ಇನ್ಸ್ ಪೆಕ್ಟರ್ ಆದ ಬಾಲಕ : ಹುಡುಗನ ಆಸೆ ಈಡೇರಿಸಿದ ಬೆಂಗಳೂರು ಪೊಲೀಸರು

Jul 24, 2018, 11:31 AM IST

ಬೆಂಗಳೂರು[ಜು.24]: ಇದೊಂದು ಮನಕುಲುಕುವ ಬಾಲಕನ ಕತೆ. ದೊಡ್ಡವನಾದ ಮೇಲೆ ತಾನು ಇನ್ಸ್ ಪೆಕ್ಟರ್  ಆಗುವ ಕನಸು ಕಂಡಿದ್ದ ಈ ಬಾಲಕ. ಆದರೆ ವಿಧಿ ಯಾಕೋ ಬಾಲಕನ ಬಾಳಲ್ಲಿ ಮುಳ್ಳಾಗಿತ್ತು. 

ಚಿಂತಾಮಣಿ ಮೂಲದ 12 ವರ್ಷದ ಶಶಾಂಕ್ ವಿಧಿಯ ಅವಕೃಪೆಗೊಳಗಾಗಿದ್ದ ಬಾಲಕ. ಸಣ್ಣ ವಯಸ್ಸಿಗೆ ಪೆನಿಶೇನಿಯಾ ಎಂಬ ಮಾರಕ ಕ್ಯಾನ್ಸ್'ರ್ ರೋಗ ಹುಡುಗನ ದೇಹದಲ್ಲಿ ಅಂಟಿಕೊಂಡು ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ತನ್ನ ಎಸ್ಐ ಆಗುವ ಗುರಿ ಎಲ್ಲಿ ಮರೀಚಿಕೆಯಾಗುವುದೊ ಎಂಬ ಆತಂಕದಲ್ಲಿದ್ದ ಶಶಾಂಕನಿಗೆ ನೀರೆರೆದು ಪೋಷಿಸಿದ್ದು ಬೆಂಗಳೂರು ವಿವಿಪುರಂ ಪೊಲೀಸರು.

ಪೋಷಕರು ಹಾಗೂ ಠಾಣೆಯ ಅಧಿಕಾರಿಗಳ ಸಮ್ಮುಖದಲ್ಲಿ ಶಶಾಂಕನನ್ನು ಒಂದು ದಿನದ ಮಟ್ಟಿಗೆ ಇನ್ಸ್ ಪೆಕ್ಟರ್  ಆಗಿ ಅಧಿಕಾರ ವಹಿಸಿದರು. ಚಾರ್ಜ್ ತೆಗೆದುಕೊಂಡ ಬಾಲಕನಿಗೆ ಇನ್ಸ್ ಪೆಕ್ಟರ್ ರಾಜು ಹೂಗುಚ್ಛ ನೀಡಿ ಸ್ವಾಗತಿಸಿದರು. ಠಾಣೆಯಲ್ಲಿ ಕೇಕ್ ಕಟ್ ಮಾಡಿ ನೆರದಿದ್ದವರೆಲ್ಲರಿಗೂ ಸಿಹಿ ಹಂಚಲಾಯಿತು. ಒಂದು ದಿನವಾದರೂ ತನ್ನ ಮಗನ ಆಸೆ ಈಡೇರಿದ್ದಕ್ಕೆ ಪೋಷಕರು ಕೂಡ ಸಂತಸ ಪಟ್ಟರು.