ಸುಕ್ಕು ಕಾಣಿಸಿಕೊಂಡಾಗ ಮೊದಲು ಹೀಗ್ ಮಾಡಿ...

By Web DeskFirst Published Aug 29, 2019, 2:12 PM IST
Highlights

ಸುಕ್ಕು ಮೊದಲು ಕಾಣಿಸಿಕೊಳ್ಳುವುದೇ ಮುಖದ ಮೇಲೆ. ನಕ್ಕರೆ ಚೆಂದ ಹೆಚ್ಚಿಸುತ್ತಿದ್ದ ಮುಖ, ಇದೀಗ ನಕ್ಕರೆ ವಯಸ್ಸು ಹೆಚ್ಚಿದ್ದನ್ನು ನೆನಪಿಸಲಾರಂಭಿಸುತ್ತದೆ. ನಗುವಿನ ಗೆರೆ ತುಟಿ ಮೇಲೆ ಮಾತ್ರವಲ್ಲದೆ ಕಣ್ಣುಗಳ ಅಕ್ಕಪಕ್ಕ, ಹಣೆಯ ಮೇಲೂ ಕಾಣಿಸಲಾರಂಭಿಸುತ್ತದೆ. 

ಒಂದಲ್ಲಾ ಒಂದು ದಿನ ಇದು ಎಲ್ಲರನ್ನೂ ಕಾಡುವ ಸಮಸ್ಯೆ. ನಕ್ಕರೆ ಕಣ್ಣಿನ ಕೆಳಗೆ, ಬಾಯಿಯ ಪಕ್ಕ ಸಣ್ಣ ಸುಕ್ಕುಗಳು ಕಾಣಲಾರಂಭಿಸುತ್ತವೆ. ಅಯ್ಯೋ ಇಷ್ಟು ಬೇಗ ವಯಸ್ಸಾಯಿತೇ ಎಂದು ನೀವು ಒಳಗೊಳಗೇ ಗೋಳಾಡಲಾರಂಭಿಸುತ್ತೀರಿ. ಛೆ, ನಾನು ತ್ವಚೆಯ ಕಾಳಜಿಯನ್ನು ನೆಗ್ಲಕ್ಟ್ ಮಾಡಬಾರದಿತ್ತು ಎಂದು ಮತ್ತೆ ಮತ್ತೆ ಹೇಳಿಕೊಳ್ಳುತ್ತೀರಿ. ಈಗಲಾದರೂ ಸುಕ್ಕುಗಳು ಮುಂದುವರಿಯದಂತೆ ತಡೆಯಲು ಏನೇನು ಮಾಡಬಹುದು ಎಂದು ಗೂಗಲ್‌, ಯೂಟ್ಯೂಬ್‌ನಲ್ಲಿ ಹುಡುಕಲಾರಂಭಿಸುತ್ತೀರಿ. ಅಂತೂ ಯಾವುದಕ್ಕೂ ಸಮಾಧಾನವಿಲ್ಲ. ಆದರೆ, ಸುಕ್ಕು ಮುಂದುವರಿಯದಂತೆ, ಮುಖದಲ್ಲಿ ಮೊದಲ ಗೆರೆಗಳು ಕಾಣುತ್ತಿದ್ದಂತೆ ಏನು ಮಾಡಬೇಕೆಂದು ತಜ್ಞರು ಹೇಳಿದ ವಿಧಾನಗಳು ಇಲ್ಲಿವೆ ನೋಡಿ. 

ಯಾಕೆ ಸುಕ್ಕಾಗುತ್ತದೆ ತಿಳಿದುಕೊಳ್ಳಿ

ಕೊಲ್ಯಾಜನ್ ಎಂಬ ಪ್ರೋಟೀನ್ ನಮ್ಮ ಚರ್ಮವನ್ನು ಬಿಗಿಯಾಗಿರಿಸುತ್ತದೆ. ನಮ್ಮ ಟೀನೇಜ್ ಮುಗಿದಂತೆಲ್ಲ ಈ ಪ್ರೋಟೀನ್ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಆದರೆ, ನೀವು ಮೊದಲ ಗೆರೆಗಳನ್ನು ಗಮನಿಸುವ ಹೊತ್ತಿಗೆ ನಿಮಗೆ ಸುಮಾರು 25 ವರ್ಷಗಳಾಗಬಹುದು. ಅಲ್ಲದೆ, ಅನುವಂಶೀಯತೆ ಕೂಡಾ ಇದರಲ್ಲಿ ಪಾತ್ರ ವಹಿಸುತ್ತದೆ. ತಂದೆ ತಾಯಿಯ ಚರ್ಮ ಹೇಗಿದೆ ಎನ್ನುವುದೂ ನಮ್ಮ ಚರ್ಮದ ಬಿಗಿತನದ ಮೇಲೆ ಪರಿಣಾಮ ಬೀರಿರುತ್ತದೆ. ಆದರೆ, ಚರ್ಮಕ್ಕೆ ಹೆಚ್ಚಿನ ಕಾಳಜಿ ನೀಡುವ ಮೂಲಕ ನಾವಿದನ್ನು ಒಂದು ಮಟ್ಟಿಗೆ ಬದಲಾಯಿಸಬಹುದು. 

