ಲ. ಆ ಮೂಲಕ ದೇಶದ ಸಮಸ್ಯೆಗಳನ್ನು ಮರೆ ಮಾಚಿ ನಿಮ್ಮ ಗಮನವನ್ನು ಬೇರೆಡೆ ಸೆಳೆಯುವ ಕೆಲಸ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ರ್‍ಯಾಲಿಯಲ್ಲಿ ಚೊಂಬು ಪ್ರದರ್ಶಿಸಿದ ರಾಹುಲ್‌: ಬಳ್ಳಾರಿಯಲ್ಲಿ ಶುಕ್ರವಾರ ಸಂಜೆ ನಡೆದ ಸಮಾವೇಶದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ ಚೊಂಬು ನೀಡಿದೆ ಎಂದು ಟೀಕಿಸುತ್ತಾ ಭಾಷಣದ ಮಧ್ಯೆಯೇ ಚೊಂಬು ಪ್ರದರ್ಶಿಸಿದರು.

ಮಂಗಳಸೂತ್ರ ಬಗ್ಗೆ ಮೋದಿ ಹೇಳಿಕೆ: ಕೇಂದ್ರ ಚುನಾವಣಾ ಆಯೋಗದಿಂದ ನೋಟಿಸ್‌ ಜಾರಿ

ನರೇಂದ್ರ ಮೋದಿ ಅವರು ಇಲ್ಲಿವರೆಗೆ ರೈತರ ಒಂದು ರುಪಾಯಿ ಸಾಲವನ್ನೂ ಮನ್ನಾ ಮಾಡಿಲ್ಲ. ಇಂಡಿಯಾ ಕೂಟ ಅಧಿಕಾರಕ್ಕೆ ಬಂದ ತಕ್ಷಣವೇ ರೈತರ ಸಾಲ ಮನ್ನಾ ಮಾಡುತ್ತೇವೆ. ನಿರುದ್ಯೋಗಿಗಳಿಗೆ ಮಾಸಿಕ 8500 ರು. ಕೊಡುತ್ತೇವೆ. ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸುತ್ತೇವೆ.
- ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

click me!