'ಬಾಲ್ಡ್ ಕ್ವೀನ್' ಆಗಿ ಬಾಡಿ ಶೇಮಿಂಗ್‌ಗೆ ಸಡ್ಡು ಹೊಡೆದ ಅಕ್ಷಯಾ

By Web Desk  |  First Published Sep 11, 2019, 5:29 PM IST

ಒಂದು ಕಾಲದಲ್ಲಿ ಡುಮ್ಮಿ ಎನಿಸಿಕೊಂಡು ನೊಂದುಕೊಳ್ಳುತ್ತಿದ್ದ ಈಕೆ, ಈಗ ಪ್ಲಸ್ ಸೈಜ್ ಮಾಡೆಲ್ ಎನಿಸಿಕೊಂಡು ಹೆಮ್ಮೆ ಪಡುತ್ತಿದ್ದಾಳೆ. ಅಷ್ಟೇ ಅಲ್ಲ, ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಬೋಳು ತಲೆಯಲ್ಲಿ ಕೂಡಾ ಆತ್ಮವಿಶ್ವಾಸದಿಂದ ಇರಬಹುದು ಎಂಬುದನ್ನು ಫೋಟೋಶೂಟ್ ಮಾಡಿಸಿಕೊಂಡು ಸಾರಿದ್ದಾರೆ. 


ಮಹಿಳೆಯರೇ ಮಹಿಳೆಯರಿಗೆ ಪ್ರೇರಣೆಯಾಗುವುದು. ಅದರಲ್ಲೂ ಕೆಲವರು ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತಾರೆ. ಅಂಥದೇ ಕೆಲವರಲ್ಲಿ ಒಬ್ಬಾಕೆ ಅಕ್ಷಯ ನವನೀತನ್. ಈ ಚೆಲುವೆ ಕೇವಲ ಪ್ರಖ್ಯಾತ ಇನ್ಸ್ಟಾಗ್ರಾಂ ಬ್ಲಾಗರ್ ಅಷ್ಟೇ ಅಲ್ಲ, ಪ್ಲಸ್ ಸೈಜ್ ಮಾಡೆಲ್ ಕೂಡಾ. ಕೆಲ ದಿನಗಳ ಹಿಂದೆ ಈಕೆ ಮಾಡಿದಂಥ ಒಂದು ಸವಾಲಿನ ಕೆಲಸದಿಂದಾಗಿ ಈಗ ಈಕೆಯ ಫೋಟೋಗಳು ವೈರಲ್ ಆಗುತ್ತಿವೆ, ಅಷ್ಟೇ ಅಲ್ಲ, ಹಲವರಿಗೆ ಸತ್ಕಾರ್ಯವೊಂದಕ್ಕೆ ಸ್ಪೂರ್ತಿಯಾಗುತ್ತಿವೆ. ಅಂಥದೇನಪ್ಪಾ ಮಾಡಿದ್ದಾಳೆ ಅಂದ್ರಾ?
ಒಳ್ಳೆಯ ಉದ್ದೇಶವೊಂದಕ್ಕಾಗಿ ತಲೆ ಬೋಳಿಸಿಕೊಂಡಳು. ಅಷ್ಟೇ ಅಲ್ಲ, ಅದೇ ಬೋಳುತಲೆಯಲ್ಲಿ ಮಧುಮಗಳಂತೆ ಸಿಂಗರಿಸಿಕೊಂಡು ಫೋಟೋಶೂಟ್ ಕೂಡಾ ಮಾಡಿಸಿಕೊಂಡಿದ್ದಾಳೆ. 

