ಕಾಂಗ್ರೆಸ್ ಮುಖಂಡರಿಂದ ಮಹತ್ವದ ನಿರ್ಧಾರ

By Web DeskFirst Published Dec 13, 2018, 8:26 AM IST
Highlights

ಕರ್ನಾಟಕ ಕಾಂಗ್ರೆಸ್ ಮುಖಂಡರು  ಇದೀಗ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆಯನ್ನು ತಿರಸಸ್ಕರಿಸಿದ್ದು ಇದರಿಂದ ಅಂತರ ಕಾಯ್ದುಕೊಳ್ಳು ನಿರ್ಧಾರ ಮಾಡಿದ್ದಾರೆ. 

ವಿಧಾನಸೌಧ :  ಪ್ರತ್ಯೇಕ ಲಿಂಗಾಯತ ಧರ್ಮದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಸದ್ಯಕ್ಕೆ ಈ ವಿಚಾರದಿಂದ ಅಂತರ ಕಾಯ್ದುಕೊಳ್ಳಬೇಕು ಮತ್ತು ಪ್ರತ್ಯೇಕ ಧರ್ಮ ವಿಚಾರವನ್ನು ಧಾರ್ಮಿಕ ನಾಯಕರು ಹಾಗೂ ಸಮುದಾಯದ ಮುಖಂಡರ ವಿವೇಚನೆಗೆ ಬಿಡಬೇಕು ಎಂಬ ನಿಲುವಿಗೆ ಕಾಂಗ್ರೆಸ್‌ ಬಂದಿದೆ.

ಕೇಂದ್ರ ಸರ್ಕಾರ ಪ್ರಸ್ತಾಪ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ಬುಧವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪಕ್ಷದ ಹಿರಿಯ ಸಚಿವರು ಅನೌಪಚಾರಿಕ ಸಭೆ ನಡೆಸಿ ಈ ನಿರ್ಧಾರ ಕೈಗೊಂಡರು ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರವು ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಕೇಂದ್ರ ಸರ್ಕಾರವು ಇತ್ತೀಚೆಗೆ ರಾಜ್ಯ ಸರ್ಕಾರದ ಪ್ರಸ್ತಾವನೆ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ಸಚಿವರ ಅನೌಪಚಾರಿಕ ಸಭೆಯಲ್ಲಿ ಪ್ರತ್ಯೇಕ ಧರ್ಮ ವಿಚಾರದಲ್ಲಿ ಯಾವುದೇ ಎಡವಟ್ಟು ಮಾಡಿಕೊಳ್ಳುವುದು ಬೇಡ. ಈ ವಿಷಯದಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತ ಎಂದು ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿವೆ.

ವಿಧಾನಸಭೆ ಚುನಾವಣೆ ವೇಳೆ ಈ ವಿಚಾರದಲ್ಲಿ ಸರ್ಕಾರ ಸಕ್ರಿಯವಾಗಿ ಪಾಲ್ಗೊಂಡಿದ್ದರಿಂದ ಕಾಂಗ್ರೆಸ್‌ ಸಾಕಷ್ಟುನಷ್ಟಅನುಭವಿಸಿದೆ. ಇದೀಗ ಕೇಂದ್ರ ಸರ್ಕಾರದ ತೀರ್ಮಾನ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರುವುದು ಸೇರಿದಂತೆ ಯಾವುದೇ ಪರ್ಯಾಯ ಮಾರ್ಗ ತುಳಿದರೂ ಅನಗತ್ಯ ಗೊಂದಲಕ್ಕೆ ಸಿಲುಕಬೇಕಾಗುತ್ತದೆ. ಹೀಗಾಗಿ ಸಮ್ಮಿಶ್ರ ಸರ್ಕಾರವು ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂದು ನಿರ್ಧರಿಸಲಾಗಿದೆ.

ಕಾಂಗ್ರೆಸ್‌ನ ಮಾಜಿ ಸಚಿವ ಎಂ.ಬಿ. ಪಾಟೀಲ್‌, ವಿನಯ್‌ ಕುಲಕರ್ಣಿ ನೇತೃತ್ವದಲ್ಲಿ ಪ್ರತ್ಯೇಕ ಧರ್ಮದ ಹೋರಾಟ ಕೈಗೆತ್ತಿಕೊಳ್ಳಲಾಗಿತ್ತು. ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ಆಯೋಗದ ವರದಿ ಆಧರಿಸಿ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಬಗ್ಗೆ ಸಂಪುಟ ಸಭೆ ನಿರ್ಧಾರ ತೆಗೆದುಕೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಸಫಲವಾಗಿತ್ತು.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರು ಹಿಂದಿನ ಸರ್ಕಾರದಲ್ಲಿ ತೆಗೆದುಕೊಂಡಿದ್ದ ನಿಲುವಿನ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿದ್ದರು. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು, ಪ್ರತ್ಯೇಕ ಧರ್ಮದ ವಿಚಾರ ಲಿಂಗಾಯತ ಸಮುದಾಯ ಹಾಗೂ ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು. ಇದು ನಮ್ಮ ಸರ್ಕಾರದ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಮೂಲಕ ಲಿಂಗಾಯತ ಧರ್ಮದ ವಿವಾದದಿಂದ ಅಂತರ ಕಾಯ್ದುಕೊಳ್ಳುವ ಹೇಳಿಕೆ ನೀಡಿದ್ದರು.

ಇದೀಗ ಸರ್ಕಾರವು ಅದೇ ನಿರ್ಧಾರ ತೆಗೆದುಕೊಂಡಿದ್ದು, ಸಭೆಯಲ್ಲಿ ತಟಸ್ಥ ಧೋರಣೆ ಅನುಸರಿಸಬೇಕು. ವಿವಾದದಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರವು ಪ್ರತ್ಯೇಕ ಧರ್ಮದ ಪ್ರಸ್ತಾಪವನ್ನು ತಿರಸ್ಕರಿಸಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಬಹುಶಃ ಪ್ರಧಾನ ಕಾರ್ಯದರ್ಶಿ ಅಥವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿರಬಹುದು. ನನ್ನ ಮಟ್ಟದಲ್ಲಿ ಈ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆದಿಲ್ಲ.

- ಕೃಷ್ಣಬೈರೇಗೌಡ, ಕಾನೂನು ಸಚಿವ

click me!