ನಾವು ಫಸ್ಟ್ ನಾವ್ ಫಸ್ಟ್ ..ಫೋಟೋ ಹುಚ್ಚಿಗೆ ರಣರಂಗವಾದ ಮದ್ವೆ ಮನೆ!

By Vinutha Perla  |  First Published Mar 10, 2023, 12:07 PM IST

ಮದ್ವೆ ದಿನ ಅಂದ್ರೆ ಮೆಮೊರೆಬಲ್ ಆಗಿರಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ. ಹೀಗಾಗಿಯೇ ಫೋಟೋ, ವೀಡಿಯೋಗಳನ್ನು ತೆಗೆಸಿಕೊಳ್ತಾರೆ. ಆದ್ರೆ ಇಲ್ಲೊಂದು ಮದ್ವೆ ಮನೆಯಲ್ಲಿ ಸಂಬಂಧಿಕರು ವಧು-ವರರ ಜೊತೆ ಫೋಟೋ ತೆಗೆಸಿಕೊಳ್ಳೋ ವಿಚಾರದಲ್ಲಿ ದೊಡ್ಡ ಗಲಾಟೆಯೇ ನಡೆದು ಹೋಗಿದೆ.


ಮದುವೆ ಅನ್ನೋದು ಒಂದು ಸುಂದರವಾದ ಸಂಬಂಧ. ಗಂಡು-ಹೆಣ್ಣನ್ನು ಒಂದುಗೂಡಿಸುವ ಪವಿತ್ರ ಬಂಧನ. ಕಷ್ಟಾನೂ ಸುಖಾನೋ ಇಬ್ಬರು ಜೀವನಪೂರ್ತಿ ಜೊತೆಯಾಗಿ ಸಾಗುವ ನಿರ್ಧಾರ ಮಾಡುತ್ತಾರೆ. ಗಂಡು-ಹೆಣ್ಣು ಇಬ್ಬರ ಜೀವನ ಆರಂಭವಾಗುವುದರ ಜೊತೆಗೆ ಎರಡು ಕುಟುಂಬಗಳು ಬೆರೆಯುತ್ತವೆ. ಮದುವೆಯನ್ನು ವಿಶೇಷವಾಗಿಸಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಸ್ಪೆಷಲ್ ಡೆಕೊರೇಶನ್, ಸಾಂಗ್ಸ್, ಡ್ರೆಸ್, ಪಾರ್ಟಿ ಎಲ್ಲವನ್ನೂ ಆರೇಂಜ್ ಮಾಡಿಕೊಳ್ತಾರೆ. ವೆಡ್ಡಿಂಗ್‌ ಡೇ ಎಂಬುದು ಎಲ್ಲರ ಪಾಲಿಗೆ ಜೀವನದಲ್ಲೇ ದಿ ಬಿಗ್ ಡೇ. ಹೀಗಾಗಿಯೇ ಈ ದಿನ ಯಾವಾಗ್ಲೂ ಮೆಮೊರೆಬಲ್ ಆಗಿರಬೇಕೆಂದು ಫೋಟೋ, ವೀಡಿಯೋ ಮಾಡಿಕೊಳ್ತಾರೆ. ಆದ್ರೆ ಇಲ್ಲೊಂದು ಮದ್ವೆ ಮನೆ ನೂತನ ವಧು-ವರರ ಜೊತೆ ಫೋಟೋ ತೆಗೆದುಕೊಳ್ಳುವ ವಿಚಾರಕ್ಕಾಗಿಯೇ ರಣಾಂಗಣವಾಗಿಬಿಟ್ಟಿದೆ. 

