ಇಲ್ಲೊಂದು ಕಡೆ ಮದುಮಗನ ಸ್ನೇಹಿತರು ಮಾಡಿದ ಕಿತಾಪತಿಯೊಂದು ಸಖತ್ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಕೆಲವರು ನಮಗೂ ಇಂತಹ ಗೆಳೆಯನ ಕೊಡು ದೇವ್ರೆ ಅಂತ ಬೇಡ್ಕೋತ್ತಿದ್ದಾರೆ. ಹಾಗಿದ್ರೆ ಆ ಹುಡುಗರು ಮಾಡಿದ ಕಿತಾಪತಿಯಾದ್ರೂ ಏನು ಈ ವೀಡಿಯೋ ನೋಡಿ..
ನವದೆಹಲಿ: ಮದುವೆ ಮನೆ ಅಂದ್ರೆ ಅಲ್ಲಿ ಹೇಳ ತೀರದ ಸಂಭ್ರಮ ನೆಲೆಸಿರುತ್ತದೆ. ಈ ಮದ್ವೆಯ ಜೋಶ್ ಅನ್ನು ಮತ್ತಷ್ಟು ಹೆಚ್ಚು ಮಾಡ್ಸೋದು ವಧು/ವರರ ಸ್ನೇಹಿತರು ಬಂಧುಗಳು ಕಸಿನ್ಸ್‌ಗಳು ಹಾಗೂ ಆತ್ಮೀಯರು. ಮದ್ವೆ ಎಂದ ಕೂಡಲೇ ಬಹುತೇಕ ಸ್ನೇಹಿತರು ಜಾಲಿ ಮಾಡುವುದಕ್ಕೆ ಪ್ಲಾನ್ ಮಾಡ್ತಾರೆ. ಸ್ನೇಹಿತರ ಜೊತೆ ಬೆರೆತು ಸಂಭ್ರಮಿಸುವುದಕ್ಕೆ ಬಹುಕಾಲದ ನಂತರ ಎಲ್ಲರೂ ಜೊತೆಯಾಗಿ ಸೇರಿ ಸಂಭ್ರಮಿಸುವುದಕ್ಕೆ ಆತ್ಮೀಯರೊಬ್ಬರ ಒಂದು ಮದ್ವೆ ನೆಪವಾಗುತ್ತದೆ. ಹೀಗೆ ಮದ್ವೆಗೆ ಬಂದು ಒಟ್ಟು ಸೇರುವ ಎಲ್ಲಾ ಗೆಳೆಯರು ಕಸಿನ್ಸ್‌ಗಳು ಮದ್ವೆ ಮನೆಯ ಕಳೆ ಹೆಚ್ಚಿಸಲು ಏನಾದರೊಂದು ಕಿತಾಪತಿ ಮಾಡುವ ಪ್ಲಾನ್ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಮದುಮಗನ ಸ್ನೇಹಿತರು ಮಾಡಿದ ಕಿತಾಪತಿಯೊಂದು ಸಖತ್ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಕೆಲವರು ನಮಗೂ ಇಂತಹ ಗೆಳೆಯನ ಕೊಡು ದೇವ್ರೆ ಅಂತ ಬೇಡ್ಕೋತ್ತಿದ್ದಾರೆ. ಹಾಗಿದ್ರೆ ಆ ಹುಡುಗರು ಮಾಡಿದ ಕಿತಾಪತಿಯಾದ್ರೂ ಏನು ಈ ವೀಡಿಯೋ ನೋಡಿ..
ಭಾರತೀಯ ಮದ್ವೆಗಳೆಂದರೆ ಅಲ್ಲಿ ನೂರೆಂಟು ಸಂಪ್ರದಾಯಗಳಿರುತ್ತವೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಒಂದು ಸಮುದಾಯದಿಂದ ಮತ್ತೊಂದು ಸಮುದಾಯಕ್ಕೆ ಈ ಸಂಪ್ರದಾಯಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ. ಹಾಗೆಯೇ ಉತ್ತರ ಭಾರತದಲ್ಲಿ ಮದ್ವೆಯಷ್ಟೇ ಗ್ರ್ಯಾಂಡ್ ಹಿಂದಿನ ದಿನ ನಡೆಯುವ ಎಣ್ಣೆ ಅರಿಶಿಣ ಶಾಸ್ತ್ರ ಇದನ್ನು ಉತ್ತರ ಭಾರತದಲ್ಲಿ ಹಳದಿ ಕಾರ್ಯಕ್ರಮ (Haldi ceremony) ಎಂದು ಕರೆದರೆ ನಮ್ ಕಡೆ ಅರಶಿಣ ಶಾಸ್ತ್ರ ಎಂದು ಕರೆಯುತ್ತಾರೆ. ಈ ಸಂಪ್ರದಾಯದ ಪ್ರಕಾರ ವಧು ಅಥವಾ ವರನನ್ನು ಮನೆ ಮುಂದೆ ಕೂರಿಸಿ ಅವರಿಗೆ ಕುಟುಂಬದ ಹಿರಿಯರು ಮುತ್ತೈದೆಯರು, ಆತ್ಮೀಯ ಸ್ನೇಹಿತರು, ಆತ್ಮೀಯ ಬಂಧುಗಳು ಒಬ್ಬೊಬ್ಬರಾಗಿ ಅರಿಶಿಣ ಹಚ್ಚುತ್ತಾರೆ, ಕೆಲವು ಕಡೆ ಗಂಧ ಚಂದನವನ್ನು ಕೂಡ ಹಚ್ಚುತ್ತಾರೆ. ಅರಿಶಿನ ಹಚ್ಚಿದ ಬಳಿಕ ನೀರಿನ ಹಾಲಿನ ಅಭಿಷೇಕವನ್ನು ವಧು/ವರರ ಮೇಲೆ ಮಾಡಲಾಗುತ್ತದೆ. ಆದರೆ ಇಲ್ಲಿ ಇದೇ ಸಂದರ್ಭವನ್ನು ವರನ ಗೆಳೆಯರು ಕಿತಾಪತಿ ಮಾಡಲು ಬಳಸಿದು, ಹಾಲು ನೀರು ಅಭಿಷೇಕ ಮಾಡುವ ಬದಲು ತಮ್ಮ ಆತ್ಮೀಯ ಗೆಳೆಯನಿಗೆ ಬೀರಿನ ಅಭಿಷೇಕ ಮಾಡಿದ್ದಾರೆ.
