ರಫೇಲ್ ಯುದ್ಧ ವಿಮಾನಗಳು ಸ್ಟಂಟ್ ಮಾಡುತ್ತವಾ?

By Web DeskFirst Published Oct 3, 2018, 9:48 AM IST
Highlights

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಜೋರಾಗಿದೆ ಆರೋಪ- ಪ್ರತ್ಯಾರೋಪ | ರಫೇಲ್ ಯುದ್ಧ ವಿಮಾನವು ಎಲ್ಲ ರೀತಿಯ ಸ್ಟಂಟ್‌ಗಳನ್ನು ಮಾಡುತ್ತವಂತೆ, ನಿಜನಾ? 

ಬೆಂಗಳೂರು (ಅ. 03): ಫ್ರಾನ್ಸ್ ಮತ್ತು ಭಾರತ ಸರ್ಕಾರದ ನಡುವೆ ನಡೆದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಭಾರತದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷದ ನಡುವೆ ಆರೋಪ ಪ್ರತ್ಯಾರೋಪಗಳು ತೀವ್ರಗೊಂಡಿದೆ.

ಈ ನಡುವೆ ರಫೇಲ್ ಯುದ್ಧ ವಿಮಾನವು ಎಲ್ಲ ರೀತಿಯ ಸ್ಟಂಟ್‌ಗಳನ್ನು ಮಾಡುತ್ತದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎರಡು ನಿಮಿಷ 50 ಸೆಕೆಂಡ್‌ಗಳಿರುವ ವಿಡಿಯೋದಲ್ಲಿ ವಿಮಾನವೊಂದು ಒಮ್ಮೆಲೇ ಆಕಾಶಕ್ಕೆ ಹಾರುವ, ಮತ್ತೊಮ್ಮೆ ಭೂಮಿಗೆ ಸಮೀಪದಲ್ಲಿ ನೇರವಾಗಿ ಆಕಾಶದೆಡೆಗೆ ಮುಖಮಾಡಿ ನಿಲ್ಲುವಂತೆ ಸ್ಟಂಟ್ ಮಾಡುತ್ತಿರುವ ದೃಶ್ಯವಿದೆ. ಸದ್ಯ ಈ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆದರೆ ನಿಜಕ್ಕೂ ಫ್ರಾನ್ಸ್‌ನಿಂದ ನಿರ್ಮಾಣವಾಗುವ ರಫೇಲ್ ಯುದ್ಧ ವಿಮಾನಗಳು ಈ ರೀತಿಯ ಸ್ಟಂಟ್ ಮಾಡುವ ಸಾಮರ್ಥ್ಯ ಹೊಂದಿವೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ. ವಾಸ್ತವವಾಗಿ ಹೀಗೆ ಸ್ಟಂಟ್ ಮಾಡುತ್ತಿರುವ ಯುದ್ಧ ವಿಮಾನ ರಫೇಲ್ ಅಲ್ಲ. ಬದಲಿಗೆ ರಿಮೋಟ್ ಕಂಟ್ರೋಲ್ಡ್ ಜೆಟ್ ಎಫ್-೧೬ ಕ್ಯೂಕ್ಯೂ. ಇದು ಆನ್ ಲೈನ್‌ನಲ್ಲಿ ಖರೀದಿಸಬಹುದಾದ ವಿಮಾನ. ಅಲ್ಲದೆ ಇದೇ ರೀತಿಯ ಸಂದೇಶದ ವಿಡಿಯೋ ಈ ಹಿಂದೆ ಕೂಡ ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

‘ಬೂಮ್’ ಈ ಕುರಿತು ಮತ್ತಷ್ಟು ಪರಿಶೀಲನೆಗೆ ಮುಂದಾದಾಗ ಇದು ವಿಮಾನವೇ ಆದರೆ ಎಲ್ಲ ವಿಮಾನಗಳಷ್ಟೇ ಗಾತ್ರ ಹೊಂದಿರುವುದಿಲ್ಲ. ಅಲ್ಲದೆ ವಿಡಿಯೋದಲ್ಲಿ ‘ಫ್ಲೆಕ್ಸ್ ಇನೋವೇಶನ್’ ಎಂಬ ಲೋಗೋ ಇದೆ. ಫ್ಲೆಕ್ಸ್ ಇನೋವೇಶನ್ ಕಂಪನಿಯಲ್ಲಿ ಈ ರೀತಿಯ ವಿಮಾನಗಳನ್ನು ಆರ್ಡರ್ ಮಾಡಿ ಪಡೆಯಬಹುದಾಗಿದೆ ಎಂಬುದು ದೃಢವಾಗಿದೆ. ಹಾಗಾಗಿ ರಫೇಲ್ ಯುದ್ಧ ವಿಮಾನ ಸ್ಟಂಟ್ ಮಾಡುತ್ತದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು. 

-ವೈರಲ್ ಚೆಕ್  

click me!