ಕೂದಲುದುರಲು ಹಲವು ಕಾರಣಗಳಿವೆ. ಮಾಲಿನ್ಯ, ಆಹಾರ, ಎಸಿ, ಹೀಟ್, ಜೆನೆಟಿಕ್ಸ್ ಎಲ್ಲವೂ ಕೂದಲುದುರಲು ಕಾರಣವಾಗುತ್ತವೆ. ಇದರಿಂದ ಕೂದಲು ತೆಳುವಾಗುವುದಲ್ಲದೆ, ಒಂದು ಹಂತದ ಬಳಿಕ ಉದ್ದ ಬೆಳೆಯಲು ಕೂಡಾ ಅಡ್ಡಿಯಾಗುತ್ತದೆ. ಇದಕ್ಕೆ ಯೋಗದಲ್ಲಿದೆ ಪರಿಹಾರ.
ಕೂದಲುದುರುವಿಕೆ ಹಲವರ ಸಮಸ್ಯೆ. ಟೆನ್ಷನ್, ಎಸಿ, ಮಾಲಿನ್ಯ, ಪೋಷಕಾಂಶಯುಕ್ತ ಆಹಾರದ ಕೊರತೆ, ಸ್ಟ್ರೈಟನರ್, ಕರ್ಲರ್‌ಗಳ ಅತಿಯಾದ ಬಳಕೆ, ಜೆನೆಟಿಕ್ಸ್, ಗಡಸು ನೀರು, ಒಣಚರ್ಮ ಎಲ್ಲವೂ ಕೂದಲಿನ ಮೇಲೆ ದಾಳಿ ಮಾಡುತ್ತವೆ. ಇದರಿಂದ ಮೊದಲೇ ತೆಳುವಾಗಿ ಬಳುಕುವ ಕೂದಲು, ಬಲಹೀನವಾಗಿ ಸೋಲನ್ನೊಪ್ಪಿಕೊಂಡು ನೆಲಕ್ಕೊರಗುತ್ತದೆ. ಇದು ಅಂದಗೆಡಿಸಿ ಹಲವರಲ್ಲಿ ಕೀಳರಿಮೆಗೆ ಕಾರಣವಾಗುತ್ತದೆ. ಆದರೆ, ಕೂದಲನ್ನು ಸೊಂಪಾಗಿ ಬೆಳೆಸಲು ಹಲವು ದಾರಿಗಳಿವೆ. ಉತ್ತಮ ಡಯಟ್, ಮಸಾಜ್ ಜೊತೆಗೆ ಯೋಗ ಕೂಡಾ ನಿಮ್ಮ ನೆರವಿಗೆ ಬರುತ್ತದೆ. ಯೋಗದಿಂದ ದೇಹಕ್ಕೆ ಹಲವಾರು ಲಾಭಗಳಿವೆ. ಆ ಲಾಭಗಳು ಕೂದಲನ್ನು ಬುಡದಿಂದ ಬಲಗೊಳಿಸುವಲ್ಲೂ ನೆರವಾಗುತ್ತವೆ. ಕೂದಲನ್ನು ಸದೃಢಗೊಳಿಸಲು ಈ ಯೋಗಾಸನಗಳು ನಿಮ್ಮ ನೆರವಿಗೆ ಬರುತ್ತವೆ.
ವಜ್ರಾಸನ
ಮೊಣಕಾಲಿನ ಮೇಲೆ ಕುಳಿತು ಎರಡೂ ಪಾದಗಳನ್ನು ಹಿಂದಕ್ಕೆ ಸ್ಟ್ರೆಚ್ ಮಾಡಿ. ನಿಧಾನವಾಗಿ ದೇಹವನ್ನು ಕೆಳಗಿಳಿಸುತ್ತಾ ಹಿಪ್ಸ್ ನಿಮ್ಮ ಅಂಗಾಲುಗಳ ಮೇಲೆ, ತೊಡೆಯು ಕೆಳಕಾಲುಗಳ ಮೇಲೆ ಕುಳಿತುಕೊಳ್ಳಲಿ. ಕೈಗಳನ್ನು ಮೊಣಕಾಲಿನ ಮೇಲಿಟ್ಟು, ಎದೆ, ತಲೆಯನ್ನು ನೇರ ಮಾಡಿ. ಕಣ್ಣುಗಳನ್ನು ಮುಚ್ಚಿ. ನಿಧಾನವಾಗಿ ಧೀರ್ಘವಾದ ಉಸಿರು ತೆಗೆದುಕೊಂಡು 5 ಸೆಕೆಂಡ್ ಉಸಿರನ್ನು ಹಾಗೇ ಹಿಡಿದಿಟ್ಟುಕೊಳ್ಳಿ. ಬಳಿಕ ನಿಧಾನವಾಗಿ ಉಸಿರನ್ನು ಹೊರ ಬಿಡಿ. ಅದೇ ಪೊಸಿಶನ್‌ನಲ್ಲಿ 5ರಿಂದ 10ನಿಮಿಷಗಳ ಕಾಲವಿದ್ದು, ಉಸಿರಾಟ ಪುನರಾವರ್ತಿಸಿ. ದಿನಕ್ಕೆ 2 ಬಾರಿ ಇದನ್ನು ಮಾಡಿ.
undefined
ಹೇಗೆ ಕೆಲಸ ಮಾಡುತ್ತದೆ?
