
ನಿತ್ಯದ ಜಂಜಾಟಗಳಿಂದ ಬ್ರೇಕ್ ಪಡೆದು ನಾಲ್ಕೈದು ದಿನ ಎಲ್ಲಾದರೂ ಸುತ್ತಾಡಿಕೊಂಡು ಬರುವ ಪ್ಲ್ಯಾನ್ ಮಾಡುತ್ತೀರಿ.ಟ್ರಾವೆಲ್ ಮಾಡೋ ನಿರ್ಧಾರ ಕೈಗೊಂಡ ತಕ್ಷಣ ಮೊದಲಿಗೆ ಎದ್ದೇಳುವ ಪ್ರಶ್ನೆ ಯಾವ ಹೋಟೆಲ್ ಬುಕ್ ಮಾಡೋದು? ಎಂಬುದು. ನೀವು ಆ ಊರಿನಲ್ಲಿ ವಾಸ್ತವ್ಯ ಹೂಡಿರುವಷ್ಟು ದಿನ ಕಂಫರ್ಟ್ ಆಗಿರಲು ನೀವು ಉಳಿಯುವ ಲಾಡ್ಜ್ ಅಥವಾ ಹೋಟೆಲ್ ಚೆನ್ನಾಗಿರುವುದು ಅಗತ್ಯ.ಇಂದು ಹೋಟೆಲ್ ಆಯ್ಕೆ ಮೊದಲಿನಷ್ಟು ಕಷ್ಟಕರವಾಗಿಯೇನೂ ಉಳಿದಿಲ್ಲ.ಆನ್‍ಲೈನ್ ಮೂಲಕ ನೀವು ಮನೆಯಲ್ಲೇ ಕುಳಿತು ಮುಂಚಿತವಾಗಿಯೇ ಹೋಟೆಲ್ ಬುಕ್ ಮಾಡಬಹುದು. ಜೊತೆಗೆ ಆ ಊರಿನಲ್ಲಿರುವ ಹೋಟೆಲ್‍ಗಳು,ಅಲ್ಲಿನ ಸೇವೆ,ಬೆಲೆ ಎಲ್ಲದರ ಬಗ್ಗೆಯೂ ಇಂಟರ್ನೆಟ್‍ನಲ್ಲಿ ನಿಮಗೆ ಸಾಕಷ್ಟು ಮಾಹಿತಿ ಸಿಗುತ್ತದೆ. ಇನ್ನು ಈಗಾಗಲೇ ಆ ಹೋಟೆಲ್‍ಗೆ ಭೇಟಿ ನೀಡಿರುವ ಗ್ರಾಹಕರ ವಿಮರ್ಶೆಗಳನ್ನು ನೋಡಿ ನಿಮ್ಮ ಬಜೆಟ್ ಹಾಗೂ ಅಭಿರುಚಿಗೆ ಸೂಕ್ತವಾದ ಹೋಟೆಲ್ ಆಯ್ಕೆ ಮಾಡಿಕೊಳ್ಳಬಹುದು. ಹೋಟೆಲ್‍ಗಳ ಕುರಿತು ಸಾಕಷ್ಟು ಮಾಹಿತಿ ಬೆರಳ ತುದಿಯಲ್ಲಿದ್ದರೂ ಆಯ್ಕೆ ಸಂದರ್ಭದಲ್ಲಿ ಕೆಲವೊಂದು ಅಂಶಗಳನ್ನು ಗಮನಿಸುವುದು ಅಗತ್ಯ.
ಭಾರತೀಯರು ಶೋ ಆಫ್‌ಗಾಗಿ ಪ್ರವಾಸ ಹೋಗುತ್ತಾರಂತೆ!
