ನಿರಂತರ ಧಾರಾಕಾರ ಮಳೆ, ಮೈಮೇಲೊಂದು ಬೆಚ್ಚಗಿನ ರೈನ್‌ಕೋಟು ಮತ್ತು ಮಳೆಯಲ್ಲಿ ನೆನೆಯುವ ಹುಮ್ಮಸ್ಸು, ಒಂದು ಕ್ಯಾಮೆರಾ ಇದ್ದರೆ ಸಾಕು. ಬೆಳಗಾವಿ ಸಮೀಪದ ಅಂಬೋಲಿ ಘಾಟ್ ರಸ್ತೆಯ ಜಲಧಾರೆಗಳಲ್ಲಿ ನೆನೆದು ಬರಲು. ಹಸಿರ ಬೆಟ್ಟವನ್ನು ಸೀಳಿದ ರಸ್ತೆ, ಮಳೆಯ ನಿನಾದ ಮತ್ತು ಆಗಾಗ ಕವಿದು ಹುಚ್ಚು ಹಿಡಿಸುವ ತುಂಟ ಮಂಜಿನ ಸವಿಯಲ್ಲಿ ಮರೆಯಾಗಲು ನೀವಷ್ಟುದೂರ ಹೋಗಲೇಬೇಕು.
ದಕ್ಷಿಣ ಮಹಾರಾಷ್ಟ್ರದ ಪುಟ್ಟಗಿರಿಧಾಮ ಪ್ರದೇಶ ಅಂಬೋಲಿ. ಪಶ್ಚಿಮ ಘಟ್ಟಗಳ ಶ್ರೇಣಿಯ ಸಹ್ಯಾದ್ರಿ ಶ್ರೇಣಿಯ ಸೆರಗಿನಲ್ಲಿದೆ, ಜೀವ ವೈವಿಧ್ಯತಾ ಕ್ಷೇತ್ರವಿದು. ಮಹಾರಾಷ್ಟ್ರದ ವೆಂಗುರ್ಲ ಬಂದರಿನಿಂದ ಕರ್ನಾಟಕದ ಬೆಳಗಾವಿಗೆ ಬ್ರಿಟಿಷರ ಕಾಲದಲ್ಲಿ ಸರಕು ಸಾಗಣೆಗೆ ರಸ್ತೆ ಸಂಪರ್ಕ ನಿರ್ಮಾಣವಾದಾಗ ಅಂಬೋಲಿ ಗ್ರಾಮಕ್ಕೆ ಮಾನ್ಯತೆ ಸಿಕ್ಕಿತು. ಜನರ ಓಡಾಟ ಶುರುವಾಯಿತು.
ನೋಡಲು ಇಲ್ಲಿ ಏನಿದೆ?
ನಮ್ಮ ಚಾರ್ಮಾಡಿ ಘಾಟಿ ಮಾದರಿಯಲ್ಲಿ ಇಲ್ಲಿನ ಪರ್ಪೋಲಿ ಘಾಟ್ ರಸ್ತೆ ತುಂಬ ಅಲ್ಲಲ್ಲಿ ಜಲಧಾರೆ, ಹಸಿರು ಕಾನನ ಮತ್ತು ದಟ್ಟಮಂಜು ಘಾಟ್ ಹೆದ್ದಾರಿಯಲ್ಲಿ ಕಾಣಸಿಗುವ ಜಲಪಾತಗಳ ಬುಡ ತನಕ ಬಸ್ ಸಹಿತ ಯಾವುದೇ ವಾಹನ ತೆರಳುತ್ತದೆಯಾದರೂ ನಡೆದುಕೊಂಡು ಹೋಗುವದರಲ್ಲಿ ಮಜಾ ಇದೆ. ಮಳೆಗಾಲವೇ ಪ್ರವಾಸಕ್ಕೆ ಹೇಳಿ ಮಾಡಿಸಿದ ಕಾಲ.
ಟ್ರಕ್ಕಿಂಗ್ ನಿಂದ ಆರೋಗ್ಯ : ಮಿಸ್ ಮಾಡಿದ್ರೆ ತಪ್ಪುತ್ತೆ ಈ ಲಾಭ!
