ಮೋದಿ ಸರ್ಕಾರ ನಿರ್ಮಿಸಿದ್ದ ಸೋಲಾರ್ ಪ್ಯಾನೆಲ್ ಕಾಂಗ್ರೆಸ್‌ನಿಂದ ಧ್ವಂಸ?

By Web DeskFirst Published Oct 10, 2018, 9:32 AM IST
Highlights

ಮೋದಿ ಸರ್ಕಾರ ನಿರ್ಮಿಸಿದ್ದ ಸೋಲಾರ್ ಪ್ಯಾನಲ್‌ ಧ್ವಂಸಗೊಳಿಸಿದ ಕಾಂಗ್ರೆಸ್ಸಿಗರು! ನಿಜ್ಕಕೂ ಕಾಂಗ್ರೆಸ್ಸಿಗರು ಸುಖಾಸುಮ್ಮನೆ ಸೋಲಾರ್‌ ಘಟಕಗಳನ್ನು ನಾಶಪಡಿಸಿದ್ದಾರೆಯೇ ? ಏನಿದರ ಅಸಲಿಯತ್ತು? 

ನವದೆಹಲಿ (ಅ. 10): ಕಾಂಗ್ರೆಸ್‌ ಕಾರ್ಯಕರ್ತರು ಸೋಲಾರ್‌ ಘಟಕಗಳನ್ನು ಧ್ವಂಸ ಮಾಡಿದ್ದಾರೆ ಎಂಬ ಸಂದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆ ವಿಡಿಯೋದೊಂದಿಗೆ ‘ಅನಕ್ಷರಸ್ಥ ಕಾಂಗ್ರೆಸ್ಸಿಗರು ಮೋದಿ ಸರ್ಕಾರ ಕೋಟಿ ಕೋಟಿ ಹಣ ವ್ಯಯ ಮಾಡಿ ನಿರ್ಮಿಸಿದ್ದ ಸೋಲಾರ್‌ ಪ್ಯಾನೆಲ್‌ ಅನ್ನು ನಾಶಗೊಳಿಸುತ್ತಾರೆ. ಆಮೇಲೆ ದೇಶ ಎಲ್ಲಿ ಅಭಿವೃದ್ಧಿ ಕಂಡಿದೆ ಎಂದು ಪ್ರಶ್ನಿಸುತ್ತಾರೆ. ನಮಗೀಗ ವಿದ್ಯುತ್‌ ಇಲ್ಲದಂತಾಗಿದೆ’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ. ಆ ವಿಡಿಯೋದಲ್ಲಿ ಜನರು ಸಿಟ್ಟಿಗೆದ್ದು ಸೋಲಾರ್‌ ಘಟಕಗಳನ್ನು ನಾಶಪಡಿಸುತ್ತಿರುವ ದೃಶ್ಯವಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ‘ಸಪೋರ್ಟ್‌ ನರೇಂದ್ರ ಭಾಯಿ ಮೋದಿ ಬಿಜೆಪಿ’ ಎಂಬ ಫೇಸ್‌ಬುಕ್‌ ಪೇಜ್‌ ಈ ವಿಡಿಯೋವನ್ನು ಮೊದಲು ಪೋಸ್ಟ್‌ ಮಾಡಿದ್ದು, ಅದು 2900 ಭಾರಿ ಶೇರ್‌ ಆಗಿದೆ.

ಆದರೆ ನಿಜ್ಕಕೂ ಕಾಂಗ್ರೆಸ್ಸಿಗರು ಸುಖಾಸುಮ್ಮನೆ ಸೋಲಾರ್‌ ಘಟಕಗಳನ್ನು ನಾಶಪಡಿಸಿದ್ದಾರೆಯೇ ಎಂದು ಪರಿಶೀಲಿಸಿದಾಗ ಸುಳ್ಳುಸುದ್ದಿ ಎಂಬುದು ದೃಢವಾಗಿದೆ. ಏಕೆಂದರೆ ಇದೇ ವಿಡಿಯೋ ಈ ಹಿಂದೆ ಕೂಡ ವಿಭಿನ್ನ ಒಕ್ಕಣೆಯೊಂದಿಗೆ ಸಾಕಷ್ಟುಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ ಹಿಂದೆ ಇದೇ ವಿಡಿಯೋ ಪೋಸ್ಟ್‌ ಮಾಡಿ ಬಿಜೆಪಿಯ ಸಂಸದ ಅಶೋಕ್‌ ಸಕ್ಸೇನಾ ‘ಸೋಲಾರ್‌ ಶಕ್ತಿ ಬಳಕೆಯಿಂದ ಸೂರ್ಯ ಕೋಪಗೊಳ್ಳುತ್ತಾನೆ’ ಎಂದು ಹೇಳಿದ್ದರಿಂದ ಜನರು ಸೋಲಾರ್‌ ಪ್ಯಾನೆಲ್‌ಗಳನ್ನು ಧ್ವಂಸಗೊಳಿಸುತ್ತಿದ್ದಾರೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗಿತ್ತು. ವಾಸ್ತವವಾಗಿ 2018ರ ಫೆಬ್ರವರಿಯಲ್ಲಿ ಮಹಾರಾಷ್ಟ್ರದಲ್ಲಿ ಸೋಲಾರ್‌ ಘಟಕದ ಕಾರ್ಮಿಕರು ಸರಿಯಾಗಿ ವೇತನ ನೀಡುತ್ತಿಲ್ಲವೆಂದು ಪ್ರತಿಭಟಿಸಿ ಅಲ್ಲಿದ್ದ ಸೋಲಾರ್‌ ಪ್ಯಾನೆಲ್‌ಗಳನ್ನೇ ನಾಶಗೊಳಿದ್ದ ಸಂದರ್ಭದ ವಿಡಿಯೋ ಇದಾಗಿದೆ. ಇದನ್ನು ಕೆಲ ಸುದ್ದಿ ಮಾಧ್ಯಮಗಳೂ ವರದಿ ಮಾಡಿದ್ದವು. ಇದೇ ವಿಡಿಯೋವನ್ನು ವಿಭಿನ್ನ ಒಕ್ಕಣೆಯೊಂದಿಗೆ ಶೇರ್‌ ಮಾಡಿ ಸುಳ್ಳುದುದ್ದಿ ಹಬ್ಬಿಸಲು ಬಳಸಿಕೊಳ್ಳಲಾಗುತ್ತಿದೆ.

-ವೈರಲ್ ಚೆಕ್ 

click me!