
ಡಾ|| ಕೆ.ಎಸ್. ಪವಿತ್ರ
ಪ್ರೇಮ ಮದುವೆಯಲ್ಲಿ ಮುಕ್ತಾಯವಾಗಿ, ಆಮೇಲೆ ಪ್ರೇಮಕ್ಕೆ-ಪ್ರೇಮಿಗಳ ದಿನ ಎರಡಕ್ಕೂ ಮಂಗಳ ಹಾಡುವವರು ಬಹಳಷ್ಟು ಮಂದಿ! ತಲೆ ತುರಿಸಿಕೊಳ್ಳಲೂ ಪುರುಸೊತ್ತಿಲ್ಲದ ಆಧುನಿಕ ಬದುಕಿನ ಜಂಜಡದಲ್ಲಿ ‘ರೋಸ್’ ಕೊಟ್ಟು ‘ಐ ಲವ್ ಯೂ’ ಎನ್ನಲು ಯಾರಿಗೆ ಸಮಯವಿದೆ?! ಅದೆಲ್ಲಾ ‘ಹುಡುಗರಾಟ’ ಎಂದು ಯಾವುದೇ ವಯಸ್ಸಿನ ದಂಪತಿಗಳು ತಳ್ಳಿ ಹಾಕುತ್ತಾರೆ. ಎಳೇ ವಯಸ್ಸಿನ ಅಪ್ರಬುದ್ಧ ಮನಸ್ಸಿನ ‘ಹುಚ್ಚು’ ಅದು ಎಂದು ನಕ್ಕು ಬಿಡುತ್ತಾರೆ. ಆದರೆ ಒಬ್ಬ ಮನೋವೈದ್ಯೆಯಾಗಿ ಪ್ರತಿನಿತ್ಯ ದಾಂಪತ್ಯ ಕಲಹಗಳಲ್ಲಿ ಸಿಲುಕಿ ಚಿಕಿತ್ಸೆ ಪಡೆಯುವ ದಂಪತಿಗಳನ್ನು ನೋಡುವ ನನಗೆ ‘ಪ್ರೇಮಿಗಳ ದಿನ’ ದ ಬಗ್ಗೆ, ಪ್ರೇಮದ ಬಗ್ಗೆ ಗಮನ ಹರಿಸಬೇಕಾದ್ದು ದಂಪತಿಗಳು ಎನಿಸುತ್ತ.
ಸರಿಸುಮಾರು 50 ವರ್ಷಗಳ ಹಿಂದೆ ರಿಚರ್ಡ್ ರಾಹೆ ಮತ್ತು ಥಾಮಸ್ ಹೋಮ್ಸ್ ಎಂಬ ಇಬ್ಬರು ಮನೋವೈದ್ಯರು ಮನಸ್ಸಿಗೆ ಖಿನ್ನತೆ-ಆತಂಕ ತರಬಲ್ಲ ಜೀವನದ ಅನುಭವಗಳ ಉದ್ದ ಪಟ್ಟಿ ತಯಾರಿಸಿದರು. ಅದರಲ್ಲಿ ಮೊದಲನೆಯದು ಜೀವನ ಸಂಗಾತಿಯ ಸಾವು. ಎರಡನೆಯದು ವಿವಾಹ ವಿಚ್ಛೇದನ. ಮೂರನೆಯದು ಜೀವನ ಸಂಗಾತಿಯಿಂದ ದೂರವಿರುವುದು.
