ಬಳ್ಳಾರಿಯ ವನ್ಯಜೀವಿ ಸಂರಕ್ಷಕ ಸಮದ್ ಕೊಟ್ಟೂರು: ಅಸಾಮಾನ್ಯ ಕನ್ನಡಿಗ

By Suvarna Web DeskFirst Published Oct 27, 2016, 3:31 PM IST
Highlights

ಬಳ್ಳಾರಿಯಲ್ಲಿ ಹಸಿರು ಹೆಚ್ಚಳಗೊಳ್ಳಲು, ಹಕ್ಕಿಪಕ್ಷಿಗಳ ಇಂಪಾದ ದನಿ ಸದಾ ಕೇಳುವಂತಾಗಲು ಸದಾ ಶ್ರಮಿಸುವ ಹಾಗೂ ಶ್ರಮಿಸುತ್ತಿರುವ ವ್ಯಕ್ತಿ ಅಬ್ದುಲ್ ಸಮದ್ ಕೊಟ್ಟೂರು. ಶಿಕ್ಷಣ ತಜ್ಞ ಪ್ರವೃತ್ತಿಯಲ್ಲಿ ಪರಿಸರ ಹೋರಾಟಗಾರ. ಎಲ್ಲಕ್ಕಿಂತ ಹೆಚ್ಚಾಗಿ ಬಳ್ಳಾರಿಯ ಪರಿಸರ ವಿಜ್ಞಾನಿ.

ಬಳ್ಳಾರಿ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಧೂಳು ತುಂಬಿದ ರಸ್ತೆಗಳು, ಭೂಮಿಯ ಒಡಲನ್ನೆಲ್ಲಾ ಬಗೆದು ರಾಶಿ ರಾಶಿ ಬಿದ್ದಿರುವ ಮಣ್ಣಿನ ದಿಬ್ಬಗಳು. ಸುಡು ಬಿಸಿಲು. ಆದರೆ, ಬಳ್ಳಾರಿಯಲ್ಲೂ ಅರೆ ಮಲೆನಾಡಿದೆ. ಬಳ್ಳಾರಿಯಲ್ಲೂ ಸಾವಿರಾರು ಎಕರೆ ಅರಣ್ಯ ಪ್ರದೇಶ ನಳನಳಿಸುತ್ತಿದೆ. ಬಿಸಿಲ ನಾಡಿನಲ್ಲಿ ಬಣ್ಣ ಬಣ್ಣದ ಖಗಮೃಗಗಳಿವೆ. ಪ್ರಕೃತಿಯ ಮೇಲೆ ಸತತ ಅತ್ಯಾಚಾರ ನಡೆದಿದ್ದರೂ ಮತ್ತೆ ಚಿಗುರುವ, ಹನಿ ಮಳೆಯಿಂದ ಹಸಿರುಕ್ಕಿಸುವ ಪ್ರದೇಶಗಳು ಸಾಕಷ್ಟಿವೆ.

ಬಳ್ಳಾರಿಯಲ್ಲಿ ಹಸಿರು ಹೆಚ್ಚಳಗೊಳ್ಳಲು, ಹಕ್ಕಿಪಕ್ಷಿಗಳ ಇಂಪಾದ ದನಿ ಸದಾ ಕೇಳುವಂತಾಗಲು ಸದಾ ಶ್ರಮಿಸುವ ಹಾಗೂ ಶ್ರಮಿಸುತ್ತಿರುವ ವ್ಯಕ್ತಿ ಅಬ್ದುಲ್ ಸಮದ್ ಕೊಟ್ಟೂರು. ಬಳ್ಳಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿರುವ ಇವರು ಸಮದ್ ಕೊಟ್ಟೂರು ಎಂದೇ ಪ್ರಸಿದ್ಧರು. ಶಿಕ್ಷಣ ತಜ್ಞ ಪ್ರವೃತ್ತಿಯಲ್ಲಿ ಪರಿಸರ ಹೋರಾಟಗಾರ. ಎಲ್ಲಕ್ಕಿಂತ ಹೆಚ್ಚಾಗಿ ಬಳ್ಳಾರಿಯ ಪರಿಸರ ವಿಜ್ಞಾನಿ. ಪರಿಸರಾಸಕ್ತರ ತಂಡ ಕಟ್ಟಿಕೊಂಡು ಹಳ್ಳಿ ಹಳ್ಳಿ ತಿರುಗುತ್ತಾ ಮಕ್ಕಳಲ್ಲಿ, ಜನರಲ್ಲಿ, ಶಿಕ್ಷಕರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.

