ನಗರಗಳನ್ನು ಬೆಳಗಲು ಕೃತಕ ಚಂದಿರ ಸೃಷ್ಟಿ!

By Web DeskFirst Published Oct 20, 2018, 1:14 PM IST
Highlights

 ಆಗಸದಲ್ಲಿ ಮೂರು ಕೃತಕ ಚಂದಿರನನ್ನು ಸೃಷ್ಟಿಸಿ, ಭೂಮಿಗೆ ಬೆಳಕು ಹರಿಸಲು ಸಜ್ಜಾಗುತ್ತಿದೆ ಚೀನಾ.

ಬೀಜಿಂಗ್‌ :  ನಗರಪ್ರದೇಶಗಳ ಬೀದಿಗಳನ್ನು ವಿದ್ಯುತ್‌ರಹಿತವಾಗಿ ಬೆಳಗಲು ಚೀನಾ ಮಹಾನ್‌ ಯೋಜನೆ ಹಾಕಿಕೊಂಡಿದೆ. ಆಗಸದಲ್ಲಿ ಮೂರು ಕೃತಕ ಚಂದಿರನನ್ನು ಸೃಷ್ಟಿಸಿ, ಭೂಮಿಗೆ ಬೆಳಕು ಹರಿಸಲು ಸಜ್ಜಾಗುತ್ತಿದೆ. 2020ಕ್ಕೆ ಚೀನಾದ ಮೊದಲ ಮಾನವನಿರ್ಮಿತ ಪ್ರಾಯೋಗಿಕ ಕೃತಕ ಚಂದಿರ ಉಡಾವಣೆಯಾಗಲಿದೆ. ಅದರ ಯಶಸ್ಸನ್ನು ನೋಡಿಕೊಂಡು 2022ರೊಳಗೆ ಇನ್ನೂ ಮೂರು ಚಂದಿರನನ್ನು ಆಗಸಕ್ಕೆ ರವಾನಿಸುವ ಪ್ರಯತ್ನ ಭರದಿಂದ ಸಾಗುತ್ತಿದೆ.

ಕೃತಕ ಚಂದಿರ ಎಂಬುದು ಒಂದು ಉಪಗ್ರಹ. ಅದರಲ್ಲಿ ಬೃಹದಾಕಾರದ ಮಸೂರ ಅಥವಾ ಕನ್ನಡಿ ಇರುತ್ತದೆ. ಭೂಮಿಯಿಂದ ಉಡಾವಣೆಯಾದ ಬಳಿಕ ಆ ಕನ್ನಡಿ ಚಾಚಿಕೊಂಡು ಸೂರ್ಯ ಹೊರಸೂಸುವ ಕಿರಣಗಳನ್ನು ಭೂಮಿಯತ್ತ ಪ್ರತಿಫಲಿಸುತ್ತದೆ. ಹೀಗಾಗಿ ಹುಣ್ಣಿಮೆ ಚಂದಿರನಿಗಿಂತ ಪ್ರಕಾಶವಾದ ಬೆಳಗನ್ನು ಚೀನಾದ ಆಯ್ದ ನಗರ ಪ್ರದೇಶಗಳು ಕಾಣಲಿವೆ. ಬೆಳಕು ಎಷ್ಟುಪ್ರಕಾಶಮಾನವಾಗಿರಬೇಕು ಎಂಬುದನ್ನು ನಿಯಂತ್ರಿಸುವ ವ್ಯವಸ್ಥೆಯೂ ಈ ಉಪಗ್ರಹಗಳಲ್ಲಿ ಇರುತ್ತದೆ.

ಸೂರ್ಯನ ಬೆಳಕನ್ನು 3600 ಚದರ ಕಿ.ಮೀ.ಯಿಂದ 6400 ಚದರ ಕಿ.ಮೀ. ವ್ಯಾಪ್ತಿ ಪ್ರದೇಶದವರೆಗೆ ಪ್ರತಿಫಲಿಸಬಹುದು. ಚೀನಾದ ಕೃತಕ ಚಂದಿರಗಳು ನೈಸರ್ಗಿಕ ಚಂದಿರನಿಗಿಂತ ಗರಿಷ್ಠ ಎಂಟು ಪಟ್ಟು ಪ್ರಕಾಶಮಾನವಾದ ಬೆಳಕನ್ನು ಭೂಮಿಗೆ ನೀಡಲಿವೆ.

