ಮತ್ತೆ ಕೇಂದ್ರ ಸರ್ಕಾರ-ನ್ಯಾಯಾಂಗದ ಮಧ್ಯೆ ಸಂಘರ್ಷ?

First Published Apr 27, 2018, 9:04 AM IST
Highlights

ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ನ್ಯಾ. ಕೆ.ಎಂ.ಜೋಸೆಫ್‌ ಅವರನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡಬೇಕೆಂಬ ಕೊಲಿಜಿಯಂನ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸ್‌ ಕಳುಹಿಸಿದ್ದು, ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಕೇರಳ ಮೂಲದ ಸಾಕಷ್ಟುಜಡ್ಜ್‌ಗಳು ಇರುವುದರಿಂದ ಈ ಶಿಫಾರಸನ್ನು ಮರುಪರಿಶೀಲನೆ ನಡೆಸಬೇಕೆಂದು ಕೋರಿದೆ.

ನವದೆಹಲಿ : ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ನ್ಯಾ. ಕೆ.ಎಂ.ಜೋಸೆಫ್‌ ಅವರನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡಬೇಕೆಂಬ ಕೊಲಿಜಿಯಂನ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸ್‌ ಕಳುಹಿಸಿದ್ದು, ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಕೇರಳ ಮೂಲದ ಸಾಕಷ್ಟುಜಡ್ಜ್‌ಗಳು ಇರುವುದರಿಂದ ಈ ಶಿಫಾರಸನ್ನು ಮರುಪರಿಶೀಲನೆ ನಡೆಸಬೇಕೆಂದು ಕೋರಿದೆ.

ಜೋಸೆಫ್‌ ಅವರ ಹೆಸರಿನ ಜೊತೆಗೇ ಕೊಲಿಜಿಯಂ ಶಿಫಾರಸು ಮಾಡಿದ್ದ ಹಿರಿಯ ನ್ಯಾಯವಾದಿ ಇಂದು ಮಲ್ಹೋತ್ರಾ ಅವರ ನೇಮಕಾತಿಗೆ ಮೊನ್ನೆಯಷ್ಟೇ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ, ನ್ಯಾ. ಜೋಸೆಫ್‌ ಅವರ ಹೆಸರನ್ನು ಮರುಪರಿಶೀಲನೆ ಮಾಡಬೇಕು ಎಂದು ಕೇಂದ್ರ ಕಾನೂನು ಸಚಿವಾಲಯವು ಗುರುವಾರ ಕೊಲಿಜಿಯಂಗೆ ಪತ್ರ ಬರೆದಿದೆ. ಈ ಪತ್ರಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಒಪ್ಪಿಗೆಯೂ ಇದೆ ಎಂದು ತಿಳಿಸಿದೆ.

ನ್ಯಾ. ಜೋಸೆಫ್‌ ಅವರ ನೇಮಕಾತಿ ಶಿಫಾರಸನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನ ಕೊಲಿಜಿಯಂಗೆ ಮರಳಿ ಕಳುಹಿಸುವುದರೊಂದಿಗೆ ಕೇಂದ್ರ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ಇತ್ತೀಚೆಗೆ ನಡೆಯುತ್ತಿರುವ ಸಂಘರ್ಷ ಇನ್ನೊಂದು ಆಯಾಮ ಪಡೆದಂತಾಗಿದೆ. ಇದಕ್ಕೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪಕ್ಷ, ದೇಶದ ನ್ಯಾಯಾಂಗ ಅಪಾಯದಲ್ಲಿದೆ. ಇದರ ವಿರುದ್ಧ ನ್ಯಾಯಾಂಗವೇ ಒಗ್ಗಟ್ಟಿನಿಂದ ಎದ್ದು ನಿಲ್ಲದಿದ್ದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ ಎಂದು ಹೇಳಿದೆ.

ಕಾರಣ ಏನು?:

ನ್ಯಾ. ಜೋಸೆಫ್‌ ಅವರ ಹೆಸರು ಮರುಪರಿಶೀಲನೆ ನಡೆಸುವಂತೆ ತಾನು ಮಾಡಿದ ಶಿಫಾರಸಿಗೆ ಕೇಂದ್ರ ಸರ್ಕಾರ ನೀಡಿದ ಪ್ರಮುಖ ಕಾರಣ - ಪ್ರಾದೇಶಿಕ ಪ್ರಾತಿನಿಧ್ಯ.

‘ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ಕೇರಳದವರು. ಅವರಲ್ಲದೆ ಕೇರಳ ಮೂಲದವರಾದ ನ್ಯಾ. 
ಟಿ.ಬಿ. ರಾಧಾಕೃಷ್ಣನ್‌ ಹಾಗೂ ನ್ಯಾ. ಆ್ಯಂಟನಿ ಡೊಮಿನಿಕ್‌ ಅವರೂ ಕ್ರಮವಾಗಿ ಛತ್ತೀಸ್‌ಗಢ ಹಾಗೂ ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಕೇರಳ ಮೂಲದ ಇನ್ನೊಬ್ಬ ನ್ಯಾಯಮೂರ್ತಿಯನ್ನೇ ಸುಪ್ರೀಂಕೋರ್ಟ್‌ಗೆ ನೇಮಕ ಮಾಡಿಕೊಳ್ಳುವ ಅಗತ್ಯವಿದೆಯೇ? ಸುಪ್ರೀಂಕೋರ್ಟ್‌ಗೆ ಜಡ್ಜ್‌ಗಳನ್ನು ನೇಮಕ ಮಾಡಿಕೊಳ್ಳುವಾಗ ಹಿರಿತನಕ್ಕೊಂದೇ ಬೆಲೆ ನೀಡುವ ಅಗತ್ಯವಿಲ್ಲ, ಪ್ರಾದೇಶಿಕ ನ್ಯಾಯವನ್ನೂ ಗಮನಿಸಬೇಕು ಎಂಬುದು ನಮ್ಮ ಅಭಿಪ್ರಾಯ’ ಎಂದು ಕೇಂದ್ರ ಸರ್ಕಾರ ಹೇಳಿದೆ.

