ರಾಜಸ್ಥಾನದಲ್ಲಿ ರಾಜೇಗೆ ಹೀನಾಯ ಸೋಲು, ಬಹುಮತದತ್ತ ಕಾಂಗ್ರೆಸ್

By Web DeskFirst Published Dec 12, 2018, 9:16 AM IST
Highlights

ಮರುಭೂಮೀಲಿ ಮುದುಡಿದ ಕಮಲ ರಾಜಸ್ಥಾನದಲ್ಲಿ ರಾಜೇಗೆ ಹೀನಾಯ ಸೋಲು, ಬಹುಮತದತ್ತ ಕಾಂಗ್ರೆಸ್ |ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವ ಪರಿಪಾಠ ಮುಂದುವರಿಕೆ |  2019 ರ ಲೋಕ ಚುನಾವಣೆಯ ಗೆಲುವಿನ ಕನಸಿನಲ್ಲಿದ್ದ ಬಿಜೆಪಿಗೆ ಆಘಾತ 

ಜೈಪುರ (ಡಿ. 12): ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತಾರೂಢ ಸರ್ಕಾರವನ್ನು ಕಿತ್ತೊಗೆದು, ಪ್ರತಿಪಕ್ಷವನ್ನು ಅಧಿಕಾರಕ್ಕೆ ಕೂರಿಸುವ ಸಂಪ್ರದಾಯ ಮರುಭೂಮಿ ನಾಡು ರಾಜಸ್ಥಾನದಲ್ಲಿ 90 ರ ದಶಕದಿಂದ ಚಾಚೂತಪ್ಪದೇ ಪಾಲನೆಯಾಗುತ್ತಿದೆ. 

ಅದರಂತೆ, 5 ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದ ‘ಮಹಾರಾಣಿ’ ವಸುಂಧರಾ ರಾಜೇ ಅವರನ್ನು ಗದ್ದುಗೆಯಿಂದ ಹೀನಾಯವಾಗಿ ಕೆಳಗಿಳಿಸಿರುವ ಮತದಾರರು ಸಂಘಟಿತವಾಗಿ, ಹೊಸ ಹುರುಪಿನೊಂದಿಗೆ ಹೋರಾಡಿದ ಕಾಂಗ್ರೆಸ್ ಅನ್ನು ಬಹುಮತದತ್ತ ಕೊಂಡೊಯ್ದಿದ್ದಾರೆ. ವಿಸ್ತೀರ್ಣದಲ್ಲೇ ದೇಶದಲ್ಲೇ ನಂ.1 ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ ಬಿಜೆಪಿ ಕಮಲ ಮುದುಡಿದ್ದು, ಕಾಂಗ್ರೆಸ್ ದರ್ಬಾರ್ ಆರಂಭವಾಗುವ ಸುಳಿವು ಸಿಕ್ಕಿದೆ.

ವಸುಂಧರಾ ರಾಜೇ ಅವರು ಆಡಳಿತ ವಿರೋಧಿ ಅಲೆಯಲ್ಲಿ ಸಿಲುಕಿದ್ದು, ಹೀನಾಯವಾಗಿ ಸೋಲಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಶೇಕಡಾವಾರು ಮತ ನೋಡಿದರೆ ಎರಡೂ ಪಕ್ಷಗಳ ನಡುವೆ ಜಿದ್ದಾಜಿದ್ದಿ ಕದನವೇ ನಡೆದಿದೆ. ಆದರೆ ರಾಜೇ ನಾಯಕತ್ವದಲ್ಲಿ 90 ಸ್ಥಾನಗಳನ್ನು ಕಳೆದುಕೊಂಡು ಬಿಜೆಪಿ ಹೀನಾಯ ಸೋಲು ಕಂಡಿದೆ.

