ಭಾರತೀಯರ ಮನೆಯ ಅಡುಗೆಯಲ್ಲಿ ಊಟದೊಂದಿಗೆ ಉಪ್ಪಿನಕಾಯಿ ಇರಲೇಬೇಕು. ಅವು ಎಂಥ ಸಪ್ಪೆ ಅಡುಗೆಯನ್ನೂ ನಾಲಿಗೆ ಚಪ್ಪರಿಸುತ್ತಾ ಒಳಗಿಳಿಸುವಂತೆ ಮಾಡಬಲ್ಲವು. ಅಂದ ಹಾಗೆ ಈರುಳ್ಳಿ ಉಪ್ಪಿನಕಾಯಿ ತಿಂದಿದ್ದೀರಾ ?
ಅದೇ ಮಾವಿನಕಾಯಿ, ನಿಂಬೆಕಾಯಿ ಉಪ್ಪಿನಕಾಯಿ ತಿಂದೂ ತಿಂದೂ ನಾಲಿಗೆ ಉಪ್ಪಿನಕಾಯಿ ಡಬ್ಬ ನೋಡಿದರೆ ಗೋಳೋ ಎನ್ನುತ್ತಿದೆಯಾ? ಚಟ್ನಿಪುಡಿ, ತೊಕ್ಕು ಕೂಡಾ ಬೇಸರ ಬಂದು ತುಕ್ಕು ಹಿಡಿಸಿಕೊಂಡು ಅಡುಗೆಕೋಣೆಯ ಮೂಲೆಯಲ್ಲಿ ಕುಳಿತಿರಬೇಕಲ್ಲವೇ? ನಂಚಿಕೊಳ್ಳಲು ಹೊಸತೇನಾದರೂ ತರಬೇಕು ಎಂದುಕೊಂಡು ತಿಂಗಳುಗಟ್ಟಲೆ ಮುಂದೂಡುತ್ತಲೇ ಇದ್ದೀರಾ? ಹಾಗಿದ್ದರೆ ಟ್ರೈ ಮಾಡಿ ನೋಡಿ ಈರುಳ್ಳಿ ಉಪ್ಪಿನಕಾಯಿ.
ಕುರುಕು ಈರುಳ್ಳಿ ರೀಂಗ್ ರೆಸಿಪಿ ಇಲ್ಲಿದೆ...
undefined
ಏನು ಈರುಳ್ಳಿಯಲ್ಲಿ ಉಪ್ಪಿನಕಾಯಾ ಎಂದು ಬಾಯಿ ಬಾಯಿ ಬಿಡುವ ಬದಲು ತಯಾರಿಸಿ ರುಚಿ ನೋಡಿ... ನಿಮ್ಮ ನಾಲಿಗೆ ಖಂಡಿತಾ ನಿಮಗೆ ಥ್ಯಾಂಕ್ಸ್ ಹೇಳುವುದು. ಜೊತೆಗೆ ಒಂದೆರಡು ತುತ್ತು ಹೆಚ್ಚೇ ಹೊಟ್ಟೆಗಿಳಿಯುವುದು.
ಅಪ್ಪೆಕಾಯಿ ಮಾವಿನಮಿಡಿ, ನಿಂಬೆಕಾಯಿ ಉಪ್ಪಿನಕಾಯಿಗೆ ಫೇಮಸ್ ಆದರೂ ಕೌಳಿ, ನೆಲ್ಲಿಕಾಯಿ, ಟೊಮ್ಯಾಟೋ, ಹಸಿಮೆಣಸು, ಬೆಳ್ಳುಳ್ಳಿ, ಈರುಳ್ಳಿ ಮುಂತಾದ ತರಕಾರಿಗಳಿಂದಲೂ ಉಪ್ಪಿನಕಾಯಿ ತಯಾರಿಸಬಹುದು.
ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ಈರುಳ್ಳಿ ಉಪ್ಪಿನಕಾಯಿ ಅಲ್ಲಿನ ಬಹಳಷ್ಟು ಹೋಟೆಲ್‌ಗಳಲ್ಲಿ ಕೂಡಾ ಕಾಣಸಿಗುತ್ತದೆ. ಇದಕ್ಕೆ ಬೇಕಾಗಿರುವುದು ಸಣ್ಣ ಸಣ್ಣ ಕೆಂಪು ಈರುಳ್ಳಿ, ಜೊತೆಗೆ ರೈಸ್ ವಿನೆಗರ್ ಹಾಗೂ ಉಪ್ಪು ಅಷ್ಟೆ.
ಸಾಮಾನ್ಯವಾಗಿ ಉಪ್ಪಿನಕಾಯಿಯೆಂದರೆ ಸಣ್ಣದಾಗಿ ಮಾಡಿಕೊಂಡ ಹೋಳುಗಳನ್ನು ಉಪ್ಪಿನ ನೀರಿನಲ್ಲಿ ಹಾಕಿಡಲಾಗುತ್ತದೆ. ಆದರೆ, ಈ ಈರುಳ್ಳಿ ಉಪ್ಪಿನಕಾಯಿ ಉಪ್ಪು ಹಾಗೂ ವಿನೆಗರ್‌ನಲ್ಲಿ ಹೆಚ್ಚು ರುಚಿ ನೀಡುತ್ತದೆ. ಈ ಮಿಶ್ರಣವು ಉಪ್ಪಿನಕಾಯಿ ಹೆಚ್ಚು ಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳುವ ಜೊತೆಗೆ ಈರುಳ್ಳಿಯು ಉಪ್ಪು ಹಾಗೂ ವಿನೆಗರ್‌ನ ಹುಳಿಯನ್ನು ಎಳೆದುಕೊಂಡು ಹೆಚ್ಚು ರುಚಿ ಪಡೆಯುತ್ತದೆ.