ಸಮಸ್ಯೆಯಿದ್ದತ್ತ ಬೊಟ್ಟು ಮಾಡಿ

ಚರ್ಮ ಪದೇ ಪದೆ ಚಲಿಸುವ ಭಾಗಗಳಲ್ಲಿ ಬೇಬಿ ಸುಕ್ಕುಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಸಾಮಾನ್ಯವಾಗಿ ಕಣ್ಣು, ಬಾಯಿ, ಹಣೆಯಲ್ಲಿ ಆರಂಭಿಕ ಸುಕ್ಕುಗಳು ಗೆರೆಗಳನ್ನು ಮೂಡಿಸುತ್ತವೆ. ಅದರಲ್ಲೂ ಕಣ್ಣಿನ ಸುತ್ತಲಿನ ಚರ್ಮ ಉಳಿದೆಡೆಗಳಿಗಿಂತ ಶೇ.40ರಷ್ಟು ತೆಳುವಾಗಿರುವುದರಿಂದ ಅಲ್ಲಿ ಬಹು ಬೇಗ ವಯಸ್ಸಿನ ರೇಖೆಗಳು ಮೂಡುತ್ತವೆ. 

ಸುಕ್ಕು ಆರಂಭವಾದಲ್ಲಿ ಹೆಚ್ಚು ಗಮನ ವಹಿಸಿ

ಕಣ್ಣುಗಳ ಸುತ್ತ ಸುಕ್ಕು ಎದ್ದಿದ್ದರೆ, ರೆಟಿನಾಲ್ ಎಂಬ ಚರ್ಮವನ್ನು ಬಲವಾಗಿಸುವ ವಸ್ತುವನ್ನು ಹೊಂದಿದ ನೈಟ್ ಐ ಕ್ರೀಂ ಬಳಸಿ. ಇದು ಕೊಲ್ಯಾಜನ್ ಉತ್ಪತ್ತಿಗೆ ಪ್ರಚೋದಿಸಿ, ಚರ್ಮವನ್ನು ರಿಪೇರಿ ಮಾಡಲು ಸಹಾಯಕ. ಇನ್ನು ಕೆಲವು ಫೇಶಿಯಲಿಸ್ಟ್‌ಗಳು, ಅತಿ ಸೂಕ್ಷ್ಮ ಸೂಜಿ ಹೊಂದಿದ ಸಿಐಟಿ ವಿಧಾನ ಅನುಸರಿಸುತ್ತಾರೆ. ಅದರಂತೆ ಸುಕ್ಕಾದ ಭಾಗಕ್ಕೆ ಈ ಸೂಜಿಗಳಿಂದ ಪಂಕ್ಚರ್ ಮಾಡಲಾಗುತ್ತದೆ. ಟಾರ್ಚರ್ ಎನಿಸಬಹುದು. ಆದರೆ, ಗಾಯ ಗುಣವಾಗುವ ಪ್ರಕ್ರಿಯೆಯಲ್ಲಿ ಚರ್ಮ ಬಿಗಿಯಾಗುತ್ತದೆ. ಅಯ್ಯಪ್ಪಾ! ಸೂಜಿ ಎಂದರೇ ಭಯ ಎನ್ನುವವರು ವಿಟಮಿನ್ ಸಿ ಹಾಗೂ ಹ್ಯಾಲುರೋನಿಕ್ ಆ್ಯಸಿಡ್ ಹೊಂದಿದ ಫೇಶಿಯಲ್ ಬಳಸಿ ರಾತ್ರಿ ಪೂರ್ತಿ ಮಾಸ್ಕ್ ಹಾಕಿಕೊಂಡು ಮಲಗಿ, ಬೆಳಗ್ಗೆದ್ದು ಮುಖ ತೊಳೆಯಿರಿ. 

