ಸೀರೆಗಳು ಈಗ ಹೆಸರಿಗಷ್ಟೇ ಸೀರೆಗಳಾಗಿ ಉಳಿದಿವೆ. ಲೆಹಂಗಾ ಸೀರೆ, ಧೋತಿ ಸೀರೆ, ಪಲಾಜೋ ಸೀರೆ, ಜಂಪ್‌ಸೂಟ್ ಸೀರೆ ಎಂದು ಇದ್ದಬದ್ದ ಫ್ಯಾಷನ್‌ಗಳಲ್ಲೆಲ್ಲ ಸೀರೆ ಆವಾಹನೆಗೊಂಡು ಹೊಸ ಅವತಾರ ಎತ್ತುತ್ತಿದೆ. ಹಾಗಾಗಿಯೇ ಇಂದಿನ ಜಮಾನದ ಹುಡುಗಿಯರಿಗೆ ಟ್ರೆಂಡಿ ಸೀರೆಗಳು ಹಾಟ್ ಫ್ಯಾಷನ್ ಆಗಿವೆ.
ಅಜ್ಜಿ ಫ್ಯಾಷನ್ ಎನಿಸಿಕೊಳ್ಳುತ್ತಿದ್ದ 36 ಗಜದ ಸೀರೆಗಳು ಈಗ 16ರ ಹುಡುಗಿಯ ಮನಸ್ಸನ್ನೂ ಕದಿಯುತ್ತಿವೆ. ಇದುವರೆಗೂ ಸೀರೆ ಉಡುವ ಶೈಲಿಗಳಲ್ಲಿ ವಿಭಿನ್ನತೆ ಕಂಡುಕೊಂಡಿದ್ದ ಲಲನೆಯರಿಗೆ ಈಗ ಸೀರೆಗಳೇ ವಿಭಿನ್ನವಾಗಿ ಬಂದು ಕಣ್ಮನ ಸೆಳೆಯುತ್ತಿವೆ. ಟ್ರೆಡಿಶನಲ್ ಸೀರೆಗಳಿಗೆ ಅಡಿಶನಲ್ ಸ್ಟೈಲ್ ಸೇರಿಸಿ ಟ್ರೆಂಡಿಯಾಗಿಸಲಾಗಿದೆ. ಇಷ್ಟಕ್ಕೂ ಎಂತೆಂಥ ಸೀರೆಗಳು ಬಂದಿವೆ ಗೊತ್ತಾ?
1. ಬೆಲ್ಟೆಡ್ ಸೀರೆ
ಇದುವರೆಗೂ ಸೀರೆ ಉಟ್ಟಾಗ ಸೊಂಟದ ಪಟ್ಟಿ ಹಾಕುತ್ತಿದ್ದುದು ಗೊತ್ತೇ ಇದೆ. ಈಗ ಅದು ಸೀರೆಯಲ್ಲೇ ಜೊತೆಯಾಗಿ ಬೆಲ್ಟ್ ಆಗಿ ಬಂದಿದೆ. ಲೆಹೆಂಗಾಗಳಿಗೆ, ಮಧುಮಗಳ ಸೀರೆಗೆ ಕೂಡಾ ಈ ಬೆಲ್ಟ್ ವಿನ್ಯಾಸ ಬಂದಿದ್ದು, ಟ್ರೆಡಿಶನಲ್ ಸೀರೆಗಳಿಗೆ ಬೋಲ್ಡ್ ಲುಕ್ ನೀಡುತ್ತಿವೆ. ಇದು ನಿಮ್ಮ ಫಿಗರ್‌ನ್ನು ನಾಜೂಕಾಗಿ ಹೈಲೈಟ್ ಮಾಡುತ್ತದೆ.
