ಸಾಕಷ್ಟು ತಿನ್ನದಿದ್ದರೆ ದೇಹ ಹೇಗೆಲ್ಲ ಪ್ರತಿಕ್ರಿಯಿಸುತ್ತದೆ ಗೊತ್ತಾ?

By Web Desk  |  First Published Aug 18, 2019, 2:28 PM IST

ದೇಹಕ್ಕೆ ಬೇಕಾಗುವಷ್ಟು ತಿನ್ನದಿದ್ದಾಗ ಅದರಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ. ಶಕ್ತಿಹೀನತೆ ಹಾಗೂ ಉದಾಸೀನ ಮೈಗಂಟುತ್ತವೆ. ದೇಹದ ಎಲ್ಲ ಅಂಗಾಂಗಗಳಿಗೆ ಕೆಲಸ ಮಾಡಲು ಬೇಕಾಗುವಷ್ಟು ಎನರ್ಜಿ ಸಿಗುವುದಿಲ್ಲ. ಇದರಿಂದ ಯಾವ ಅಂಗ ಯಾವಾಗ ಧರಣಿ ಹೂಡುತ್ತದೋ ಹೇಳಲಾಗುವುದಿಲ್ಲ. 


ದಪ್ಪಗಾಗಿರುವವರು ತೆಳ್ಳಗಾಗುವ ಆಸೆಯಲ್ಲಿ ಅದೆಷ್ಟೆಲ್ಲ ಸರ್ಕಸ್ ಮಾಡುತ್ತಾರೋ ದೇವರಿಗೇ ಗೊತ್ತು. ಒಂದಷ್ಟು ದಿನ ಉಪವಾಸ, ಮತ್ತಷ್ಟು ದಿನ ಬರೀ ಹಣ್ಣುಹಂಪಲು, ಇನ್ನಷ್ಟು ದಿನ ಬರೀ ಜ್ಯೂಸ್ ಕುಡಿಯುವುದು... ಯಾರು ಏನು ಸಲಹೆ ನೀಡಿದರೂ ಅದನ್ನು ಟ್ರೈ ಮಾಡಿ ನೋಡುವವರು ಹಲವರು. ಇನ್ನು ಕೆಲವರು ದಿನದ ಆಹಾರ ಮಟ್ಟವನ್ನು ಅರ್ಧಕ್ಕರ್ಧ ಇಳಿಸಿಬಿಡುತ್ತಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ, ಈಗಲೇ ಈ ಚಟಕ್ಕೆ ಬೈಬೈ ಹೇಳಿ.

ಏಕೆ ಅಂದ್ರಾ? ತಜ್ಞರ ಪ್ರಕಾರ, ಈ ಸರ್ಕಸ್‌ಗಳೆಲ್ಲ ಬೇಡ, ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರ ಸೇವಿಸಿದರೆ ಸಾಕು, ತೂಕ ನಿಯಂತ್ರಣದಲ್ಲಿಡಬಹುದು. ಅದು ಬಿಟ್ಟು ಉಪವಾಸ ಗಿಪವಾಸ ಅಂತ ಮಾಡ್ತಾ ಕೂತ್ರೆ ರೋಗ ನಿರೋಧಕ ವ್ಯವಸ್ಥೆಯ ಮೇಲೆ ಅದು ಅಡ್ಡ ಪರಿಣಾಮ ಬೀರುತ್ತದೆ. ಜೊತೆಗೆ, ದೇಹದ ಒಟ್ಟಾರೆ ಕೆಲಸದ ಮೇಲೆ ಅದರಿಂದ ತೊಂದರೆಯಾಗಬಲ್ಲದು. ದೇಹಕ್ಕೆ ಬೇಕಾದಷ್ಟು ತಿನ್ನದಿದ್ದರೆ ಅದರಿಂದ ಏನೇನಾಗುತ್ತದೆ ಗೊತ್ತಾ?

