ಮಗು ಹುಟ್ಟಿದ್ರೆ ಫ್ರೆಂಡ್ಸ್ ದೂರವಾಗ್ತಾರಾ?

By Web Desk  |  First Published Jul 9, 2019, 10:53 AM IST

ಮಗು ಹುಟ್ಟಿದ ಮೊದಲ ವರ್ಷದಲ್ಲಿ ಬಹುತೇಕ ಪುರುಷರು ತಮ್ಮ ಗೆಳೆಯರನ್ನು ಕಳೆದುಕೊಳ್ಳುತ್ತಾರೆ, ಅವರ ಸಂಪರ್ಕದಿಂದ ದೂರಾಗುತ್ತಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. 


ತಂದೆಯಾಗುವುದು ಜೀವನದ ಬಹಳ ಖುಷಿ ಕೊಡುವ ಸಂದರ್ಭಗಳಲ್ಲಿ ಒಂದು. ಮುದ್ದಾದ ಪುಟ್ಟ ಜೀವಕ್ಕೆ ಅಪ್ಪ ಎನಿಸಿಕೊಳ್ಳುವ ಸಂತೋಷವೇ ಬೇರೆ, ಅದು ಜಗವನ್ನೇ ಮರೆಸುತ್ತದೆ. ಆದರೆ, ಜಗತ್ತು ಕೂಡಾ ಈ ಸಮಯದಲ್ಲಿ ನಿಮ್ಮನ್ನು ಮರೆಯುತ್ತದೆ ಎನ್ನುತ್ತಿದೆ ಹೊಸ ಸರ್ವೆಯೊಂದು. ಹೌದು, ಅಪ್ಪನಾದ ಒಂದು ವರ್ಷದ ಅವಧಿಯಲ್ಲಿ ಗೆಳೆಯರು, ನೆಂಟರು ಹಾಗೂ ಸಹೋದ್ಯೋಗಿಗಳ ಸಹವಾಸ ತಗ್ಗಿ ಅವರಿಂದ ದೂರವಾಗುವ ಸಾಧ್ಯತೆಗಳು ಹೆಚ್ಚು. ಬಹಳಷ್ಟು ಪುರುಷರು ಈ ಅನುಭವವನ್ನು ಹಂಚಿಕೊಂಡಿರುವುದಾಗಿ ಹೊಸ ಸರ್ವೆಯ ಫಲಿತಾಂಶ ತಿಳಿಸಿದೆ.

ಕಚಗುಳಿ ಮಾಡಿ ಮಗುವಿಗೆ ಟಾರ್ಚರ್ ಕೊಡಬೇಡಿ...

Latest Videos

undefined

 ಐವರಲ್ಲಿ ಒಬ್ಬ ವ್ಯಕ್ತಿಯು ಪೋಷಕನಾದ 12 ತಿಂಗಳೊಳಗೆ ಗೆಳೆಯರನ್ನು ಕಳೆದುಕೊಳ್ಳುತ್ತಿರುವುದಷ್ಟೇ ಅಲ್ಲ, ಒಳ್ಳೆಯ ಗೆಳೆಯರಿಲ್ಲದ ಹೊಸ ಅಪ್ಪಂದಿರು ಕೂಡಾ ಪೋಷಕತನದ ಜವಾಬ್ದಾರಿಯಿಂದ ಹೈರಾಣಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಸರ್ವೆ ಹೇಳಿದೆ.

ಮೊವೆಂಬರ್ ಫೌಂಡೇಶನ್ ಸಂಸ್ಥೆಯು ಕೆನಡಾ, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್‌‌ನ ಹೊಸ ಅಪ್ಪಂದಿರನ್ನು ಬಳಸಿಕೊಂಡು ಈ ಸರ್ವೆ ನಡೆಸಿದೆ. ಸುಮಾರು 4000 ಪುರುಷರು ಅಪ್ಪಂದಿರಾದ ಬಳಿಕದ ಸಾಮಾಜಿಕ ಹಾಗೂ ವೈಯಕ್ತಿಕ ಬದಲಾವಣೆಗಳನ್ನು ಹಂಚಿಕೊಂಡಿದ್ದಾರೆ.