ಪ್ರವಾಸಿಗರಿಗೆ ಇವೆರಡು ಮುಖ್ಯ?: ಪರ್ಫೆಕ್ಟ್ ಹೋಟೆಲ್ ರೂಮ್‍ಗಾಗಿ ತಡಕಾಡುವ ಪ್ರವಾಸಿಗರು ಯಾವೆಲ್ಲ ವಿಚಾರಗಳಿಗೆ ಮಹತ್ವ ನೀಡುತ್ತಾರೆ ಎಂಬ ಕುರಿತು ಹೋಟೆಲ್ಸ್ ಡಾಟ್ ಕಾಮ್ ಕೆಲವು ತಿಂಗಳ ಹಿಂದೆ ಸಮೀಕ್ಷೆ ನಡೆಸಿತ್ತು. ಇದರ ಅನ್ವಯ ಪ್ರವಾಸಿಗರು ಹೋಟೆಲ್ ಬುಕ್ ಮಾಡುವಾಗ ಅಲ್ಲಿನ ಊಟ-ತಿಂಡಿಯ ರುಚಿ ಬಗ್ಗೆಯಾಗಲಿ ಅಥವಾ ವೈಫೈ ಫಾಸ್ಟ್ ಇದೆಯೋ ಇಲ್ಲವೋ ಎಂಬ ಬಗ್ಗೆಯಾಗಲಿ ತಲೆಕೆಡಿಸಿಕೊಳ್ಳುವುದಿಲ್ಲ.ಬದಲಿಗೆ ಇವರು ಮಹತ್ವ ನೀಡುವ ಎರಡು ಪ್ರಮುಖ ವಿಚಾರಗಳೆಂದರೆ ಸ್ವಚ್ಛತೆ ಹಾಗೂ ಸ್ನೇಹಪರ ಸಿಬ್ಬಂದಿ. ನೀವು ಹೋಟೆಲ್ ಬುಕ್ ಮಾಡುವಾಗ ಈ ಎರಡು ಸಂಗತಿಗಳ ಜೊತೆಗೆ ಇನ್ನೂ ಕೆಲವು ವಿಚಾರಗಳನ್ನು ಗಮನಿಸಲು ಮರೆಯಬೇಡಿ.
•ಸ್ವಚ್ಛತೆ: ಹೋಟೆಲ್ ಸ್ವಚ್ಛವಾಗಿದ್ದರೆ ಅಲ್ಲಿರುವಷ್ಟು ದಿನ ನೆಮ್ಮದಿಯಿಂದ ಇರಲು ಸಾಧ್ಯ.ರೂಮ್,ಬೆಡ್‍ಶೀಟ್, ಹೊದಿಕೆಗಳು,ವಾಷ್‍ರೂಮ್ ಎಲ್ಲವೂ ಕ್ಲೀನಾಗಿರುವುದು ಅಗತ್ಯ.ಇಲ್ಲವಾದರೆ ಮನಸ್ಸಿಗೆ ಕಿರಿಕಿರಿಯಾಗುವ ಜೊತೆಗೆ ಇಲ್ಲಿಂದ ಎಷ್ಟು ಬೇಗ ಜಾಗ ಖಾಲಿ ಮಾಡುತ್ತೇವೆಯೋ ಎಂಬ ಭಾವನೆ ಮೂಡುವುದು ಪಕ್ಕಾ.ಪ್ರವಾಸಕ್ಕೆ ಹೋದಾಗ ಹೋಟೆಲ್ ರೂಮ್‍ನಲ್ಲಿ ನಾವು ಹೆಚ್ಚಿನ ಸಮಯ ಕಳೆಯುವುದಿಲ್ಲವಾದರೂ ಹಗಲಿಡೀ ಸುತ್ತಾಡಿ ಸುಸ್ತಾಗಿ ರಾತ್ರಿ ರೂಮ್‍ಗೆ ಹಿಂತಿರುಗಿದಾಗ ದೇಹ ಹಾಗೂ ಮನಸ್ಸು ಎರಡೂ ರಿಲಾಕ್ಸ್ ಆಗಲು ಅಲ್ಲಿರುವ ಪ್ರತಿ ವಸ್ತುವೂ ಸ್ವಚ್ಛವಾಗಿರುವುದು ಅಗತ್ಯ.ಸ್ವಚ್ಛ, ಸುಂದರವಾದ ಹೋಟೆಲ್ ರೂಮ್ ದಿನದ ಆಯಾಸವನ್ನೆಲ್ಲ ಮರೆಸಿಬಿಡಬಲ್ಲದು.
