
ಬೆಂಗಳೂರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾಗಿರುವ ಕೆರೆಗಳನ್ನು ಉಳಿಸಿಕೊಂಡರೆ, ಬೆಂಗಳೂರಿಗೆ ಕುಡಿಯುವ ನೀರಿಗೆ ಅಭಾವ ಉಂಟಾಗುವುದಿಲ್ಲ. ಅಷ್ಟೇ ಅಲ್ಲ, ಕಾವೇರಿ ನೀರನ್ನೂ ಅವಲಂಬಿಸುವ ಅನಿವಾರ್ಯತೆ ಎದುರಾಗುವುದಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸಲಹೆ ನೀಡಿದರು.
‘ಯುನೈಟೆಡ್ ಬೆಂಗಳೂರು' ಸಂಘಟನೆ ವತಿಯಿಂದ ಶನಿವಾರ ಪುಟ್ಟೇನಹಳ್ಳಿ, ಯಲಹಂಕ, ಅಳ್ಳಾಳಸಂದ್ರ ಮತ್ತು ಜಕ್ಕೂರು ಕೆರೆಗಳ ಪರಿಶೀಲನೆ ಬಳಿಕ ಮಾತನಾಡಿದ ಅವರು, ನಾವು ಯುವಕರಾಗಿದ್ದ ದಿನಗಳಲ್ಲಿ ಬೀದಿಗೊ ಒಂದು ಬಾವಿಗಳಿದ್ದವು. ಆ ನೀರನ್ನೇ ಕುಡಿಯುತ್ತಿದ್ದೆವು. ಈಗ ಬಾವಿಗಳಿರಲಿ, ಕೆರೆಗಳು ಕೂಡ ಮಾಯವಾಗುತ್ತಿವೆ. ನಗರದಲ್ಲಿರುವ ಕೆರೆಗಳ ನೀರು ಕುಡಿಯಲು ಯೋಗ್ಯ ಎನ್ನುವವರೆಗೂ ಹೋರಾಟ ಮಾಡೋಣ. ಈ ವಿಚಾರದಲ್ಲಿ ಅಧಿಕಾರಿಗಳು ಕೂಡ ನಿರ್ದಿಷ್ಟಗುರಿ ಇಟ್ಟುಕೊಂಡು ಕೆಲಸ ಮಾಡಿ ಕೆರೆಗಳನ್ನು ಸಂರಕ್ಷಿಸಿದರೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಹೇಳಿದರು.
ಕೆರೆಗಳ ನೀರನ್ನು ಶೇ. 100ರಷ್ಟುಶುದ್ಧಗೊಳಿಸುವುದಕ್ಕಾಗಿ ನಾಗರಿಕರು ಮತ್ತು ಅಧಿಕಾರಿಗಳು ಕಟಿಬದ್ಧರಾಗಿರಬೇಕು. ನಮ್ಮ ಮುಂದಿನ ತಲೆಮಾರಿಗೆ ಕೆರೆಗಳ ಬಗ್ಗೆ ಜಾಗೃತಿ ಮತ್ತು ಇತಿಹಾಸ ತಿಳಿಸುವ ಕೆಲಸ ಮಾಡಿದರೆ ಕೆರೆಗಳು ಉಳಿಯಲಿವೆ ಎಂದು ಹೇಳಿದರು.
ಕಾವೇರಿ ನೀರಿಗಾಗಿ ತಮಿಳುನಾಡು ಮತ್ತು ಕರ್ನಾಟಕ ಶತ್ರು ರಾಷ್ಟ್ರಗಳಂತೆ ಕಿತ್ತಾಡುತ್ತಿವೆ. ಒಂದೇ ದೇಶದ ಜನ ಕೇವಲ ನೀರಿಗಾಗಿ ಕಿತ್ತಾಡುವ ಬದಲಾಗಿ ನೀರಿನ ಉಳಿಸುವಿಕೆಯತ್ತ ಗಮನ ಹರಿಸಬೇಕು. ಕನ್ನಂಬಾಡಿ ನಿರ್ಮಾಣ ವಾದ ವೇಳೆ ಇಂಗ್ಲಿಷ್‌ನವರು ಮತ್ತು ಮಹಾರಾಜರು ಮಾಡಿಕೊಂಡಿದ್ದ ಒಪ್ಪಂದವನ್ನು ಕೈಬಿಟ್ಟು ಹೊಸದಾಗಿ ನಿಯಮ ರೂಪಿಸಿಕೊಳ್ಳಬೇಕಿದೆಂದು ಸಲಹೆ ನೀಡಿದರು.