ಇವೆಲ್ಲಕ್ಕಿಂತ ಸ್ವಾರಸ್ಯಕರ ಅಂಶ ಇನ್ನೊಂದಿದೆ. ಸಾಮಾನ್ಯವಾಗಿ ಈ ಮೂರೂ ಒತ್ತಡಮಯ ಅನುಭವಗಳು ಒಬ್ಬ ವ್ಯಕ್ತಿಗೆ ಉಂಟಾಗಲು ಹೋಮ್ಸ್ ಮತ್ತು ರಾಹೆಯವರ ಪಟ್ಟಿಯಲ್ಲಿ ಏಳನೆಯ ಸ್ಥಾನದಲ್ಲಿರುವ ಇನ್ನೊಂದು ಒತ್ತಡ ಆಗಿರಲೇಬೇಕು! ಅದೆಂದರೆ ‘ಮದುವೆ’. ಆ ಪಟ್ಟಿಯಲ್ಲಿ ನಾಲ್ಕನೆಯದು ಜೈಲು ವಾಸಿಯಾಗುವುದು. ಕೆಲವರು ಮದುವೆ ಮತ್ತು ಜೈಲುವಾಸ ಎರಡೂ ಒಂದೇ ಎನ್ನುತ್ತಾರೆ. ಏಕೆ ಹೀಗೆ? ‘ಪ್ರೇಮಿಗಳ ದಿನ’ದ ಬಗ್ಗೆ, ಪ್ರೇಮದ ಬಗ್ಗೆ ಸಂಭ್ರಮಿಸುವ ನಾವು ಮದುವೆಯಾದ ಕೆಲ ವರುಷಗಳಲ್ಲಿ ದಾಂಪತ್ಯದಲ್ಲಿ ‘ಪ್ರೇಮ’ ಎಂಬ ಬಗ್ಗೆ ಮರೆತುಬಿಡುವುದು ಏಕೆ? ಅಥವಾ ಮದುವೆಯಾದ ಒಂದೆರಡು ವರ್ಷಗಳಲ್ಲಿ ಪ್ರೇಮ ಮುರಿದು ಬಿದ್ದು, ಗಂಡ -ಹೆಂಡತಿ ವಿಚ್ಛೇದನಕ್ಕೆ ಅರ್ಜಿ ನೀಡುವ ಪರಿಸ್ಥಿತಿ ಉದ್ಭವಿಸುವ ಕಾರಣವೇನು?
ವಿಚ್ಛೇದನವನ್ನು ತಡೆಯಲು ಅಪ್ಪ-ಅಮ್ಮ-ಅಜ್ಜ-ಅಜ್ಜಿ ಇತ್ಯಾದಿ ಇತ್ಯಾದಿ ಹಿರಿಯರು ತಮ್ಮ ತಮ್ಮ ಅನುಭವಗಳಿಗನುಸಾರವಾಗಿ ಬೋಧಿಸುವ ತಿಳುವಳಿಕೆ ಬಿಟ್ಟರೆ ಮತ್ತ್ಯಾವ ಅರಿವೂ ನಮಗಿಲ್ಲ. ಬಹಳಷ್ಟು ಬಾರಿ ಹಿರಿಯರು ಹೇಳುವ ಯಾವುದನ್ನೂ ಕೇಳುವ ಸ್ಥಿತಿಯಲ್ಲಿಯೂ ‘ದಂಪತಿ’ಗಳಿರುವುದಿಲ್ಲ.
ಮದುವೆಯ ವಯಸ್ಸು ಏರಿದಷ್ಟೂ ವಿಚ್ಛೇದನದ ಸಾಧ್ಯತೆ ಕಡಿಮೆಯಾಗುತ್ತದೆ ಎಂಬುದನ್ನು ಅಧ್ಯಯನಗಳು ನಿರೂಪಿಸಿವೆ. ಏರುವ ವಯಸ್ಸು ಅಂದರೆ 25 ರಿಂದ 30 ವರ್ಷ, ಒಬ್ಬ ವ್ಯಕ್ತಿ (ಹೆಣ್ಣು, ಗಂಡು ಯಾರೇ ಆಗಲಿ) ತನ್ನ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಹಂತಕ್ಕೇರಲು, ಉದ್ಯೋಗ ಮೂಲಕ ಆರ್ಥಿಕ ಸ್ವಾವಲಂಬಿಯಾಗಲು ಸಹಾಯಕವಾಗುತ್ತದೆ. ಹೆಚ್ಚಿದ ವಿದ್ಯಾಭ್ಯಾಸ-ಆರ್ಥಿಕ ಸುರಕ್ಷತೆ ಇವೆರಡೂ ವಿಚ್ಛೇದನದಿಂದ ಮದುವೆಯನ್ನು ರಕ್ಷಿಸುವ ಪ್ರಮುಖ ಕಾರಣಗಳು ಎಂದು ವಿಜ್ಞಾನ ಹೇಳುತ್ತದೆ.
