ನೈಜೀರಿಯಾ ಕಳ್ಳರಿಗೆ ಈಶಾನ್ಯದ ಸ್ತ್ರೀಯರೇ ಏಜೆಂಟ್

By Kannadaprabha NewsFirst Published Jul 19, 2018, 9:20 AM IST
Highlights

ಜಾಗತಿಕ ತನಿಖಾ ಸಂಸ್ಥೆಗಳಿಗೆ ತಲೆನೋವಾಗಿರುವ ನೈಜೀರಿಯಾ ಆನ್‌ಲೈನ್ ವಂಚಕ ಜಾಲವು ಈಗ ಭಾರತದಲ್ಲಿ ಗ್ರಾಹಕರನ್ನು ಬಲೆಗೆ ಬೀಳಿಸಿಕೊಳ್ಳಲು ಹಾಗೂ ಹಣ ವರ್ಗಾವಣೆ ಸಲುವಾಗಿ ಈಶಾನ್ಯ ರಾಜ್ಯಗಳ ಮಹಿಳೆಯರನ್ನು ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ವಿಚಾರವು ಸೈಬರ್ ಕ್ರೈಂ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು :  ಜಾಗತಿಕ ತನಿಖಾ ಸಂಸ್ಥೆಗಳಿಗೆ ತಲೆನೋವಾಗಿರುವ ನೈಜೀರಿಯಾ ಆನ್‌ಲೈನ್ ವಂಚಕ ಜಾಲವು ಈಗ ಭಾರತದಲ್ಲಿ ಗ್ರಾಹಕರನ್ನು ಬಲೆಗೆ ಬೀಳಿಸಿಕೊಳ್ಳಲು ಹಾಗೂ ಹಣ ವರ್ಗಾವಣೆ ಸಲುವಾಗಿ ಈಶಾನ್ಯ ರಾಜ್ಯಗಳ ಮಹಿಳೆಯರನ್ನು ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ವಿಚಾರವು ಸೈಬರ್ ಕ್ರೈಂ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತಾವು ವಿದೇಶಿ ಶೈಲಿಯ ಆಂಗ್ಲ ಭಾಷೆಯಲ್ಲಿ ಸಂಭಾಷಣೆ ನಡೆಸಿದರೆ ಭಾರತೀಯರಿಗೆ ವಿಶ್ವಾಸ ಮೂಡುವುದಿಲ್ಲ ಎಂಬ ಕಾರಣಕ್ಕೆ ನೈಜೀರಿಯಾ ವಂಚಕರು ಹಣದಾಸೆ ತೋರಿಸಿ ಈಶಾನ್ಯ ರಾಜ್ಯಗಳ ಕೆಲವು ಮಹಿಳೆಯರನ್ನು ಮೋಸದ ಜಾಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಸಂಬಂಧಗಳು ವೈವಾಹಿಕ ಹಂತಕ್ಕೂ ಹೋಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಗ್ರಾಹಕರನ್ನು ಸಂಪರ್ಕಿಸಲು ಮಾತ್ರವಲ್ಲದೆ ಆನ್‌ಲೈನ್ ಮೂಲಕ ಹಣ ವರ್ಗಾವಣೆಗೆ ಈಶಾನ್ಯ ಭಾರತೀಯರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ವಂಚಕರು ಹಣ ಲಪಟಾಯಿಸುತ್ತಿದ್ದಾರೆ. 

ಈ ಪ್ರಕರಣಗಳು ದಿನ ದಿನೇ ಹೆಚ್ಚುತ್ತಿದ್ದು, ಕೆಲವು ಕೃತ್ಯಗಳಲ್ಲಿ ಈಶಾನ್ಯ ರಾಜ್ಯಗಳ ಮಹಿಳೆಯರನ್ನು ಸಹ ಬಂಧಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಸೆಕೆಂಡ್ ಹ್ಯಾಂಡ್ ವಾಹನ, ಗಿಡಮೂಲಿಕೆ ಔಷಧಿ ಮಾರಾಟ, ವೈವಾಹಿಕ ಸಂಬಂಧ ಬೆಸುಗೆ ಸೋಗಿನಲ್ಲಿ ಹಾಗೂ ಎಟಿಎಂ ಪರಿಶೀಲನೆ ಹೀಗೆ ವಿವಿಧ ರೀತಿಯಲ್ಲಿ ಸಾರ್ವಜನಿಕರನ್ನು ಸಂಪರ್ಕಿಸಿ ನೈಜೀರಿಯಾ ವಂಚಕರು, ಬಳಿಕ ಆ ಗ್ರಾಹಕರ ಬ್ಯಾಂಕ್ ಖಾತೆಗಳಿಂದ ಕ್ಷಣಾರ್ಧದಲ್ಲಿ ಹಣ ದೋಚುವಲ್ಲಿ ಕುಖ್ಯಾತಿ ಪಡೆದಿದ್ದಾರೆ. ಈ ಜಾಲಕ್ಕೆ ಈಶಾನ್ಯ ರಾಜ್ಯಗಳ ಜನರ ಪಾಲುದಾರಿಕೆ ಜಾಲವನ್ನು ಭೇದಿಸುವುದು ತ್ರಾಸದಾಯಕವಾಗುತ್ತಿದೆ ಎಂದು ಸಿಐಡಿ ಮತ್ತು ಸಿಸಿಬಿ ಸೈಬರ್ ಕ್ರೈಂ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಹೇಳಿದ್ದಾರೆ.

