ಮಂಗಳೂರಿನ ನದಿಗಳು ಚೆಂದ. ನೇತ್ರಾವತಿ, ಶಾಂಭವಿ, ಫಲ್ಗುಣಿ ಮಳೆಗಾಲದಲ್ಲಿ ರಭಸದಿಂದ, ಮಳೆ ನಿಂತ ಮೇಲೆ ಸಮಾಧಾನದಿಂದ ಸಾಗುತ್ತಾ ಸಮುದ್ರ ಸೇರುವ ಪರಿ ನೋಡುವುದೇ ಚೆಂದ. ನದಿ ದಂಡೆಗಳ ಮೇಲೆ ಕುಳಿತು ಅವುಗಳ ಚೆಲುವು ಆಸ್ವಾದಿಸುವ ಕ್ಷಣಗಳು ಜೀವಕ್ಕೆ ಶಕ್ತಿ ತುಂಬುತ್ತಲೆ. ಈ ಜೀವ ನದಿಗಳ ಸೌದರ್ಯ ಆರಾಧಿಸುವ ಅವಕಾಶ ಬಂದಿದೆ. ಆ ಅವಕಾಶದ ಹೆಸರು ನದಿ ಉತ್ಸವ. ಜ.12 ಮತ್ತು ಜ.13 ನಿಮ್ಮನ್ನು ನೋಡಲು ನದಿಗಳು ತಯಾರಾಗಿವೆ.
ಆತ್ಮಭೂಷಣ, ಮಂಗಳೂರು
ಕರಾವಳಿ ಚೆಂದವನ್ನು ಹೆಚ್ಚಿಸುವುದು ನದಿಗಳು. ನೇತ್ರಾವತಿ, ಶಾಂಭವಿ ಫಲ್ಗುಣಿ ಹೀಗೆ ಅನೇಕ ನದಿಗಳು ಜಿಲ್ಲೆಯ ತುಂಬಾ ಓಡಾಡಿಕೊಂಡು ಸಂಭ್ರಮ ಹೆಚ್ಚಿಸುತ್ತವೆ. ಒಂದು ಸಂಜೆ ನದಿ ದಂಡೆ ಮೇಲೆ ಕುಳಿತರೆ ತಿಂಗಳು ಪೂರ್ತಿ ಸಂತೋಷದಿಂದಿರುವ ಉಲ್ಲಾಸ ತುಂಬುತ್ತದೆ. ನದಿಗಳು ಸಮುದ್ರ ಸೇರುವ ಪರಿಯಂತೂ ಚೆಂದವೋ ಚೆಂದ. ಸೂರ್ಯ ಮುಳುಗುವ ಹೊತ್ತು ಬಾನು ಕೆಂಪಾಗಿ ನದಿಗಳೆಲ್ಲಾ ನಾಚಿದಂತೆ ಕಾಣಿಸುವ ಕ್ಷಣವನ್ನು ಕಂಡವರು ಆ ಅದ್ಭುತ ಕ್ಷಣವನ್ನು ಮರೆಯುವುದು ಯಾವತ್ತೂ ಕಷ್ಟ.
ಇದೀಗ ಮಂಗಳೂರಿನ ನದಿಗಳನ್ನು ಆರಾಧಿಸುವ ಅವಕಾಶ ಬಂದಿದೆ. ಅದರ ಹೆಸರು ನದಿ ಉತ್ಸವ.
ಸೌಂದರ್ಯದೊಂದಿಗೆ ಇತಿಹಾಸ ಹೇಳುತ್ತೆ ಕವಲೇದುರ್ಗ
ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ
ಕರಾವಳಿ ತೀರವನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವುದರಲ್ಲಿ ಕೇರಳಕ್ಕೆ ಮೊದಲ ಸ್ಥಾನ. ಇದಕ್ಕೆ ತೀವ್ರವಾಗಿ ಪೈಪೋಟಿ ನೀಡುತ್ತಿವೆ ಕರ್ನಾಟಕದ ಕರಾವಳಿಗಳು. ಕಡಲ, ನದಿ ತೀರಗಳಲ್ಲಿ ನಡೆದ ಕರಾವಳಿ ಉತ್ಸವ, ಬೀಚ್ ಫೆಸ್ಟಿವಲ್, ಸರ್ಫಿಂಗ್ ಫೆಸ್ಟಿವಲ್, ಆ್ಯಂಗ್ಲಿಂಗ್ ಫೆಸ್ಟಿವಲ್‌ಗಳು ಜನರನ್ನು ಸಮುದ್ರ, ನದಿ ತೀರಕ್ಕೆ ಕರೆತಂದವು. ಈ ಸಾಲಿಗೆ ರಿವರ್ ಫೆಸ್ಟಿವಲ್(ನದಿ ಉತ್ಸವ) ಹೊಸ ಸೇರ್ಪಡೆ. ಕರ್ನಾಟಕ ಕರಾವಳಿ ಮಟ್ಟಿಗೂ ಇದು ಹೊಸತು. ಕೇರಳದಲ್ಲಿ ಹಿನ್ನೀರು ಸಹಿತ ನದಿ, ಸಮುದ್ರವನ್ನು ಯಥೇಚ್ಛವಾಗಿ ಪ್ರವಾಸೋದ್ಯಮಕ್ಕೆ ಬಳಸುತ್ತಾರೆ. ಅದೇ ಮಾದರಿಯಲ್ಲಿ ಕಾರವಳಿ ಸಮುದ್ರ ತೀರ ಹಾಗೂ ನದಿಯನ್ನು ಬಳಕೆ ಮಾಡಲು ಚಿಂತಿಸಲಾಗಿದೆ. ಅದುವೇ ಪ್ರಥಮ ಬಾರಿಗೆ ನದಿ ಉತ್ಸವಕ್ಕೆ ತೆರೆದುಕೊಂಡಿದೆ.