ತಯಾರಿ ಸಮಯ: 5 ನಿಮಿಷಗಳು
ರೆಸ್ಟಿಂಗ್ ಟೈಂ: 1 ದಿನ\
ಸರ್ವಿಂಗ್ಸ್: 1 ಜಾರ್
ಬೇಕಾಗುವ ಸಾಮಗ್ರಿಗಳು:
18 ಪುಟ್ಟ ಪುಟ್ಟ ಕೆಂಪು ಈರುಳ್ಳಿಗಳು, 1 ಇಂಚಿನ ಸಿಪ್ಪೆ ತೆಗೆದ ತುರಿದ ಶುಂಠಿ, 2 ಹೆಚ್ಚಿಟ್ಟುಕೊಂಡ ಹಸಿಮೆಣಸು, 1 ಚಮಚ ಉಪ್ಪು, 1 ಲೋಟ ನೀರು, 1 ಇಂಚಿನ ದಾಲ್ಚೀನಿ ಚಕ್ಕೆ, 1 ಚಮಚ ಪೆಪ್ಪರ್, 5 ಲವಂಗ, ಬೀಟ್ರೂಟ್ ಹೋಳು ಸಣ್ಣದು, 1 ಕಪ್ ವಿನೆಗರ್
ತಯಾರಿಸುವ ವಿಧಾನ:
ಸಣ್ಣ ಈರುಳ್ಳಿಗಳನ್ನು ಇಡಿ ಇಡಿಯಿದ್ದಂತೆಯೇ ಸಿಪ್ಪೆ ತೆಗೆಯಿರಿ. ಈಗ ಅದನ್ನು ಕಟ್ ಮಾಡದೆ ಎಕ್ಸ್ ರೀತಿಯಾಗಿ ಎಲ್ಲ ಈರುಳ್ಳಿಗೂ ಗಾಯ ಮಾಡಿ(ಅಡ್ಡ ಹಾಗೂ ಉದ್ದವಾಗಿ ಅರ್ಧ ಹೆಚ್ಚಿ). ಇವುಗಳನ್ನು ದೊಡ್ಡ ಜಾರೊಂದಕ್ಕೆ ವರ್ಗಾಯಿಸಿ. ಇದಕ್ಕೆ ಎರಡು ಹಸಿಮೆಣಸು ಹಾಗೂ ಉಪ್ಪು ಸೇರಿಸಿ. ಬಾಣಲೆಯಲ್ಲಿ 1 ಲೋಟ ನೀರಿಗೆ ಚಕ್ಕೆ, ಪೆಪ್ಪರ್, ಲವಂಗ ಹಾಗೂ ಬೀಟ್‌ರೂಟ್ ಸೇರಿಸಿ. ಐದು ನಿಮಿಷ ಕುದಿಸಿ. ಬೀಟ್‌ರೂಟ್ ಪೀಸ್ ಬೆಂದು ಮೆತ್ತಗಾಗಿ ಬಣ್ಣ ಬಿಡುತ್ತಿದೆಯೇ ಎಂದು ಖಾತ್ರಿಪಡಿಸಿಕೊಳ್ಳಿ.
ಸ್ಲಿಮ್ ಆಗೋದಾದರೆ ಈರುಳ್ಳಿಯಲ್ಲಿದೆ ಮದ್ದು?
ಇದನ್ನು ಪೂರ್ತಿ ತಣ್ಣಗಾಗಿಸಿ ಜಾರ್‌ಗೆ ಹಾಕಿ. ಇದಕ್ಕೆ 1 ಕಪ್ ವಿನೆಗರ್ ಹಾಕಿ ಮುಚ್ಚಳ ಜಡಿಯಿರಿ. ಚೆನ್ನಾಗಿ ಶೇಕ್ ಮಾಡಿ. ನಂತರ ಈರುಳ್ಳಿ ಈ ಜ್ಯೂಸನ್ನು ಹೀರಿಕೊಳ್ಳಲು 1 ದಿನದ ಸಮಯ ನೀಡಿ. ಬಳಿಕ ಫ್ರಿಡ್ಜ್‌ನಲ್ಲಿಟ್ಟರೆ 2 ತಿಂಗಳ ಕಾಲ ಈರುಳ್ಳಿ ಉಪ್ಪಿನಕಾಯಿಯನ್ನು ಸವಿಯಬಹುದು. ಹೆಚ್ಚು ಸಮಯವಾದಷ್ಟೂ ರುಚಿ ಹೆಚ್ಚುತ್ತದೆ. ಅಂದ ಹಾಗೆ, ಇಲ್ಲಿ ಬೀಟ್ರೂಟ್ ಬಳಸಿದ್ದು, ಅದರ ಬಣ್ಣ ಉಪ್ಪಿನಕಾಯಿಗೆ ಸೇರಲಿ ಎಂದಷ್ಟೇ. ಇದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.