10 ಸಾವಿರಕ್ಕೆ ಬ್ಯಾಂಕ್ ಖಾತೆ: ಶೈಕ್ಷಣಿಕ, ಪ್ರವಾಸ ಹಾಗೂ ಔದ್ಯೋಗಿಕ ವೀಸಾದಡಿ ಭಾರತಕ್ಕೆ ಬರುವ ನೈಜೀರಿಯಾ ಸೇರಿದಂತೆ ಆಫ್ರಿಕಾದ ಪ್ರಜೆಗಳು, ಬಳಿಕ ಸ್ಥಳೀಯವಾಗಿ ವಂಚನೆ ಕೃತ್ಯಗಳನ್ನು ಎಸಗಿ ಪರಾರಿಯಾಗುತ್ತಿದ್ದಾರೆ. ಇದಕ್ಕೆ ವ್ಯವಸ್ಥಿತವಾದ ಸಂಘಟನೆಯನ್ನು ಅವರು ಹೊಂದಿದ್ದಾರೆ.

ಮೊದಮೊದಲು ನೈಜೀರಿಯಾ ಪ್ರಜೆಗಳು ತಾವೇ ಸ್ಥಳೀಯ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಆನ್‌ಲೈನ್ ಮೂಲಕ ವಂಚಿಸಿದ ಹಣವನ್ನು ಆ ಖಾತೆಗೆ ವರ್ಗಾ ಯಿಸಿ ದೋಚುತ್ತಿದ್ದರು. ಆದರೆ ಈ ವಂಚನೆಗಳನ್ನು ಪೊಲೀಸರು ಬೆನ್ನುಹತ್ತುತ್ತಿದ್ದಂತೆ ಎಚ್ಚೆತ್ತುಕೊಂಡ ಅವರು, ತನಿಖಾ ಸಂಸ್ಥೆಗಳ ದಿಕ್ಕು ತಪ್ಪಿಸಲು ಸ್ಥಳೀಯರ ನೆರವಿಗೆ ಮೊರೆ ಹೋಗಿದ್ದಾರೆ. ಇದಕ್ಕೆ ಮಿಜೋರಾಂ, ಅಸ್ಲಾಂ, ಸಿಕ್ಕಿಂ, ನಾಗಾಲ್ಯಾಂಡ್, ತ್ರಿಪುರಾ, ಅರುಣಾ ಚಲ ಹಾಗೂ ಮಣಿಪುರ ಜನರನ್ನೇ ಅವರು ಗುರಿಯಾಗಿಸಿಕೊಂಡರು. ಆ ರಾಜ್ಯಗಳಲ್ಲಿ ಬಡತನದ ಲಾಭ ಪಡೆದ ವಂಚಕರು, ಆರ್ಥಿಕವಾಗಿ ಹಿಂದುಳಿದ ಗುಡ್ಡಗಾಡು ಪ್ರದೇಶದ ಜನರಿಗೆ ಹಣದಾಸೆ ತೋರಿಸಿ ತಮ್ಮ ಬಲೆಗೆ ಬೀಳಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮೊದಲು ಆ ರಾಜ್ಯಗಳ ಕೆಲವು ಜನರನ್ನು ಪರಿಚಯ ಮಾಡಿಕೊಳ್ಳುವ ಅವರು, ಬಳಿಕ ಆ ಸ್ನೇಹದ ಮೂಲಕ ಜನರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾರೆ.

ಅದರಂತೆ ಬ್ಯಾಂಕ್ ಖಾತೆ ತೆರೆಯಲು ಅಗತ್ಯವಾದ ದಾಖಲೆಗಳನ್ನು 10 ಸಾವಿರದಿಂದ 20 ಸಾವಿರ ರು. ನೀಡಿ ಆ ಜನರಿಂದ ಖರೀದಿಸುತ್ತಾರೆ. ಬಳಿಕ ಈ ದಾಖಲೆಗಳನ್ನು ಬಳಸಿಕೊಂಡು ಬೇರೆ ಬೇರೆ ರಾಜ್ಯಗಳ ಬ್ಯಾಂಕ್‌ಗಳಲ್ಲಿ ಈಶಾನ್ಯ ಭಾರತೀಯರ ಹೆಸರಿನಲ್ಲಿ ನಕಲಿ ಖಾತೆ ತೆರೆಯುತ್ತಾರೆ. ಅಲ್ಲದೆ ಗ್ರಾಹಕರಿಗೆ ಅನುಮಾನ ಬರಬಾರದು ಎಂದು ಗ್ರಾಹಕರ ಜತೆ ಮಾತನಾಡಲು ಆ ರಾಜ್ಯಗಳ ಯುವತಿ ಯರನ್ನು ಬಳಸಿರುವುದು ಪತ್ತೆಯಾಗಿದೆ ಎಂದು ಸೈಬರ್ ಕ್ರೈಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

click me!