ಹಿಂದೆಲ್ಲಾ ಸಿನಿಮಾಗಳಲ್ಲಿ ಯಾವುದಾದರೂ ಶಾಕಿಂಗ್ ಸುದ್ದಿ ಕೇಳಿದಾಕ್ಷಣ ಎದೆ ಹಿಡಿದುಕೊಂಡು ಹೀರೋ/ಹೀರೋಯಿನ್ ಅಪ್ಪ/ಅಮ್ಮ ಕುಸಿದು ಬೀಳುತ್ತಿದ್ದದ್ದು ನೆನಪಿದೆ ತಾನೆ? ಆಗೆಲ್ಲ ನಾವು ವೈದ್ಯಕೀಯ ವಿದ್ಯಾರ್ಥಿಗಳಾಗಿ ನಗುತ್ತಿದ್ದೆವು. ಹೀಗೆಲ್ಲಾದರೂ ‘ಹಾರ್ಟ್ ಅಟ್ಯಾಕ್’ ಆಗಲು ಸಾಧ್ಯವಿದೆಯೇ ಎಂದು ಗೇಲಿ ಮಾಡುತ್ತಿದ್ದೆವು.
ಡಾ|ಕೆ.ಎಸ್. ಪವಿತ್ರ
ಹೃದಯಕ್ಕೂ, ಮನಸ್ಸಿಗೂ ಅನ್ಯೋನ್ಯ ಸಂಬಂಧವನ್ನು ಆಡು ಭಾಷೆ-ಸಾಹಿತ್ಯಗಳು ಹೇಳುತ್ತಲೇ ಇದ್ದರೂ, ವೈದ್ಯಕೀಯವಾಗಿ ಹೃದಯಾಘಾತಕ್ಕೆ ಕೊಡುವಷ್ಟು‘ಬೆಲೆ’ ಯನ್ನು ರೋಗಿಗಳಾಗಲಿ, ಅವರ ಕುಟುಂಬದವರಾಗಲಿ ಅಥವಾ ವೈದ್ಯರಾಗಲಿ, ಮನಸ್ಸಿನ ‘ಖಿನ್ನತೆ’ ಗೆ ‘ಆತಂಕ’ ಕ್ಕೆ ನೀಡುತ್ತಿರಲಿಲ್ಲ.
undefined
ಭಾವನಾತ್ಮಕ ಹೃದಯದ ಸಂಕೇತವಾಗಿ ‘ಹೃದಯ’ದ ಚಿಹ್ನೆ ಇಂದೂ ಉಳಿದುಕೊಂಡು ಬಂದಿದೆಯಷ್ಟೆ! ಪ್ರೀತಿಯೊಂದಿಗೆ ನೀವು ಜೋಡಿಸುವ ಸಂಕೇತ ಯಾವುದು ಎಂದರೆ , ನಮ್ಮ ತಲೆಯಲ್ಲಿ ಮೊದಲು ಮೂಡುವ ಚಿತ್ರ ‘ರಕ್ತ’ ವರ್ಣದ ಅಂದರೆ ಕೆಂಪಾದ ಹೃದಯ ಸಂಕೇತ. ನಂತರ ಅದರ ಹಿಂದೆಯೇ ಬರುವ ಕೆಂಪು ಗುಲಾಬಿ. ಪ್ರಕೃತಿಯಲ್ಲಿ ಹೃದಯದ ಆಕಾರ, ಎಲೆ-ಹೂವು-ಬೀಜಗಳಲ್ಲಿ, ಹಲವು ಗಿಡಗಳಲ್ಲಿ ಕಂಡು ಬರುತ್ತದೆ. ‘ಸಿಲ್ಫಿಯಂ’ ಎಂಬ ಗಿಡವನ್ನು ಮಧ್ಯ ಯುಗದಲ್ಲಿ ಗರ್ಭನಿರೋಧಕವಾಗಿಯೂ ಉಪಯೋಗಿಸಲಾಗುತ್ತಿತ್ತು. ಬಹುಶಃ ಇದರಿಂದಲೇ ಹೃದಯ ಲೈಂಗಿಕತೆಗೂ - ರೋಮ್ಯಾಂಟಿಕ್ - ಪ್ರೇಮಿಗಳಿಗೂ ಹತ್ತಿರವಾಯಿತು ಎನಿಸುತ್ತದೆ.