Latest Videos

ಒಂದೋ ಗೋಧಿ, ಇಲ್ಲ ಅನ್ನ, ಎರಡೂ ಒಟ್ಟಿಗೆ ಒಳ್ಳೇದಲ್ಲನೆನಪಿಡಿ...

ಸುಸ್ತು

ದೇಹ ಹಾಗೂ ವಯಸ್ಸು ಕೇಳಿದಷ್ಟು ತಿನ್ನದಿದ್ದರೆ ನಿಮ್ಮ ಕೆಲಸಕಾರ್ಯಗಳಿಗೆ ಬೇಕಾಗುವಷ್ಟು ಎನರ್ಜಿ ಸಿಗುವುದಿಲ್ಲ. ಆಗ ಯಾವುದೇ ಕೆಲಸ ಮಾಡ ಹೋದರೂ ದೇಹ ಸಹಕಾರ ನೀಡುವುದಿಲ್ಲ. ಸುಸ್ತೆಂದು ಕೂರತೊಡಗುತ್ತದೆ. ಇದು ದೇಹದ ಒಟ್ಟಾರೆ ಮೆಟಾಬಾಲಿಸಂ ಮೇಲೆ ಪರಿಣಾಮ ಬೀರುತ್ತದೆ.

ಪದೇ ಪದೆ ಕಾಯಿಲೆ ಬೀಳುವುದು

ಕಡಿಮೆ ತಿನ್ನುವುದರಿಂದ ದೇಹಕ್ಕೆ ಸಮತೋಲಿತ ಆಹಾರ ಸಿಗುವುದಿಲ್ಲ. ನಿರಂತರವಾಗಿ ಕಡಿಮೆ ತಿನ್ನುತ್ತಿದ್ದರೆ ಅದು ದೇಹವು ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನೇ ಕುಂದಿಸುತ್ತದೆ. ಕಾಯಿಲೆ ಹರಡುವ ಬ್ಯಾಕ್ಟೀರಿಯಾ, ವೈರಸ್‌ಗಳನ್ನು ಎದುರಿಸಲು ಸೋಲುತ್ತದೆ. ಇದರಿಂದ ಶೀತ, ಜ್ವರದಂತ ಕಾಯಿಲೆಗಳು ಪದೇ ಪದೆ ಅಟ್ಯಾಕ್ ಮಾಡುತ್ತಲೇ ಇರುತ್ತವೆ. 

ಕೂದಲುದುರುವಿಕೆ

2013ರಲ್ಲಿ ಪ್ರಕಟವಾದ ಅಧ್ಯಯನ ವರದಿಯಂತೆ, ಕಡಿಮೆ ತಿನ್ನುವುದರಿಂದ ಕೂದಲುದುರುವ ಸಮಸ್ಯೆ ಶುರುವಾಗುತ್ತದೆ. ಪ್ರೋಟೀನ್, ಮಿನರಲ್ಸ್, ಎಸ್ಸೆನ್ಷಿಯಲ್ ಫ್ಯಾಟಿ ಆ್ಯಸಿಡ್ಸ್ ಹಾಗೂ ವಿಟಮಿನ್ಸ್ ಕೊರತೆಯಿಂದ ಕೂದಲುದುರುತ್ತದೆ. ಅಷ್ಟೇ ಅಲ್ಲ, ಕೂದಲ ಬಣ್ಣ ಹಾಗೂ ಸ್ಟ್ರಕ್ಚರ್ ಬದಲಾಗುತ್ತದೆ. 

ಮೋಶನ್ ಸಿಕ್‌ನೆಸ್‌ನಿಂದ ಹೊರಬರೋಕೆ ಇಲ್ಲಿವೆ ಮನೆಮದ್ದು!