ನಿಮ್ಮ ಕ್ರೀಂಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಿ

ನೀವಿನ್ನೂ ಡೇ ಆ್ಯಂಡ್ ನೈಟ್ ಕ್ರೀಂ ಬಳಸಲು ಆರಂಭಿಸದಿದ್ದರೆ ಈಗ ಶುರು ಮಾಡಿ. ಆರಂಭಿಸಿದ್ದರೆ ಅವುಗಳನ್ನು ಅಪ್‌ಗ್ರೇಡ್ ಮಾಡಿ. ಎಸ್‌ಪಿಎಫ್ ಮಟ್ಟ 30ಕ್ಕಿಂತಾ ಹೆಚ್ಚಿರುವ, ವಿಟಮಿನ್ ಸಿ ಹೊಂದಿರುವ ಆ್ಯಂಟಿ ಏಜಿಂಗ್ ಕ್ರೀಂನ್ನು ಬೆಳಗಿನ ಹೊತ್ತಿಗೆ ಬಳಸಿ. ರಾತ್ರಿಗೆ ಸ್ವಲ್ಪ ದಪ್ಪಗಿನ ಹೆಚ್ಚು ಎಮೋಲಿಯೆಂಟ್ ಕ್ರೀಂ ಬಳಿಸಿ. ನಿದ್ರಿಸುವಾಗ ಚರ್ಮ ಡ್ರೈ ಆಗುವ ಕಾರಣದಿಂದ ದಪ್ಪನೆಯ ಕ್ರೀಂ ಅಗತ್ಯ. ಜೊತೆಗೆ, ರೆಟಿನಾಲ್ ಹಾಗೂ ಪೆಪ್ಟೈಡ್ ಕ್ರೀಂ ಹಚ್ಚುವುದರಿಂದ ಅದು ತೆಳು ರೇಖೆಗಳನ್ನು ಸಾಫ್ಟ್ ಮಾಡಿ ಚರ್ಮಕ್ಕೆ ನಯವಾದ ಆದರೆ ಬಿಗಿಯಾದ ಲುಕ್ ನೀಡುತ್ತವೆ. 

ಚರ್ಮಕ್ಕೂ ವರ್ಕೌಟ್ ಮಾಡಿ

ನಿಮ್ಮ ಮುಖದ ಚರ್ಮ ಬಿಗಿಯಾಗಿರಲು, ದೇಹದ ಬೇರೆಲ್ಲ ಭಾಗಗಳಂತೆ ಅದನ್ನು ಬಲಗೊಳಿಸಿ, ಟೋನ್ ಮಾಡುವುದು ಮುಖ್ಯ. ಇದಕ್ಕಾಗಿ ಕಲ್ಲಿನಿಂದ ಮಸಾಜ್ ಮಾಡುವುದು, ಎಣ್ಣೆಯಿಂದ ಮಸಾಜ್ ಮಾಡುವುದು, ಮುಖದ ವ್ಯಾಯಾಮ ಮಾಡುವುದು ಅಗತ್ಯ. 

ಸ್ಮೂತ್ ಲೈನ್ಸ್

ಧೀರ್ಘಕಾಲೀನ ಫಲಿತಾಂಶಕ್ಕಾಗಿ ಹೈಲುರೋನಿಕ್ ಆ್ಯಸಿಡ್ ಇರುವ ಸೀರಮ್ ಬಳಸಿ. ಇದು ಚರ್ಮಕ್ಕೆ ತೇವಾಂಶ ಎಳೆದು ಗೆರೆ ಬಂದ ಜಾಗ ಉಬ್ಬುವಂತೆ ಮಾಡುತ್ತದೆ. ಇದರಿಂದ ಸುಕ್ಕು ತುಂಬಿಕೊಂಡು ಚರ್ಮ ಯೌವನ ಪಡೆಯುತ್ತದೆ. ಮಾಯಿಶ್ಚರೈಸರ್ ಹಚ್ಚುವ ಮೊದಲು ಇದನ್ನು ಬಳಸುವುದರಿಂದ ತೇವಾಂಶ ಅಲ್ಲಿಯೇ ಲಾಕ್ ಆಗುತ್ತದೆ. 