ಮದುವೆಯಾದ ಕೂಡಲೇ ನೀವು ಎದುರಿಸುವ ಸಮಸ್ಯೆಗಳಿವು!
ಕಾರಣ ಏನೇ ಇರಲಿ, 13ನೇ ಶತಮಾನದ ವೇಳೆಗೆ ಪ್ರೇಮಿಗಳ ಚಿತ್ರ ಕಲೆಗಳಲ್ಲಿ ಹೃದಯ ಕಾಣಿಸಲಾರಂಭಿಸಿತು. ಈ ಚಿತ್ರಗಳಿಗೆ ಉಪಯೋಗಿಸಲ್ಪಡುತ್ತಿದ್ದ ಬಣ್ಣ ಸಹಜವಾಗಿ ಕೆಂಪು ಬಣ್ಣ /ರೋಮನ್ ಕ್ಯಾಥೋಲಿಕ್‌ರಂತೂ ಈ ಹೃದಯವನ್ನು ದೇವರ ‘ಪವಿತ್ರ ಹೃದಯ’ ವಾಗಿಸಿ ಅದಕ್ಕೆ ಅಧ್ಯಾತ್ಮಿಕ ಆಯಾಮವನ್ನೂ ಕೊಟ್ಟುಬಿಟ್ಟರು. ಹೃದಯ ಮತ್ತು ಪ್ರೀತಿಯ ನಡುವಣ ಈ ಸಂಬಂಧ ಇಲ್ಲಿಯವರೆಗೂ ಬಲವಾಗಿ ಉಳಿದುಕೊಂಡೇ ಬಂದಿದೆ ಎಷ್ಟುಬಲವಾಗಿ? 1982ರಲ್ಲಿ ಬಾರ್ಗಿ ಕ್ಲಾರ್ಕ್ ಎಂಬ ನಿವೃತ್ತ ದಂತ ತಜ್ಞ ಹೃದಯ ವೈಫಲ್ಯದಿಂದ ನರಳುತ್ತಿರುವಾಗ, ಆತನಿಗೆ ಮೊದಲ ಶಾಶ್ವತ -ಕೃತಕ ಹೃದಯವನ್ನು ಅಳವಡಿಸಲಾಯಿತು. 39 ವರ್ಷದ ಆತನ ಪತ್ನಿ ವೈದ್ಯರ ತಂಡವನ್ನು ಮೊದಲು ಕೇಳಿದ ಪ್ರಶ್ನೆ ಏನು ಗೊತ್ತೆ? ‘‘ಡಾಕ್ಟರ್, ನನ್ನ ಪತಿಗೆ ಈಗಲೂ ನನ್ನನ್ನು ಪ್ರೀತಿಸುವುದು ಸಾಧ್ಯವೆ?!’’.
