ಮನೆ ಖರೀದಿಸುತ್ತೀರಾ? ಡೌನ್ ಪೇಮೆಂಟ್ ಮಾಡುವ ಮುಂಚೆ ಇವುಗಳ ಬಗ್ಗೆ ಗಮನವಿರಲಿ

By ಆಧಿಲ್ ಶೆಟ್ಟಿFirst Published Jul 19, 2017, 6:03 PM IST
Highlights

ಮನೆಗಾಗಿ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡುವುದು ಹಾಗೂ ಅಂತಿಮವಾಗಿ ಅದನ್ನು ಖರೀದಿಸುವುದು ಜೀವನದ ಒಂದು ಅತೀ ದೊಡ್ಡ ಆರ್ಥಿಕ ನಿರ್ಧಾರವಾಗಿದೆ. ಸೂಕ್ತವಾದ ಸ್ಥಳವನ್ನು ಹಾಗೂ ಅಪಾರ್ಟ್’ಮೆಂಟನ್ನು ಆಯ್ಕೆ ಮಾಡಲು ಹೆಚ್ಚೇನೂ ಪೂರ್ವಸಿದ್ಧತೆಯ ಅಗತ್ಯವಿಲ್ಲ, ಆದರೆ ಅದಕ್ಕಾಗಿ ಹಣವನ್ನು ಹೊಂದಿಸುವುದು ದೀರ್ಘಕಾಲಿಕ ಯೊಜನೆಯಾಗಿರುತ್ತದೆ..

ಮನೆಗಾಗಿ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡುವುದು ಹಾಗೂ ಅಂತಿಮವಾಗಿ ಅದನ್ನು ಖರೀದಿಸುವುದು ಜೀವನದ ಒಂದು ಅತೀ ದೊಡ್ಡ ಆರ್ಥಿಕ ನಿರ್ಧಾರವಾಗಿದೆ. ಸೂಕ್ತವಾದ ಸ್ಥಳವನ್ನು ಹಾಗೂ ಅಪಾರ್ಟ್’ಮೆಂಟನ್ನು ಆಯ್ಕೆ ಮಾಡಲು ಹೆಚ್ಚೇನೂ ಪೂರ್ವಸಿದ್ಧತೆಯ ಅಗತ್ಯವಿಲ್ಲ, ಆದರೆ ಅದಕ್ಕಾಗಿ ಹಣವನ್ನು ಹೊಂದಿಸುವುದು ದೀರ್ಘಕಾಲಿಕ ಯೊಜನೆಯಾಗಿರುತ್ತದೆ..

ಪ್ರಾಪರ್ಟಿ ಬೆಲೆಗಳು ಹೆಚ್ಚುತ್ತಿರುವ ಈ ಸನ್ನಿವೇಶದಲ್ಲಿ, ಮನೆಗಳನ್ನು ಖರೀದಿಸಲು ಹೆಚ್ಚಿನವರು ಬ್ಯಾಂಕುಗಳಿಂದ ಗೃಹಸಾಲ ಪಡೆಯುತ್ತಾರೆ. ಬ್ಯಾಂಕುಗಳು ಸಾಮಾನ್ಯವಾಗಿ ಪ್ರಾಪರ್ಟಿಯ ಶೇ. 80 ಮೌಲ್ಯವನ್ನು ಒದಗಿಸುತ್ತವೆ, ಉಳಿದ ಶೇ.20 ಹಣವನ್ನು ಗ್ರಾಹಕರು ಖುದ್ದಾಗಿ ಹೊಂದಿಸಬೇಕಾಗುತ್ತದೆ. ಗ್ರಾಹಕರು ಡೌನ್’ಪೇಮೆಂಟ್ (ಮುಂಗಡ ಹಣ) ಮಾಡಿದ ಬಳಿಕ ಬ್ಯಾಂಕುಗಳು ಗೃಹಸಾಲವನ್ನು ಒದಗಿಸುತ್ತವೆ.  ಮೊದಲ ಬಾರಿಗೆ ಮನೆ ಖರೀದಿಸುವವರಿಗೆ, ಮುಂಗಡ ಹಣವನ್ನು ಹೊಂದಿಸುವುದು ಭಾರೀ ಸವಾಲಿನ ಕೆಲಸವಾಗಿರುತ್ತದೆ, ಮನೆ ಖರೀದಿಸಲು ಡೌನ್ ಪೇಮೆಂಟ್’ಗಾಗಿ ಹಣವನ್ನು ಹೊಂದಿಸುವಾಗ ಈ ಪ್ರಮುಖ 5 ವಿಷಯಗಳನ್ನು ತಪ್ಪದೇ ಗಮನದಲ್ಲಿಡಿ.

1. ಯೋಜನೆ ಹಾಗೂ ಬಜೆಟಿಂಗ್:

ಮನೆ ಖರೀದಿಸುವ ಮುನ್ನಾ ಆ ಬಗ್ಗೆ ಯೋಜನೆ ಹಾಕಿಕೊಳ್ಳುವುದು ಬಹಳ ಮುಖ್ಯ.  ಅದಕ್ಕಾಗಿ ಹಣವನ್ನು ಹೊಂದಿಸುವುದು ದೀರ್ಘಕಾಲಿಕ ಕೆಲಸವಾಗಿರುವುದರಿಂದ ಹಣಕಾಸು ಶಿಸ್ತು ಹಾಗೂ ಸಮರ್ಪಕ ಯೋಜನೆಯ ಅಗತ್ಯವಿದೆ.  ಮನೆ ಖರೀದಿಸುವ ಯೋಜನೆವುಳ್ಳವರು ಮ್ಯೂಚುವಲ್ ಫಂಡ್ಸ್,  ಫಿಕ್ಸೆಡ್ ಡಿಪಾಸಿಟ್ ಇತ್ಯಾದಿಗಳ ಮೂಲಕ ಹಣವನ್ನು ಉಳಿತಾಯ ಮಾಡಬಹುದು.  ನಿಮ್ಮ ಬಳಿ ಇರುವ ಸಮಯ ಹಾಗೂ ಅನುಕೂಲತೆ ಆಧಾರದಲ್ಲಿ ನಿಮಗೆ ಬೇಕಾದ ರೀತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ, ನಿಮಗೆ 3 ವರ್ಷಗಳ ಬಳಿಕ ಮನೆ ಖರೀದಿಸುವ ಯೋಜನೆ  ಇದೆ, ಅದಕ್ಕೆ ರೂ. 10 ಲಕ್ಷ ಮುಂಗಡ ಹಣ ಹೊಂದಿಸಬೇಕಾಗುತ್ತದೆ ಎಂದು ಭಾವಿಸಿ. ಹಾಗಾದಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ನೀವು ಪ್ರತಿ ತಿಂಗಳು ರೂ. 25,000ವನ್ನು ಹೂಡಿದರೆ, ವಾರ್ಷಿಕ ಶೇ. 12ರ ದರದಂತೆ, 3 ವರ್ಷ ಕಳೆದಾಗ ನಿಮ್ಮ ಬಳಿ ರೂ.10 ಲಕ್ಷಕ್ಕಿಂತ ಹೆಚ್ಚು ಹಣ ಜಮೆಯಾಗುತ್ತದೆ.

2. ಸಂಬಂಧಿಕರು ಅಥವಾ ಗೆಳೆಯರಿಂದ ಸಾಲ:

ಮನೆ ಖರೀದಿಸುವ ವೇಳೆ ನಿಮ್ಮ ಬಳಿ ಮುಂಗಡಕ್ಕಾಗಿ ಅಷ್ಟೊಂದು ಹಣವಿಲ್ಲದಿದ್ದರೆ, ಉಳಿದ ಮೊತ್ತಕ್ಕಾಗಿ ನಿಮ್ಮ ಮಿತ್ರರು ಅಥವಾ ಸಂಬಂಧಿಕರಿಂದ ಅಲ್ಪಾವಧಿ ಸಾಲ ಪಡೆಯಿರಿ. ಕೊರತೆಯಿರುವ ಹಣವನ್ನು ಹೊಂದಿಸಲು ಮಾತ್ರ ಸಾಲ ಪಡೆಯಿರಿ; ಹಾಗೂ ಸಾಲ ಪಡೆಯುವ ಮುಂಚೆ ಮರುಪಾವತಿಯ ಸಮರ್ಪಕವಾದ ಯೋಜನೆ ನಿಮ್ಮ ಬಳಿ ಇರಲಿ.