ಆಯಾಸವಿಲ್ಲದ ಪ್ರವಾಸಕ್ಕಿವೆ ಹತ್ತಾರು ದಾರಿಗಳು
•ಸ್ನೇಹಪರತೆ: ಸದಾ ಮುಖದಲ್ಲೊಂದು ನಗು ಹೊತ್ತು ಸಹಾಯಹಸ್ತ ಚಾಚುವ ಸಿಬ್ಬಂದಿಯಿರುವ ಹೋಟೆಲ್ ಸಹಜವಾಗಿಯೇ ಪ್ರವಾಸಿಗರಿಗೆ ಇಷ್ಟವಾಗುತ್ತದೆ.ಗುರುತು ಪರಿಚಯವಿಲ್ಲದ ಊರಿನಲ್ಲಿ ಹೋಟೆಲ್ ಸಿಬ್ಬಂದಿ ಸ್ನೇಹಪರರಾಗಿದ್ದರೆ ಅಗತ್ಯ ಮಾಹಿತಿಗಳ ಜೊತೆಗೆ ಸಹಾಯವೂ ದೊರಕುತ್ತದೆ.ಉದಾಹರಣೆಗೆ ನೀವು ಭೇಟಿ ನೀಡಿರುವ ಪ್ರದೇಶದ ಆಹಾರ ಪದ್ಧತಿ ಬಗ್ಗೆ ನಿಮಗೆ ಮಾಹಿತಿಯಿಲ್ಲದಿರಬಹುದು.ಅಲ್ಲಿನ ಸ್ಪೆಷಲ್ ಖಾದ್ಯಗಳ ರುಚಿ ನೋಡಬೇಕೆಂಬ ಬಯಕೆ ಇರುತ್ತದೆ. ಈ ಕುರಿತ ಮಾಹಿತಿಯನ್ನು ಹೋಟೆಲ್ ಸಿಬ್ಬಂದಿ ನಿಮಗೆ ನೀಡಿದರೆ ಎಷ್ಟು ಖುಷಿಯಾಗುತ್ತದೆ ಅಲ್ಲವೆ?
•ಹೋಟೆಲ್ ಇರುವ ಪ್ರದೇಶ: ಹೋಟೆಲ್ ಬುಕ್ ಮಾಡುವಾಗ ಅದು ಯಾವ ಪ್ರದೇಶದಲ್ಲಿದೆ ಎಂಬುದನ್ನು ಗಮನಿಸುವುದು ಮುಖ್ಯ.ಅಂದರೆ ನೀವು ಭೇಟಿ ನೀಡಲಿರುವ ಪ್ರದೇಶಗಳಿಗೆ ಅಲ್ಲಿಂದ ಸುಲಭವಾಗಿ ಹೋಗಿ ಬರುವಂತಿರಬೇಕು. ಸಾರಿಗೆ ಸಂಪರ್ಕ,ಟ್ರಾಫಿಕ್ ಎಲ್ಲವನ್ನೂ ಗಮನಿಸಿ.ನಗರದಿಂದ ಹೊರವಲಯದಲ್ಲಿರುವ ಹೋಟೆಲ್ ಬುಕ್ ಮಾಡುವುದರಿಂದ ನಗರದೊಳಗಿನ ಪ್ರದೇಶಗಳಿಗೆ ಹೋಗಿ ಬರಲು ಹೆಚ್ಚಿನ ಸಮಯ ಹಿಡಿಯಬಹುದು.ಆದಕಾರಣ ನೀವು ಭೇಟಿ ನೀಡಲಿರುವ ಸ್ಥಳಗಳನ್ನು ಆಧರಿಸಿ ಹೋಟೆಲ್ ಬುಕ್ ಮಾಡಿ.ಇನ್ನು ಪ್ರಾಕೃತಿಕ ಸೊಬಗನ್ನು ಹೊಂದಿರುವ ಹೋಟೆಲ್‍ನಲ್ಲಿ ಇರಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ ಅಂಥ ಹೋಟೆಲ್ ಬುಕ್ ಮಾಡಬಹುದು.ಉದಾಹರಣೆಗೆ ಬೀಚ್ ಇರುವ ಪ್ರದೇಶಗಳಿಗೆ ನೀವು ಪ್ರವಾಸಕ್ಕೆ ತೆರಳುವುದಾದರೆ ಸಮುದ್ರಕ್ಕೆ ಸಮೀಪದಲ್ಲಿರುವ ಅಥವಾ ರೂಮ್‍ನಿಂದಲೇ ಸಮುದ್ರ ವೀಕ್ಷಣೆ ಮಾಡಬಹುದಾದ ಹೋಟೆಲ್ ಅನ್ನು ಬುಕ್ ಮಾಡಬಹುದು. ಯಾವುದಕ್ಕೂ ಹೋಟೆಲ್ ಬುಕ್ ಮಾಡುವ ಮುನ್ನ ಅದರ ವಿಳಾಸವನ್ನು ಗೂಗಲ್ ಮ್ಯಾಪ್‍ನಲ್ಲಿ ಚೆಕ್ ಮಾಡಿ,ನಗರದ ಯಾವ ಭಾಗದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.