ಯಾಕಾಗಿ ತಲೆ ಬೋಳಿಸಿಕೊಂಡಳು?
ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಲು ಕೂದಲನ್ನು ದಾನ ಮಾಡುವ ಸಲುವಾಗಿ ಈಕೆ ತಲೆ ಬೋಳಿಸಿಕೊಂಡಿದ್ದಾಳೆ. ತದನಂತರ ಅಷ್ಟಕ್ಕೇ ಸುಮ್ಮನಾಗದ ಅಕ್ಷಯಾ, ದೇಹದ ಕುರಿತು, ಸೌಂದರ್ಯದ ಕುರಿತು ಸಕಾರಾತ್ಮಕ ಸಂದೇಶ ಹರಡುವ ಸಲುವಾಗಿ ಬ್ರೈಡಲ್ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಬಳಿಕ ಆ ಫೋಟೋಗಳನ್ನು ಸ್ಪೂರ್ತಿದಾಯಕ ಕ್ಯಾಪ್ಶನ್‌ಗಳೊಂದಿಗೆ ಇನ್ಸ್ಟಾದಲ್ಲಿ ಹರಿಬಿಟ್ಟಿದ್ದೇ ತಡ, ಅವು ವೈರಲ್ ಆಗಿವೆ. ಅಷ್ಟೇ ಅಲ್ಲ, ಹಲವರ ಮೆಚ್ಚುಗೆ ಗಳಿಸಿವೆ. ಫೋಟೋಗಾಗಿ ಅಕ್ಷಯಾ ಬಿಳಿಯ ಕ್ರಿಶ್ಚಿಯನ್ ವೆಡ್ಡಿಂಗ್ ಗೌನ್ ಹಾಗೂ ಕಿರೀಟ ಧರಿಸಿದ್ದಾಳೆ. 

ಇದಕ್ಕೆ 'ಬಾಲ್ಡ್ ಕ್ವೀನ್' ಎಂದು ಟೈಟಲ್ ನೀಡಿರುವ ಆಕೆ, ತಲೆ ಬೋಳಾಗಿದ್ದಕ್ಕೆ ಮಹಿಳೆ ಅವಮಾನ ಅನುಭವಿಸುವ ಅಗತ್ಯವಿಲ್ಲ. ಎಂಥ ಸಂದರ್ಭದಲ್ಲೂ ಆಕೆ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂಬ ಸಂದೇಶ ರವಾನಿಸಿದ್ದಾರೆ. 

ಬರೆದ ಸಂದೇಶವೇನು?
ಫೋಟೋ ಕೆಳಗೆ ತನ್ನ ಕುರಿತ ಕೆಲ ಸಂಗತಿಗಳನ್ನು ಅಕ್ಷಯಾ ಬರೆದುಕೊಂಡಿದ್ದಾರೆ, "90ರ ದಶಕದ ಯಾವುದೇ ಡುಮ್ಮಿಯ ಕತೆಗಿಂತ ನನ್ನ ಕತೆಯೇನೂ ಬೇರೆಯಲ್ಲ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ತೂಕ ಇಳಿಸಲು ಸಲಹೆಗಳು ದಂಡಿಯಾಗಿ ಹರಿದುಬರುತ್ತಿದ್ದವು. ಬಾಡಿ ಶೇಮಿಂಗ್ ಎಂಬುದು ನನ್ನ ಹಿಂಬಾಲಿಸುತ್ತಲೇ ಇತ್ತು. ದಪ್ಪಗಿದ್ದೇನೆ ಎಂಬ ಕಾರಣಕ್ಕೆ ನಮ್ಮ ಟೀಚರ್ ನನ್ನನ್ನು ಡ್ಯಾನ್ಸ್‌ಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲ, ಹಲವಾರು ಅರ್ಹ ವೇದಿಕೆಗಳಿಂದ ನಾನು ದೂರ ಉಳಿಯಬೇಕಾಯಿತು. ನನ್ನ ಅರ್ಹತೆಗಳೆಲ್ಲದರ ಹೊರತಾಗಿ ಅವರೆಲ್ಲರೂ ಕೇವಲ ನನ್ನ ತೂಕವನ್ನಷ್ಟೇ ನೋಡುತ್ತಿದ್ದರು ಎಂಬ ವಿಷಯ ನನ್ನಲ್ಲಿ ಕೀಳರಿಮೆ ಬೆಳೆಸತೊಡಗಿತು. ತೂಕ ಇಳಿಸಿಕೊಂಡರೆ ಏನಾದರೂ ಬದಲಾದೀತು ಎಂದು ಯೋಚಿಸತೊಡಗಿದೆ."
"ಆದರೆ, 2013ರಲ್ಲಿ ಒಂದು ವಿಷಯ ಘಟಿಸಿತು. ಇದು ನನ್ನ ಬದುಕಿನ ಯಾನವನ್ನೇ ಬದಲಿಸಿತು. ನಾನು ನನ್ನಲ್ಲಿ ನಂಬಿಕೆ ಇಡತೊಡಗಿದೆ. ನನ್ನ ಪ್ರತಿಭೆಗಳನ್ನು ಗುರುತಿಸಿಕೊಳ್ಳತೊಡಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜನರ ಮಾತುಗಳಿಗೆ ಕಿವಿಗೊಡುವ ಅಭ್ಯಾಸವನ್ನು ಕೈಬಿಟ್ಟೆ. ಆಗಲೇ ನನಗೆ ನಾನು ಸಿಕ್ಕಿದ್ದು. ಆ ಬಳಿಕ ನನ್ನನ್ನು ನಾನು ಸಿದ್ಧಪಡಿಸಿಕೊಳ್ಳುತ್ತಾ ಹೋದೆ. ಎಂಸಿಯಾಗಿ, ಸಾಫ್ಟ್ ಸ್ಕಿಲ್ ತರಬೇತುದಾರಳಾಗಿ, ಸ್ಪೂರ್ತಿದಾಯಕ ಮಾತುಗಾರಳಾಗಿ ಕೆಲಸ ಮಾಡಲಾರಂಭಿಸಿದೆ. 
ನಿಧಾನವಾಗಿ ನಾನು ಪ್ಲಸ್ ಸೈಜ್ ಮಾಡೆಲ್ ಆಗುವಲ್ಲಿ ಸಫಲಳಾದೆ. ನನ್ನಲ್ಲಿ ನಾನಿಟ್ಟ ಆತ್ಮವಿಶ್ವಾಸ ಎಲ್ಲಿಯೂ ನಿಲ್ಲಲಿಲ್ಲ. ಅದೇ ನನ್ನ ಬೆಳವಣಿಗೆಯ ಪ್ರಮುಖ ದಾರಿಯಾಯಿತು. ಈಗ ನಾನು ಬಾಡಿ ಪಾಸಿಟಿವಿಟಿ ಹಾಗೂ ಸೆಲ್ಫ್ ಲವ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ಇದಕ್ಕಾಗಿಯೇ ತಲೆಕೂದಲನ್ನು ಶೇವ್ ಮಾಡಿ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದೇನೆ" ಎಂದು ವಿವರಿಸಿದ್ದಾರೆ ಅಕ್ಷಯಾ. 

