
ಒಮ್ಮೆ ನಿಮ್ಮ ಬೆಸ್ಟೀನ ತಬ್ಬಿಕೊಂಡು ಥ್ಯಾಂಕ್ಸ್ ಹೇಳಿಬಿಡಿ. ನಿಮ್ಮೆಲ್ಲ ಗೆಳೆಯರನ್ನೂ ಕರೆದುಕೊಂಡು ಹೋಗಿ ಟ್ರೀಟ್ ಕೊಡಿಸಿ. ಅರೆ ಯಾಕೆ ಎಂದ್ರಾ? ಅವರು ನಿಮಗೆ ಗೊತ್ತಿಲ್ಲದಂತೆಯೇ ನಿಮಗೆಷ್ಟೊಂದು ಲಾಭಗಳನ್ನು ತಂದುಕೊಟ್ಟಿದ್ದಾರೆ ಗೊತ್ತೇ? ಬದುಕಿನಲ್ಲಿ ಆರೋಗ್ಯ, ಆಯಸ್ಸು, ನೆಮ್ಮದಿ, ಸಂತೋಷ ಎಲ್ಲವನ್ನೂ ಗೆಳೆಯರಿಂದ ಪಡೆದಿದ್ದೀರಿ. ಗೆಳೆತನ ಎಷ್ಟೊಂದು ಪವರ್‌ಫುಲ್ ಎಂದು ತಿಳ್ಕೋಬೇಕಂದ್ರೆ ಫ್ರೆಂಡ್‌ಶಿಪ್ ಕುರಿತ ಈ ಸತ್ಯಗಳನ್ನು ಓದಿ ತಿಳಿಯಿರಿ.
ಗೆಳೆಯರ ಗುಂಪಿನಲ್ಲಿ ಸಿಂಗಲ್ ಆಗಿ ಉಳಿದ ಗೋವಿಂದನ ಗೋಳು!
1. ಗೆಳೆತನವು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೆಚ್ಚು ಜನ ಗೆಳೆಯರಿರುವ ಜನರು ಹೆಚ್ಚು ವರ್ಷ ಬದುಕುತ್ತಾರೆಂಬುದೇ ಇದಕ್ಕೆ ಸಾಕ್ಷಿ. ಗೆಳೆಯರ ಸಂಗದಲ್ಲಿ ಖಿನ್ನತೆ ಕರಗಿ, ಒತ್ತಡ ದೂರ ಓಡುತ್ತದೆ. ಸಂತೋಷ ನಗುವೂ ಹೆಚ್ಚುತ್ತದೆ. ಇದೆಲ್ಲವೂ ನಿಮ್ಮ ಅನುಭವಕ್ಕೂ ಬಂದಿರಬಹುದು. ಗೆಳೆಯರೊಂದಿಗಿದ್ದಾಗ ಆ ಲೋಕವೇ ಬೇರೆಯಲ್ಲವೇ? ನೀವು ಯಾವ ಮುಖವಾಡವೂ ಇಲ್ಲದೆ ಸಂಪೂರ್ಣ ನೀವಾಗಿಯೇ ಇರಬಹುದಲ್ಲವೇ? ಒಂಟಿಯಾಗಿ ಬದುಕುವುದು ತೂಕ ಹೆಚ್ಚಳ ಇಲ್ಲವೇ ಸ್ಮೋಕಿಂಗ್ ಚಟವಿದ್ದಷ್ಟೇ ಆರೋಗ್ಯಕ್ಕೆ ಹಾನಿಕರ.
2. ಮಕ್ಕಳು ನಾವೆಣಿಸಿದ್ದಕ್ಕಿಂತಾ ಸ್ಮಾರ್ಟ್ ಇರುತ್ತಾರೆ. ಕೇವಲ 9 ತಿಂಗಳಿನ ಮಗುವಿಗೆ ಕೂಡಾ ಗೆಳೆತನದ ವಿಷಯ ಅರ್ಥವಾಗುತ್ತದೆ. ಒಂದೇ ರೀತಿಯ ಇಷ್ಟ ಕಷ್ಟಗಳಿರುವ ಜನರು ಗೆಳೆಯರಾಗುತ್ತಾರೆ ಎಂಬುದನ್ನು 9 ತಿಂಗಳ ಮುಗು ಕೂಡಾ ಗುರುತಿಸಿ ಗಮನಿಸಬಲ್ಲದು ಎಂಬುದನ್ನು ಸಂಶೋಧನೆ ಸಾಬೀತುಪಡಿಸಿದೆ.
