ಉಪನ್ಯಾಸಕಿ ಆಗುಂಬೆ ವಿದ್ಯಾರ ರಷ್ಯಾ ಪ್ರವಾಸಾನುಭವ...

By Web Desk  |  First Published Jan 12, 2019, 3:35 PM IST

'ದೇಶ ಸುತ್ತಿ ನೋಡು ಕೋಶ ಓದಿ ನೋಡು...' ಎನ್ನುತ್ತಾರೆ. ಎರಡೂ ಅಭ್ಯಾಸವಿದ್ದರಂತೂ ಜೀವನ  ಬಿಂದಾಸ್. ಇಂಥ ಅಪರೂಪದ ಹವ್ಯಾಸಗಳನ್ನು ಇಟ್ಟಿಕೊಂಡಿರುವ ಕಾನೂನು ಉಪನ್ಯಾಸಕಿ ವಿದ್ಯಾ ಆಗುಂಬೆ ಅವರ ರಷ್ಯಾ ಪ್ರವಾಸ ಕಥನವಿಲ್ಲಿದೆ.


- ವಿದ್ಯಾ, ಆಗುಂಬೆ

'ಹೆತ್ತೂರು, ಹೊತ್ತೂರು..' ಬಿಟ್ಟು ದೇಶಾಂತರ ಹೋಗೋದು ನಂಗಿಷ್ಟ.  ಕಲಿಸೋದು ಕಾನೂನು. ದೇಶ, ವಿದೇಶ ಸುತ್ತೋದು ನನ್ನ ಪ್ಯಾಷನ್. ದಕ್ಷಿಣದ ಚಿರಾಪುಂಜಿ ಆಗುಂಬೆಯಲ್ಲಿ ಬೆಳೆದ ನನಗೆ ಕಾಡು, ಮಳೆ ಗೊತ್ತಿತ್ತು. ಬಿಸಿಲಿನ ಬೇಗೆ ಹಾಗೂ ಹಿಮಪಾತದ ಅನುಭವವೂ ಈಗಾಯಿತು. ಇಂಬಳದ ನಡುವೆಯೇ ಬೆಳೆದ ನನಗೆ ದೇಶ ವಿದೇಶದ ಹಲವು ಸ್ಥಳಗಳೀಗ ಚಿರಪರಿಚಿತ.

ಹತ್ತಾರು ದೇಶಗಳನ್ನು ಸುತ್ತಿದರೂ ಇತ್ತೀಚೆಗೆ ಭೇಟಿ ನೀಡಿದ ರಷ್ಯಾ ನನ್ನನ್ನು ಇನ್ನಿಲ್ಲದಂತೆ ಆಕರ್ಷಿಸಿದೆ. ಹತ್ತು ದಿನಗಳ ಸೇಂಟ್ ಪೀಟಸ್ಪರ್ಗ್ ಹಾಗೂ ಮಾಸ್ಕೋ ಪ್ರವಾಸ ನನ್ನನ್ನು ಮೋಡಿ ಮಾಡಿವೆ. ಅಲ್ಲಿಯ ಹವಾಮಾನ, ಚಿನ್ನದಂತೆ ಹೊಳೆಯುವ ಅರಮನೆಗಳು, ರಷ್ಯನ್ನರ ಸಿರಿವಂತಿಕೆ, ಕಲೆ, ಸಂಪ್ರದಾಯ ಎಲ್ಲವನ್ನೂ ನೋಡಿದ ನಾನು ಭಾವಪರವಶಳಾಗಿದ್ದೇನೆ.  ಏನೋ ಧನ್ಯತಾ ಭಾವ...

