ವ್ಯಭಿಚಾರ; ಬೇರೆ ಬೇರೆ ದೇಶಗಳಲ್ಲಿ ಕಾನೂನು ಹೇಗಿದೆ?

By Web DeskFirst Published Sep 28, 2018, 10:02 AM IST
Highlights

ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುತ್ತಿದ್ದ ಕಾಯ್ದೆಯನ್ನು ಭಾರತದ ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಬೇರೆ ಬೇರೆ ದೇಶಗಳಲ್ಲಿ ವಿವಾಹೇತರ ಸಂಬಂಧಗಳನ್ನು ಹೇಗೆ ಪರಿಗಣಿಸುತ್ತಾರೆಂಬ ಮಾಹಿತಿ ಇಲ್ಲಿದೆ. ಕುತೂಹಲಕರ ಸಂಗತಿ ಏನೆಂದರೆ, ಕಾಯ್ದೆ ಏನೇ ಇದ್ದರೂ ಸಾಮಾಜಿಕವಾಗಿ ಮತ್ತು ನೈತಿಕವಾಗಿ ಎಲ್ಲಾ ದೇಶಗಳಲ್ಲೂ ಇದು ತಪ್ಪು ಎಂದೇ ಪರಿಗಣಿತವಾಗಿದೆ. 

ನವದೆಹಲಿ (ಸೆ. 28): ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುತ್ತಿದ್ದ ಕಾಯ್ದೆಯನ್ನು ಭಾರತದ ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಬೇರೆ ಬೇರೆ ದೇಶಗಳಲ್ಲಿ ವಿವಾಹೇತರ ಸಂಬಂಧಗಳನ್ನು ಹೇಗೆ ಪರಿಗಣಿಸುತ್ತಾರೆಂಬ ಮಾಹಿತಿ ಇಲ್ಲಿದೆ. ಕುತೂಹಲಕರ ಸಂಗತಿ ಏನೆಂದರೆ, ಕಾಯ್ದೆ ಏನೇ ಇದ್ದರೂ ಸಾಮಾಜಿಕವಾಗಿ ಮತ್ತು ನೈತಿಕವಾಗಿ ಎಲ್ಲಾ ದೇಶಗಳಲ್ಲೂ ಇದು ತಪ್ಪು ಎಂದೇ ಪರಿಗಣಿತವಾಗಿದೆ. 

ಫಿಲಿಪ್ಪೀನ್ಸ್

ವ್ಯಭಿಚಾರ ಕ್ರಿಮಿನಲ್ ಅಪರಾಧ. ತನ್ನ ಹೆಂಡತಿ ಪರ ಪುರುಷನೊಂದಿಗೆ ಅಕ್ರಮ ಲೈಂಗಿಕ ಸಂಪರ್ಕ ಬೆಳೆಸಿದ್ದಾಳೆಂದು ಗಂಡ ಸಾಬೀತುಪಡಿಸಿದರೆ ಆಕೆಗೆ ಆರು ವರ್ಷ ಜೈಲುಶಿಕ್ಷೆ. ತನ್ನ ಗಂಡ ಅನ್ಯ ಸ್ತ್ರೀ ಜೊತೆ ಸಂಬಂಧ ಹೊಂದಿದ್ದಾನೆಂದು ಪತ್ನಿ ಸಾಬೀತುಪಡಿಸಿದರೆ ಅವನಿಗೆ ನಾಲ್ಕು ವರ್ಷದ ಒಂದು ದಿನ ಜೈಲುಶಿಕ್ಷೆ. ಅವನೊಂದಿಗೆ ಸಂಬಂಧ ಇರಿಸಿಕೊಂಡಿದ್ದ ಮಹಿಳೆಗೆ ಶಿಕ್ಷೆಯಿಲ್ಲ.

ಚೀನಾ

ವ್ಯಭಿಚಾರ ಅಪರಾಧವಲ್ಲ. ಆದರೆ, ಇದನ್ನು ವಿಚ್ಛೇದನಕ್ಕೆ ಕಾರಣವಾಗಿ ಪರಿಗಣಿಸಬಹುದು. ವ್ಯಭಿಚಾರದ ಕಾರಣ ನೀಡಿ ಗಂಡ ಅಥವಾ ಹೆಂಡತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ ಸಂತ್ರಸ್ತರಿಗೆ ಪರಿಹಾರ ಧನ ಪಡೆಯಲು ಮಾತ್ರ ಹಕ್ಕಿರುತ್ತದೆ. ವ್ಯಭಿಚಾರ ಎಸಗಿದವರಿಗೆ ಬೇರಾವುದೇ ಶಿಕ್ಷೆ ಇಲ್ಲ.

ಸೌದಿ ಅರೇಬಿಯಾ

ಇಸ್ಲಾಮಿಕ್ ಕಾನೂನು ಹೊಂದಿರುವ ಎಲ್ಲಾ ದೇಶಗಳಲ್ಲೂ ವ್ಯಭಿಚಾರ ಕ್ರಿಮಿನಲ್ ಅಪರಾಧ. ಅದಕ್ಕೆ ದಂಡ, ಜೈಲುಶಿಕ್ಷೆ, ಛಡಿಯೇಟು, ಕಲ್ಲೆಸೆತ, ಕೆಲ ಗಂಭೀರ ಪ್ರಕರಣಗಳಲ್ಲಿ ಗಲ್ಲುಶಿಕ್ಷೆ ಕೂಡ ವಿಧಿಸಲಾಗುತ್ತದೆ. ದಕ್ಷಿಣ ಕೊರಿಯಾ ವ್ಯಭಿಚಾರ ಅಪರಾಧವಲ್ಲ. ಭಾರತದಲ್ಲಿ ಈಗ ಸುಪ್ರೀಂಕೋರ್ಟ್ ನೀಡಿರುವಂತಹುದೇ ತೀರ್ಪನ್ನು ೨೦೧೫ರಲ್ಲಿ ಇಲ್ಲಿನ ಸುಪ್ರೀಂಕೋರ್ಟ್ ನೀಡುವ ಮೂಲಕ ಅದಕ್ಕಿಂತ ಮುಂಚೆ ವ್ಯಭಿಚಾರವನ್ನು ಅಪರಾಧವೆಂದು ಪರಿಗಣಿಸುತ್ತಿದ್ದ ಕಾಯ್ದೆಯನ್ನು ರದ್ದುಪಡಿಸಿದೆ.

