ಹತ್ತು ಹಲವು ಭಕ್ಷ್ಯಗಳನ್ನು ಬಡಿಸಿದರೂ, ಇನ್ನೂ ಜಾಗ ಉಳಿಸಿಕೊಂಡು ಕಾಯುತ್ತದೆ ಬಾಳೆಎಲೆ. ಬಾಳೆಲೆ ಊಟಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದು ನಮ್ಮ ಸಂಸ್ಕೃತಿಯಷ್ಟೇ ಅಲ್ಲ, ಸರಳವಾಗಿಯೂ ಶ್ರೀಮಂತ ಕೂಡಾ.
ದಕ್ಷಿಣ ಭಾರತದಲ್ಲಿ ಬಾಳೆಲೆ ಊಟ ಕಾಮನ್. ಅದರಲ್ಲೂ ಮದುವೆ ಮುಂಜಿ ಕಾರ್ಯಕ್ರಮಗಳಲ್ಲಿ ನೂರಾರು, ಸಾವಿರಾರು ಜನರಿಗೆ ಊಟ ಬಡಿಸಲು ಬಾಳೆಲೆ ಅಗ್ಗದಲ್ಲಿ ಒಗ್ಗುವ ತಟ್ಟೆ. ಈಗೀಗ ರೆಸ್ಟೋರೆಂಟ್‌ಗಳು ಕೂಡಾ ಬಾಳೆಲೆಯ ಊಟವನ್ನೇ ಬಂಡವಾಳವಾಗಿಸಿಕೊಳ್ಳುತ್ತಿರುವುದನ್ನು ನೋಡಬಹುದು. ಬಾಳೆಲೆ ಊಟ ರುಚಿ ಹೆಚ್ಚು ಅಷ್ಟೇ ಅಲ್ಲ, ಆರೋಗ್ಯಕಾರಿ ಕೂಡಾ. ಬಾಳೆಲೆ ಊಟದ ಮಹತ್ವ ತಿಳಿದರೆ ಮತ್ತೆಂದೂ ನೀವು ಬಂಗಾರದ ತಟ್ಟೆ ಬೇಡಲಾರಿರಿ.
1. ಆಹಾರಕ್ಕೆ ಆ್ಯಂಟಿ ಆಕ್ಸಿಡೆಂಟ್ಸ್ ಸೇರ್ಪಡೆ
ಬಾಳೆಲೆಗಳಲ್ಲಿ ಇಜಿಸಿಜಿಯಂಥ ಪಾಲಿಫಿನಾಲ್ಸ್ ಹೇರಳವಾಗಿರುತ್ತವೆ. ಈ ಪಾಲಿಫಿನಾಲ್‌ಗಳು ನ್ಯಾಚುರಲ್ ಆ್ಯಂಟಿ ಆಕ್ಸಿಡೆಂಟ್ಸ್ ಆಗಿದ್ದು, ಕ್ಯಾನ್ಸರ್‌ನಂಥ ಕಾಯಿಲೆ ಹರಡುವ ಕೋಶಗಳ ವಿರುದ್ಧ ಅದು ಹೋರಾಡುತ್ತದೆ. ಈ ಎಲೆಯ ಮೇಲೆ ಆಹಾರವನ್ನು ಬಡಿಸಿದಾಗ, ಆಹಾರವು ಈ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೀರಿಕೊಂಡು ಅದನ್ನು ಆಹಾರ ಸೇವಿಸುವ ನಮ್ಮ ದೇಹಕ್ಕೆ ಒದಗಿಸುತ್ತವೆ. ಅಷ್ಟೇ ಅಲ್ಲದೆ, ಬಾಳೆಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು, ಅವುಗಳ ಮೇಲಿನ ವ್ಯಾಕ್ಸ್ ಕೋಟಿಂಗ್, ಎಲೆ ಕೊಳಕಾಗದಂತೆ ನೋಡಿಕೊಳ್ಳುತ್ತದೆ. ಇದು ವಾಟರ್ ಪ್ರೂಫ್ ಕೂಡಾ. ಜೊತೆಗೆ, ಕೀಟಾಣುಗಳನ್ನು ಕೊಲ್ಲುವ ಕೆಲಸವನ್ನೂ ಮಾಡುತ್ತದೆ. ಅಂದರೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಬಾಳೆಲೆ ಊಟ ಮಾಡೋದ್ರಿಂದ ಏನೇನ್ ಲಾಭ?
2. ಸ್ವಚ್ಛತೆ
ಪಾತ್ರೆಪಡಗ ಯಾವುದಕ್ಕೇ ಹೋಲಿಸಿದರೂ ತೊಳೆದು ಆರಿಸಿ ಬೆಂಕಿಯ ಕಾವನ್ನು ನೀಡಿದ ಬಾಳೆಲೆಗಳಷ್ಟು ಸ್ವಚ್ಛವಾದ ಮತ್ತೊಂದು ತಟ್ಟೆ ಸಿಗಲು ಸಾಧ್ಯವಿಲ್ಲ. ನೀವು ಬಾಡಿಗೆ ತರುವ ಪ್ಲ್ಯಾಸ್ಟಿಕ್ ತಟ್ಟೆಗಳು ಸರಿಯಾಗಿ ತೊಳೆದಿದ್ದರೆ ಅದು ನಿಮ್ಮ ಅದೃಷ್ಟ. ಸಾಮಾನ್ಯವಾಗಿ ಅರೆಬರೆ ತೊಳೆಸಿಕೊಂಡು ಜಿಡ್ಡನ್ನು ಉಳಿಸಿಕೊಂಡು ಕಾಯಿಲೆ ಹರಡುವ ರೋಗಾಣುಗಳನ್ನಿವು ಹೊಂದಿರುತ್ತವೆ. ಇಲ್ಲವೇ ಚೆನ್ನಾಗಿ ತೊಳೆದಿದ್ದರೂ ಸೋಪ್ ಅದರಲ್ಲಿ ಉಳಿದಿರಬಹುದು. ಆದರೆ ಬಾಳೆಲೆಗಳು ಹಾಗಲ್ಲ. ಅವು ಫ್ರೆಶ್ ಆಗಿರುತ್ತವಲ್ಲದೆ, ಒಂದೇ ಬಾರಿ ಬಳಕೆಯಾಗುತ್ತವೆ.
