
ನವದೆಹಲಿ(ಮೇ 31): ಸಣ್ಣಪುಟ್ಟಅಪರಾಧ ಪ್ರಕರಣಗಳಲ್ಲಿ ಜಾಮೀನು ದೊರಕಿದ್ದರೂ ಖಾತ್ರಿಯ ಬಾಂಡ್ ಹಣ ಕಟ್ಟಲಾಗದೆ ದೇಶದ ಜೈಲುಗಳಲ್ಲಿ ಕೊಳೆಯುತ್ತಿರುವ ಸಾವಿರಾರು ವಿಚಾರಣಾಧೀನ ಕೈದಿಗಳಿಗೊಂದು ಸಿಹಿಸುದ್ದಿ. ಕಿಕ್ಕಿರಿದು ತುಂಬಿರುವ ಜೈಲುಗಳ ಮೇಲಿನ ಒತ್ತಡ ಕಡಿಮೆ ಮಾಡಲು ಕೇಂದ್ರ ಸರ್ಕಾರವು ಜಾಮೀನು ನಿಧಿ ಸ್ಥಾಪಿಸಲು ಮುಂದಾಗಿದೆ. ಇದರಿಂದಾಗಿ ಕೋರ್ಟ್‌ಗೆ ಕಟ್ಟುವುದಕ್ಕೆ ಹಣವಿಲ್ಲದೆ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳ ಬಿಡುಗಡೆಗೊಂದು ದಾರಿ ದೊರಕಿದಂತಾಗಿದೆ.
ರಾಜ್ಯಗಳ ಜೊತೆ ಸೇರಿ ಜಾಮೀನು ನಿಧಿ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಜಾಮೀನು ಸಿಕ್ಕಿದ್ದರೂ ಬಾಂಡ್‌ಗೆ ಕಟ್ಟಲು 500ರಿಂದ 5000 ರು.ನಷ್ಟುಹಣವಿಲ್ಲದೆ ಜೈಲಿನಲ್ಲಿ ಕೊಳೆಯುತ್ತಿರುವವರಿಗೆ ಈ ನಿಧಿಯಿಂದ ಹಣ ಪಾವತಿಸಲಾಗುತ್ತದೆ. ಆರಂಭದಲ್ಲಿ, ಮಹಿಳಾ ಕೈದಿಗಳನ್ನು ಬಿಡಿಸಲು ಆದ್ಯತೆ ನೀಡಲಾಗುತ್ತದೆ. ಒಟ್ಟು 11,916 ಮಹಿಳಾ ಕೈದಿಗಳನ್ನು ಕೇಂದ್ರ ಕಾನೂನು ಹಾಗೂ ನ್ಯಾಯ ಸಚಿವಾಲಯ ಗುರುತಿಸಿದ್ದು, ಅವರ ಬಾಂಡ್ ಹಣವನ್ನು ಪಾವತಿಸಲಿದೆ. ಈ ನಿಧಿಯಿಂದ, ಗರಿಷ್ಠ 3 ವರ್ಷಗಳ ಶಿಕ್ಷೆಯಾಗುವಂತಹ ಆರೋಪ ಎದುರಿಸುತ್ತಿರುವ ಮತ್ತು ಜಾಮೀನು ದೊರೆತು 2 ವರ್ಷವಾಗಿರುವ ಕೈದಿಗಳ ಬಿಡುಗಡೆಗೆ ಹಣ ಪಾವತಿಸಲಾಗುತ್ತದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ 2015ರಲ್ಲಿ ದೇಶದ ಜೈಲುಗಳಲ್ಲಿ 3 ಲಕ್ಷ ವಿಚಾರಣಾಧೀನ ಕೈದಿಗಳಿದ್ದರು. ಉತ್ತರ ಪ್ರದೇಶದ ಜೈಲುಗಳಲ್ಲೇ 63 ಸಾವಿರ ವಿಚಾರಣಾಧೀನ ಕೈದಿಗಳಿದ್ದಾರೆ. ಇವರಲ್ಲಿ ಸಾವಿರಾರು ಮಂದಿಗೆ ಜಾಮೀನು ದೊರಕಿದ್ದರೂ ಬಾಂಡ್‌ಗೆ ಪಾವತಿಸಲು ಹಣವಿಲ್ಲದೆ ಬಿಡುಗಡೆಯ ಭಾಗ್ಯ ದೊರಕಿಲ್ಲ. ಇಂತಹವರ ಬಿಡುಗಡೆಗೆ ಜಾಮೀನು ನಿಧಿ ಸ್ಥಾಪಿಸಲು ರಾಜ್ಯಗಳ ಜೊತೆ ಮಾತನಾಡಿದ್ದೇವೆ. ಉತ್ತಮ ಸ್ಪಂದನೆ ದೊರಕಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೇಶದ ಜೈಲುಗಳಲ್ಲಿ ಸದ್ಯ ಸರಾಸರಿ 100 ಕೈದಿಗಳಿರಬೇಕಾದ ಜಾಗದಲ್ಲಿ 150 ಕೈದಿಗಳಿದ್ದಾರೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ಜೈಲುಗಳ ಮೇಲಿನ ಒತ್ತಡ ಕಡಿಮೆ ಮಾಡುವಂತೆ ಸೂಚಿಸಿತ್ತು. ಅಲ್ಲದೆ, ಜಾಮೀನು ದೊರೆತರೂ ವಿಚಾರಣಾಧೀನ ಕೈದಿಗಳು ಜೈಲಿನಲ್ಲೇ ಇರಬೇಕಾಗಿ ಬರುವುದು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗುವುದರಿಂದ ಇದರ ಬಗ್ಗೆ ಗಮನ ಹರಿಸಬೇಕೆಂದು ಹೇಳಿತ್ತು. ಆಗ ಸರ್ಕಾರವು ‘ಮುಕ್ತ ಜೈಲು’ಗಳ ಸಂಖ್ಯೆ ಹೆಚ್ಚಿಸುವುದಾಗಿ ಹೇಳಿತ್ತು. ಈ ಜೈಲುಗಳಲ್ಲಿರುವ ಕೈದಿಗಳು ಜೈಲಿನ ಹೊರಗೆ ಹೋಗಿ ದಿನವಿಡೀ ದುಡಿದು ಹಣ ಗಳಿಸುತ್ತಾರೆ. ಸಂಜೆ ಮತ್ತೆ ಜೈಲಿಗೆ ಮರಳುತ್ತಾರೆ. ದೇಶದಲ್ಲಿ ಇಂತಹ 63 ಮುಕ್ತ ಜೈಲುಗಳಿವೆ. ಇದೀಗ ಕೇಂದ್ರ ಸರ್ಕಾರವು ಮುಕ್ತ ಜೈಲುಗಳ ಜೊತೆಗೆ ಜಾಮೀನು ನಿಧಿಯನ್ನೂ ಸ್ಥಾಪಿಸಲು ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.