10-12 ವರ್ಷ ಮಕ್ಕಳು ಪ್ರೇಮ ಪತ್ರ ಬರೆಯುತ್ತಾರೆ. ಫೇಸ್ಬುಕ್- ವಾಟ್ಸಪ್ ಪ್ರೇಮ ನಡೆಯುತ್ತದೆ. ಪ್ರೀತಿ-ಪ್ರೇಮದ ಜಗತ್ತಿನಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ, ಮದುವೆಯ ವಯಸ್ಸು ಮಾತ್ರ 1955ರ ‘ಹಿಂದೂ ಮ್ಯಾರೇಜ್ ಆ್ಯಕ್ಟ್’ ನಂತೆ ಹುಡುಗರಿಗೆ 21 ವರ್ಷಗಳು, ಹುಡುಗಿಯರಿಗೆ 18 ವರ್ಷಗಳು.
ನಿಜವಾಗಿ ಆಗಬೇಕಾದ್ದು ಮದುವೆಯ ವಯಸ್ಸು, ಪ್ರೀತಿ-ಪ್ರೇಮದ ವಯಸ್ಸು ಏರುವುದು! ವೈಜ್ಞಾನಿಕವಾಗಿ ನೋಡಿದರೆ ಮಿದುಳಿನ ಬೆಳವಣಿಗೆ ಕನಿಷ್ಟ 25 ವರ್ಷದವರೆಗೆ ಸಾಗುತ್ತದೆ. ಅಂದರೆ ಈ ಹಂತದವರೆಗೆ ನಾವು ಚಂಚಲತೆ-ಮುಂದೆ ಯೋಚಿಸದೆ ಏನನ್ನಾದರೂ ಮಾಡಿಬಿಡುವ ಪ್ರವೃತ್ತಿ, ಇವುಗಳ ಮೇಲೆ ಸ್ವಲ್ಪವಾದರೂ ನಿಯಂತ್ರಣ ಸಾಧಿಸಲು ಕಷ್ಟ. ಹಾಗಾಗಿ 20 ವರ್ಷ ವಯಸ್ಸಿನ ನಮ್ಮ ವ್ಯಕ್ತಿತ್ವಕ್ಕೂ 50 ವರ್ಷ ವಯಸ್ಸಿನ ನಮ್ಮ ವ್ಯಕ್ತಿತ್ವಕ್ಕೂ ತಾಳೆಯೇ ಆಗುವುದಿಲ್ಲ. ಅದೇ 25ರ ನಂತರದ ನಿಮ್ಮ ಸ್ವಭಾವಕ್ಕೂ, 50ರಲ್ಲಿ ನಿಮ್ಮ ಸ್ವಭಾವಕ್ಕೂ ಬಹುಮಟ್ಟಿಗೆ ತಾಳೆಯಾಗುತ್ತದೆ.
ಹಾಗಾಗಿ ಓದುವಾಗ -25ರ ವಯಸ್ಸಿನ ಮೊದಲು ಮನಸ್ಸನ್ನು ಕಟ್ಟಿ ಹಾಕುವುದು, ಪ್ರೀತಿಯನ್ನು ಕಾದಂಬರಿಗಳಿಗೆ -ಸಿನಿಮಾಗಳಿಗೆ ಸೀಮಿತಗೊಳಿಸುವುದು ಸೂಕ್ತ. ಪ್ರೀತಿ-ಪ್ರೇಮಗಳಿಗಾಗಿ ಸದಾ ತುಡಿಯುವ ‘ಹೃದಯ’ ದ ಮನಸ್ಸಿರುವುದು ಮಿದುಳಿನಲ್ಲಿ! ಬುದ್ಧಿಯ ಜೊತೆಗೆ! ಹಾಗಾಗಿ ‘ಪ್ರೇಮಿಗಳ ದಿನ’ಕ್ಕೆ ಹೃದಯವಷ್ಟೇ ಸಾಲದು, ಬುದ್ಧಿಯೂ ಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.