2. ಧೋತಿ ಸೀರೆಗಳು
ಕಚ್ಚೆ ಶೈಲಿಯ ಸೀರೆಗಳು ಮಾಡರ್ನ್ ಟಚ್‌ನೊಂದಿಗೆ ಮಾರುಕಟ್ಟೆಗೆ ಬಂದಿವೆ. ರೆಡಿ ಟು ವೇರ್ ಆಗಿ ಬರುವ ಧೋತಿ ಸೀರೆಗಳು ಹೆಚ್ಚು ಬೋಲ್ಡ್ ಆ್ಯಂಡ್ ಅಟ್ರಾಕ್ಟಿವ್ ಎನಿಸುತ್ತವೆ. ಕ್ರಾಪ್ ಕಟ್ ಬ್ಲೌಸ್‌ಗಳು ಇವಕ್ಕೆ ಹೆಚ್ಚು ಸೂಟ್ ಆಗುತ್ತವೆ. ಧೋತಿಯು ತ್ರೀ ಫೋರ್ತ್ ಆಗಿ ಕಾಣುವುದರಿಂದ ಸುಂದರ ವಿನ್ಯಾಸದ ಗೆಜ್ಜೆ ಧರಿಸಿದರೆ ಚೆನ್ನಾಗಿ ಕಾಣುತ್ತದೆ. ಒಳಲಂಗದ ತಾಪತ್ರಯವಿರುವುದಿಲ್ಲವಾದ್ದರಿಂದ ಕಾಲೇಜು ಯುವತಿಯರು ಕಿರಿಕಿರಿ ಇಲ್ಲದೆ ಧರಿಸಬಹುದು.
undefined
ದುಬಾರಿ ಕಾಂಜೀವರಂ ಸೀರೆ ಕೇರ್ ಹೀಗಿರಲಿ....
3. ಗೌನ್ ಸೀರೆಗಳು
ರೆಡಿ ನೆರಿಗೆ ಬರುವ ಈ ಕಾನ್ಸೆಪ್ಟ್ ಸೀರೆಗಳಲ್ಲಿ ಕೆಳಗಿನ ಅರ್ಧಕ್ಕೆ ಗೌನ್ ಲುಕ್ ಇದ್ದರೆ, ಮೇಲಿನ ಅರ್ಧ ಮಾಡರ್ನ್ ಸೀರೆ ಉಟ್ಟಂತಿರುತ್ತದೆ. ಆಫ್ ಶೋಲ್ಡರ್ ಬ್ಲೌಸ್‌ಗಳು ಇವಕ್ಕೆ ಹೆಚ್ಚು ಸೂಟ್ ಆಗುತ್ತವೆ. ಇವು ಪ್ರಿ ಡೇಪ್ಡ್ ಆಗಿರುವುದರಿಂದ ಸಮಯ ಉಳಿತಾಯವಾಗುತ್ತದೆ, ಜೊತೆಗೆ ಸುಲಭವಾಗಿ ತೊಡಬಹುದು.
4. ಕಂಟೆಂಪರರಿ ಪ್ರಿಂಟ್ಸ್
90 ದಶಕದಿಂದಲೂ ಮಾಡರ್ನ್ ಪ್ರಿಂಟ್‌ಗಳು ಫ್ಯಾಷನ್ ದುನಿಯಾದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿವೆ. ದೊಡ್ಡದಾದ ಪ್ರಿಂಟ್‌ಗಳು ಕಿಟಿ ಪಾರ್ಟಿಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೊಟ್ಟಾಗ ಎಲಿಗೆಂಟ್ ಲುಕ್ ನೀಡುತ್ತವೆ. ಹೂವುಗಳು, ಹಕ್ಕಿಗಳು, ಜಿಯೋಮೆಟ್ರಿಕ್ ವಿನ್ಯಾಸಗಳು ಈ ಸೀರೆಯಲ್ಲಿ ಹೆಚ್ಚು ಜನಪ್ರಿಯವಾಗಿವೆ.
5. ಪಲಾಜೋ ಸೀರೆ
ಕಳೆದ ವರ್ಷ ಪಲಾಜೋಗಳು ಹುಡುಗಿಯರಿಗೆ ಹತ್ತಿರವಾಗಿದ್ದವು. ಈಗ ಅದೇ ಪಲಾಜೋ ವಿನ್ಯಾಸ ಸೀರೆಯಲ್ಲಿ ಬಂದಿದೆ. ಇವಕ್ಕೆ ಶರ್ಟ್ ಮಾದರಿಯ ಟಾಪ್‌ನಿಂದ ಹಿಡಿದು ಕ್ರಾಪ್ ಟಾಪ್, ಆಫ್ ಶೋಲ್ಡರ್ ಬ್ಲೌಸ್, ಫುಲ್ ಸ್ಲೀವ್ಸ್ ಬ್ಲೌಸ್, ಜಿಪ್ಪ್ಡ್ ಬ್ಲೌಸ್‌ಗಳನ್ನು ಬಳಸುವುದು ವಿಶೇಷವಾಗಿದೆ. ಇವನ್ನು ಧರಿಸಿ ನೀವು ಬೈಕ್ ಕೂಡಾ ಬಿಡಬಹುದು!