ಘಾಟ್‌ಯ ನಡುವೆಯೇ ಹಿರಣ್ಯಕೇಶಿ ನದಿ ಜನನ ಪಡೆಯುತ್ತದೆ ಹಾಗೂ ಅ ಅಲ್ಲಿನ ಹಿರಣ್ಯಕೇಶ್ವರ ದೇವಸ್ಥಾನದ ವೀಕ್ಷಣೆಗೆ ಅವಕಾಶ ಇದೆ. ಅಂಬೋಲಿ ಹಾಗೂ ಸುತ್ತಮುತ್ತ ಸುಮಾರು 108ಕ್ಕೂ ಮಿಕ್ಕಿ ಶಿವ ದೇಗುಲಗಳಿವೆ ಎಂಬ ಪ್ರತೀತಿಯಿದೆ. ಮಳೆಗಾಲದಲ್ಲಿ ಅತಿ ಹೆಚ್ಚು (ಸರಾಸರಿ ವರ್ಷಕ್ಕೆ ಏಳು ಮೀಟರ್) ಮಳೆಯಾಗುವ ತಾಣವಿದು. ಶಿರ್ಗಾಂವ್ಕರ್ ಪಾಯಿಂಟ್ ಮತ್ತು ಕವಲೇಶೇಡ್ ಪಾಯಿಂಟ್ ಪಕ್ಕದಲ್ಲಿರುವ ಇನ್ನೆರಡು ಪ್ರಕೃತಿ ಸಿರಿಯ ಜಾಗಗಳು.
ಅಂಬೋಲಿ ಪೇಟೆಗಿಂತ 11 ಕಿ.ಮೀ. ದೂರದಲ್ಲಿದೆ ಕವಲೇಶೇಡ್ ಪ್ರಕೃತಿ ವೀಕ್ಷಣಾ ತಾಣ. ಪುಟ್ಟಪುಟ್ಟಜಲಧಾರೆಗಳು, ದಟ್ಟಮಂಜು ಹಾಗೂ ಅಗಾಧವಾದ ಕಣಿವೆ, ಕಣ್ಣು ಹಾಯಿಸಿದಷ್ಟೂಹಸಿರ ಸಿರಿಗಳ ಸಮೃದ್ಧ ತಾಣ ಕವಲೇಶೇಡ್. ನೀವಲ್ಲಿ ದೊಡ್ಡ ಧ್ವನಿಯಲ್ಲಿ ಮಾತಾಡಿದರೆ ಪ್ರತಿಧ್ವನಿ ಕೇಳಿಸುವಷ್ಟುವಿಶೇಷವಾಗಿದೆ ಪ್ರಾಕೃತಿಕ ರಚನೆ. ಅಷ್ಟೆತ್ತರದಿಂದ ಕೆಳಗೆ ಧುಮುಕುವ ನೀರು ಮತ್ತೆ ಮಂಜಿನ ರೂಪದಲ್ಲಿ ಮೇಲೆ ಪುಟಿಯುವ ಪ್ರಾಕೃತಿಕ ವಿಸ್ಮಯಕ್ಕೆ ಸಾಕ್ಷಿಗಳಾಗಬಹುದು. ಮೇಲಿನ ವಿಶಾಲ ಬಯಲಿನಲ್ಲಿ ಬೇಯಿಸಿದ ಜೋಳದ ಕೋಡು, ಬಿಸಿ ಬಿಸಿ ವಡಾ ಪಾವ್ ಚಹಾ, ಕಡಲೆ ಬೀಜಗಳನ್ನು ಸವಿಯಲು ಮರೆಯದಿರಿ.