ಶೇ.20ರಷ್ಟು ನವಅಪ್ಪಂದಿರು, ತಾವು ತಂದೆಯಾದ ಬಳಿಕದ ವರ್ಷದೊಳಗೆ ಕ್ಲೋಸ್ ಫ್ರೆಂಡ್ಸನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ. ಇನ್ನು, ಒಳ್ಳೆಯ ಗೆಳೆಯರಿಲ್ಲದ ಶೇ.33 ಮಂದಿ, ತಂದೆಯಾದ ಬಳಿಕ ಜವಾಬ್ದಾರಿಯು ಹೆಚ್ಚಿದ್ದು, ತಾವು ಒತ್ತಡದಿಂದ ಬಳಲುತ್ತಿರುವುದಾಗಿ ತಿಳಿಸಿದ್ದರೆ, ಕನಿಷ್ಠ ಓರ್ವ ಕ್ಲೋಸ್ ಫ್ರೆಂಡ್ ಇರುವವರಲ್ಲಿ ಒತ್ತಡ ಅನುಭವಿಸುತ್ತಿರುವವರ ಸಂಖ್ಯೆ ಶೇ.23. ಮೊದಲ ಬಾರಿಗೆ ಅಪ್ಪಂದಿರಾದ, ಅದರಲ್ಲೂ ವಯಸ್ಸಿನಲ್ಲಿ ಇನ್ನೂ ಯುವಕರಾಗಿರುವವರಲ್ಲಿ ಶೇ.23 ಮಂದಿ ತಾವು ಎಲ್ಲರಿಂದ ಬೇರೆಯಾಗಿ ಒಂಟಿಯಾದಂತೆನಿಸುತ್ತದೆ ಎಂದಿದ್ದಾರೆ. 
 ಉತ್ತಮ ಗೆಳೆಯರನ್ನು ಹೊಂದಿರುವವರು ಒತ್ತಡವನ್ನು ಚೆನ್ನಾಗಿ ನಿಭಾಯಿಸಬಲ್ಲರು. ಆದರೆ, ಆಪ್ತಮಿತ್ರರಿಲ್ಲದವರು ಒಂಟಿತನದಿಂದ ಬಳಲುತ್ತಾರೆ. ಹೀಗಾಗಿ, ಎಷ್ಟು ಗೆಳೆಯರಿದ್ದಾರೆ ಎಂಬುದಕ್ಕಿಂತ ಎಂಥ ಗೆಳೆಯರಿದ್ದಾರೆ ಎಂಬುದು ಮುಖ್ಯ ಎಂದು ವರದಿಯು ಸಲಹೆ ನೀಡಿದೆ. 

ಮಕ್ಕಳ ಬೆರಳು ಚೀಪೋ ಅಭ್ಯಾಸ ಬಿಡಿಸೋಕೆ ಹೀಗ್ ಮಾಡಿ!

ಮಹಿಳೆಯರಲ್ಲಿ ಒತ್ತಡ ಹೆಚ್ಚು

ಇದಕ್ಕೂ ಮುನ್ನ ಎನ್‌ಎಚ್ಎಸ್ ಇಂಗ್ಲೆಂಡ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ, ಪ್ರತಿ ಐದರಲ್ಲಿ ಓರ್ವ ಮಹಿಳೆ ತಾಯಿಯಾದ ಬಳಿಕ ಖಿನ್ನತೆ,  ಆತಂಕ ಮುಂತಾದ ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಾಳೆ, ಈ ಸಂಖ್ಯೆ ಪುರುಷರಲ್ಲಿ 10ರಲ್ಲಿ 1 ಎಂದಿತ್ತು. ಈ ಫಲಿತಾಂಶ ಕಂಡುಕೊಂಡ ಬಳಿಕ, ಪುರುಷರಿಗೆ ಸಹಾಯ ಮಾಡುವ ಸಲುವಾಗಿ, ಮಗುವಾದ ನಂತರ ಅವರ ಮಾನಸಿಕ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯ ಆಫರನ್ನು ಕೂಡಾ ಸಂಸ್ಥೆ ನೀಡಿತ್ತು. 

ಸೂಪರ್ ಪೇರೆಂಟ್‌ ಆಗೋಕೆ ಸೂಪರ್ ಟಿಪ್ಸ್‌!