ಇಂದು ವಿಜ್ಞಾನ ನಮ್ಮ ಭಾವನೆಗಳ - ಪ್ರೀತಿಯ ಮೂಲ ‘ಮಿದುಳು’ ಎಂದು ತೋರಿಸಿವೆ. ನಮ್ಮ ಪೂರ್ವಜರು ತಪ್ಪು ತಿಳಿದಿದ್ದರು ಎಂದು ಸಾಧಿಸಿದೆ. ಆದರೆ ಹೃದಯ ಮತ್ತು ಭಾವನೆಗಳ ಮಧ್ಯದ ನಂಟು ಬಹು ಹತ್ತಿರದ್ದು ಎಂಬುದನ್ನು ಆಧುನಿಕ ವಿಜ್ಞಾನವೂ ಇಂದು ಒಪ್ಪಲೇಬೇಕಾಗಿದೆ. ಹೃದಯ ನಮ್ಮ ಭಾವನೆಗಳ ಮೂಲವಾಗಿರದಿರಬಹುದು. ಆದರೆ ಅದು ಭಾವನೆಗಳಿಗೆ ತೀವ್ರವಾಗಿ ಸ್ಪಂದಿಸುವುದು ನಿಜವೇ. ನಮ್ಮ ಭಾವನೆಗಳ ದಾಖಲೆ ಬರೆಯಲ್ಪಡುವುದು ನಮ್ಮ ಹೃದಯಗಳಲ್ಲಿ ಎಂದರೆ ಅದು ತಪ್ಪಲ್ಲ. ಭಯ ಮತ್ತು ಶೋಕ ಹೃದಯದ ಸ್ನಾಯುವಿಗೆ ಬಲವಾದ ಆಘಾತವನ್ನುಂಟು ಮಾಡುತ್ತವೆ. ನಮ್ಮ ಜಾಗೃತವಲ್ಲದ ಹೃದಯಬಡಿತವನ್ನು ನಿಯಂತ್ರಿಸುವ ಸೂಕ್ಷ್ಮ ನರಗಳು ಆತಂಕವನ್ನು ಅತಿ ವೇಗವಾಗಿ ಗ್ರಹಿಸುತ್ತವೆ, ರಕ್ತನಾಳಗಳನ್ನು ಸಂಕುಚಿಸುವಂತೆ ಮಾಡುತ್ತವೆ, ಹೃದಯವನ್ನು ಓಡಿಸಿ, ರಕ್ತದೊತ್ತಡವನ್ನು ಏರಿಸಿ, ಸ್ನಾಯುಗಳಿಗೆ ಹಾನಿ ತಂದೊಡ್ಡುತ್ತವೆ. ಅಂದರೆ ನಮ್ಮ ಹೃದಯಗಳು ನಮ್ಮ ಭಾವನೆಗಳಿಗೆ ಸ್ಪಂದಿಸುವ ವೇಗ ಬಹು ತೀವ್ರ.
ಯಶಸ್ವೀ ವಿವಾಹ; ಅಜ್ಜಿ ಹೇಳಿದ ಅನುಭವ ಪಾಠಗಳು!
ಸುಮಾರು 20 ವರ್ಷಗಳ ಹಿಂದೆ ‘ಟ್ಯಾಕೋಟ್ಸುಬೋ ಕಾರ್ಡಿಯೋಮೈಯೋಪತಿ’ ಎಂಬ ಕಾಯಿಲೆಯೊಂದನ್ನು ಪತ್ತೆ ಹಚ್ಚಲಾಯಿತು. ಸರಳ ಭಾಷೆಯಲ್ಲಿ ಹೇಳಬೇಕೆಂದರೆ ಇದು ‘ಬ್ರೋಕನ್ ಹಾರ್ಟ್ ಸಿಂಡ್ರೋಮ್’ ಅಥವಾ ಮುರಿದ ಹೃದಯದ ಕಾಯಿಲೆ. ಅತೀವ ಶೋಕ, ಆತ್ಮೀಯರ ಸಾವುಗಳಲ್ಲಿ ‘ಹೃದಯ’ದ ಆಕಾರ ಹೇಗೆ ನಿಜವಾಗಿ ಬದಲಾಗುತ್ತದೆ ಎಂಬುದನ್ನು ವಿವರಿಸಲಾಯಿತು. ಜಪಾನಿನಲ್ಲಿ ಉಪಯೋಗಿಸುವ ಒಂದು ಮಣ್ಣಿನ ಗಡಿಗೆಯ (ಟ್ಯಾಕೋಟ್ಸುಬೋ) ಆಕಾರದಂತೆ ಆಘಾತವಾದಾಗ ನಮ್ಮ ಹೃದಯ ಅಗಲವಾದ ತಳ-ಕಿರಿದಾದ ಕತ್ತುಗಳನ್ನು ಹೊಂದಿ ಮತ್ತೆ ಮತ್ತೆ ಬಲೂನಿನಂತೆ ಉಬ್ಬುತ್ತದೆ. ಇದು ಆಗುವ ಕಾರಣ- ಏನು- ಹೇಗೆ ಗಳ ಬಗ್ಗೆ ಖಚಿತವಾಗಿ ಗೊತ್ತಿರದಿದ್ದರೂ, ತನ್ನಿಂತಾನೇ ಹೃದಯ ಸಹಜತೆಗೆ ಮರಳುವುದನ್ನು ವಿಜ್ಞಾನಿಗಳು ಕಂಡು ಹಿಡಿದರು. ತತ್‌ಕ್ಷಣದ ಸಮಯದಲ್ಲಿ ಇದು ಹೃದಯಾಘಾತಗಳಿಗೆ, ಅತಿಯಾದ ಹೃದಯಬಡಿತದ ಏರುಪೇರುಗಳಿಗೆ, ಸಾವಿಗೂ ಕಾರಣವಾಗಬಹುದೆಂದೂ ವಿವರಿಸಿದರು. ಇವೆಲ್ಲವೂ ಆರೋಗ್ಯಕರ, ಯಾವುದೇ ‘ಥ್ರಾಂಬಸ್’ - ರಕ್ತದ ಗುಳ್ಳೆಗಳಿರದ, ಸರಿಯಾದ ರಕ್ತನಾಳಗಳಿದ್ದ ವ್ಯಕ್ತಿಯಲ್ಲೂ ನಡೆಯಬಹುದು ಎಂಬುದು ಗಮನಾರ್ಹ.
ಸ್ವಾರಸ್ಯಕರ ವಿಷಯವೆಂದರೆ ಸಂತೋಷದ ಘಟನೆ ನಡೆದ ಕ್ಷಣದಲ್ಲಿಯೂ ಹೃದಯದ ಆಕಾರದಲ್ಲಿ ಬದಲಾವಣೆಯಾಗುತ್ತದೆ. ಆದರೆ ಅದರ ರೀತಿ ಬೇರೆ. ಬಲೂನ್‌ನಂತೆ ಉಬ್ಬುವುದು ಇಲ್ಲಿ ತುದಿಯಲ್ಲಲ್ಲ, ಬದಲಾಗಿ ಮಧ್ಯಭಾಗದಲ್ಲಿ. ಬೇರೆ ಬೇರೆ ಭಾವನೆಗಳು ಹೇಗೆ ಬೇರೆ ಬೇರೆ ಹೃದಯದ ಆಕಾರದ ಬದಲಾವಣೆಗಳನ್ನು ತರುತ್ತವೆ ಎಂಬುದಕ್ಕೆ ಇನ್ನೂ ವಿಜ್ಞಾನ ವಿವರಣೆ ನೀಡಬೇಕಾಗಿದೆ.
ಅಂದರೆ ನಮ್ಮ ಪೂರ್ವಜರ ಬುದ್ಧಿವಂತಿಕೆಯನ್ನು ಒಪ್ಪಿ ತಲೆದೂಗಲೇಬೇಕಾಗುತ್ತದೆ. ಜೈವಿಕ ಹೃದಯದೊಂದಿಗೆ, ಭಾವನಾತ್ಮಕ ಹೃದಯವೊಂದು ಅದರೊಂದಿಗೇ ಆಶ್ಚರ್ಯಕರವಾಗಿ, ನಿಗೂಢವಾಗಿ ಬೆಳೆಯುತ್ತದೆ.
ಬೆದರಿಸೋ ಅಪ್ಪ ಬದಲಾಗುತ್ತಿದ್ದಾನೆ, ಅಮ್ಮ ಆಗುತ್ತಿದ್ದಾನೆ ಈಗಿನ ಡ್ಯಾಡ್...
