ದೊರೆತ ಪ್ರೀತಿಗಷ್ಟೇ ದಿನವೇ?: ಮರಳಿ ಬರುವೆನೆಂದವನಿಗೆ ಕಾದಿರುವೆ!

By Web DeskFirst Published Feb 14, 2019, 3:26 PM IST
Highlights

ಪ್ರೇಮಿಗಳ ದಿನದಂದು ರಸವಾರ್ತೆಯನ್ನೇ ಹೇಳಬೇಕೆಂದೇನಿಲ್ಲ. ಇಲ್ಲಿ ಹೇಳಬೇಕಾದ ಕಥೆಗಳು, ಹೇಳಬಾರದ ಕಥೆಗಳು ಇವೆ. ಪ್ರೀತಿಯ ಬಾವಿಗೆ ಬಿದ್ದ ಹುಡುಗಿಯೊಬ್ಬಳ ಸ್ವಗತ ಇಲ್ಲಿದೆ. 
 

Love is but nothing deep understanding ಅಂತಾರೆ ಓಶೋ. ಸತ್ಯವಾದ ಮಾತು. ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳುವುದೇ ಪ್ರೀತಿ. ಇದೊಂದು ಅಧ್ಭುತವಾದ ಭಾವ. ಹೇಳಿಕೊಳ್ಳಲಾಗದ, ನಮಗೆ ನಾವೇ ಅನುಭವಿಸುವ ಮಧುರಾನುಭೂತಿ. 

ಪ್ರೀತಿಯ ಗೆಳೆಯಾ, ಇಂದು ಪ್ರೇಮಿಗಳ ದಿನ. ಎಲ್ಲರೂ ಪ್ರೀತಿಯಲ್ಲಿ ಕಳೆದು ಹೋಗಿದ್ದಾರೆ. ಆದರೆ ನಮ್ಮದು ಮುಗಿದು ಹೋದ ಅಧ್ಯಾಯ. ಈಗೇನಿದ್ರೂ ನೆನಪು ಮಾತ್ರ. 

ಪ್ರೇಮ ದಿನ ಪ್ರೇಮಿಗಳಿಗಾ, ದಂಪತಿಗಳಿಗಾ?

ಅದ್ಯಾವ ಘಳಿಗೆಯಲ್ಲಿ ಈ ಪ್ರೀತಿಯೆಂಬ ಮಾಯೆ ಆವರಿಸಿತೋ ನಾ ಕಾಣೆ. ಯಾವಾಗ, ಯಾರ ಮೇಲೆ ಪ್ರೀತಿಯೆಂಬ ಭಾವ ಹುಟ್ಟುತ್ತದೋ ಹೇಳಲಾಗದು. ಹೃದಯಾಂತರಾಳದಿಂದ ಮೂಡಿದ ಮಧುರವಾದ ಭಾವ. ನಿನ್ನನ್ನು ನೋಡಿದ ಕ್ಷಣದಿಂದ ಏನೋ ಒಂದು ವಿಚಿತ್ರವಾದ ಭಾವ. ಮತ್ತೆ ಮತ್ತೆ ನೋಡಬೇಕು.. ಮಾತಾಡಬೇಕು ಎನ್ನುವ ಹಂಬಲ. ನೀನು ಎದುರಿಗೆ ಸಿಕ್ಕರೆ ನನ್ನ ಕಡೆ ನೋಡಲಿ ಎಂಬ ಆಸೆ. ನನ್ನೆನ್ನಾ ಖುಷಿ, ದುಃಖಗಳನ್ನು ಹೇಳಿಕೊಳ್ಳಬೇಕೆಂಬ ಕಾತರ. ನೀನು ಯಾವುದನ್ನೂ ಬಾಯಿ ಬಿಟ್ಟು ಹೇಳುವವನಲ್ಲ. ನನ್ನ ಬಗ್ಗೆ ಏನಾದರೂ ಹೇಳಲಿ, ಮೆಚ್ಚುಗೆ ವ್ಯಕ್ತಪಡಿಸಲಿ, ನನ್ನ ಸಂತೋಷಗಳನ್ನು ಹಂಚಿಕೊಳ್ಳಲಿ, ಬೇಸರವಾದಾಗ ಅಳುವಿಗೆ ಹೆಗಲು ಕೊಟ್ಟು ಹಗುರಾಗಿಸಲಿ ಹೀಗೆ ಏನೇನೋ ಹುಚ್ಚು ಆಸೆ ನನಗೆ. ಊಹೂಂ, ನಿನಗೆ ಇವೆಲ್ಲಾ ಅರ್ಥವಾಗಲೇ ಇಲ್ಲ. ಒಂದು ಸೂಕ್ಷ್ಮ ಅರ್ಥವಾಗಿದ್ದರೆ ಸಾಕಿತ್ತು ಬದುಕೇ ಬದಲಾಗಿ ಹೋಗುತ್ತಿತ್ತು. 