ಹೆಸರೇ ಹೇಳುವಂತೆ ಇದು ನದಿ ಉತ್ಸವ. ಎಲ್ಲ ಕಾರ್ಯಕ್ರಮಗಳೂ ನದಿಯಲ್ಲಿ ಅರ್ಥಾತ್ ದ್ವೀಪ ಸದೃಶ್ಯ ವಾತಾವರಣದಲ್ಲಿ ನಡೆಯುತ್ತದೆ. ಇದೇ ಜ.12 ಮತ್ತು 13ರಂದು ಈ ಉತ್ಸವ ನಡೆಯಲಿದೆ. ಮಂಗಳೂರು ನಗರ ಸರಹದ್ದಿನ ಕೂಳೂರಿನಲ್ಲಿ ಫಲ್ಗುಣಿ ನದಿಯಲ್ಲಿ ಈ ಉತ್ಸವಕ್ಕೆ ಸಕಲ ಏರ್ಪಾಟು ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ 25 ಲಕ್ಷ ರು. ವೆಚ್ಚದಲ್ಲಿ ಈ ಉತ್ಸವ ನಡೆಯುತ್ತಿದೆ. ಬಂಗ್ರಕೂಳೂರಿನ ಸುಮಾರು 20 ಎಕರೆ ಸರ್ಕಾರಿ ಪ್ರದೇಶವನ್ನು ಉತ್ಸವಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಇವು ನೋಡಲೇಬೇಕಾದ ಭಾರತದ ವಿಚಿತ್ರ ತಾಣಗಳಿವು...
ಏನೆಲ್ಲ ಇರುತ್ತೆ?
ನದಿ ಉತ್ಸವಕ್ಕೆ ನದಿ ಮೇಲಿನ ಎಲ್ಲ ಪ್ರವಾಸೋದ್ಯಮ ಅವಕಾಶಗಳಿಗೆ ಒತ್ತು ನೀಡಲಾಗಿದೆ. ಮುಖ್ಯವಾಗಿ ರೋಯಿಂಗ್, ಕಯಾಕ್, ಸ್ಟ್ಯಾಂಡ್ ಅಪ್ ಪೆಡಲಿಂಗ್, ವಿಂಡ್ ಸರ್ಫಿಂಗ್, ಜೆಟ್ ಸ್ಕೀ, ಸ್ಪೀಡ್ ಬೋಟ್ ಒಳಗೊಂಡ ವಿವಿಧ ಜಲಕ್ರೀಡೆಗೆ ಚಟುವಟಿಕೆ ನಡೆಯಲಿದೆ. ಸಾಹಸಮಯ ಕ್ರೀಡೆ ವೀಕ್ಷಣೆಗೆ ಹಾಗೂ ಅದರಲ್ಲಿ ಸ್ವತಃ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ.
ನದಿಯಲ್ಲೇ ತೇಲುವ ಆಹಾರ ಮಳಿಗೆಗಳು, ವಿಭಿನ್ನ ಸ್ಥಳೀಯ ಆಹಾರೋತ್ಪನ್ನಗಳ ಫ್ಲೀ ಮಾರ್ಕೆಟ್, ನದಿಗಳನ್ನಾಧರಿಸಿದ ನದಿ ಚಲನಚಿತ್ರೋತ್ಸವ, ದ.ಕ.ಜಿಲ್ಲೆಯ ಸ್ಥಳೀಯ ಕಲೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವೇದಿಕೆ ಇರಲಿದೆ. ಬೆಳಗ್ಗೆ 8.30ಕ್ಕೆ ನದಿ ಉತ್ಸವ ಆರಂಭವಾದರೆ, ಎರಡು ದಿನಗಳ ಕಾಲ ರಾತ್ರಿ 8 ಗಂಟೆವರೆಗೂ ನಡೆಯಲಿದೆ.