ಹಾಗೆ ನೋಡಿದರೆ ಹೃದಯಾಘಾತದಿಂದ ನಡೆಯುವ ಸಾವುಗಳಲ್ಲಿ ಭಾವನೆಗಳ ಬಹುಮುಖ್ಯ ಪಾತ್ರವನ್ನು ಮೊದಲಿನಿಂದ ವಿಜ್ಞಾನವೂ ವಿವರಿಸುತ್ತಲೇ ಬಂದಿದೆ. 1942ರಲ್ಲಿ ಹಾರ್ವರ್ಡ್‌ನ ವೈದ್ಯ ಕ್ಯಾನನ್ ‘ವೂಡೂ ಸಾವು’ ಗಳನ್ನು ವಿವರಿಸಿದ. ತಮ್ಮ ಮೇಲೆ ಯಾವುದೋ ಹೊರಗಿನ ಶಕ್ತಿ (ವೂಡೂ) ಯೊಂದು ಆವಾಹನೆಯಾಗಿದೆ ಎಂದು ನಂಬುವ ವ್ಯಕ್ತಿಯಲ್ಲಿ ಹೇಗೆ ರಕ್ತನಾಳಗಳು -ಹೃದಯ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ, ಮನಸ್ಸಿನ ನಂಬಿಕೆಗೂ, ರಕ್ತಚಲನೆ-ಆಘಾತದ ಪ್ರಕ್ರಿಯೆಗೂ ನಿಜವಾಗಿ ದೇಹದಲ್ಲಿ ಸಂಬಂಧವಿರುವುದನ್ನು ದೃಢಪಡಿಸಿದ. ಕ್ಯಾನನ್ ಈ ‘ವೂಡೂ’ ಸಾವುಗಳು ಕೇವಲ ಆದಿವಾಸಿಗಳಲ್ಲಿ ಎಂದುಕೊಂಡಿದ್ದ. ಆದರೆ ಇಂದಿನ ಎಲ್ಲಾ ಆಧುನಿಕ ಜನರಲ್ಲಿಯೂ ನಾವು ಇದನ್ನು ಕಾಣಬಹುದು! ಶೋಕದಿಂದ ಜನ ಮರಣಿಸುವಾಗ, ದೀರ್ಘಕಾಲ ಜೀವಿಸಿಯೂ ಹೃದಯಾಘಾತದಿಂದ ಸಾವಿಗೀಡಾಗುವಾಗ ನಾವು ನೋಡಲೇಬೇಕಾದ್ದು ಅವರ ‘ಹೃದಯ ಮುರಿದಿತ್ತೇ’ ಎಂಬುದನ್ನು.
ಪ್ರಾಣಿಗಳಲ್ಲಿಯೂ ಇದು ನಿಜವೇ. ಕೊಲೆಸ್ಟರಾಲ್ ಏರಿಕೆಯಿಂದ ಉಂಟಾಗುವ ಹೃದಯದ ಸಮಸ್ಯೆಗಳನ್ನು ಮೊಲಗಳಲ್ಲಿ ಅಧ್ಯಯನ ನಡೆಸಲಾಗುತ್ತಿತ್ತು. ಒಂದು ಗುಂಪಿನ ಮೊಲಗಳ ಬಳಿ ಆಟವಾಡಿ, ಮಾತನಾಡಿ, ಮುದ್ದು ಮಾಡಿ, ಪಂಜರದೊಳಗಿರಿಸದೆ ಅಧ್ಯಯನ ಮಾಡಲಾಯಿತು. ಇನ್ನೊಂದು ಗುಂಪಿಗೆ ಅದೇ ಆಹಾರ, ಅದೇ ವಾತಾವರಣ. ಆದರೆ ಯಾರೂ ಅವುಗಳ ಬಳಿ ಮಾತು-ಆಟ-ಮುದ್ದು ಯಾವುದೂ ಇಲ್ಲ. ಎರಡೂ ಗುಂಪುಗಳಲ್ಲಿಯೂ ಒಂದೇ ಕೊಲೆಸ್ಟರಾಲ್ ಮಟ್ಟ, ರಕ್ತದೊತ್ತಡ, ಹೃದಯ ಬಡಿತ. ಆದರೆ ಸಂವಹನ-ಭಾವನೆಗಳ ಕೊರತೆಯ ಎರಡನೇ ಗುಂಪಿನಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಗಣನೀಯವಾಗಿ ಹೆಚ್ಚಿದ್ದವು.