ನೈಸರ್ಗಿಕ ಚಂದ್ರ ಭೂಮಿಯಿಂದ 3.80 ಲಕ್ಷ ಕಿ.ಮೀ. ದೂರದಲ್ಲಿದ್ದರೆ, ಚೀನಾದ ಕೃತಕ ಚಂದ್ರ ಭೂಮಿಯಿಂದ 500 ಕಿ.ಮೀ. ಅಂತರದಲ್ಲಿರುತ್ತದೆ. 50 ಚದರ ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ವಿದ್ಯುತ್ತಿನಿಂದ ಬೆಳಗಲು 1200 ಕೋಟಿ ರು. ಖರ್ಚಾಗುತ್ತದೆ. ಕೃತಕ ಉಪಗ್ರಹದಿಂದ ಅಷ್ಟೂಹಣ ಉಳಿತಾಯವಾಗುತ್ತದೆ ಎಂದು ತಜ್ಞರನ್ನು ಉಲ್ಲೇಖಿಸಿ ಚೀನಾದ ಮಾಧ್ಯಮವೊಂದು ವರದಿ ಮಾಡಿದೆ.

ಭೂಕಂಪದಂತಹ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಸಂತ್ರಸ್ತ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಕಡಿತವಾಗುತ್ತದೆ. ಅಂತಹ ಸಂದರ್ಭದಲ್ಲಿ ಕೃತಕ ಚಂದಿರನನ್ನು ಬಳಸಿಕೊಂಡು ಬೆಳಕು ಹರಿಸಬಹುದಾಗಿದೆ ಎಂದು ವರದಿ ತಿಳಿಸಿದೆ.

ಆರಂಭಕ್ಕೂ ಮುನ್ನವೇ ವಿರೋಧ:

ಈ ನಡುವೆ, ಚೀನಾದ ಕೃತಕ ಚಂದಿರನಿಂದ ರಾತ್ರಿಯೂ ಹಗಲಿನಂತೆ ಕಾಣುತ್ತದೆ. ಇದರಿಂದ ಪ್ರಾಣಿಗಳು ಹಾಗೂ ಸಸ್ಯಗಳ ಹಗಲು- ರಾತ್ರಿ ಚಕ್ರಕ್ಕೆ ತೊಡಕಾಗುತ್ತದೆ ಎಂಬ ಟೀಕೆಗಳೂ ವ್ಯಕ್ತವಾಗಿದೆ. ಆದರೆ ಪ್ರಯೋಗವನ್ನು ಮರುಭೂಮಿಯಲ್ಲಿ ಮಾಡಲಾಗುತ್ತದೆ. ಅದೂ ಅಲ್ಲದೆ ಕೃತಕ ಚಂದಿರನ ಬೆಳಕನ್ನು ನಿಯಂತ್ರಿಸಬಹುದಾಗಿರುತ್ತದೆ. ಜನರಿಗೆ ಆಗಸದಲ್ಲಿ ಈ ಚಂದಿರ ಹೊಳೆಯುತ್ತಿರುವ ಒಂದು ನಕ್ಷತ್ರದಂತೆ ಕಾಣಿಸಿಕೊಳ್ಳುತ್ತದೆ ಎಂದು ವರದಿ ಹೇಳಿದೆ.

ಪ್ರಯತ್ನ ಇದೇ ಮೊದಲಲ್ಲ

ರಾತ್ರಿ ವೇಳೆಯ ಚಟುವಟಿಕೆಗಳ ಅನುಕೂಲಕ್ಕಾಗಿ ಮಾನವ ನಿರ್ಮಿತ ಚಂದಿರನ ಸೃಷ್ಟಿಗೆ ಅಮೆರಿಕ ಹಾಗೂ ರಷ್ಯಾ ಕೂಡ ಯತ್ನಿಸಿದ್ದವು. ಆದರೆ ಯಶಸ್ಸು ಸಿಗಲಿಲ್ಲ.

‘ಬ್ಯಾನರ್‌’ ಎಂಬ ಹೆಸರಿನಲ್ಲಿ 90ರ ದಶಕದಲ್ಲಿ ರಷ್ಯಾ ಇಂತಹದ್ದೊಂದು ಪ್ರಯೋಗ ಮಾಡಿತ್ತು.

ಉತ್ತರ ರಷ್ಯಾದ ಸೂರ್ಯನ ಬೆಳಕು ವಂಚಿತ ಪ್ರದೇಶಗಳಿಗೆ ಬೆಳಕು ನೀಡಲು ಮಾನವನಿರ್ಮಿತ ಚಂದಿರನನ್ನು ಸೃಷ್ಟಿಮಾಡಿತ್ತು.

ಆದರೆ ಬಾಹ್ಯಾಕಾಶದಲ್ಲಿ ರಷ್ಯಾದ ಮಸೂರ ತೆರೆದುಕೊಳ್ಳುವಲ್ಲಿ ವಿಫಲವಾಯಿತು. ಹೀಗಾಗಿ ಯೋಜನೆ ಕೈಬಿಡಲಾಗಿತ್ತು.

click me!