Tap to resize

Latest Videos

undefined

ನಯನ ಮನೋಹರ ನಗರಿ...
ಸೇಂಟ್ ಪೀಟರ್ಸ್ಬಗ್ (Saint Petersburg)ರಷ್ಯಾದೊಂದು ಸಾಂಪ್ರದಾಯಿಕ ನಗರ. ಮಾಸ್ಕೋದಿಂದ ಸುಮಾರು 700 ಕಿ.ಮೀ. ದೂರದಲ್ಲಿರೋ ಈ ನಗರವನ್ನು ತಲುಪಲು ರೈಲು, ಬಸ್ಸು ಹಾಗೂ ವಿಮಾನದ ವ್ಯವಸ್ಥೆ ಇದೆ. ಶ್ರೀಮಂತಿಕೆಯ ಆಗರವಾದ ಈ ನಗರ ಚಳಿಗಾಲದಲ್ಲಿ ಇನ್ನೂ ನಯನ ಮನೋಹರ. 

ಚಳಿಗಾಲದಲ್ಲಿ ಇಲ್ಲಿನ ತಾಪಮಾನ -10 ಡಿಗ್ರಿಯಿಂದ -35 ಡಿಗ್ರಿವರೆಗೂ ಇರುತ್ತದೆ ಎಂದರೆ ಕೊರೆಯುವ ಚಳಿಯನ್ನು ಅನುಭವಿಸಿದವರಿಗಷ್ಟೇ ಗೊತ್ತು. ಸ್ವರ್ಗ ಹೀಗೇ ಇರಬಹುದೇನೋ ಅನ್ನಿಸುವಷ್ಟು ಸೌಂದರ್ಯ. -27 ಡಿಗ್ರಿಯವರೆಗೂ ಇಲ್ಲಿ ಎಲ್ಲವೂ ಮಾಮೂಲಿ. ಸತತ ಹಿಮಪಾತ ಮತ್ತು ಕೊರೆಯುವ ಚಳಿ ನಡುವೆಯೂ ಶಾಲೆಗೆ ಹೋಗುವ ಪುಟ್ಟ ಮಕ್ಕಳು ಹಾಗೆಯೇ ಕೆಲಸಕ್ಕೆ ಹೋಗುತ್ತಾರೆ ದೊಡ್ಡವರು.  
ಆದರೆ ನಮ್ಮನ್ನು ಮಾತ್ರ ಕಾಪಾಡಿದ್ದು ಯಾವಾಗ್ಲೋ ಊಟಿಯಲ್ಲಿ ಕೊಂಡ ಸ್ವೆಟರ್, ಜಾಕೆಟ್ ಮತ್ತು ಮಂಕಿ ಕ್ಯಾಪ್. ಒಂದಲ್ಲ ಎರಡಲ್ಲ ಒಟ್ಟಿಗೆ 5 ರಿಂದ 6 ಸ್ವೆಟರ್ ಹಾಕಿಕೊಂಡರೆ  ಮಾತ್ರ ಸ್ವಲ್ಪ ಹೊತ್ತು ಹೊರ ಸುತ್ತಾಡಬಹುದು. 

ಭಾರತೀಯ ಮೂಲದ ‘ತಂದೂರಿ’, ‘ನಮಸ್ತೆ’ ಹೀಗೆ ಹಲವಾರು ಹೋಟೆಲ್‌ಗಳಿರುವುದರಿಂದ ಭಾರತೀಯರ ಹೊಟ್ಟೆಪಾಡಿಗಿಲ್ಲಿಲ್ಲ ಕಷ್ಟ. 

ಅರಮನೆ, ಬ್ಯಾಲೆ ವೈಭವವನ್ನು ಕಣ್ತುಂಬಿಕೊಳ್ಳಿ...
ಸೇಂಟ್ ಪೀಟರ್ಸ್ಬಗ್ ನೇವ ನದಿಯ ದಡದಲ್ಲಿದೆ. ಇದು ನದಿಯೋ, ಹಿಮದ ರಾಶಿಯೊ ಗೊತ್ತಾಗದಷ್ಟು ಶೀತದ ವಾತಾವರಣ ಇರುತ್ತದೆ. ನೇವ ನದಿಯ ದಡದಲ್ಲಿ ಸ್ಥಳೀಯರು ರಷ್ಯಾದ ಸಾಂಪ್ರದಾಯಿಕ ಉಡುಗೆ ಮತ್ತು ನೃತ್ಯದಿಂದ ಪ್ರವಾಸಿಗರನ್ನು ರಂಜಿಸುತ್ತಾರೆ.