28ರಂದು ಕೆರೆ ಹಬ್ಬ: ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಯಲಹಂಕ ಕ್ಷೇತ್ರದಲ್ಲಿ ಒಂದೆರಡು ಕೆರೆಗ ಳನ್ನು ಹೊರತುಪಡಿಸಿ ಉಳಿದ ಕೆರೆಗಳು ಸುಸ್ಥಿರವಾಗಿವೆ. ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿಗಾಗಿ ಇದೇ 23ರಂದು ಟೆಂಡರ್ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದೇವೆ. ಅಲ್ಲದೆ, ರೂ.10 ಕೋಟಿ ವೆಚ್ಚದಲ್ಲಿ 5 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣ ಘಟಕ (ಎಸ್‌ಟಿಪಿ) ನಿರ್ಮಿಸಲಾಗುತ್ತಿದೆ. ಕೆರೆಗಳ ಸಂರಕ್ಷಣೆಗಾಗಿ ಕೆರೆಗಳಿಗೆ ಬೇಲಿ ಹಾಕುವ ಕೆಲಸ ಕೂಡ ನಡೆಯುತ್ತಿದೆ ಎಂದು ಹೇಳಿದರು.
ಸಂಸದ ರಾಜೀವ್ ಚಂದ್ರಶೇಖರ್ ಅವರು ಯಲಹಂಕ ಹಾಗೂ ಹೆಸರುಘಟ್ಟಕೆರೆಗಳ ಸಂರಕ್ಷಣೆಗಾಗಿ ಹಾಗೂ ಒಂದು ಸಾವಿರ ಗಿಡಗಳನ್ನು ನೆಡುವುದಕ್ಕಾಗಿ ಅನುದಾನ ನೀಡಿದ್ದು, ಅದನ್ನು ಕೂಡ ಬಳಕೆ ಮಾಡಿ ಕೊಳ್ಳುತ್ತಿದ್ದೇವೆ. ಪುಟ್ಟೇನಹಳ್ಳಿ ಕೆರೆಯಲ್ಲಿರುವ ಅಕೇಶಿಯಾ ಮರಗಳನ್ನು ತೆರವುಗೊಳಿಸಿ ಪಕ್ಷಿಗಳಿಗೆ ಅನುಕೂಲವಾಗುವ ಗಿಡಗಳನ್ನು ನೆಡಲಾಗುವುದು. ಕೆರೆಗಳ ಬಗ್ಗೆ ಜನಸಾಮಾ ನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇ 28ರಂದು ‘ಕೆರೆ ಹಬ್ಬ' ಹಮ್ಮಿಕೊಳ್ಳಲಾಗಿದೆ. ಹಬ್ಬದಲ್ಲಿ ಸೈಕಲ್ ರಾರಯಲಿ, ದೇಸೀ ಆಟಗಳನ್ನು ಆಯೋಜಿಸುವ ಮೂಲಕ ನಾಡಿನ ಸಂಸ್ಕೃತಿ ರಕ್ಷಣೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಪುಟ್ಟೇನಹಳ್ಳಿ ಕೆರೆ ಸುತ್ತ ಒತ್ತುವರಿ: ಅಂದಾಜು 39 ಎಕರೆ ಪ್ರದೇಶದಲ್ಲಿರುವ ಪುಟ್ಟೇನಹಳ್ಳಿ ಕೆರೆಯ ಕೆಲವು ಭಾಗ ವನ್ನು ಸಾಕಷ್ಟುಪ್ರಮಾಣದಲ್ಲಿ ಒತ್ತುವರಿ ಮಾಡಲಾಗಿದೆ. ಒಂದೆರಡು ಅಪಾರ್ಟ್‌ಮೆಂಟ್‌ಗಳು ಕೆರೆಯಂಗಳದಲ್ಲೇ ಕಟ್ಟಡ ನಿರ್ಮಾಣ ಮಾಡಿವೆ ಹಾಗೂ ಇತ್ತೀಚಿನ ದಿನಗಳಲ್ಲಿ ಕಟ್ಟಡಗಳ ಘನತ್ಯಾಜ್ಯ ವಿಲೇವಾರಿ ಪ್ರಮಾಣ ಕೂಡ ಜಾಸ್ತಿಯಾಗಿದೆ. ಬಫರ್ ಜೋನ್ ಸಹ ಬಿಡದೆ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಯಲಹಂಕ ಕೆರೆ ಏರಿಯ ಕೆಳಭಾಗದ ಜಾಗದಲ್ಲಿಯೂ ಕಟ್ಟಡಗಳ ತ್ಯಾಜ್ಯವನ್ನು ವಿಲೇವಾರಿ ಮೂಲಕ ಸಮಗೊಳಿಸಲಾಗುತ್ತಿದೆ. ಇಲ್ಲಿಯೂ ಬಫರ್‌ಜೋನ್ ಬಿಟ್ಟಿಲ್ಲ. ವಿಶಾಲವಾಗಿರುವ ಯಲಹಂಕ ಕೆರೆಗೆ ಡೈಯಿಂಗ್ ಯೂನಿಟ್‌ಗಳು ತ್ಯಾಜ್ಯ ನೀರನ್ನು ಹರಿಸುತ್ತಿದ್ದು, ಕೂಡಲೇ ಸ್ಥಗಿತಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.