ಧರ್ಮಗುರು ಆಶ್ರಮದಲ್ಲಿ 500 ಕೋಟಿ ಅಕ್ರಮ ಆಸ್ತಿ

By Kannadaprabha NewsFirst Published Oct 19, 2019, 8:05 AM IST
Highlights

ಕಳೆದ ಮೂರು ದಿನಗಳಿಂದ ನಡೆಸಲಾದ ಐಟಿ ದಾಳಿ ವೇಳೆ ಧರ್ಮಗುರು ಕಲ್ಕಿಗೆ ಸೇರಿದ ಸುಮಾರು 500 ಕೋಟಿ ರು. ಮೌಲ್ಯದ ಅಕ್ರಮ ಆಸಿ ಪತ್ತೆಯಾಗಿದೆ.

ಹೈದರಾಬಾದ್‌/ಚೆನ್ನೈ [ಅ.19]:  ವಿವಾದಿತ ಧರ್ಮಗುರು ಕಲ್ಕಿ ಭಗವಾನ್‌ಗೆ ಸೇರಿದ ಆಸ್ತಿ-ಪಾಸ್ತಿಗಳ ಮೇಲೆ ಶುಕ್ರವಾರವೂ ಸುಮಾರು 400 ಆದಾಯ ತೆರಿಗೆ ಅಧಿಕಾರಿಗಳು ಆಂಧ್ರಪ್ರದೇಶ, ಹೈದರಾಬಾದ್‌, ಚೆನ್ನೈ ಹಾಗೂ ಬೆಂಗಳೂರಿನ ವಿವಿಧೆಡೆ ದಾಳಿ ಮುಂದುವರಿಸಿದ್ದಾರೆ. ಕಳೆದ ಮೂರು ದಿನಗಳಿಂದ ನಡೆಸಲಾದ ದಾಳಿ ವೇಳೆ ಕಲ್ಕಿಗೆ ಸೇರಿದ ಸುಮಾರು 500 ಕೋಟಿ ರು. ಮೌಲ್ಯದ ಅಕ್ರಮ ಆಸಿ ಪತ್ತೆಯಾಗಿದೆ.

ಕಲ್ಕಿ ಅವರು ಸುಮಾರು 2 ಲಕ್ಷ ಕೋಟಿ ರು.ನಿಂದ 3 ಲಕ್ಷ ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಐಟಿ ಅಧಿಕಾರಿಗಳು ಶಂಕೆ ಹೊಂದಿದ್ದು, ಮುಂದಿನ ದಾಳಿಯ ವೇಳೆ ಇನ್ನಷ್ಟುಅಕ್ರಮಗಳನ್ನು ಪತ್ತೆ ಮಾಡುವ ಸಾಧ್ಯತೆ ಇದೆ.

409 ಕೋಟಿ ರು. ಅಕ್ರಮ ರಸೀದಿ ವಶಕ್ಕೆ:

ದಾಳಿ ಕುರಿತಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಆದರೆ ಎಲ್ಲಿಯೂ ನೇರವಾಗಿ ಕಲ್ಕಿ ಭಗವಾನ್‌ ಎಂದು ಹೇಳಿಕೆಯಲ್ಲಿ ಬರೆಯದೇ ‘ಧರ್ಮಗುರು’ ಎಂದು ಮಾತ್ರ ಉಲ್ಲೇಖಿಸಿದೆ. ‘ಧರ್ಮಗುರುವೊಬ್ಬರಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದಾಗ 2014-15ರಿಂದ ಈವರೆಗೆ ಅವರ ಆಶ್ರಮವು 409 ಕೋಟಿ ರು. ಹಣವನ್ನು ಸ್ವೀಕರಿಸಿದ ರಸೀದಿಗಳು ಪತ್ತೆಯಾಗಿವೆ. ಆದರೆ ಈ ಆದಾಯವನ್ನು ಅವರು ಸರ್ಕಾರದ ಮುಂದೆ ಅಧಿಕೃತವಾಗಿ ಘೋಷಿಸಿಕೊಂಡಿಲ್ಲ’ ಎಂದು ಸಿಬಿಡಿಟಿ ಹೇಳಿದೆ.

‘ಒಟ್ಟು 43.9 ಕೋಟಿ ರು. ನಗದು, 2.5 ದಶಲಕ್ಷ ಡಾಲರ್‌ ವಿದೇಶೀ ಕರೆನ್ಸಿಗಳು, 26 ಕೋಟಿ ರು. ಮೌಲ್ಯದ 88 ಕೇಜಿ ಅಘೋಷಿತ ಚಿನ್ನ, 5 ಕೋಟಿ ರು. ಮೌಲ್ಯದ ವಜ್ರ, 93 ಕೋಟಿ ರು. ಮೌಲ್ಯದ ಅಘೋಷಿತ ಸರಕುಗಳನ್ನು ದಾಳಿಯ ಸಂದರ್ಭದಲ್ಲಿ ಜಪ್ತಿ ಮಾಡಲಾಗಿದೆ. ಈ ಅಘೋಷಿತ ಆಸ್ತಿಯ ಒಟ್ಟು ಮೌಲ್ಯ 500 ಕೋಟಿ ರು. ಆಗಬಹುದು’ ಎಂದು ಸಿಬಿಡಿಟಿ ಹೇಳಿದೆ.