ಮಹಾರಾಣಿ ಕ್ಯಾಥರೀನ್ ದಿ ಗ್ರೇಟ್ ರಷ್ಯಾದ ಮಹಾನ್ ನಾಯಕಿ. ಆಕೆ ಕಟ್ಟಿಸಿದ್ದ ಅರಮನೆ ಇದು.. ಆಕೆಯ ಜನಪರ ಕಾಳಜಿ, ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಆಕೆ ನೀಡಿದ್ದ ಕೊಡುಗೆಯಿಂದ ಇಲ್ಲಿನ ಮಂದಿಗೆ ಆಕೆ ನಿತ್ಯ ಸ್ಮರಣೀಯಳು. 

ಸೈನ್ಟ್ ಐಸಾಕ್ ಕ್ಯಾಥೆಡ್ರೆಲ್, ಸ್ಪಿಲ್ಲ್ಡ್ ಬ್ಲಡ್ ಕ್ಯಾಥೆಡ್ರೆಲ್ ಹೀಗೇ ಹಲವಾರು ಕಟ್ಟಡಗಳು ಕಲೆ, ಸೌಂದರ್ಯದ ಜೊತೆಗೆ ರಷ್ಯಾ ಕಂಡ ಸಾವು, ನೋವು, ಭಯ, ಯುದ್ಧ ಹಾಗೂ ರಕ್ತಚರಿತ್ರೆಯನ್ನು ಕೂಗಿ ಕೂಗಿ ಹೇಳುತ್ತೆ.

ರಷ್ಯಾದ ಸಾಂಸ್ಕೃತಿಕ ಕಲೆಗಳಲ್ಲಿ ಮುಖ್ಯವಾದದು ಬ್ಯಾಲೆ ನೃತ್ಯ. ‌ಈ ಕಲಾ ಪ್ರಾಕಾರವನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಡುವ ಜಾಗ ಮಿರಿನ್‌ಸ್ಕಿ ಥೀಯೇಟರ್. 1860ರಲ್ಲಿ ಸ್ಥಾಪಿಸಲಾದ ಈ ಥೀಯೇಟರ್ ನೋಡಲು ಎರಡು ಕಣ್ಣುಗಳು ಸಾಲದು.

ಹರ್ಮಿಟೇಜ್ ಸಂಗ್ರಹಾಲಯ ಪ್ರವಾಸಿಗರು ನೋಡಲೇ ಬೇಕಾದ ಸ್ಥಳ. ಇದು USSRನ ಗತಕಾಲದ ವೈಭವಕ್ಕೆ ಸಾಕ್ಷಿ. ಇಲ್ಲಿನ ಅಂಬರ್ ಕೋಣೆಯಲ್ಲಿ 20 ಸಾವಿರ ತರಹದ ಅತ್ಯಮೂಲ್ಯ ಅಂಬರ್ ಇದೆ. ಈ ಸಂಗ್ರಹಾಲಯ ಪೀಟರ್ ದಿ ಗ್ರೇಟ್ ಅರಮನೆಯಲ್ಲಿದೆ.  ಈ ಅರಮನೆಯಲ್ಲಿ ಸರಿಸುಮಾರು 1500 ಕೋಣೆಗಳಿದ್ದು ಚಿನ್ನ, ಬೆಳ್ಳಿ, ವಜ್ರ, ವೈಡೂರ್ಯ, ಚಿತ್ರಕಲೆ ಹಾಗೂ ಪ್ರಪಂಚದ ವಿಶೇಷ ವಸ್ತುಗಳು ತುಂಬಿ ತುಳುಕುತ್ತಿವೆ.