ಮೇಕಪ್ ತೆಗೆಯಿರಿ

ಮೇಕಪ್ ಹಚ್ಚಿಕೊಂಡು ಮಲಗುವುದು ನಿಮ್ಮ ಯೌವನದ ಚರ್ಮಕ್ಕೆ ಮೊದಲ ಶತ್ರು. ಇದರಿಂದ ತ್ವಚೆಯ ರಂಧ್ರಗಳು ಮುಚ್ಚಿಕೊಂಡು ಬೇಗ ವಯಸ್ಸಾಗುವಂತೆ ಮಾಡುತ್ತದೆ. ಮನೆಗೆ ಬರುತ್ತಿದ್ದಂತೆಯೇ ಮೇಕಪ್ ತೆಗೆದುಬಿಡಿ. 
ಅತಿಯಾದ ಸ್ಕ್ರಬ್ಬಿಂಗ್ ಬೇಡ ಸ್ಕ್ರಬ್ಸ್, ಪೀಲ್ಸ್ ಹಾಗೂ ಟೋನರ್‌ಗಳು ಚರ್ಮದಿಂದ ಡೆಡ್ ಸ್ಕಿನ್ ಸೆಲ್ ತೆಗೆದು ಮುಖ ಹೊಳೆಯುವಂತೆ ಮಾಡುತ್ತವೆ. ಆದರೆ, ಅತಿಯಾದ ಎಕ್ಸ್‌ಫೋಲಿಯೇಶನ್ ಚರ್ಮವನ್ನು ತೆಳುಗೊಳಿಸಿ ಬಣ್ಣ ಮಸುಕಾಗುವಂತೆ ಮಾಡುತ್ತದೆ. ವಾರಕ್ಕೆ 2 ಬಾರಿ ಮಾತ್ರ ಸ್ಕ್ರಬ್ ಮಾಡಿದರೆ ಸಾಕು, ಅದೂ ಮೃದುವಾದ ಹಿಟ್ಟನ್ನಿಂದ ಮಾಡಿದರೆ ಒಳ್ಳೆಯದು. ಅತಿಯಾಗಿ ಮುಖವನ್ನು ಪರಚುವಂತ ಒರಟು ಹಿಟ್ಟುಗಳು ಬೇಡ. ಲ್ಯಾಕ್ಟಿಕ್ ಆ್ಯಸಿಡ್ ಇರುವ ಪೀಲ್ಸ್ ಹಾಗೂ ಟೋನರ್ ಬಳಸಿ. 

ಫೋನ್ ಸರಿಯಾಗಿ ಹಿಡಿದುಕೊಳ್ಳಿ.

ಕಡಿಮೆ ಬೆಳಕಿನಲ್ಲಿ ಫೋನ್ ಹಾಗೂ ಲ್ಯಾಪ್‌ಟಾಪ್ ನೋಡುವುದು ಕಣ್ಣಿಗೆ ಹಾನಿಕರ. ಇದರಿಂದ ಕಣ್ಣುಗಳು ಹಾಗೂ  ಹಣೆಯ ಮೇಲೆ ಬೇಗ ಗೆರೆಗಳು ಉಂಟಾಗುತ್ತವೆ. ಅದರ ಬದಲು ಉತ್ತಮ ಬೆಳಕಿನಲ್ಲಿ 45 ಡಿಗ್ರಿಯಲ್ಲಿ ಫೋನ್ ಇಟ್ಟುಕೊಂಡು ಬಳಸಿ.

ಚರ್ಮವನ್ನು ಗಮನಿಸಿ, ಆದರೆ, ಅತಿಯಾಗಿ ತಲೆ ಕೆಡಿಸಿಕೊಳ್ಳಬೇಡಿ. ತ್ವಚೆಗೆ ಈ ರೂಟಿನ್ ಆರಂಭಿಸಿದ ಮೇಲೆ ಚರ್ಮದ ಟೋನ್ ಹಾಗೂ ಇಂಪ್ರೂವ್‌ಮೆಂಟನ್ನು 3ರಿಂದ 4 ವಾರಗಳಿಗೊಮ್ಮೆ ಪರೀಕ್ಷಿಸಿಕೊಳ್ಳಿ. ಏನೂ ಬದಲಾಗಿಲ್ಲವೆಂದರೆ ಚರ್ಮ ತಜ್ಞರನ್ನು ಕಾಣಬಹುದು. ಚರ್ಮಕ್ಕೆ ವಯಸ್ಸಾಗುವುದನ್ನು ಸಂಪೂರ್ಣ ತಪ್ಪಿಸಲಾಗುವುದಿಲ್ಲವಾದರೂ, ಒಂದು ಮಟ್ಟಿಗೆ, ಕೆಲ ವರ್ಷಗಳ ಕಾಲ ಮುಂದೂಡಬಹುದು. 
ಇವೆಲ್ಲದರೊಂದಿಗೆ ಉತ್ತಮ ಆಹಾರ ಸೇವಿಸಿ, ಚೆನ್ನಾಗಿ ನಿದ್ರಿಸಿ. 

click me!