ಇದೇ ವೇಳೆ ದಾಳಿ ವೇಳೆ ಕಲ್ಕಿ ಕುಟುಂಬ ಸದಸ್ಯರು, ತೆರಿಗೆದಾರರ ಸ್ವರ್ಗ ಎನ್ನಲಾದ ದೇಶಗಳಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಮಾಹಿತಿಯೂ ಸಿಕ್ಕಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದೆ.

ಕಲ್ಕಿಗೆ ಅನಾರೋಗ್ಯ?:

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವರದಯ್ಯಪಾಳೆಂ ಎಂಬಲ್ಲಿ ಮುಖ್ಯ ಆಶ್ರಮ ಹೊಂದಿರುವ ಕಲ್ಕಿ ಭಗವಾನ್‌ಗೆ ಅನಾರೋಗ್ಯ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಮಾಡಿ ಇಟ್ಟಿದ್ದಾರೆ ಎನ್ನಲಾದ ಬೇನಾಮಿ ಹಣ ಹಾಗೂ ಆಸ್ತಿಯನ್ನು ಕಲ್ಕಿಯ ಮಗ ಕೃಷ್ಣಮೂರ್ತಿ ಹಾಗೂ ಅಳಿಯ ವಿದೇಶಗಳಿಗೆ ಹವಾಲಾ ಮೂಲಕ ಹಾಗೂ ವಿದೇಶೀ ಭಕ್ತರ ಮೂಲಕ ಸಾಗಿಸಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ಆಫ್ರಿಕಾ ಹಾಗೂ ಕೊಲ್ಲಿ ದೇಶದ ಖತಾರ್‌ನಲ್ಲಿ ಕೂಡ ಕಲ್ಕಿ ಜಮೀನು ಹೊಂದಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಹಾಗೂ ತಮಿಳುನಾಡಿನಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ಜಮೀನು ಖರೀದಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ಆಂಧ್ರಪ್ರದೇಶದ ಕೆಲವು ಮಾಧ್ಯಮ ವರದಿಗಳು ಹೇಳಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ, ಕಲ್ಕಿ ಆಶ್ರಮದ ಮ್ಯಾನೇಜರ್‌ಗಳು ಮಾದಕ ವಸ್ತು ದಂಧೆಯಲ್ಲಿ ಕೂಡ ತೊಡಗಿದ್ದಾರೆನ್ನಲಾಗಿದೆ. ಕಲ್ಕಿ ಆಶ್ರಮದ ಸಿಬ್ಬಂದಿಯ ಮೊಬೈಲ್‌ಗಳನ್ನು ಐಟಿ ಸಿಬ್ಬಂದಿ ಪರಿಶೀಲಿಸಿದಾಗ ‘ಸಂಕೇತಾಕ್ಷರಗಳಲ್ಲಿ’ (ಕೋಡ್‌ ವರ್ಡ್‌) ಕಳಿಸಲಾದ ಸಂದೇಶಗಳು ಲಭ್ಯವಾಗಿವೆ. ಬಾಹ್ಯ ಜಗತ್ತಿಗೆ ಆಶ್ರಮದ ‘ಅವ್ಯವಹಾರ’ ಪತ್ತೆಯಾಗದಂತೆ ಮಾಡಲು ಈ ರೀತಿ ಕೋಡ್‌ವರ್ಡ್‌ಗಳಲ್ಲಿ ಸಂವಹನ ನಡೆಸಲಾಗುತ್ತಿತ್ತು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಯಾರೀ ಕಲ್ಕಿ ಭಗವಾನ್‌?:

ಕಲ್ಕಿ ಭಗವಾನ್‌ರ ಮೂಲ ಹೆಸರು ವಿಜಯಕುಮಾರ್‌ ನಾಯ್ಡು. 1971ರಲ್ಲಿ ಎಲ್‌ಐಸಿಯಲ್ಲಿ ಗುಮಾಸ್ತನಾಗಿ ಕೆಲಸ ಆರಂಭಿಸಿದ ಅವರು, 1980ರ ದಶಕದಲ್ಲಿ ಕೃಷ್ಣಮೂರ್ತಿ ಫೌಂಡೇಶನ್‌ ಎಂಬ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಅವರನ್ನು ಅಕ್ರಮದ ಕಾರಣ ಹೊರದಬ್ಬಲಾಯಿತು. ನಂತರ ತಾವು ದೇವಮಾನವ ಎಂದು ಘೋಷಿಸಿಕೊಂಡ ಕಲ್ಕಿ, ತಮ್ಮದೇ ಆದ ಪಂಥ ಆರಂಭಿಸಿ ಅನೇಕ ಕಡೆ ಆಶ್ರಮ ಆರಂಭಿಸಿದ್ದರು. ಕಲ್ಕಿ ಅವರ ದರ್ಶನ ಪಡೆಯಬೇಕು ಎಂದರೆ ಭಕ್ತರಿಂದ 5000 ರು. ಹಾಗೂ ವಿಶೇಷ ದರ್ಶನಕ್ಕೆ 25 ಸಾವಿರ ರು. ದೇಣಿಗೆ ಪಡೆಯಲಾಗುತ್ತಿತ್ತು. ಇದೇ ರೀತಿ ಹಣ ಗಳಿಸಿ ಅವರು ಸಾಕಷ್ಟುಅಕ್ರಮ ಆಸ್ತಿ ಸಂಪಾದನೆ ಮಾಡಿದರು ಎಂದೂ ಹೇಳಲಾಗಿದೆ.

click me!