ರಿಪ್ರೊಡಕ್ಟಿವ್ ಸಮಸ್ಯೆಗಳು

ಸರಿಯಾಗಿ ತಿನ್ನದಿದ್ದರೆ ಪೋಷಕಾಂಶಗಳ ಕೊರತೆಯು ಸೆಕ್ಸ್ ಹಾರ್ಮೋನ್ಸ್‌ಗಳನ್ನು ಕೂಡಾ ಏರುಪೇರು ಮಾಡುತ್ತದೆ. ರಕ್ತ ಸಂಚಲನ, ಉಸಿರಾಟ ಪ್ರಕ್ರಿಯೆಯ ಮೇಲೆ ಕೂಡಾ  ಅಡ್ಡ ಪರಿಣಾಮ ಬೀರುತ್ತದೆ. ಸಂಶೋಧಕರ ಪ್ರಕಾರ ಕ್ಯಾಲೋರಿ ಕಡಿಮೆಯಾದಲ್ಲಿ ಅದರಿಂದ ಪುರುಷರು ಹಾಗೂ ಮಹಿಳೆಯರಲ್ಲಿ ಪುನರುತ್ಪಾದನಾ ಸಾಮರ್ಥ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ. 

ನಿರಂತರ ಚಳಿ

ಮಾನವ ದೇಹದ ಉಷ್ಣತೆಯನ್ನು ಹಲವಾರು ಸಂಗತಿಗಳು ಸೇರಿ ನಿರ್ವಹಿಸುತ್ತಿರುತ್ತವೆ. ಅದರಲ್ಲಿ ಅವರು ದೈನಂದಿನ ತೆಗೆದುಕೊಳ್ಳುವ ಕ್ಯಾಲೋರಿಯೂ ಹೌದು. ಕ್ಯಾಲೋರಿ ಕಡಿಮೆಯಾದಾಗ, ದೇಹದ ಉಷ್ಣತೆ ಮೇಲೆ ಅದು ಪರಿಣಾಮ ಬೀರಿ ಹೆಚ್ಚಿನ ಸಮಯ ಚಳಿಯಿಂದ ಒದ್ದಾಡುವಂತಾಗುತ್ತದೆ. 

ತೂಕ ಇಳಿಸಲು ಕ್ಲೋರೋಫಿಲ್ ವಾಟರ್ ಎಂಬ ಹೊಸ ಟ್ರೆಂಡ್!

ಮಲಬದ್ದತೆ

ತುಂಬಾ ಕಡಿಮೆ ತಿನ್ನುವುದರಿಂದ ಮಲಬದ್ದತೆ ಉಂಟಾಗುತ್ತದೆ. ವ್ಯಕ್ತಿಯು ಕಡಿಮೆ ತಿಂದಾಗ, ದೇಹವು ಕಡಿಮೆ ಆಹಾರವನ್ನು ಮಲವಾಗಿ ಪರಿವರ್ತಿಸಬೇಕು. ಇದರಿಂದ ಮಲಬದ್ಧತೆ ಉಂಟಾಗುತ್ತದೆ. ನಿಧಾನವಾಗಿ ಇದು ಸಂಪೂರ್ಣ ಜೀರ್ಣವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರಿ, ಉದರ ಸಂಬಂಧಿ ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. 

ಏಕಾಗ್ರತೆ ಕೊರತೆ

ಮೆದುಳಿನ ಮುಖ್ಯ ಇಂಧನವೇ ಗ್ಲೂಕೋಸ್. ಕಾರ್ಬೋಹೈಡ್ರೇಟ್‌ನಿಂದ ಶ್ರೀಮಂತವಾದ ಆಹಾರದಿಂದ ಗ್ಲೂಕೋಸ್ ದೇಹಕ್ಕೆ ಸಿಗುತ್ತದೆ. ಆದರೆ, ಇದು ಸರಿಯಾಗಿ ದೇಹಕ್ಕೆ ಒದಗದಿದ್ದಾಗ ರಕ್ತದಲ್ಲಿ ಸಕ್ಕರೆ ಮಟ್ಟ ಕೆಳಗೆ ಹೋಗುತ್ತದೆ. ಆಗ ಏಕಾಗ್ರತೆ ಕೊರತೆ, ಕಿರಿಕಿರಿ ಎನಿಸುವುದು, ಮಂದವಾದ ಮೆದುಳು ನಮ್ಮದಾಗುತ್ತದೆ.

click me!