3. ಪರಿಸರ ಸ್ನೇಹಿ
ಹಲವು ವಿಶೇಷ ಸಂದರ್ಭಗಳಲ್ಲಿ ಬಳಸಿ ಬಿಸಾಡುವ ಪೇಪರ್ ಪ್ಲೇಟ್ಸ್, ಪ್ಲ್ಯಾಸ್ಟಿಕ್ ಪ್ಲೇಟ್ಸ್ ಈಗ ಆಕರ್ಷಕವೆಂದು ಬಳಸಲ್ಪಡುತ್ತವೆ. ಆದರೆ, ಪ್ಲ್ಯಾಸ್ಟಿಕ್ ತಟ್ಟೆಗಳು ಪರಿಸರಕ್ಕೆ ಮಾರಕ. ಪೇಪರ್ ಪ್ಲೇಟ್‌ಗಳಿಗಾಗಿ ಕೂಡಾ ಪರಿಸರ ನಾಶವಾಗುತ್ತದೆ. ಜೊತೆಗೆ ಅವು ಕೊಳೆಯಲು ಹೆಚ್ಚು ಸಮಯ ಬೇಕು. ಆದರೆ, ಬಾಳೆಲೆಗಳು ಹಾಗಲ್ಲ, ಅವು ಪರಿಸರಸ್ನೇಹಿ. ಬೇಗ ಕೊಳೆಯುತ್ತವೆ ಮತ್ತು ಮಣ್ಣಿಗೆ ಹೆಚ್ಚಿನ ಸತ್ವ ಒದಗಿಸುತ್ತವೆ.
ಪ್ಲಾಸ್ಟಿಕ್ ಬೇಡ, ಬಾಳೆ ಎಲೆ ಬಳಸಿ: ತುಳುನಾಡಿನ ಶಾಸಕರ ಮನವಿಗೆ ಸೈ ಎಂದ ಸ್ವಿಗ್ಗಿ!
4. ರೈತಸ್ನೇಹಿ
ಬಾಳೆಲೆಯ ಊಟ ರೈತರಿಗೆ ವರದಾನ. ಬಾಳೆಹಣ್ಣು, ಕಾಯಿ ಮಾರಿ ಬದುಕುತ್ತಿರುವವರಿಗೆ ಎಲೆಯೂ ಉತ್ತಮ ಬೆಲೆಗೆ ಮಾರಾಟವಾಗುವುದರಿಂದ ಹೆಚ್ಚಿನ ಸಂಪಾದನೆ ಸಾಧ್ಯವಾಗುತ್ತದೆ.
5. ಪಾತ್ರೆ ತೊಳೆವ ಕೆಲಸವಿಲ್ಲ
ಪಾತ್ರೆ ತೊಳೆಯುವುದೇ ದೊಡ್ಡ ತಲೆನೋವಿನ ಕೆಲಸವಾಗಿದ್ದಾಗ ಬಾಳೆಲೆ ಊಟ ಅಭ್ಯಾಸ ಮಾಡಿಕೊಂಡರೆ ನಂತರ ಅವನ್ನು ತೊಳೆಯಬೇಕಾಗಿಲ್ಲ. ಊಟವಾದ ಬಳಿಕ ಎತ್ತಿ ಬಿಸಾಡಿದರಾಯಿತು. ಬಿಸಿ ಸಾಂಬಾರ್ ಹಾಕಿದರೆ ಕೂಡಾ ಅವು ಏನೂ ಬಾಡದೆ ತಡೆದುಕೊಳ್ಳಬಲ್ಲವು.
ಚೆನ್ನೈ ಹೋಟೆಲ್‌ಗಳಲ್ಲಿ ಈಗ ಬಾಳೆ ಎಲೆ ಊಟ!
6. ರುಚಿ
ಬಾಳೆಲೆಯ ಮೇಲಿರುವ ವ್ಯಾಕ್ಸ್ ಕೋಟಿಂಗ್ ಆಹಾರಕ್ಕೆ ಸ್ವಲ್ಪ ಎಕ್ಸ್ಟ್ರಾ ರುಚಿ ಸೇರಿಸುತ್ತದೆ. ಬಾಳೆಲೆಯ ಮೇಲೆ ಬಿಸಿ ಅಡುಗೆ ಬಡಿಸಿದಾಗ ಈ ವ್ಯಾಕ್ಸ್ ಕರಗಿ ಆಹಾರದೊಂದಿಗೆ ಸೇರಿಕೊಂಡು ಅದರ ಫ್ಲೇವರ್ ಹೆಚ್ಚಿಸುತ್ತದೆ. ಮತ್ತೇಕೆ ತಡ, ಈ ಹಬ್ಬದ ಸೀಸನ್ನಲ್ಲಿ ಬಾಳೆಲೆ ಬಳಸಿ, ಊಟದ ರುಚಿ ಹೆಚ್ಚಿಸಿಕೊಂಡು ಕೆಲಸ ಕಡಿಮೆ ಮಾಡಿಕೊಂಡು ಎಂಜಾಯ್ ಮಾಡಿ.