ತೈವಾನ್

ಇಲ್ಲಿ ವ್ಯಭಿಚಾರ ಅಪರಾಧವಾಗಿದ್ದು, ವಿವಾಹೇತರ ಸಂಬಂಧ ಇರಿಸಿಕೊಳ್ಳುವ ಪುರುಷ ಹಾಗೂ ಸ್ತ್ರೀಯರಿಬ್ಬರಿಗೂ ಸಮಾನವಾಗಿ ಒಂದು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಲಾಗುತ್ತದೆ.

ಅಮೆರಿಕ

50 ರಾಜ್ಯಗಳ ಪೈಕಿ 20 ರಾಜ್ಯಗಳಲ್ಲಿ ವ್ಯಭಿಚಾರ ಅಪರಾಧ. ಆದರೆ, ಒಟ್ಟಾರೆ ದೇಶದಲ್ಲಿ ವ್ಯಭಿಚಾರಕ್ಕೆ ಕಾನೂನಿನಡಿ ಶಿಕ್ಷೆಯಾಗುವುದು ಕಡಿಮೆ. ಬದಲಿಗೆ ವೃತ್ತಿ ಜೀವನದಲ್ಲಿ ಹಿನ್ನಡೆಯಾಗುತ್ತದೆ. ಕೆಲಸ ಹೋಗುವುದು, ಬಡ್ತಿ ಕಡಿತ, ದಂಡ, ಸಾಮಾಜಿಕ ತಿರಸ್ಕಾರ ಇತ್ಯಾದಿ ಅನುಭವಿಸಬೇಕಾಗುತ್ತದೆ.

ಪಾಕಿಸ್ತಾನ

ವ್ಯಭಿಚಾರ ಅಪರಾಧ. ಮಹಿಳೆಯು ಪರ ಪುರುಷನ ಜೊತೆಗೆ ಸಂಬಂಧವಿರಿಸಿಕೊಂಡು ಸಿಕ್ಕಿಬಿದ್ದರೆ ತನ್ನ ವಿರುದ್ಧ ಗಂಡ ಕೇಸು ಹಾಕುವುದರಿಂದ ತಪ್ಪಿಸಿಕೊಳ್ಳಲು ಆಕೆ ತನ್ನ ಪ್ರೇಮಿಯ ವಿರುದ್ಧ ಅತ್ಯಾಚಾರದ ದೂರು ದಾಖಲಿಸಬಹುದು. ಆದರೆ, ಆತ ಅತ್ಯಾಚಾರ ಎಸಗಿದ್ದನ್ನು ತಾವು ನೋಡಿದ್ದೇವೆಂದು ನಾಲ್ಕು ವಯಸ್ಕ ಪುರುಷರು ಸಾಕ್ಷ್ಯ ಹೇಳಬೇಕು!

ಯುರೋಪ್

ಯುರೋಪ್ ಖಂಡದ ಬಹುತೇಕ ಯಾವುದೇ ದೇಶದಲ್ಲೂ ವಿವಾಹೇತರ ಸಂಬಂಧವಿರಿಸಿಕೊಳ್ಳುವುದು ಅಪರಾಧವಲ್ಲ. ಈ ಮೊದಲು ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುತ್ತಿದ್ದ ಕಾಯ್ದೆಗಳನ್ನು ಒಂದೊಂದೇ ದೇಶಗಳು ರದ್ದುಪಡಿಸುತ್ತಾ ಬಂದಿವೆ. ಆದರೆ, ವಿವಾ ಹೇತರ ಸಂಬಂಧವು ವಿಚ್ಛೇದನಕ್ಕೆ ಒಂದು ಕಾರಣವಾಗಬಹುದು.

ಆಸ್ಟ್ರೇಲಿಯಾ

ಇಬ್ಬರು ವಯಸ್ಕರು ಸ್ವ ಇಚ್ಛೆಯಿಂದ ಲೈಂಗಿಕ ಸಂಬಂಧ ಬೆಳೆಸಿದರೆ ಅಂತಹ ವಿವಾಹೇತರ ಸಂಬಂಧಗಳು ಅಪರಾಧವಲ್ಲ. ಅವರ ವಿರುದ್ಧ ಯಾರೂ ಕೂಡ ದೂರು ನೀಡುವಂತಿಲ್ಲ. ಗಂಡ ಅಥವಾ ಹೆಂಡತಿ ವಿಚ್ಛೇದನಕ್ಕೆ ಇದೇ ಕಾರಣ ನೀಡಿ ಅರ್ಜಿ ಸಲ್ಲಿಸಬಹುದು. ಹೀಗಾಗಿ ಅಲ್ಲಿ ವ್ಯಭಿಚಾರ ಅಪರಾಧ ಎಂದು ಪರಿಗಣಿತವಾಗಲ್ಲ. 

click me!