ಇಂದು ಹೃದಯದ ಶಸ್ತ್ರಚಿಕಿತ್ಸೆಗಳು -ಹೃದಯದ ಸ್ಟೆಂಟ್‌ಗಳು-ಬೈಪಾಸ್‌ಗಳು, ಕೃತಕ ಹಾರ್ಟುಗಳು ಸುಲಭವಾಗಿ ನಡೆಯುತ್ತಿವೆ. ಹೃದಯವೊಂದು ಯಂತ್ರ ಎಂಬಂತೆ ಅದನ್ನು ನಾವು ದುಡಿಸಿ, ಅದು ಸುಸ್ತಾದಾಗ ಬದಲಿಸುವ ಯುಗದಲ್ಲಿದ್ದೇವೆ. ಎರಡನೇ ಮಹಾಯುದ್ಧದ ನಂತರ ಬಂದ ಸ್ಟೆಂಟ್-ಫೇಸ್ ಮೇಕರ್ ಶಸ್ತ್ರಚಿಕಿತ್ಸೆ, ಹೃದಯ ಕಸಿ ಎಲ್ಲವೂ ಸಾವಿರಾರು ಜೀವ-ಹೃದಯಗಳನ್ನು ಉಳಿಸಿದೆ ನಿಜ. ಆದರೆ ಇಂಥ ತಾಂತ್ರಿಕ -ಯಾಂತ್ರಿಕ ಯುಗದಲ್ಲಿಯೂ ನಾವು ಗಮನಿಸಲೇಬೇಕಾದ ಅಂಶವೊಂದಿದೆ. ಆಹಾರ ಕ್ರಮ ಮತ್ತು ವ್ಯಾಯಾಮಗಳಷ್ಟೇ ಹೃದಯವನ್ನು ಬಲವಾಗಿಡಲು, ಸಹಜತೆಗೆ ಮರಳಿಸಲು ಸಾಧ್ಯವಿಲ್ಲ. ಮನಸ್ಸಿನ ಒತ್ತಡವನ್ನು ಸರಿಯಾಗಿ ನಿಭಾಯಿಸದಿದ್ದರೆ ಹೃದಯದ ಸಮಸ್ಯೆಗಳು ಕಟ್ಟಿಟ್ಟಬುತ್ತಿ.
ಆದರೆ ಅಮೇರಿಕನ್ ಹೃದಯ ಸಂಸ್ಥೆ ಭಾವನಾತ್ಮಕ ಒತ್ತಡವನ್ನು ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳ ಪಟ್ಟಿಯಲ್ಲಿ ಇನ್ನೂ ಒಂದಾಗಿ ಸೇರಿಸಿಲ್ಲ, ಏಕೆ?! ರಕ್ತದ ಕೊಲೆಸ್ಟರಾಲ್ ಅಂಶವನ್ನು ಕಡಿಮೆ ಮಾಡುವುದು ಸಾಮಾಜಿಕ ಮತ್ತು ಮಾನಸಿಕ ಒತ್ತಡಗಳನ್ನು ನಿಭಾಯಿಸುವುದಕ್ಕಿಂತ ಸುಲಭ!! ನಾವು-ನೀವು ಮಾಡಬಹುದಾದ್ದೇನು? ‘ಮುರಿದ ಮನಸ್ಸು’ ‘ಮುರಿದ ಹೃದಯ’ಗಳ ಬಗೆಗೆ ಮಾತನಾಡುವಾಗ ನಾವು ಗಮನಿಸಬೇಕಾದ್ದು ಕೇವಲ ಮನಸ್ಸು-ಆಕ್ಷಣದ ಭಾವನೆಗಳ ಬಗೆಗಷ್ಟೇ ಅಲ್ಲ, ಅವು ನಮ್ಮ ‘ಜೈವಿಕ’ ಹೃದಯಕ್ಕೂ ಮಾಡಬಹುದಾದ ನೈಜ ಹಾನಿಯ ಬಗೆಗೆ. ಅಂದರೆ ಭಾವನಾತ್ಮಕ ಒತ್ತಡವೂ ಅದಕ್ಕಿರುವ ಹೃದಯಸಂಬಂಧದಿಂದ ಇಂದು ಜೀವನ್ಮರಣಗಳ ಪ್ರಶ್ನೆಯೇ!