ವಧುವಿನಂತೆ ಡ್ರೆಸ್ ಮಾಡಿಕೊಂಡು ಫೋಟೋಶೂಟ್ ಮಾಡಿಸಿದ ಮದುವೆ ಗಂಡು! ಹಿಂಗ್ಯಾಕೆ ಮಾಡಿದ?
ಹಾಲು ನೊರೆ ಉಕ್ಕುವ ಬದಲು ವರನ ಮೈಮೇಲೆ ಬಿದ್ದ ನೀರು ನೊರೆನೊರೆಯಾಗಿ ಸುರಿದು ಹೋಗುತ್ತಿದೆ. ಈ ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಮನೆ ಮುಂದೆ ಚಪ್ಪರದ ಕೆಳಗೆ ಮದುಮಗನನ್ನು ಕೂರಿಸಲಾಗಿದೆ. ಮಧುಮಗ ಹಳದಿ ಕುರ್ತಾ ಬಿಳಿ ಪ್ಯಾಂಟ್ ಧರಿಸಿದ್ದು, ಮುಖ ಅರಿಶಿಣ ನೀರಿನಿಂದ ಕಳೆಗಟ್ಟಿದೆ. ಈ ವೇಳೆ ಕಿಂಗ್ ಫಿಷರ್ (King fisher) ಬೀರ್ ಬಾಟಲ್ ಹಿಡಿದು ಬಂದ ಗೆಳೆಯರು ಆತನಿಗೆ ತಿಳಿಯದಂತೆ ಆತನ ಮೇಲೆ ಬೀರ್‌ನ್ನು ಅಭಿಷೇಕ ಮಾಡಿದ್ದಾರೆ. ಬೀರ್ ಮೈಮೇಲೆ ಚೆಲ್ಲುತ್ತಿದ್ದಂತೆ ಮಧುಮಗನಿಗೆ ಇದು ಬೀರ್ ಎಂಬುದು ಗೊತ್ತಾಗಿದ್ದು, ಆತ ನಗುತ್ತಾ ಅಲ್ಲೇ ಬಾಯ್ಬಿಟ್ಟು ಕುಡಿಯಲು ಮುಂದಾಗಿ ತುಂಟತನ ತೋರುತ್ತಾನೆ. ಆದರೆ ತಲೆ ಮೇಲೆ ಬಿದ್ದು ಬೀರ್ ನೊರೆ ನೊರೆಯಾಗಿ ಕೆಳಗಿಳಿದಿದ್ದು, ಆತನ ಬಾಯಿಗೆ ನೊರೆ ಬಂದು ಸೇರಿದ್ದು, ಆತ ಮುಖವನ್ನು ಕೈಯಿಂದ ಒರೆಸಿಕೊಳ್ಳಲು ನೋಡುತ್ತಾನೆ. ನಂತರ ಬೀರ್ ಅಭಿಷೇಕ ಮಾಡಿದ ಗೆಳೆಯನ ತಬ್ಬಿ ಹಿಡಿದು ಭಾವುಕನಾಗುತ್ತಾನೆ.
ಈ ವೀಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇವರು ನಮ್ಮ ಸಂಪ್ರದಾಯವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರೆ ಮತ್ತೆ ಕೆಲವರು ಇಂತಹ ಫ್ರೆಂಡ್ಸ್ ನಮಗೂ ಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು ತಮ್ಮ ಅನೇಕ ಸ್ನೇಹಿತರಿಗೆ ವೀಡಿಯೋ ಟ್ಯಾಗ್ ಮಾಡಿ ಬೇಗ ಮದ್ವೆ ಆಗಿ ನಾವು ನಿಮ್ಮ ಮದ್ವೆಯಲ್ಲಿ ಈ ರೀತಿ ಮಾಡಬೇಕು ಅಂದುಕೊಂಡಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ನೋಡುಗರ ಮೊಗದಲ್ಲಿ ನಗು ತರಿಸುತ್ತಿರುವುದಂತು ಸುಳ್ಳಲ್ಲ.
ಅಕ್ಕಾ ನಿನ್ ಗಂಡ ಹೇಗಿರಬೇಕು? ಶ್ರದ್ಧಾ ಕಪೂರ್ ಹೇಳೋದ ಒಮ್ಮೆ ಕೇಳಿಸಿಕೊಳ್ಳಿ!