ಜೆಡಿಎಸ್ಸಿಗನ ಕೊಂದವರನ್ನು ಶೂಟ್‌ ಮಾಡಿ! ಸಿಎಂ ಆವೇಶ

By Web DeskFirst Published Dec 25, 2018, 8:31 AM IST
Highlights

ಜೆಡಿಎಸ್‌ ಮುಖಂಡ ಪ್ರಕಾಶ್‌ರನ್ನು ಸೋಮವಾರ ಹಾಡಹಗಲೇ ಹತ್ಯೆ ಮಾಡಿದ ವಿಚಾರ ತಿಳಿಯುತ್ತಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ  ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಹತ್ಯೆ ಮಾಡಿದವರನ್ನು ಶೂಟ್ ಮಾಡಿ ಎಂದಿದ್ದು, ಬಳಿಕ ಆವೇಶದಿಂದ ಇಂತಹ ಹೇಳಿಕೆ ನೀಡಿದ್ದಾಗಿ ಪ್ರತಿಕ್ರಿಯಿಸಿದ್ದಾರೆ. 

ವಿಜಯಪುರ :  ಮಂಡ್ಯ ಜಿಲ್ಲೆ ಮದ್ದೂರಿನ ತೊಪ್ಪನಹಳ್ಳಿಯಲ್ಲಿ ಜೆಡಿಎಸ್‌ ಮುಖಂಡ ಪ್ರಕಾಶ್‌ರನ್ನು ಸೋಮವಾರ ಹಾಡಹಗಲೇ ಹತ್ಯೆ ಮಾಡಲಾಗಿದ್ದು, ಸುದ್ದಿ ತಿಳಿದು ಆಕ್ರೋಶಗೊಂಡ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಂತಕರನ್ನು ಶೂಟೌಟ್‌ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದ ಪ್ರಸಂಗ ನಡೆದಿದೆ. ನಂತರ ಈ ಕುರಿತು ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರೊಂದಿಗೆ ಮಾತನಾಡುವಾಗ ನಾನು ಬಳಸಿದ ಪದ ಭಾವನಾತ್ಮಕ ಪ್ರತಿಕ್ರಿಯೆಯೇ ಹೊರತು ಆದೇಶವಲ್ಲ ಎಂದು ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ವಿಜಯಪುರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇಲ್ಲಿನ ಸೈನಿಕ ಶಾಲೆಯ ಹೆಲಿಪ್ಯಾಡ್‌ನಲ್ಲಿ ಇಳಿಯುತ್ತಿದ್ದಂತೆ ಹತ್ಯೆ ಮಾಹಿತಿ ತಿಳಿದು ಪೊಲೀಸರ ಜತೆಗೆ ಮೊಬೈಲ್‌ ಮೂಲಕ ವಿವರಣೆ ಪಡೆಯುತ್ತಿದ್ದರು. ಆಗ ಮುಖ್ಯಮಂತ್ರಿ ಈ ಆದೇಶ ನೀಡಿದರು.

ಸಿಎಂ ಹೇಳಿದ್ದೇನು?:  ಪ್ರಕಾಶ್‌ ಒಳ್ಳೆಯ ವ್ಯಕ್ತಿ. ಹತ್ಯೆ ವಿಷಯ ತಿಳಿದು ತೀವ್ರ ನೋವಾಯಿತು. ಹಾಡಹಗಲೇ ರಸ್ತೆಯಲ್ಲಿ ಕೊಲೆ ಮಾಡುತ್ತಾರಂದ್ರೆ ಇಟ್ಸ್‌ ವೆರಿ ಬ್ಯಾಡ್‌, ಯಾವಾಗ ಕೊಲೆಗಾರನನ್ನು ಹಿಡಿಯುತ್ತೀರೋ ಗೊತ್ತಿಲ್ಲ. ಅದು ನಿಮ್ಮ ಜವಾಬ್ದಾರಿ. ಹಂತಕರನ್ನು ಶೂಟೌಟ್‌ ಮಾಡಿ, ಯಾವುದೇ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮೊಬೈಲ್‌ ಮೂಲಕವೇ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಇದಾದ ಬೆನ್ನಲ್ಲೇ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಅವರು, ಪ್ರಕರಣ ಕುರಿತು ಮಾಹಿತಿ ಪಡೆಯುವ ವೇಳೆ ಎನ್‌ಕೌಂಟರ್‌ ಪದ ಭಾವನಾತ್ಮಕ ಪ್ರತಿಕ್ರಿಯೆಯೇ ಹೊರತು ಆದೇಶವಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

click me!