Tap to resize

Latest Videos

38ನೇ ವಯಸ್ಸಿಗೆ 20 ಬಾರಿ ಗರ್ಭಿಣಿಯಾದ ತಾಯಿ

ಅಕ್ಷಯಾಳ ಆತ್ಮವಿಶ್ವಾಸ ಆಕೆಗೆ ಲ್ಯಾಕ್ಮೆ ಇಂಡಿಯಾ ಫ್ಯಾಶನ್ ವೀಕ್‌‌ನ್ನು ಪ್ರತಿನಿಧಿಸಿದ ಮೊದಲ ಪ್ಲಸ್ ಸೈಜ್ ಸೌತ್ ಇಂಡಿಯನ್ ಮಾಡೆಲ್ ಎಂಬ ಹೆಗ್ಗಳಿಕೆ ತಂದುಕೊಟ್ಟಿದೆ. 

ತೂಕದವರಿಗೆ ಸಂದೇಶ ನೀಡುವ ಅಕ್ಷಯಾ, ಆರೋಗ್ಯವಾಗಿರುವುದು ಮುಖ್ಯವೇ ಹೊರತು ತೆಳ್ಳಗಿರುವುದಲ್ಲ. ತೂಕ ಕಳೆದುಕೊಳ್ಳಬೇಕೆಂದು ನಮಗೆ ನಾವು ನೋವು ನೀಡಿಕೊಳ್ಳುವುದರಲ್ಲಿ ಅರ್ಥವಿಲ್ಲ, ನಾವು ಹೇಗಿದ್ದೇವೋ ಹಾಗೆ ನಮ್ಮನ್ನು ನಾವು ಮೊದಲು ಒಪ್ಪಿಕೊಳ್ಳಬೇಕು. ನಂತರ ಇತರರೂ ಒಪ್ಪುತ್ತಾರೆ ಎನ್ನುತ್ತಾರೆ. 

ಈ ಲೇಡಿ ಡಾಕ್ಟರ್ ಮೈಯಲ್ಲಿ ಮತ್ತೆ ಟ್ಯಾಟೂ ಹಾಕಿಸಿಕೊಳ್ಳಲು ಇಲ್ಲವೇ ಇಲ್ಲ ಜಾಗ

click me!