ಕೈಯಲ್ಲಿ ಭಗವದ್ಗೀತೆ ಹಿಡಿದು ಅಮೆರಿಕದ ಸೆನೆಟ್‌ನಲ್ಲಿ ಪ್ರಮಾಣವಚನ!

By Web DeskFirst Published Jan 22, 2019, 11:44 AM IST
Highlights

ಅಮೆರಿಕದ ಸೆನೆಟ್‌ನಲ್ಲಿ ರಚಿತವಾಯಿತು ಇತಿಹಾಸ| ಅಮೆರಿಕದಲ್ಲಿ ಭಾರತೀಯತೆಯ ದರ್ಶನ ಮಾಡಿಸಿದ ಮೋನಾ ದಾಸ್| ವಾಷಿಂಗ್ಟನ್ ರಾಜ್ಯದ 47ನೇ ಜಿಲ್ಲೆಯ ಸೆನೆಟರ್ ಆಗಿ ಮೋನಾ ದಾಸ್ ಆಯ್ಕೆ| ಕೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಮೋನಾ ದಾಸ್| ಮಹಾತ್ಮ ಗಾಂಧಿ, ನರೇಂದ್ರ ಮೋದಿ ಆದರ್ಶ ಪಾಲನೆಯ ಭರವಸೆ

ವಾಷಿಂಗ್ಟನ್(ಜ.22): ಭಾರತದ ಆತ್ಮ ಅದು ಅಧ್ಯಾತ್ಮ. ಸಾವಿರಾರು ವರ್ಷಗಳಿಂದ ಈ ದೇಶವನ್ನು ಮುನ್ನಡೆಸಿಕೊಂಡು ಬಂದಿರುವ ಧರ್ಮ, ಜನರ ಜೀವನದ ಅವಿಭಾಜ್ಯ ಅಂಗ. ನಂಬಿಕೆ, ವಿಶ್ವಾಸದ ಮೇಲೆ ನಿಂತಿರುವ ಭಾರತದ ಅಧ್ಯಾತ್ಮಕ್ಕೆ ವಿಶ್ವ ತಲೆದೂಗು ಶತಮಾನಗಳೇ ಉರುಳಿವೆ.

ಭಾರತೀಯ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ತನ್ನ ಭಾರತೀಯತೆಯನ್ನು, ತನ್ನ ಧರ್ಮವನ್ನು ಮರೆಯಲು ಸಾಧ್ಯವೇ ಇಲ್ಲ. ಅಧ್ಯಾತ್ಮವೇ ಜೀವಾಳವಾಗಿರುವ ಪ್ರತಿಯೊಬ್ಬ ಭಾರತೀಯನೂ ತನ್ನ ನಂಬಿಕೆಗಳನ್ನು ಎಂದಿಗೂ ಕೈ ಬಿಡುವುದಿಲ್ಲ.

ಅದರಂತೆ ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಸದಸ್ಯೆ ಭಾರತೀಯ ಮೂಲದ ಮೋನಾ ದಾಸ್ ವಾಷಿಂಗ್ಟನ್ ರಾಜ್ಯದ 47ನೇ ಜಿಲ್ಲೆಯ ಸೆನೆಟರ್ ಆಗಿ ಅಧಿಕಾರ ಸ್ವೀಕರಿಸಿದ್ದು, ಕೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬಿಹಾರ ಮೂಲದ ವೈದ್ಯ ಡಾ.ಜಿಎನ್ ದಾಸ್ ಅವರ ಮೊಮ್ಮಗಳಾಗಿರುವ ಮೋನಾ ದಾಸ್, ೮ ತಿಂಗಳ ಮಗುವಾಗಿದ್ದಾಗಲೇ ತಮ್ಮ ಪೋಷಕರೊಂದಿಗೆ ಅಮೆರಿಕಕ್ಕೆ ತೆರಳಿದ್ದರು.

ಸಿಸಿನಾಟಿ ವಿವಿಯಿಂದ ಮನಶಾಸ್ತ್ರದಲ್ಲಿ ಪದವಿ ಪಡೆದಿರುವ ಮೋನಾ ದಾಸ್, ನಮ್ಮ ಪರಂಪರೆ, ಅಧ್ಯಾತ್ಮ, ನಂಬಿಕೆಗಳನ್ನು ಮುಂದುವರೆಸಿಕೊಂಡು ಹೋಗುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದೇ ನಂಬುತ್ತಾರೆ.

ಮಹಾತ್ಮಾ ಗಾಂಧಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಆದರ್ಶ ಎಂದು ಹೇಳುವ ಮೋನಾ ದಾಸ್, ತಮ್ಮ ಅಧಿಕಾರಾವಧಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ಅಮೆರಿಕದ ಸೆನೆಟ್‌ನಲ್ಲಿ ಕೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಮೋನಾ ದಾಸ್, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದರೆ ಅತಿಶೋಕ್ತಿಯಲ್ಲ.

ಫೋಟೋ ಕೃಪೆ: ಇಂಡಿಯಾ ಟುಡೆ

click me!