ಒಂದೇ ದಿನದಲ್ಲಿ ಹೋಗಿ ಬರಬಹುದಾದ ಪುಟ್ಟಪಿಕ್ನಿಕ್ ತಾಣ. ಉತ್ತಮ ರಸ್ತೆ, ಸಾಕಷ್ಟುಭದ್ರತಾ ವ್ಯವಸ್ಥೆ ಹಾಗೂ ಮಾರ್ಗದರ್ಶನ, ವಾಹನಗಳೂ ಸಿಗುತ್ತವೆ ಎನ್ನುವುದು ಪ್ಲಸ್ ಪಾಯಿಂಟ್. ವೀಕೆಂಡ್ ಪ್ರವಾಸಕ್ಕೆ (ಮಳೆಗಾಲ ಮಾತ್ರ ಸೂಕ್ತ) ಹೇಳಿ ಮಾಡಿಸಿದ ಜಾಗ. ಆದರೆ ವೀಕೆಂಡುಗಳಲ್ಲಿ ಸಾವಿರಗಟ್ಟಲೆ ಮಂದಿ ಇಲ್ಲಿಗೆ ಬಂದು ಟ್ರಾಫಿಕ್ ಜಾಮ್ ಆಗುತ್ತಿರುವುದರಿಂದ ವಾರದ ನಡುವಿನ ದಿನಗಳಲ್ಲಾದರೆ ಆರಾಮವಾಗಿ ಹೋಗಿಬರಬಹುದು
ಹೋಗುವುದು ಹೇಗೆ?
ರಸ್ತೆ ಮಾರ್ಗದಲ್ಲಿ ಅಂಬೋಲಿಗೆ ಕೊಲ್ಹಾಪುರದಿಂದ 128 ಕಿ.ಮೀ., ಬೆಳಗಾವಿಯಿಂದ 62 ಕಿ.ಮೀ. ಹಾಗೂ ಪಂಜಿಮ್ ನಿಂದ 90 ಕಿ.ಮೀ. ದೂರ. ಹತ್ತಿರದ ವಿಮಾನ ನಿಲ್ದಾಣ ಇರುವುದು ಬೆಳಗಾವಿಯಲ್ಲಿ. ಮುಖ್ಯ ಜಲಪಾತದಿಂದ ಮೂರು ಕಿ.ಮೀ. ದೂರದಲ್ಲಿರುವ ಅಂಬೋಲಿ ಪುಟ್ಟಪಟ್ಟಣದಲ್ಲಿ ವಸತಿ ವ್ಯವಸ್ಥೆ, ಕ್ಯಾಬ್ ವ್ಯವಸ್ಥೆಗಳಿವೆ. ಸಾಕಷ್ಟುಪುಟ್ಟಪುಟ್ಟಹೊಟೇಲ್‌ಗಳಿದ್ದು, ವಡಾ ಪಾವ್ ಇಲ್ಲಿನ ಅತಿ ದೊಡ್ಡ ಆಕರ್ಷಣೆಗಳಲ್ಲಿ ಒಂದು.
ಇಲ್ಲಿಗೆ ಅತಿ ಹತ್ತಿರ ರೈಲ್ವೇ ಸ್ಟೇಷನ್ ಗಳೆಂದರೆ ಸಾವಂತವಾಡಿ (28 ಕಿ.ಮೀ.), ಕುಡಲ್ ರೈಲ್ವೇ ಸ್ಟೇಷನ್ (47 ಕಿ.ಮೀ.) ಬೆಳಗಾವಿ (70 ಕಿ.ಮೀ.) ಮಡ್‌ಗಾಂವ್ (140 ಕಿ.ಮೀ.). ಅಲ್ಲಿಂದ ಸರ್ಕಾರಿ ಬಸ್ಸು ವ್ಯವಸ್ಥೆಯಿದೆ. ಅಥವಾ ಟ್ಯಾಕ್ಸಿ ಮಾಡಿಕೊಂಡು ಬರಬೇಕು. ಅಂಬೋಲಿ ಪೇಟೆಗೆ ನೀವು ಬಂದು ತಲುಪಿದರೆ ಸ್ವರ್ಗಸದೃಶ ಘಾಟ್ ರಸ್ತೆಗೆ ತಲುಪಲು ರಿಕ್ಷಾ ಅಥವಾ ಟ್ಯಾಕ್ಸಿಗಳು ಸಾಕಷ್ಟುಸಂಖ್ಯೆಯಲ್ಲಿ ಸಿಗುತ್ತವೆ.
ರಾಜ್ಯದ 20 ಪ್ರವಾಸಿ ಸ್ಥಳಗಳು ಶೀಘ್ರ ವಿಶ್ವದರ್ಜೆಗೆ!