ಪ್ರತಿದಿನ ಈ ಆಸನ ಮಾಡುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ಇದು ನಮ್ಮ ಸ್ನಾಯುಗಳನ್ನು ಬಲಪಡಿಸುವುದರ ಜೊತೆಗೆ ಜೀರ್ಣವ್ಯವಸ್ಥೆಯನ್ನೂ ಗಟ್ಟಿಯಾಗಿಸುತ್ತದೆ. ಇದರಿಂದ ದೇಹವು ಪೋಷಕಾಂಶಗಳನ್ನು ಚೆನ್ನಾಗಿ ಸೆಳೆದುಕೊಳ್ಳುವ ಬಲ ಗಳಿಸುತ್ತದೆ. ಆಹಾರದ ಉತ್ತಮ ಪೋಷಕಾಂಶವೆಲ್ಲವೂ ವೃಥಾ ಪೋಲಾಗದೆ ದೇಹ ಸೇರುತ್ತದೆ. ಇದರ ಪರಿಣಾಮ ನಮ್ಮ ಕೂದಲು ಹಾಗೂ ಚರ್ಮದ ಮೇಲೆ ಗೋಚರವಾಗುತ್ತದೆ.
ಅಧೋಮುಖ ಶ್ವಾನಾಸನ
ಹೊಟ್ಟೆಯ ಮೇಲೆ ಮಲಗಿ ಎರಡೂ ಕೈಗಳನ್ನು ಸೊಂಟದ ಪಕ್ಕದಲ್ಲಿರಿಸಿ. ಕಾಲುಬೆರಳುಗಳು ನೆಲಕ್ಕೆ ಒತ್ತುವಂತಿದ್ದು ತಲೆ ನೆಟ್ಟಗಿರಬೇಕು. ಉಸಿರನ್ನು ನಿಧಾನವಾಗಿ ಒಳಗೆಳೆದುಕೊಳ್ಳುತ್ತಾ ಮೊಣಕೈಗಳನ್ನು ಮುಂದಕ್ಕೆ ತಂದು ಸೊಂಟ ಹಾಗೂ ಹಿಂಭಾಗವನ್ನು ಸಾಧ್ಯವಾದಷ್ಟು ಮೇಲಕ್ಕೆತ್ತಿ. ಅಂಗಾಲುಗಳು ಪೂರ್ಣವಾಗಿ ನೆಲಕ್ಕೂರಿರಲಿ. ದೇಹದ ಸಂಪೂರ್ಣ ಭಾರ ಮುಂದೆ ಚಾಚಿ ನೆಲಕ್ಕೂರಿದ ಅಂಗೈಗಳ ಮೇಲೂ, ಹಿಂದೆ ಚಾಚಿದ ಅಂಗಾಲುಗಳ ಮೇಲೂ ಬೀಳುವಂತೆ ನಿಂತು ತಲೆಯನ್ನು ಎರಡೂ ಕೈಗಳ ಮಧ್ಯೆ ತಂದು ಕಾಲನ್ನು ಬಗ್ಗಿಸದೆ ನೆಲಕ್ಕೆ ತಾಗಿಸಬೇಕು. ಕೆಲ ಸೆಕೆಂಡ್‌ಗಳ ಕಾಲ ಇದೇ ಆಸನದಲ್ಲಿದ್ದು, ಬಳಿಕ ನಿಧಾನವಾಗಿ ಮಲಗಿದ ಪೊಸಿಶನ್‌ಗೆ ಬನ್ನಿ. ಈ ಆಸನವನ್ನು 4ರಿಂದ 5 ಬಾರಿ ಮಾಡಿ. ಪ್ರತಿಯೊಂದರ ನಂತರ 10 ಸೆಕೆಂಡ್ ರೆಸ್ಟ್ ಮಾಡಿ.
ಕೂದಲ ಆರೋಗ್ಯಕ್ಕೆ ಇಲ್ಲಿವೆ ಟಿಪ್ಸ್
ಹೇಗೆ ಕೆಲಸ ಮಾಡುತ್ತದೆ?