ಪ್ರೇಮಿಗಳ ದಿನದಂದೇ ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ್ರಾ?

ಪ್ರೀತಿ ಹುಟ್ಟಿದ ಕ್ಷಣದಿಂದ ನನ್ನಲ್ಲಿ ನಾನು ಕಳೆದು ಹೋದೆ. ನಾನು ಎನ್ನುವ ಭಾವ ಕಡಿಮೆಯಾಗಿ ನಾವು ಎಂಬ ಭಾವ ಆವರಿಸ ತೊಡಗಿತ್ತು. ಮುಂಜಾನೆ ಶುರುವಾಗುವುದು ನಿನ್ನಿಂದಲೇ ರಾತ್ರಿಯಾಗುವುದು ನಿನ್ನಿಂದಲೇ ಎನ್ನುವಷ್ಟು ಮನಸ್ಸಿನಾಳಕ್ಕೆ ಇಳಿದು ಹೋಗಿದ್ದೆ. ಒಂದು ಕ್ಷಣವೂ ನಿನ್ನನ್ನು ಬಿಟ್ಟಿರಲಾರೆ ಎನ್ನುವಷ್ಟು ಆಪ್ತತೆ ಬೆಳೆದಿತ್ತು. ನಾನೋ ಭಾವನೆಗಳು ಧುಮ್ಮಿಕ್ಕುವ ನದಿಯಾಗಿದ್ದರೆ ನಿನ್ನದು ನಿರ್ಲಿಪ್ತ ಭಾವ. ಕಂಡ ಕನಸುಗಳೆಷ್ಟೋ, ಆಡದೇ ಉಳಿದ ಮಾತುಗಳೆಷ್ಟೋ.ನೀನು ನನ್ನ ಜೊತೆಗಿದ್ದರೆ ಸಾಕು ಜಗತ್ತನ್ನೇ ಗೆಲ್ಲುವಷ್ಟು ಆತ್ಮ ವಿಶ್ವಾಸ. ಸೆಕ್ಯೂರ್ ಫೀಲೀಂಗ್. 

ನನ್ನೊಳಗೆ ನೀನು ಸಂಪೂರ್ಣವಾಗಿ ಆವರಿಸಿಕೊಂಡಿದ್ದೆ. ಅದಮ್ಯವಾಗಿ ನಿನ್ನನ್ನು ಪ್ರೀತಿಸಿದ್ದೇ ನಾನು. ಆದರೆ ನೀನು ಒಂದೂ ಮಾತು ಹೇಳದೇ ಹೊರಟು ಬಿಟ್ಟೆ. ಹೇಳಿ ಹೋಗು ಕಾರಣ ಎಂದು ನಿನ್ನನ್ನು ಕೇಳಲಾರೆ ಗೆಳೆಯಾ. ಗಂಜಿಯಲ್ಲಿ ಬಿದ್ದ ನೊಣದಂತಾಗಿದೆ ಮನಸ್ಸು. ರಾತ್ರಿಯ ನೀರವ ಮೌನದಲ್ಲಿ ತಣ್ಣಗೆ ಮನೆಯಂಗಳದಲ್ಲಿ ಕುಳಿತಿದ್ದಾಗ ನಿನ್ನ ನೆನಪು ಧುಮ್ಮಿಕ್ಕು ಬರುತ್ತದೆ. ಸಂಜೆ ಕಡಲ ಕಿನಾರೆಯಲ್ಲಿ ಕೈ ಕೈ ಹಿಡಿದು ಮೌನವಾಗಿ ನಡೆಯಬೇಕು ಎನಿಸುತ್ತದೆ.

ಒಂದು ಕಡೆ ಗಾಲಿಬ್ ಹೇಳುತ್ತಾನೆ; ’ ನಿನ್ನ ನೆನಪುಗಳ ಸೌಧದ ಮೇಲೆ ಗೋರಿ ಕಟ್ಟುತ್ತೇನೆ. ನಿನ್ನ ನೆನಪಲ್ಲೇ ಬದುಕುತ್ತೀನಿ’ ಎಂದು. ನನ್ನ ಬದುಕೂ ಒಂದು ರೀತಿ ಹಾಗೆ ಆಗಿದೆ. 

ಮರಳಿ ಬರುತ್ತೀಯಾ ಎಂಬ ನಂಬಿಕೆಯಲ್ಲಿರುವ ನಿನ್ನ ಗೆಳತಿ....

- ಅನಾಮಿಕ 

click me!