3. ಸಾಮಾನ್ಯವಾಗಿ ನಿಮ್ಮ ಜೀವಮಾನದಲ್ಲಿ ಒಟ್ಟು 396 ಗೆಳೆಯರನ್ನು ಪಡೆದಿರುತ್ತೀರಿ. ಆದರೆ, ಇಷ್ಟರಲ್ಲಿ ಕಡೆತನಕ ಉಳಿಯುವುದು 36 ಮಾತ್ರ. ಅಂದರೆ 12 ಜನ ಗೆಳೆಯರಲ್ಲಿ ಒಬ್ಬರು ಮಾತ್ರ ಹೆಚ್ಚು ಕಾಲ ಗೆಳೆತನದಲ್ಲಿ ಉಳಿಯುತ್ತಾರೆ. ಅಂದರೆ, ಈ 36 ಜನ ನಿಮಗೆ ನಿಜಕ್ಕೂ ಬಹಳ ಸ್ಪೆಶಲ್ ಅಲ್ಲವೇ?
ಗುದ್ದಾಟಕ್ಕಿಂತ ಹೆಚ್ಚು ಮುದ್ದಾಟವಿದ್ದರೆ ಸಂಬಂಧ ಚೆಂದ!
4. ಲವ್ ಗೆಳೆತನದ ಮೇಲೆ ನೇರ ಪರಿಣಾಮ ಬೀರುತ್ತದೆ. ನಿಮಗೆ ಬಾಯ್‌ಫ್ರೆಂಡ್/ಗರ್ಲ್‌ಫ್ರೆಂಡ್ ಸಿಗುತ್ತಿದ್ದಂತೆಯೇ ನೀವು ಸಾಮಾನ್ಯವಾಗಿ ಜೀವನದ ಇಬ್ಬರು ಅತಿ ಮುಖ್ಯ ವ್ಯಕ್ತಿಗಳನ್ನು ಮುಂಚಿಗಿಂತ ಸ್ವಲ್ಪ ದೂರವಿಡುತ್ತೀರಿ. ಈ ಪ್ರಮುಖ ವ್ಯಕ್ತಿಗಳು ನಿಮ್ಮ ಬೆಸ್ಟೀ ಅಥವಾ ಕುಟುಂಬ ಸದಸ್ಯರು ಯಾರಾದರೂ ಆಗಿರಬಹುದು. ತಪ್ಪಲ್ಲವೇ?
5. ಅಧ್ಯಯನಗಳ ಪ್ರಕಾರ, ಗೆಳೆತನದಿಂದ ಆರಂಭವಾದ ಪ್ರೀತಿ ಕಡೆತನಕ ಉಳಿಯುತ್ತದೆ. ಅಂದರೆ ನಿಮ್ಮ ಗೆಳೆಯನನ್ನೇ ಪ್ರೀತಿಸಿ ಮದುವೆಯಾದರೆ, ಆ ಮದುವೆ ಕಡೆ ತನಕ ಉಳಿವ ಸಾಧ್ಯತೆಗಳು ಹೆಚ್ಚು. ಮದುವೆಯಾದ ಬಳಿಕ ಸಂಗಾತಿಯನ್ನು ಬೆಸ್ಟ್ ಫ್ರೆಂಡ್ ಆಗಿ ನೋಡಿದಾಗ ಕೂಡಾ ಇದು ಸಾಧ್ಯ.
6. ಗೆಳೆಯರ ಗುಂಪಿನೊಡನೆ ತಿರುಗಾಡುವುದರಿಂದ ನಿಮ್ಮ ಆಕರ್ಷಕತೆ ಹೆಚ್ಚುತ್ತದೆ ಎಂಬ ವಿಷಯ ಗೊತ್ತೇ? ಇದನ್ನು ಚಿಯರ್‌ಲೀಡರ್ ಎಫೆಕ್ಟ್ ಎನ್ನುತ್ತಾರೆ. ನೀವು ಹಾಗೂ ಗೆಳೆಯರೆಲ್ಲರೂ ಒಟ್ಟಿಗಿದ್ದರೆ ಆಕರ್ಷಕವಾಗಿ ಕಾಣಿಸುವುದು ಎಷ್ಟು ಸಂತಸದ ವಿಷಯವಲ್ಲವೇ? ಆಕರ್ಷಕತೆ ಉಳಿಸಿಕೊಳ್ಳಬೇಕೆಂದರೆ ಗೆಳೆತನವನ್ನು ಉಳಿಸಿಕೊಳ್ಳಿ.
ಪ್ರಿಯ ಮಗನೇ, ವೈವಾಹಿಕ ಜೀವನದಲ್ಲಿ ನಾನು ಮಾಡಿದ ತಪ್ಪನ್ನು ನೀನು ಪುನರಾವರ್ತಿಸಬೇಡ...