3. ಬ್ಯಾಂಕ್ ನೀಡುವ LTV ಯನ್ನು ಖಚಿತಪಡಿಸಿಕೊಳ್ಳಿ:

ಸಾಮಾನ್ಯವಾಗಿ ಬ್ಯಾಂಕುಗಳು ಪ್ರಾಪರ್ಟಿಯ ಶೇ. 80 ರಷ್ಟು  ಲೋನ್ ಟು ವ್ಯಾಲ್ಯೂ (LTV)ವನ್ನು ಒದಗಿಸುತ್ತವೆ. ಸಾಲದ ಮೊತ್ತ ರೂ.30 ಲಕ್ಷಕ್ಕಿಂತ ಕಡಿಮೆಯಿದ್ದಲ್ಲಿ ಬ್ಯಾಂಕುಗಳು ಪ್ರಾಪರ್ಟಿ ಮೌಲ್ಯದ ಶೇ. 90ರಷ್ಟು ಸಾಲವನ್ನು ನೀಡುತ್ತವೆ.  ಗ್ರಾಹಕನ ಮರುಪಾವತಿ ಸಾಮರ್ಥ್ಯವನ್ನೂ ಕೂಡಾ ಬ್ಯಾಂಕುಗಳು ಈ ಸಂದರ್ಭದಲ್ಲಿ ಪರಿಗಣಿಸುತ್ತವೆ. ಆದುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್’ಗಳನ್ನು ಉತ್ತಮವಾಗಿಟ್ಟುಕೊಳ್ಳಿ.

4. ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಬೇಡಿ:

ಸಾಲ ಪಡೆಯುವಾಗ ನಿಮ್ಮ ಹಣಕಾಸು ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ನಿಮ್ಮ ಮೇಲೆ ಹಾಕಿಕೊಳ್ಳಬೇಡಿ. ಬ್ಯಾಂಕುಗಳು ಶೇ. 80ರಷ್ಟು ಸಾಲವನ್ನು ಒದಗಿಸುತ್ತವೆಯಾದರೂ, ಕಂತುಗಳ ಪ್ರಮಾಣ ನಿಮಗೆ ಅನುಕೂಲಕರವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.  ನಿಮ್ಮ ಬಳಿ ಸಾಕಾಷ್ಟು ಹಣವಿದ್ದಲ್ಲಿ, ನಿಮ್ಮ ಜೇಬಿನಿಂದಲಲೇ ಪಾವತಿಸಿ ಅಥವಾ ಬಂಧು-ಮಿತ್ರರಿಂದ ಮೃದು ಸಾಲ ಪಡೆಯಿರಿ. ನಿಮ್ಮ ಕಂತಿನ ಮೊತ್ತ ನಿಮ್ಮ  ಹಣಕಾಸು ಸಮಸ್ಯೆಗೆ ಕಾರಣವಾಗದಿರಲಿ, ಈ ಬಗ್ಗೆ ಎಚ್ಚರವಿರಲಿ

5. ಸ್ಟ್ಯಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕವನ್ನು ಸೇರಿಸಲು ಮರೆಯಬೇಡಿ:

ಸಾಮಾನ್ಯವಾಗಿ ಮನೆ ಖರೀದಿಸುವಾಗ ಇತರೆ ಶುಲ್ಕಗಳನ್ನು ಪರಿಗಣಿಸಲು ಗ್ರಾಹಕರು ಮರೆತುಬಿಡುತ್ತಾರೆ. ಸ್ಟ್ಯಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕಗಳನ್ನು ಗ್ರಾಹಕರು ತಮ್ಮ ಜೇಬಿನಿಂದಲೇ ಭರಿಸಬೇಕಾಗುತ್ತದೆ.  ನೋಂದಣಿ ಶುಲ್ಕ ಅಂದಾಜು ರೂ. 30000 ಆಗಿದ್ದರೆ, (ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ)  ಸರ್ಕಲ್ ದರ/ ರೆಡಿ ರೆಕಾನರ್ ದರದ ಅಥವಾ ಪ್ರಾಪರ್ಟಿ ಮೌಲ್ಯದ ಸುಮಾರು ಶೇ.5ರಷ್ಟಿರುತ್ತದೆ.  

ಮುಂಗಡ ಪಾವತಿಗಾಗಿ ಹಣವನ್ನು ಹೊಂದಿಸುವಾಗ, ತುರ್ತು ಪರಿಸ್ಥಿತಿಗಳಿಗೆ ನಿಮ್ಮ ಬಳಿ ಸಾಕಾಷ್ಟು ಹಣವಿರುವುದನ್ನು ಖಚಿತ ಪಡಿಸಿಕೊಳ್ಳಿ. ಕಂತುಗಳನ್ನು ಪಾವತಿಸಲು ನಿಮ್ಮ ಬಳಿ ಯಾವಾಗಲು ಒಂದು ಪರ್ಯಾಯ ವ್ಯವಸ್ಥೆಯಿರುವುದನ್ನು ಖಾತ್ರಿಪಡಿಸಿಕೊಳ್ಳಿ.

- ಆಧಿಲ್ ಶೆಟ್ಟಿ

ಸಿಇಓ, ಬ್ಯಾಂಕ್ ಬಝಾರ್.ಕಾಮ್

click me!