ಮದುವೆಗಳು (Marriage) ವಿಶೇಷವಾಗಿರುತ್ತವೆ ಮತ್ತು ಮದುವೆಯ ಚಿತ್ರಗಳು ಇನ್ನೂ ಹೆಚ್ಚು ವಿಶೇಷವಾಗಿರುತ್ತವೆ. ಏಕೆಂದರೆ ಈ ಚಿತ್ರಗಳು ವಧು ಮತ್ತು ವರ ಮತ್ತು ಅವರ ಕುಟುಂಬದ ಸುಂದರ ಕ್ಷಣಗಳನ್ನು ಶಾಶ್ವತವಾಗಿ ಸೆರೆಹಿಡಿಯುತ್ತವೆ. ಆದರೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಮದುವೆಯೊಂದರಲ್ಲಿ, ವಧು ಮತ್ತು ವರನ (Bride-groom) ಜೊತೆ ಚಿತ್ರಗಳನ್ನು ತೆಗೆದುಕೊಳ್ಳುವ ಬಗ್ಗೆ ಗಲಾಟೆಯೇ ನಡೆದು ಹೋಯ್ತು. ಯಾರು ಮೊದಲು ಫೋಟೋ ತೆಗೆದುಕೊಳ್ಳಬೇಕು ಅನ್ನೋ ವಿಚಾರವಾಗಿ ವಧು ಮತ್ತು ವರನ ಕುಟುಂಬ ಸದಸ್ಯರ ನಡುವೆ ಜಗಳ ನಡೆದು ಜನರು ದಿಕ್ಕಾಪಾಲಾದರು. ಸುಂದರವಾದ ದಿನವೊಂದು ಗಲಾಟೆಯಲ್ಲಿ (Fight) ಕೊನೆಗೊಂಡಿತು.

Tap to resize

Latest Videos

ಶಾಪಿಂಗ್ ಮಾಡಲು ಹಣ ಕೊಡದ್ದಕ್ಕೆ ಸಿಟ್ಟು, ಪ್ರಿಯಕರನನ್ನು ಕರೆಸಿ ಗಂಡನಿಗೆ ಹೊಡೆಸಿದ ಹೆಂಡ್ತಿ!

ಮೊದಲು ಯಾರು ಪೋಟೋ ತೆಗೆಯಬೇಕೆಂದು ವರ-ವಧು ಸಂಬಂಧಿಕರ ಫೈಟ್
ವಧು ಮತ್ತು ವರನ ಮಧ್ಯೆ ವರಮಾಲಾ ಶಾಸ್ತ್ರ ನಡೆದ ನಂತರ, ಎರಡೂ ಕಡೆಯ ಮದುವೆಯ ಅತಿಥಿಗಳು ಯಾರು ಮೊದಲು ಫೋಟೋಗಳನ್ನು ತೆಗೆಯಬೇಕು ಎಂಬುದರ ಕುರಿತು ವಾದಿಸಲು ಪ್ರಾರಂಭಿಸಿದರು. ಆರಂಭದಲ್ಲಿ ಮಾತಿನ ಚಕಮಕಿ ನಡೆದು, ನಂತರ ಇದು ಕೈ ಕೈ ಮಿಲಾಯಿಸುವ ಹಂತಕ್ಕೂ ಬಂತು. ಗಲಾಟೆ, ಕಿತ್ತಾಟ, ಗುದ್ದಾಟದಲ್ಲಿ ವರನ ಚಿಕ್ಕಪ್ಪ ಮತ್ತು ಸಹೋದರಿ ಸೇರಿದಂತೆ ಅನೇಕ ಅತಿಥಿಗಳು ಗಾಯಗೊಂಡರು.