ಶಿಕ್ಷಣ ತಜ್ಞರಾಗಿರುವ ಇವರು ಪ್ರತಿಯೊಂದು ವಿಷಯದ ಬಗ್ಗೆ ಅತ್ಯಂತ ಸೂಕ್ಷ್ಮ ಹಾಗೂ ಆಳವಾದ ಜ್ಞಾನ ಹೊಂದಿದ್ದಾರೆ. ಪ್ರತಿ ವರ್ಷ ಬಳ್ಳಾರಿ ವಲಯಕ್ಕೆ ವಲಸೆ ಬರುವ ಹಕ್ಕಿಗಳ ಅಧ್ಯಯನ ನಡೆಸುತ್ತಾರೆ. ಪ್ರತಿ ವರ್ಷ ವನ್ಯಜೀವಿಗಳ ಗಣತಿ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಪ್ರತಿ ಮರ, ಪ್ರತಿ ಗಿಡದ ಬಗ್ಗೆಯೂ ವೈಜ್ಞಾನಿಕ ಮಾಹಿತಿಯ ಕಣಜ ಕೊಟ್ಟೂರು.

ಗುಡೇಕೋಟೆ ಕರಡಿಧಾಮ, ದರೋಜಿ ಕರಡಿಧಾಮಗಳ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಮದ್ ಕೊಟ್ಟೂರು ಅವರು ಆಸುಪಾಸಿನ ಪರಿಸರದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ವಿರುದ್ಧವೂ ಹೋರಾಟ ನಡೆಸಿದ್ದರು. ಅಲ್ಲದೇ, ಅತ್ಯಂತ ಅಪರೂಪದ ಜೀವಜಾಲವನ್ನು ಹೊಂದಿರುವ, 250 ಎಕರೆಗೂ ಮೀರಿದ ಅಂಕಸಮುದ್ರ ಕೆರೆ ಪ್ರದೇಶವನ್ನು ಸಂರಕ್ಷಣಾ ಮೀಸಲು ಎಂದು ಘೋಷಿಸುವಲ್ಲಿ ಸಾಕಷ್ಟು ದೊಡ್ಡ ಹೋರಾಟವನ್ನೇ ಮಾಡಿದರು. ಸಮದ್ ಇಡೀ ಕೆರೆಯ ಅಧ್ಯಯನ ಮಾಡಿ, ಯಾವ್ಯಾವ ಜಾತಿಯ ಹಕ್ಕಿಗಳು ಇಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಎನ್ನುವ ವೈಜ್ಞಾನಿಕ ವರದಿ ನೀಡಿದ ಆಧಾರದ ಮೇಲೆ ಈ ಪ್ರದೇಶವನ್ನು ಸಂರಕ್ಷಣಾ ಮೀಸಲು ಎಂದು ಘೋಷಿಸಲಾಯಿತು.

ತುಂಗಭದ್ರಾ ನದಿ ಪಾತ್ರದಲ್ಲಿರುವ ವಿಶಿಷ್ಟ ಹಾಗೂ ಅಪರೂಪದ ನೀರುನಾಯಿಗಳ ಅಧ್ಯಯನ ಮಾಡಿದ ಸಮದ್, ಅವುಗಳನ್ನು ಉಳಿಸಿಕೊಳ್ಳಲು ಬೃಹತ್ ನದಿ ಪಾತ್ರವನ್ನು ನೀರು ನಾಯಿ ಸಂರಕ್ಷಣಾ ಪ್ರದೇಶ ಎಂದು ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ ಯಶಸ್ವಿಯೂ ಆದರು.

ಪ್ರತಿ ತಿಂಗಳೂ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಶಿಬಿರಗಳನ್ನು ಸಮದ್ ನಡೆಸುತ್ತಾರೆ. ಪಕ್ಷಿ ವೀಕ್ಷಣೆಯ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳನ್ನು ಪರಿಸರದ ಒಲವು ಬೆಳೆಸುವ ಸಮದ್ ಭವಿಷ್ಯದ ಪರಿಸರ ವಿಜ್ಞಾನಿಗಳನ್ನಾಗಿ ರೂಪಿಸುತ್ತಿದ್ದಾರೆ.

ಯಾವುದೇ ಹೋರಾಟ ಅಥವಾ ಶ್ರಮಕ್ಕೆ ಬೆಲೆ ಸಿಗುವುದು ಮಾಡಿದ ಕೆಲಸಕ್ಕೆ ಮೂರ್ತ ರೂಪ ಸಿಕ್ಕಿದಾಗ. ನೂರಾರು ಎಕರೆ ಪ್ರದೇಶಗಳನ್ನು ಸಂರಕ್ಷಣಾ ಮೀಸಲು ಪ್ರದೇಶಗಳು ಎಂದು ಘೋಷಿಸುವಲ್ಲಿ ನಿಣರ್ಾಯಕ ಪಾತ್ರ ವಹಿಸಿದ ಸಮದ್ರವರು, ಬಳ್ಳಾರಿಯಲ್ಲಿ ಶಾಶ್ವತವಾಗಿ ಹಸಿರು ನೆಲೆ ನಿಲ್ಲುವಂತೆ ಮಾಡಿದ ಹಸಿರು ಯೋಧ.

click me!