ಇತರರೂ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದರಿಂದ ಕಾಂಗ್ರೆಸ್ಸಿಗೆ ಸರಳ ಬಹುಮತದತ್ತ ಸಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಾತುಗಾರಿಕೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಂತ್ರಗಾರಿಕೆಗಳನ್ನೆಲ್ಲಾ ಮೆಟ್ಟಿನಿಂತು ಕಾಂಗ್ರೆಸ್ ಗಳಿಸಿರುವ ಸರಳ ಬಹುಮತ ಕಡಿಮೆ ಸಾಧನೆಯಲ್ಲ. ರಾಜಸ್ಥಾನದಲ್ಲಿ ವಸುಂಧರಾ ಅವರೇ ಬಿಜೆಪಿಯ ಪರಮೋಚ್ಚ ನಾಯಕಿ. ಮಧ್ಯಪ್ರದೇಶದ ಗ್ವಾಲಿಯರ್ ರಾಜಮನೆತನದವರಾದ ಅವರು ರಾಜಕೀಯದಲ್ಲೂ ಮಹಾರಾಣಿಯಂತೆಯೇ ವರ್ತಿಸುತ್ತಾರೆ ಎಂಬುದು ಅವರ ವಿರುದ್ಧ ಕೇಳಿ ಬರುವ ದೂರು.

ಬಿಜೆಪಿಯ ದೆಹಲಿ ನಾಯಕತ್ವ ಬದಲಾಗಿದ್ದರೂ, ಅದಕ್ಕೆ ವಸುಂಧರಾ ರಾಜೇ ಅವರು ಸೊಪ್ಪು ಹಾಕಿದವರಲ್ಲ. ಹೀಗಾಗಿ ರಾಜೇ ಅವರನ್ನು ನಿಯಂತ್ರಿಸುವುದು ಬಿಜೆಪಿ ವರಿಷ್ಠರಿಗೆ ಅಡಕತ್ತರಿಯಲ್ಲಿ ಸಿಲುಕಿದ ಅನುಭವ ತಂದಿತ್ತು. ವಸುಂಧರಾ
ವಿರುದ್ಧ ಕ್ರಮ ಕೈಗೊಂಡರೆ ಅವರು ಬಂಡೇಳುತ್ತಾರೆ, ಸುಮ್ಮನೆ ಬಿಟ್ಟರೆ ಪಕ್ಷದ ಪ್ರಭಾವ ಕುಸಿಯುತ್ತದೆ ಎಂಬುದು ನಾಯಕರ ಆತಂಕವಾಗಿತ್ತು.

ಕೆಲವು ನಾಯಕರಂತೂ ರಾಜೇ ಸೋತರೇ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದಿದ್ದರು ಎಂಬ ವರದಿಗಳು ಬಂದಿದ್ದವು. ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ನಡೆದ ಲೋಕಸಭೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿತ್ತು. ವಿಧಾನಸಭೆ ಹಾಗೂ ಲೋಕಸಭೆ ಎರಡರಲ್ಲೂ ಅಧಿಕಾರಕ್ಕೆ ಕಳೆದುಕೊಂಡು ಸೊರಗಿದ್ದ ಆ ಪಕ್ಷ, ಉಪಚುನಾವಣೆಗಳ ಮೂಲಕ ಹುರುಪು ಪಡೆದುಕೊಂಡಿತ್ತು.

ಹಿರಿಯ ನಾಯಕ ಅಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್ ಅವರ ಅನುಭವವನ್ನು ಸಮ್ಮಿಳನಗೊಳಿಸಿ, ಜಾತಿಜಾತಿ ಒಗ್ಗೂಡಿಸಿ, ರಾಜೇ ವೈಫಲ್ಯಗಳನ್ನು ಬಿಂಬಿಸಿ ಕಾಂಗ್ರೆಸ್ ನಡೆಸಿದ ಪ್ರಚಾರ ಫಲ ಕೊಟ್ಟಿದೆ. ಬಹುಮತದತ್ತ ಸಾಗಿರುವ ಕಾಂಗ್ರೆಸ್ಸಿನಿಂದ ಈಗ ಸಿಎಂ ಯಾರಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಗೆಹ್ಲೋಟ್, ಪೈಲಟ್ ಪೈಕಿ ಒಬ್ಬರಿಗೆ ಪಟ್ಟ ಕಟ್ಟುವುದು ಸುಲಭವಂತೂ ಇಲ್ಲ.