ವಯನಾಡ್‌ನಲ್ಲಿ ಎರಡು ದಿನದಲ್ಲಿ ಏನೆಲ್ಲ ನೋಡಬಹುದು?
•ತಗಲುವ ವೆಚ್ಚ: ರೂಮ್ ಬೆಲೆ ಹೋಟೆಲ್ ವೆಬ್‍ಸೈಟ್, ಬುಕ್ಕಿಂಗ್ ಪೋರ್ಟಲ್‍ಗಳಲ್ಲಿ ನಮೂದಿಸಿರುತ್ತಾರೆ. ನಿಮ್ಮ ಬಜೆಟ್‍ಗೆ ಮ್ಯಾಚಾಗುವ ರೂಮ್ ಆಯ್ಕೆ ಮಾಡಿ. ಸಾಧ್ಯವಾದರೆ ಹೋಟೆಲ್‍ಗೆ ನೇರವಾಗಿ ಕರೆ ಮಾಡಿ ಬೆಲೆ ವಿಚಾರಿಸಿ. ಬೆಲೆ ತಗ್ಗಿಸುವಂತೆ ಚೌಕಾಶಿ ಮಾಡಲು ಹಿಂಜರಿಯಬೇಡಿ.ಕೆಲವೊಮ್ಮೆ ಪ್ರವಾಸಿಗರ ಸಂಖ್ಯೆ ಕಡಿಮೆಯಿರುವಾಗ ಹೋಟೆಲ್‍ಗಳು ಆಫರ್ ಪ್ರೈಸ್ ನೀಡುತ್ತವೆ.
•ಫುಡ್ ಓಕೆನಾ: ಇನ್ನು ಹೋಟೆಲ್‍ನ ವ್ಯವಸ್ಥೆಗಳ ಜೊತೆಗೆ ಅಲ್ಲಿನ ಫುಡ್ ಬಗ್ಗೆ ಆನ್‍ಲೈನ್‍ನಲ್ಲಿ ಸಾಕಷ್ಟು ಮಂದಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುತ್ತಾರೆ.ಅವುಗಳನ್ನು ಪರಿಶೀಲಿಸಿ. ನೀವು ನಾಲ್ಕೈದು ದಿನ ಅಲ್ಲಿರುವ ಕಾರಣ ಫುಡ್ ಚೆನ್ನಾಗಿದ್ದರೆ ಮಾತ್ರ ಮನಸ್ಸು ಪ್ರಶಾಂತವಾಗಿರುತ್ತದೆ.ಅಲ್ಲದೆ, ಫುಡ್ ಚೆನ್ನಾಗಿಲ್ಲದಿದ್ದರೆ ಊಟ, ತಿಂಡಿಗೆ ಹೆಚ್ಚುವರಿ ಹಣ ವ್ಯಯಿಸಬೇಕಾಗುತ್ತದೆ.ಹೋಟೆಲ್ ಚೆನ್ನಾಗಿದ್ದರೆ ನಿಮ್ಮ ಟ್ರಿಪ್ ಕೂಡ ಸುಖಕರವಾಗಿರುತ್ತದೆ.ಯಾವುದೇ ಅಸಮಾಧಾನವಿಲ್ಲದೆ ನಗು ಮುಖದೊಂದಿಗೆ ನೀವು ಮನೆಗೆ ಮರಳುತ್ತೀರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.