ಅಪ್ಪನಾದಾಗ ಗೆಳೆಯರ ವಿಷಯದಲ್ಲಿ ಎಡವುದೆಲ್ಲಿ?

ತಂದೆಯಾದ ಹೊಸತರಲ್ಲಿ ಹಿಂದೆಂದೂ ಇಲ್ಲದಷ್ಟು ಜವಾಬ್ದಾರಿ ಹೆಗಲಿಗೇರುತ್ತದೆ. ರಾತ್ರಿಗಳು ನಿದ್ದೆಯಿಲ್ಲದೆ ಕಳೆಯುತ್ತವೆ. ಹಗಲು ಆಫೀಸಿನ ಸಮಯ ಬಿಟ್ಟರೆ ಮಗುವಿನ ಡೈಪರ್ ಚೇಂಜ್ ಮಾಡುವುದರಲ್ಲಿ, ತಾಯಿ ಸ್ನಾನ, ಊಟ ಎಂದು ಮಾಡುವಾಗ ಮಗುವನ್ನು ಸಂತೈಸುವಲ್ಲಿ ಕಳೆದು ಹೋಗುತ್ತದೆ. ಮಗು ಹುಟ್ಟಿದಾಗ ಬಂದ ಕಂಗ್ರಾಜುಲೇಶನ್ಸ್ ಸಂದೇಶಗಳ ಹೊರತಾಗಿ ಯಾವ ಗೆಳೆಯರ ಸಂದೇಶಗಳಿಗೆ ಪ್ರತಿಕ್ರಿಯಿಸುವುದು ಹೋಗಲಿ, ಓದುವುದಕ್ಕೂ ಸಮಯವಾಗುವುದಿಲ್ಲ. ಹೀಗೆ ತಮಗೇ ಗೊತ್ತಿಲ್ಲದೆ ಗೆಳೆಯರನ್ನು ಇಗ್ನೋರ್ ಮಾಡುವವರು ಹಲವರು. ಇನ್ನು, ಸಾಮಾನ್ಯವಾಗಿ ಗೆಳೆಯರಲ್ಲರೂ ಒಂದೇ ವಯೋಮಾನದವರಾಗಿರುವ ಕಾರಣ ಅವರಿಗೂ ಮಕ್ಕಳಾಯಿತೆಂದರೆ ಮುಗಿಯಿತು, ಇವರು ಫ್ರೀ ಮಾಡಿಕೊಂಡ ಸಮಯಕ್ಕೆ ಅವರು ಫ್ರೀ ಇರುವುದಿಲ್ಲ, ಅವರು ಫ್ರೀಯಾದ ಹೊತ್ತಿಗೆ ಇವರು ಮಗುವಿಗೆ ಜೋಗುಳ ಹಾಡುತ್ತಿರುತ್ತಾರೆ. ಒಟ್ಟಿನಲ್ಲಿ ವರ್ಷಗಳ ಕಾಲ ಗೆಳೆಯರ ಮುಖ ನೋಡುವುದು ಅಸಾಧ್ಯವಾಗುತ್ತದೆ. ಅಲ್ಲದೆ, ಮಗುವಿನ ಭವಿಷ್ಯಕ್ಕಾಗಿ ಹೆಚ್ಚು ದುಡಿಯುವ ಒತ್ತಡ ಬೇರೆ. ಬದುಕು ಎಲ್ಲ ಕಡೆಗಳಿಂದಲೂ ಮಗುವಿನ ಸುತ್ತಲೇ ಸುತ್ತಲಾರಂಭಿಸುತ್ತದೆ. ಮಗುವಿನ ಪರಿಧಿಯಿಂದ ತಪ್ಪಿಸಿಕೊಂಡು ತಮ್ಮ ಮುಂಚಿನ ಬದುಕನ್ನು ಹುಡುಕುವ ಹೊತ್ತಿಗೆ ಹಲವು ಬದಲಾವಣೆಗಲಾಗಿರುತ್ತವೆ. ಗೆಳೆಯರು ಅಪರೂಪದವರಾಗುತ್ತಾರೆ ಎನ್ನುತ್ತದೆ ಸೈಕಾಲಜಿ. 

click me!