ಗೌರಿ ಹತ್ಯೆ ಭೇದಿಸಿದ ಎಸ್‌ಐಟಿಗೆ 25 ರೂ ಲಕ್ಷ ಬಹುಮಾನ ಘೋಷಣೆ

By Web DeskFirst Published May 28, 2019, 8:36 AM IST
Highlights

ಗೌರಿ ಹತ್ಯೆ ಭೇದಿಸಿದ ಎಸ್‌ಐಟಿಗೆ 25 ಲಕ್ಷ ರೂ ಬಹುಮಾನ ಘೋಷಣೆ | ಸುಮಾರು 90 ಪೊಲೀಸ್‌ ಸಿಬ್ಬಂದಿಗೆ ಸರ್ಕಾರ ಪ್ರೋತ್ಸಾಹ | 
 

ಬೆಂಗಳೂರು (ಮೇ. 28):  ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಭೇದಿಸಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದ ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ಕೆ.ಸಿಂಗ್‌ ನೇತೃತ್ವದ ತನಿಖಾ ತಂಡಕ್ಕೆ ರಾಜ್ಯ ಸರ್ಕಾರ 25 ಲಕ್ಷ ರು. ಬಹುಮಾನ ಘೋಷಿಸಿದೆ. ಕೊಲೆ ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ 25 ಲಕ್ಷ ರು. ಬಹುಮಾನ ನೀಡುವಂತೆ ಕೋರಿ ಇತ್ತೀಚೆಗೆ ಬಿ.ಕೆ.ಸಿಂಗ್‌ ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದರು.

ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಪೊಲೀಸ್‌ ಇಲಾಖೆಗೆ ಸವಾಲಾಗಿ ಪರಿಣಮಿಸಿತ್ತು. ಸತತವಾಗಿ ಒಂದು ವರ್ಷ ಪರಿಶ್ರಮಪಟ್ಟವಿಶೇಷ ತನಿಖಾ ತಂಡ ಆರೋಪಿಗಳನ್ನು ಮುಂಬೈ ಸೇರಿದಂತೆ ವಿವಿಧೆಡೆ ಬಂಧಿಸಿತ್ತು.

ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಯಿಂದಾಗಿ ಮಹಾರಾಷ್ಟ್ರದಲ್ಲಿ ನಡೆದಿದ್ದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್‌ ಹಾಗೂ ಗೋವಿಂದ ಪಾನ್ಸರೆ ಅವರ ಹತ್ಯೆ ಪ್ರಕರಣದ ಆರೋಪಿಗಳ ಬಗ್ಗೆಯೂ ಸುಳಿವು ಲಭಿಸಿತ್ತು. ವಿಶೇಷ ತನಿಖಾ ತಂಡ ನೀಡಿದ ಸುಳಿವಿನ ಮೇರೆಗೆ ಸಿಬಿಐನವರು ವಿಚಾರವಾದಿಗಳ ಕೊಲೆ ಹಂತಕರನ್ನು ಬಂಧಿಸಿದ್ದರು.

ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಐಪಿಎಸ್‌ ಅಧಿಕಾರಿಗಳಾದ ಹೆಚ್ಚುವರಿ ಆಯುಕ್ತ ಬಿ.ಕೆ.ಸಿಂಗ್‌ ಹಾಗೂ ಡಿಸಿಪಿ ಅನುಚೇತ್‌ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ತನಿಖಾ ತಂಡದಲ್ಲಿರುವ ಸುಮಾರು 90 ಮಂದಿಗೆ ಬಹುಮಾನ ಘೋಷಣೆಯಾಗಿದೆ.

click me!