‘ಸುಪ್ರೀಂ ಕೋರ್ಟ್‌ಗೆ ಜಡ್ಜ್‌ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಬಗ್ಗೆ ಸುಪ್ರೀಂಕೋರ್ಟ್‌ ಸ್ವತಃ ರೂಪಿಸಿರುವ ಹಲವು ಮಾನದಂಡಗಳಿಗೆ ಹಾಗೂ ನೀಡಿದ ಆದೇಶಗಳಿಗೆ ಜೋಸೆಫ್‌ ಅವರ ಆಯ್ಕೆ ತಕ್ಕುದಾಗಿಲ್ಲ. ಈ ಹಿಂದೆಯೂ ಸುಪ್ರೀಂಕೋರ್ಟ್‌ಗೆ ಹಾಗೂ ವಿವಿಧ ನ್ಯಾಯಾಲಯಗಳಿಗೆ ಜಡ್ಜ್‌ಗಳನ್ನು ನೇಮಕ ಮಾಡುವ ಕುರಿತ ಕೊಲಿಜಿಯಂನ ಶಿಫಾರಸುಗಳ ವಿಷಯದಲ್ಲಿ ಕೇಂದ್ರ ಸರ್ಕಾರ ಈ ಮಾದರಿಯ ನಿಷ್ಕರ್ಷೆ ಮಾಡಿತ್ತು’ ಎಂದು ತಿಳಿಸಿದೆ.

ಸುಪ್ರೀಂಕೋರ್ಟ್‌ ಹಾಗೂ ವಿವಿಧ ರಾಜ್ಯಗಳ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದಲ್ಲಿ 5 ಹಿರಿಯ ನ್ಯಾಯಮೂರ್ತಿಗಳ ಕೊಲಿಜಿಯಂ ಇದೆ. ಅದರಲ್ಲಿರುವ ಇತರ 4 ಹಿರಿಯ ನ್ಯಾಯಮೂರ್ತಿಗಳೆಂದರೆ ಜೆ.ಚಲಮೇಶ್ವರ್‌, ರಂಜನ್‌ ಗೊಗೋಯ್‌, ಮದನ್‌ ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌.


ಭಾರತದ ನ್ಯಾಯಾಂಗ ಅಪಾಯದಲ್ಲಿದೆ. ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ನ್ಯಾಯಾಂಗವೇ ಒಗ್ಗಟ್ಟಾಗದಿದ್ದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ಅವರು (ಕೇಂದ್ರ ಸರ್ಕಾರ) ಹೈಕೋರ್ಟ್‌ಗಳಲ್ಲಿ ತಮ್ಮದೇ ಜನರನ್ನು ತುಂಬಲು ನೋಡುತ್ತಿದ್ದಾರೆ. ದೇಶದಲ್ಲಿ 1079 ಜಡ್ಜ್‌ಗಳ ಹುದ್ದೆಯಿದೆ, ಆದರೆ 410 ಹುದ್ದೆಗಳು ಖಾಲಿಯಿವೆ. ನ್ಯಾಯಾಂಗದ ಸ್ವಾತಂತ್ರ್ಯಕ್ಕಾಗಿ ಯಾರು ಎದ್ದು ನಿಲ್ಲುತ್ತಾರೆಂಬುದನ್ನು ನಾವು ನೋಡಬೇಕಿದೆ. ಇನ್ನೂ ಇವನ್ನೆಲ್ಲ ನೋಡಿಕೊಂಡು ಕೂರಲು ಸಾಧ್ಯವಿಲ್ಲ ಎಂದು ನ್ಯಾಯಾಂಗವು ಕೇಂದ್ರ ಸರ್ಕಾರಕ್ಕೆ ಗಟ್ಟಿಯಾಗಿ ಹೇಳಲಿದೆಯೇ?

- ಕಪಿಲ್‌ ಸಿಬಲ್‌, ಕಾಂಗ್ರೆಸ್‌ ನಾಯಕ

ನ್ಯಾಯಮೂರ್ತಿಗಳ ನೇಮಕದ ಶಿಫಾರಸನ್ನು ಮರುಪರಿಶೀಲನೆ ನಡೆಸುವಂತೆ ಹಿಂದಿರುಗಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ವಾಪಸ್‌ ಕಳಿಸಿದ್ದರೆ ನಾವು ನೋಡಿಕೊಳ್ಳುತ್ತೇವೆ.

- ನ್ಯಾ. ದೀಪಕ್‌ ಮಿಶ್ರಾ, ಭಾರತದ ಮುಖ್ಯ ನ್ಯಾಯಾಧೀಶ

click me!