ವರದಿಯ ಪ್ರಕಾರ, ವರನು ತನ್ನ ಮದುವೆಯ ದಿಬ್ಬಣದೊಂದಿಗೆ ರಾಂಪುರ ಕಾರ್ಖಾನಾ ದುಸ್‌ನಿಂದ ಮಾಧವಪುರ ಗ್ರಾಮಕ್ಕೆ ಪ್ರಯಾಣ ಬೆಳೆಸುತ್ತಿದ್ದನು. ವರಮಾಲಾ ಸಮಾರಂಭದವರೆಗೂ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಆದರೆ ವರಮಾಲಾದ ನಂತರ ಫೋಟೋ ಸೆಷನ್ ಆರಂಭವಾದ ಬಳಿಕ ಸಂಬಂಧಿಕರು ಫೋಟೋ ಕ್ಲಿಕ್ಕಿಸಿಕೊಳ್ಳುವ ವಿಚಾರಕ್ಕೆ ವಾಗ್ವಾದ ನಡೆಸಲು ಆರಂಭಿಸಿದರು.  ವರನ ಕಡೆಯ ಅತಿಥಿ, ಕುಡಿದ ಅಮಲಿನಲ್ಲಿ, ಮೊದಲು ಚಿತ್ರಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲು ಪ್ರಾರಂಭಿಸಿದನು, ಇದು ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಯಿತು ಎಂದು ತಿಳಿದುಬಂದಿದೆ. ನಂತರ ವರನ ಚಿಕ್ಕಪ್ಪ ಜಗಳ ಬಿಡಿಸಲು ಯತ್ನಿಸಿದಾಗ ತೀವ್ರವಾಗಿ ಥಳಿಸಿದ್ದಾರೆ. ವರನ ಸಹೋದರಿ ಕೂಡ ಗಲಾಟೆಯಲ್ಲಿ ಗಾಯಗೊಂಡಿದ್ದಾರೆ.

ಮದ್ವೆಯಾದ್ರೂ ಮಾಜಿ ಗೆಳತೀನಾ ಮರೆಯೋಕಾಗ್ತಿಲ್ಲ, ಮಗುವಿಗೆ ಅವಳದ್ದೇ ಹೆಸರಿಡಲು ಪತಿಯ ಹಠ!

ಗಲಾಟೆಯಲ್ಲಿ ಹಲವರಿಗೆ ಗಾಯ, ಆಸ್ಪತ್ರಗೆ ದಾಖಲು
ಮಾಹಿತಿ ಪಡೆದ ರಾಂಪುರ ಕಾರ್ಖಾನ ಪೊಲೀಸರು ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. 'ಗುರುವಾರ ರಾತ್ರಿ 9.30 ರ ಸುಮಾರಿಗೆ ಮದುವೆಯಲ್ಲಿ ಪೋಟೋಸ್‌ ತೆಗೆಯುವ ವಿಚಾರದಲ್ಲಿ ಜಗಳ ನಡೆದಿರುವ ಬಗ್ಗೆ ಮಾಹಿತಿ ಇತ್ತು. ಪೊಲೀಸರು ತಂಡದೊಂದಿಗೆ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು' ಎಂದು ಹಿರಿಯ ಸಬ್ ಇನ್ಸ್‌ಪೆಕ್ಟರ್ ಬಲರಾಮ್ ಸಿಂಗ್ ತಿಳಿಸಿದ್ದಾರೆ. .

ಮದುವೆ ಮನೆಯಲ್ಲಿ ಸಾಕಷ್ಟು ಗಲಾಟೆಯಾದ ನಂತರ ವರನು ಸಿಟ್ಟುಗೊಂಡನು ಮತ್ತು ಮದುವೆಯಾಗಲು ನಿರಾಕರಿಸಿದನು. ಆದರೆ, ಸಾಕಷ್ಟು ಮನವೊಲಿಕೆಯ ನಂತರ ವರನು ಪೊಲೀಸರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಹುಡುಗಿಗೆ ತಾಳಿ ಕಟ್ಟಿದನು. ಒಟ್ನಲ್ಲಿ ಖುಷಿಯಿಂದ ಕಳೆಯಬೇಕಿದ್ದ ಮದ್ವೆ ದಿನ ಸಂಪೂರ್ಣ ಗಲಾಟೆಯಲ್ಲಿ ಕೊನೆಗೊಂಡಿತು.

click me!