120 ಕಿಮೀ ವೇಗದಲ್ಲಿ ಚಂಡಮಾರುತ : 6 ಜಿಲ್ಲೆಗೆ ಸಂಕಷ್ಟ

By Web DeskFirst Published Nov 17, 2018, 10:35 AM IST
Highlights

ದೇಶದಲ್ಲಿ ಕೆಲ ದಿನಗಳ ಹಿಂದಷ್ಟೇ ಭಾರೀ ಪ್ರಮಾಣದಲ್ಲಿ ಚಂಡ ಮಾರುತ ಅಪ್ಪಳಿಸಿ ಅನಾಹುತ ಸೃಷ್ಟಿಸಿತ್ತು. ಇದೀಗ ಮತ್ತೆ ದೇಶದಲ್ಲಿ ಮತ್ತೊಮ್ಮೆ ಹಾನಿಕಾಋ ಚಂಡಮಾರಯತ ತನ್ನ ಪ್ರಲಾಪವನ್ನು ತೋರುತ್ತಿದೆ. . 

ಸೇಲಂ :  ‘ಗಜ’ ಚಂಡಮಾರುತ ತಮಿಳುನಾಡು ಹಾಗೂ ಪುದುಚೇರಿಗೆ ಗಂಟೆಗೆ 120 ಕಿ.ಮೀ. ಬಿರುಗಾಳಿಯೊಂದಿಗೆ ಅಪ್ಪಳಿಸಿದ್ದು, ಅಪಾರ ಹಾನಿ ಹಾಗೂ ಸಾವು ನೋವು ಸೃಷ್ಟಿಸಿದೆ. ತಮಿಳುನಾಡಿನ ವಿವಿಧ ಕಡೆ 28 ಮಂದಿ ‘ಗಜ’ದ ಆರ್ಭಟಕ್ಕೆ ಬಲಿಯಾಗಿದ್ದಾರೆ.

ತೀವ್ರತರದ ಚಂಡಮಾರುತ ಎನ್ನಿಸಿಕೊಂಡಿರುವ ‘ಗಜ’ ಶುಕ್ರವಾರ ನಸುಕಿನ ಜಾವ ಪ್ರತಿ ಗಂಟೆಗೆ 100ರಿಂದ 120 ಕಿ.ಮೀ. ವೇಗದಲ್ಲಿ ಬೀಸುತ್ತ ನಾಗಪಟ್ಟಿಣಂ ಹಾಗೂ ವೇದಾರಣ್ಯಂ ನಡುವೆ ಅಪ್ಪಳಿಸಿತು. ಬಿರುಗಾಳಿಯುಕ್ತ ಮಳೆಯ ಹೊಡೆತಕ್ಕೆ ನಾಗಪಟ್ಟಿಣಂ ಹಾಗೂ ಕಾರೈಕಲ್‌ ಜಿಲ್ಲೆಗಳಲ್ಲಿ ಭಾರಿ ಹಾನಿ ಉಂಟಾಗಿದ್ದು ನೂರಾರು ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ. ಸಾವಿರಾರು ಮನೆಗಳ ಹೆಂಚು-ತಗಡುಗಳು ಹಾರಿಹೋಗಿವೆ. ವಿದ್ಯುತ್‌ ಇಲ್ಲದೇ ಇಲ್ಲಿ ಕಾರ್ಗತ್ತಲು ಆವರಿಸಿದೆ. ಮುಂಜಾಗ್ರತಾ ಕ್ರಮವಾಗಿ ಅಪಾಯದ ವಲಯದಲ್ಲಿದ್ದ 80 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹೆಚ್ಚು ಬಾಧಿತವಾಗಿರುವ 6 ಜಿಲ್ಲೆಗಳಲ್ಲಿ 471 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಕಡಲೂರು, ನಾಗಪಟ್ಟಿಣಂ, ತೋಂಡಿ, ಪಂಬನ್‌ ಹಾಗೂ ಪಕ್ಕದ ಪುದುಚೇರಿಯ ಕಾರೈಕಲ್‌ ಹಾಗೂ ಪುದುಚೇರಿಯಲ್ಲಿ ಶುಕ್ರವಾರ ಸೂರ್ಯೋದಯದವರೆಗೆ 8 ಸೆಂ.ಮೀ.ವರೆಗೆ ಮಳೆ ಸುರಿದಿದೆ. ರಾಮನಾಥಪುರಂ, ತಿರುವರೂರು, ಪುದುಕೋಟ್ಟೈ, ತಂಜಾವೂರು ಜಿಲ್ಲೆಗಳಲ್ಲೂ ಭಾರಿ ಮಳೆಯಾಗಿದೆ. ಈ ಪ್ರದೇಶಗಳಲ್ಲಿ ಮರಗಳು, ವಿದ್ಯುತ್‌ ಕಂಬಗಳು ಉರುಳಿ ಅಪಾರ ಹಾನಿಯಾಗಿದೆ.