7. ಪ್ರತಿ ಏಳು ವರ್ಷಗಳಲ್ಲಿ ನಾವು ನಮ್ಮ ಗೆಳೆಯರ ಗುಂಪಿನ ಅರ್ಧದಷ್ಟು ಜನರನ್ನು ಕಳೆದುಕೊಳ್ಳುತ್ತೇವೆ. ಒಂದು ವೇಳೆ ಗೆಳೆತನ ಏಳು ವರ್ಷ ನಿರಂತರವಾಗಿ ಮುಂದುವರೆಯಿತೆಂದರೆ ಆ ಸಂಬಂಧ ಬಹುತೇಕ ಜೀವನಪರ್ಯಂತ ಉಳಿಯುತ್ತದೆ.
8. ಪ್ರಾಣಿಗಳೂ ಫ್ರೆಂಡ್ಸ್ ಮಾಡಿಕೊಳ್ಳಬಹುದು ! ಫರ್ ಹೊಂದಿರುವ ಪ್ರಾಣಿಗಳು ತಮ್ಮ ಜಾತಿಯವಲ್ಲದ ಪ್ರಾಣಿಗಳೊಡನೆಯೂ ಜೀವನದುದ್ದಕ್ಕೂ ಗೆಳೆತನ ಕಾಪಾಡಿಕೊಳ್ಳಬಲ್ಲವು ಎಂಬುದನ್ನು ಅಧ್ಯಯನಗಳು ಕಂಡುಕೊಂಡಿವೆ. ಚಿಂಪಾಂಜಿಗಳು, ಬಬೂನ್ಸ್, ಆನೆಗಳು, ಡಾಲ್ಫಿನ್, ಕುದುರೆಗಳು, ಬಾವಲಿಗಳು ಕೂಡಾ ಹೀಗೆ ಅತ್ಯುತ್ತಮ ಗೆಳೆಯರಾಗಬಲ್ಲವು ಎಂಬುದನ್ನು ಸಂಶೋಧನೆಗಳು ತೋರಿಸಿವೆ. ಇದನ್ನು ಕೇಳಿದರೆ ಬಾಲ್ಯದಲ್ಲಿ ಕೇಳಿದ ಪ್ರಾಣಿಗಳ ಕತೆಯೆಲ್ಲ ನಿಜ ಎನಿಸುತ್ತದಲ್ಲವೇ?
9. ಇದು ಬಹಳ ಆಡ್ ಎನಿಸಬಹುದು. ಆದರೆ, ಕ್ಲೋಸ್ ಫ್ರೆಂಡ್ಸ್ ಜೀನ್ಸ್ ಶೇ.1ರಷ್ಟು ಮಟ್ಟಿಗೆ ಒಂದೇ ತರ ಇರುತ್ತದೆ. ಇದನ್ನು ಕೇಳಿದರೆ ಹತ್ತಿರದ ಗೆಳೆಯರು ಕುಟುಂಬದವರೇ ಎನಿಸುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ ಅಲ್ಲವೇ? ಇದಕ್ಕೇ ಬಹುಷಃ ಕೆಮಿಸ್ಟ್ರಿ ಮ್ಯಾಚ್ ಆಗುವುದು ಎನ್ನುವುದೇನೋ?!
ಟಾಯ್ಲೆಟ್ ಸೀಟ್ ಮುಖಾಂತರ ಲೈಂಗಿಕ ಕಾಯಿಲೆಗಳು ಹರಡುತ್ತಾ?
10. ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ತೂಕವನ್ನು ನಿಯಂತ್ರಿಸುತ್ತಾರೆ. ಅವರು ಹೆಚ್ಚಾಗಿ ಜಂಕ್ ಫುಡ್ ತಿನ್ನುತ್ತಿದ್ದರೆ ನೀವೂ ಜಂಕ್ ತಿನ್ನುವ ಸಾಧ್ಯತೆ ಹೆಚ್ಚು. ಅವರು ಆರೋಗ್ಯಕರ ಆಹಾರ ತಿನ್ನುತ್ತಿದ್ದರೆ ನೀವು ಕೂಡಾ ಉತ್ತಮ ಡಯಟ್ ರೂಢಿಸಿಕೊಳ್ಳುತ್ತೀರಿ. ಹೀಗಾಗಿ ಬೆಸ್ಟ್ ಫ್ರೆಂಡ್ ನಿಮ್ಮ ತೂಕ ಹೆಚ್ಚಳಕ್ಕೂ, ನಿಯಂತ್ರಣಕ್ಕೂ ಕಾರಣರಾಗಬಲ್ಲರು.
11. ನಿಮ್ಮ ಗೆಳೆಯರು ಯಾವ ಸನ್ನಿವೇಶಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಗೊತ್ತಿದ್ದರೆ ಅಂಥ ಗೆಳೆತನ ಹೆಚ್ಚು ಕಾಲ ಉಳಿಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.