ಇದು ಹೊಟ್ಟೆ ಭಾಗದ ಸ್ನಾಯುಗಳನ್ನು ಬಲಗೊಳಿಸುತ್ತದೆ. ಕೈಕಾಲುಗಳು ಸ್ಟ್ರೆಚ್ ಆಗುವುದರಿಂದ ನೀವು ಹೆಚ್ಚು ಫ್ಲೆಕ್ಸಿಬಲ್ ಆಗಿರುತ್ತೀರಿ. ಪ್ರತಿದಿನ ಇದರ ಅಭ್ಯಾಸದಿಂದ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಇದು ನೆತ್ತಿಯ ಫೋಲಿಕಲ್‌ಗಳನ್ನು ಬಲಗೊಳಿಸಿ ಕೂದಲಿನ ಬುಡವನ್ನು ಸ್ಟ್ರಾಂಗ್ ಆಗಿಸುತ್ತದೆ. ಇದು ದೇಹದಲ್ಲಿ ಒತ್ತಡದ ಹಾರ್ಮೋನ್‌ಗಳ ಬಿಡುಗಡೆಯನ್ನೂ ಕಡಿಮೆ ಮಾಡುವುದರಿಂದ ಒತ್ತಡದಿಂದ ಕೂದಲು ಉದುರುವ ಸಂಭವವೂ ಕಡಿಮೆಯಾಗುತ್ತದೆ.
ಉಸ್ಟ್ರಾಸನ
ಮೊಣಕಾಲಲ್ಲಿ ನಿಂತುಕೊಂಡು ಕೈಗಳನ್ನು ಸೊಂಟದ ಪಕ್ಕವಿರಿಸಿ. ಅಂಗಾಲುಗಳು ಚಾವಣಿ ನೋಡುವಂತಿರಲಿ. ನಿಧಾನವಾಗಿ ಕೈಗಳನ್ನು ಅಂಗಾಲುಗಳ ಮೇಲಿರಿಸಿ, ಹಿಮ್ಮುಖವಾಗಿ ಸಾಧ್ಯವಾದಷ್ಟು ಬಾಗಿ. ನಿಮ್ಮ ಹೊಕ್ಕುಳಿನ ಬಳಿ ಸ್ಟ್ರೆಚ್ ಆಗುತ್ತಿರುವುದು ಅರಿವಿಗೆ ಬಾರುವಷ್ಟು ಹಿಂದೆ ಬಾಗಿ. ಇದೇ ಪೊಸಿಶನ್‌ನಲ್ಲಿ 30 ಸೆಕೆಂಡ್ ಕಾಲ ನಿಂತುಕೊಳ್ಳಿ. 5 ಬಾರಿ ಈ ಆಸನ ಪುನರಾವರ್ತಿಸಿ.
ಹೇಗೆ ಕೆಲಸ ಮಾಡುತ್ತದೆ?
ಈ ಆಸನವು ಬೆನ್ನು ಹಾಗೂ ಭುಜದ ಸ್ನಾಯುಗಳನ್ನು ಬಲಗೊಳಿಸಿ ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ. ಮುಟ್ಟು ಸರಿಯಾಗಿ ಆಗದವರಿಗೆ ಈ ಆಸನ ಉತ್ತಮ. ವಜ್ರಾಸನದಂತೆ ಇದೂ ಕೂಡಾ ಹೆಚ್ಚು ನ್ಯೂಟ್ರಿಯೆಂಟ್ಸ್‌ಗಳನ್ನು ದೇಹ ಎಳೆದುಕೊಳ್ಳುವಂತೆ ಮಾಡುತ್ತದೆ. ಜೊತೆಗೆ ಹಿಂದೆ ಬಗ್ಗಿದಾಗ ತಲೆಗೆ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಕೂದಲುಗಳ ಬುಡ ಸದೃಢವಾಗುತ್ತದೆ.
ಕಪಾಲಬಾತಿ ಪ್ರಾಣಾಯಾಮ
ಚಕ್ಕಳಮಟ್ಟೆ ಹಾಕಿ ಕುಳಿತುಕೊಳ್ಳಿ. ಬೆನ್ನು ನೇರವಾಗಿರಲಿ. ಕಣ್ಣುಗಳನ್ನು ಮುಚ್ಚಿ ಧೀರ್ಘವಾದ ಉಸಿರೆಳೆದುಕೊಳ್ಳಿ. ಈಗ ನಿಮ್ಮ ಹೊಟ್ಟೆಯಲ್ಲಿ ಒತ್ತಡ ಗೊತ್ತಾಗುವಷ್ಟು ಜೋರಾಗಿ ಉಸಿರನ್ನು ಹೊರಬಿಡಿ. ನಾಲ್ಕು ನಿಮಿಷಗಳ ಕಾಲ ಇದನ್ನು ಪುನರಾವರ್ತಿಸಿ.
ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಹೇಗೆ ಕೆಲಸ ಮಾಡುತ್ತದೆ?
ಇದು ಬಹಳ ಸುಲಭವಾದ ಪ್ರಾಣಾಯಾಮವಾಗಿದ್ದು, ಪ್ರತಿದಿನ ಮಾಡುವುದರಿಂದ ರಕ್ತ ಸಂಚಲನ ಸರಾಗಗೊಳಿಸುತ್ತದೆ. ಇದರಿಂದ ಕೂದಲು ಉತ್ತಮ ಪೋಷಕಾಂಶಗಳನ್ನು ಪಡೆದು ಬಲವಾಗುತ್ತವೆ.