ಚಂಡಮಾರುತದ ಕಾರಣ ರಸ್ತೆ ಹಾಗೂ ರೈಲು ಸಂಚಾರ ಸ್ಥಗಿತಗೊಂಡಿದ್ದು, ಕಚೇರಿಗಳು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಪಶ್ಚಿಮದತ್ತ :  ಈ ನಡುವೆ ತೀವ್ರತರದ ಚಂಡಮಾರುತ ರೂಪದಲ್ಲಿ ಅಪ್ಪಳಿಸಿದ ‘ಗಜ’ ಇನ್ನು ದುರ್ಬಲಗೊಳ್ಳಲಿದ್ದು, ಸಾಮಾನ್ಯ ಚಂಡಮಾರುತದ ರೂಪದಲ್ಲಿ ಪಶ್ಚಿಮ ಭಾಗದತ್ತ ಸಾಗುತ್ತಿದೆ.

ಮುಂಜಾಗ್ರತೆಯಿಂದ ಹಾನಿ ಕಮ್ಮಿ:  ಈ ನಡುವೆ, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತದೆ. ಗಾಯಾಳುಗಳಿಗೆ 25 ಸಾವಿರ ರು. ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.

ಈ ನಡುವೆ, ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಸಕಾಲದಲ್ಲಿ ಕೈಗೊಂಡ ಕಾರಣ ಹಾನಿಯ ಪ್ರಮಾಣ ಕಡಿಮೆಯಾಗಿದೆ ಎಂದು ತಮಿಳುನಾಡು ಕಂದಾಯ ಸಚಿವ ಉದಯಕುಮಾರ್‌ ತಿಳಿಸಿದ್ದಾರೆ.

ಎಲ್ಲಿ ಹಾನಿ ಸಂಭವಿಸಬಹುದು ಎಂಬುದನ್ನು ಮೊದಲೇ ಅಂದಾಜಿಸಿ ಸುಮಾರು 80 ಸಾವಿರ ಜನರನ್ನು ತೆರವುಗೊಳಿಸಲಾಗಿದ್ದು, ಹೀಗಾಗಿ ಜೀವಹಾನಿ ಪ್ರಮಾಣ ಕಡಿಮೆಯಾಗಿದೆ. 15 ಸಾವಿರ ವಿದ್ಯುತ್‌ ಕಂಬಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದ್ದು, ಕಡಿತಗೊಂಡ ವಿದ್ಯುತ್‌ ಸಂಪರ್ಕವನ್ನು ಪುನಾರಂಭಿಸಲು ಕೂಡಲೇ ಕಾರ್ಯಾರಂಭ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ.

ರಾಷ್ಟ್ರೀಯ ವಿಪತ್ತು ಪಡೆಯ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಜನರಿಗೆ ಪರಿಹಾರ ಕೇಂದ್ರಗಳಲ್ಲಿ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ. ಪಕ್ಕದ ಪುದುಚೇರಿಯಲ್ಲೂ 190 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

click me!