ಕಾಂಗ್ರೆಸ್ ಮುನ್ನಡೆಗೆ ಕಾರಣಗಳು

1. ಪ್ರತಿ ಐದು ವರ್ಷಕ್ಕೊಮ್ಮೆ ಬದಲಾಗುವ ಮತದಾರರ ಮನಸ್ಥಿತಿಯ ಲಾಭ ಸಹಜವಾಗಿಯೇ ಕಾಂಗ್ರೆಸ್ಸಿಗೆ ಆಯಿತು.
2.  ರಾಜಸ್ಥಾನದಲ್ಲಿ ವಸುಂಧರಾ ವಿರುದ್ಧ ಮತದಾರರಲ್ಲಿ ಸಿಟ್ಟಿತ್ತು. ಮತದಾರರ ಮುಂದೆ ಕಾಂಗ್ರೆಸ್ ಬಿಟ್ಟು ಮೂರನೇ ಆಯ್ಕೆ ಇರಲಿಲ್ಲ.
3. ಹಿರಿಯ- ಕಿರಿಯ ನಾಯಕರನ್ನು ಒಗ್ಗೂಡಿಸಿ, ಜಾತಿ ಮತಗಳ ಕ್ರೋಢೀಕರಣಕ್ಕೆ ಕಾಂಗ್ರೆಸ್ ನೀಡಿದ ಮುತುವರ್ಜಿ ಫಲ ನೀಡಿತು.
4. ಅಧಿಕಾರದಲ್ಲಿದ್ದರೂ ಜನರ ಸಮಸ್ಯೆ ಬಗೆಹರಿಸದ, ಮತದಾರರಿಂದ ದೂರವೇ ಉಳಿದ ‘ಮಹಾರಾಣಿ’ ರಾಜೇ ವೈಫಲ್ಯ ಬಿಂಬಿಸುವಲ್ಲಿ ಕಾಂಗ್ರೆಸ್ ಸಫಲತೆ ಕಂಡಿತು.
5.  ಜಿಎಸ್‌ಟಿ, ಅಪನಗದೀಕರಣದಿಂದಾದ ಸಮಸ್ಯೆಗಳನ್ನು ಯಶಸ್ವಿಯಾಗಿ ಕಾಂಗ್ರೆಸ್ ಮತದಾರರ ಮುಂದಿಟ್ಟಿತು.

ಕಮಲ ಮುದುಡಿದ್ದು ಏಕೆ?
1. ವಸುಂಧರಾ ರಾಜೇ ಕಳೆದ ಬಾರಿ ಭಾರಿ ಭರವಸೆಗಳೊಂದಿಗೆ ಅಧಿಕಾರ ಹಿಡಿದಿದ್ದರು. ಗೆದ್ದ ಬಳಿಕ ಬಹುತೇಕ ಭರವಸೆಗಳನ್ನು ಮರೆತುಬಿಟ್ಟಿದ್ದರು.
2. ಸಿಎಂ ಆದರೂ ಅಂತರ ಕಾಯ್ದುಕೊಂಡು ಜನರ ಕೈಗೇ ಸಿಗದಾದರು. ಶಾಸಕರೂ ಅದೇ ಹಾದಿ ತುಳಿದರು.
3. ಆಡಳಿತ ವಿರೋಧಿ ಅಲೆಯ ಸೂಚನೆ ಗ್ರಹಿಸಿ 51 ಹಾಲಿ ಶಾಸಕರಿಗೆ ಟಿಕೆಟ್ ವಸುಂಧರಾ ನಿರಾಕರಿಸಿದರು.
4. ಉದ್ಯೋಗ ಸೃಷ್ಟಿಯಾಗಲಿಲ್ಲ. ರೈತರ ಸಮಸ್ಯೆಗಳು ಬೆಟ್ಟದಷ್ಟಾದವು. ನೀರಿನ ಸಮಸ್ಯೆ ಚುನಾವಣಾ ವಿಷಯವಾಯಿತು.
5. ಬಿಜೆಪಿ ವರಿಷ್ಠರ ಜತೆ ಉತ್ತಮ ಸಂಬಂಧ ಹೊಂದುವ ಮೂಲಕ, ಸಮನ್ವಯ ಸಾಧಿಸಬಹುದಿತ್ತು. ‘ಮಹಾರಾಣಿ’ ಹಿನ್ನೆಲೆ ಅದನ್ನು ತಡೆಯಿತು. 

 

click me!