ಸೀರೆಗೂ ಬಂತು ಬ್ಲೌಸ್ ನಲ್ಲೇ ಬೆಲ್ಟ್ : ಏನಿದು ಹೊಸ ಸ್ಟೈಲ್.?
6. ಲೆಹೆಂಗಾ ಸೀರೆ
ಎರಡು ವರ್ಷದ ಹಿಂದೆ ಲೆಹೆಂಗಾಗಳು ಫ್ಯಾಷನ್ ಲೋಕದಲ್ಲಿ ಮಿಂಚಿದ್ದವು. ಈಗ ಅವು ಸೀರೆಯ ರೂಪದಲ್ಲಿ ಬರುತ್ತಿವೆ. ಲೆಹೆಂಗಾ ಸೀರೆಗಳು ರೆಡಿ ನೆರಿಗೆಗಳಿಂದ ಹಿಡಿದು ಕೆಳಗೆ ಸ್ಕರ್ಟ್‌ನಂತೆ ಅಗಲವಾಗಿ ಹರಡಿ ನಿಲ್ಲುವ ವೆರೈಟಿಯಲ್ಲಿ ಬರುತ್ತವೆ. ರಿಸೆಪ್ಶನ್ ಕಾರ್ಯಕ್ರಮಕ್ಕೆ ಹೇಳಿ ಮಾಡಿಸಿದಂಥ ಲೆಹಂಗಾ ಸೀರೆ ಗ್ರ್ಯಾಂಡ್ ಆಗಿ, ಯಂಗ್ ಲುಕ್ ನೀಡುವುದಲ್ಲದೆ ಉಟ್ಟವರ ಚಾರ್ಮ್ ಹೆಚ್ಚಿಸುತ್ತವೆ.
7. ರಫಲ್ ಸೀರೆ
ಜೂಲು ಜೂಲು ಬಾರ್ಡರ್‌ನೊಂದಿಗೆ ಬರುವ ರಫಲ್ ಸೀರೆಗಳು ರೆಟ್ರೋ ಲುಕ್ ನೀಡುತ್ತವೆ. ಬ್ಲೌಸ್ ತೋಳಿನಲ್ಲೂ ಫ್ರಿಲ್ಸ್ ಇಡಿಸಿದರೆ ಈ ಸೀರೆಗಳು ಕಾಕ್‌ಟೇಲ್ ಪಾರ್ಟಿಗೆ ಬೆಸ್ಟ್. ಇಷ್ಟೇ ಅಲ್ಲದೆ, ಈ ಎಲ್ಲ ಸೀರೆಗಳಲ್ಲಿ ಕಲಂಕಾರಿ ವಿನ್ಯಾಸಗಳಿಂದ ಹಿಡಿದು, ಬಾಂದಿನಿ, ಮಿರ ಮಿರ ಮಿಂಚುವ ವರ್ಕ್, ಅಸಿಮೆಟ್ರಿಕಲ್ ವಿನ್ಯಾಸ, ಪ್ಲೀಟ್ಸ್ ಪಕ್ಕದಲ್ಲೊಂದು ಜೇಬು ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಕಾಣಬಹುದು. ಅಲ್ಲದೆ, ವೈವಿಧ್ಯಮಯ ಫ್ಯಾಬ್ರಿಕ್‌ಗಳಲ್ಲಿ ಈ ಕಾನ್ಸೆಪ್ಟ್ ಸೀರೆಗಳು ಲಭ್ಯ. ಎಲ್ಲವೂ ಸೇರಿ ಸೀರೆಯ ಏಕತಾನತೆಯನ್ನು ಕಳೆದು ಸೀರೆಗೆ ಹೆಚ್ಚಿನ ಸ್ಟೈಲ್ ಸ್ಟೇಟ್‌ಮೆಂಟ್ ನೀಡಿವೆ.