ರಷ್ಯಾದ ಮಹಾನ್ ನಾಯಕರಲ್ಲಿ ಒಬ್ಬರಾದ ಪೀಟರ್ ದಿ ಗ್ರೇಟ್ ಒಮ್ಮೆ ಫ್ರಾನ್ಸ್ ವೆರ್ಸಲ್ಲಿಸ್ ಅರಮನೆಯನ್ನು ಕಂಡು ತಾನೂ ಅದಕ್ಕಿಂತ ಸುಂದರ ಐಷಾರಾಮಿ ಅರಮನೆಯನ್ನು ಮಾಡಬೇಕೆಂದುಕೊಂಡು ಮಾಡಿದ್ದೇ ಇಲ್ಲಿನ ಗ್ರಾಂಡ್ ಪ್ಯಾಲೇಸ್. ಇಲ್ಲಿ ಮುಟ್ಟಿದ್ದೆಲ್ಲಾ ಚಿನ್ನ.  ಗೋಡೆಯ ಕೆಂಪು ಬಣ್ಣ ಹವಳ ಅರೆದು ಹಚ್ಚಿದ್ದು...! ಹಾಗೆಯೇ ಅಮೂಲ್ಯ ಹರಳುಗಳನ್ನು ಅರೆದು ಮಾಡಿದ ಗೋಡೆಗಳೂ ಇಲ್ಲಿವೆ.

ಹೇಗೆ ಹೋಗಬಹುದು?
ಬೆಂಗಳೂರಿನಿಂದ ಹಲವಾರು ವಿಮಾನ ಮಾರ್ಗಗಳಿವೆ. ನಾನು ಹೊರಟಿದ್ದು ಮಸ್ಕಟ್ ಮೂಲಕ. ಬೆಂಗಳೂರಿನಿಂದ ಮಸ್ಕಟ್ ಅಲ್ಲಿಂದ ಮಾಸ್ಕೊ ಸುಮಾರು 10 ರಿಂದ 12 ಗಂಟೆ ಪ್ರಯಾಣ. ಸರಿಯಾದ ಟ್ರಾವೆಲ್ ಕಂಪನಿಯ ಸಹಾಯದಿಂದ ಕಡಿಮೆ ಖರ್ಚಿನಲ್ಲಿ ಸೇಂಟ್ ಪೀಟರ್ಸ್ಬಗ್ ತಲುಪಬಹುದು. 

ಸುಂದರ ಉದ್ಯಾನವನಗಳ ನೆನಪುಗಳನ್ನು ಮನದುಂಬಿಕೊಂಡ ನನಗೆ ಅನ್ನಿಸಿದ್ದು ಒಂದೇ. ಯುದ್ಧ, ದ್ವೇಷ ಹಾಗೂ ಸ್ಪರ್ಧೆ ರಷ್ಯನ್ನರು ಒರಟು ಮನುಷ್ಯರನ್ನಾಗಿ ಮಾಡಿದೆ. ಅವರಿಗೂ ಯಂತ್ರಕ್ಕೂ ವ್ಯತ್ಯಾಸವಿಲ್ಲ. ಆದರೆ ಅವರ ಪ್ರಾಮಾಣಿಕತೆಗೊಂದು ನನ್ನ ನಮನ.  ಹೊರಬಂದಾಗ ನನ್ನ ಮನಸ್ಸನ್ನು ಕಾಡಿದ್ದು ಒಂದೇ ಪ್ರಶ್ನೆ  'ಇಷ್ಟು ಸೌಂದರ್ಯ ಹಾಗೂ ಸಂಪತ್ತಿದ್ದರೂ ರಷ್ಯನ್ನರು ಯಾಕೆ ನಗುವುದಿಲ್ಲ?' ಉತ್ತರ ಹುಡುಕಲು ತುಸು ಕಾಸ್ಟ್ಲಿಯಾದರೂ ರಷ್ಯಾ ಪ್ರವಾಸ ಕೈಗೊಳ್ಳಿ.

click me!