ದಾರಿ ಯಾವುದಯ್ಯಾ ನದಿ ಉತ್ಸವಕೆ
ನದಿ ಉತ್ಸವ ಸ್ಥಳಕ್ಕೆ ಬರಲು ಮೂರು ಕಡೆ ಬೋಟ್ ಸಂಚಾರ ವ್ಯವಸ್ಥೆ ಇದೆ. ಕೂಳೂರು ಜಂಕ್ಷನ್, ಸುಲ್ತಾನ್‌ಬತ್ತೇರಿ ಹಾಗೂ ತಣ್ಣೀರುಬಾವಿ ಮೂಲಕ ಹೋಗಬಹುದು. ನದಿ ಉತ್ಸವ ಸ್ಥಳದಲ್ಲಿ ನದಿ ಬದಿ ನಡೆದುಕೊಂಡು ಹೋಗಿ ಸೌಂದರ್ಯ ಆಸ್ವಾದಿಸಲೂ ವ್ಯವಸ್ಥೆ ಮಾಡಲಾಗಿದೆ. ನದಿ ಉತ್ಸವಕ್ಕೆ ತೆರಳಲು ಪ್ರತ್ಯೇಕ ಜೆಟ್ಟಿ(ಬೋಟ್ ನಿಲ್ಲುವ ಸ್ಥಳ) ನಿರ್ಮಾಣ ಮಾಡಲಾಗಿದೆ. ಸುಲ್ತಾನ್‌ಬತ್ತೇರಿ ಹಾಗೂ ಕೂಳೂರಿನಿಂದ ಬೋಟ್ ಮೂಲಕವೇ ಉತ್ಸವ ಸ್ಥಳವನ್ನು ತಲುಪಬೇಕು. ಇದಕ್ಕೆ ಪ್ರತ್ಯೇಕ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಒಬ್ಬ ಪ್ರಯಾಣಿಕ 50 ರು. ನೀಡಿದರೆ, ಉತ್ಸವ ಸ್ಥಳವಲ್ಲದೆ, ಇತರೆ ಜೆಟ್ಟಿಗೂ ಭೇಟಿ ನೀಡಿ ನದಿಯಲ್ಲಿ ಒಂದು ಸುತ್ತು ಪ್ರವಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ನದಿ ಉತ್ಸವಕ್ಕೆ ಹೋಗುವಾರ ಪ್ಲಾಸ್ಟಿಕ್ ಒಯ್ಯುವಂತಿಲ್ಲ. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
ಬೆಂಗಳೂರಿನ ಪಕ್ಕದಲ್ಲೇ ಇದೆ ಮಿನಿ ಜೋಗ
ಮೂರು ನದಿಗಳಲ್ಲೂ ಜೆಟ್ಟಿನಿರ್ಮಾಣ
ಜನರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ನದಿ ತಾಣಗಳನ್ನು ಪ್ರವಾಸೋದ್ಯಮಕ್ಕೆ ಟಚ್ ನೀಡಲು ಉತ್ಸುಕವಾಗಿರುವ ಜಿಲ್ಲಾಡಳಿತ, ಫಲ್ಗುಣಿ, ನೇತ್ರಾವತಿ ಹಾಗೂ ಶಾಂಭವಿ ನದಿಗಳಲ್ಲಿ ಜೆಟ್ಟಿನಿರ್ಮಿಸಲು ಚಿಂತನೆ ನಡೆಸಿದೆ. ಫಲ್ಗುಣಿ ನದಿಯಿಂದ ನೇತ್ರಾವತಿ ನದಿ ತಟದವರೆಗೆ 12 ಕಡೆಗಳಲ್ಲಿ ಜೆಟ್ಟಿನಿರ್ಮಿಸಿ ಪ್ರವಾಸಿ ಬೋಟ್‌ಗಳಿಗೆ ಬಂದುಹೋಗಲು ಅವಕಾಶ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆಗೆ ಸೂಚನೆ ನೀಡಿದೆ. ನದಿಗಳಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇದ್ದು, ಇದರಿಂದಾಗಿ ನದಿಗಳ ಬಳಕೆ, ಮಹತ್ವ ಹಾಗೂ ಅಭಿವೃದ್ಧಿಗೆ ಅನುಕೂಲವಾಗಲಿದೆ ಎನ್ನುವುದು ಜಿಲ್ಲಾಡಳಿತದ ವಿಶ್ವಾಸ.
ಸ್ಥಳೀಯ ಮೀನುಗಾರರ ನೆರವಿನಲ್ಲಿ ನದಿ ಉತ್ಸವವನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ. ಕೇರಳದಲ್ಲಿ ನದಿ ಹಾಗೂ ಸಮುದ್ರವನ್ನು ಪ್ರವಾಸೋದ್ಯಮಕ್ಕೆ ಬಳಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ನಮ್ಮಲ್ಲೂ ನದಿಗಳಲ್ಲಿ ಉತ್ಸವ ಆಚರಿಸುವ ಮೂಲಕ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಮುಂದೆ ಬೇರೆ ನದಿಗಳಲ್ಲೂ ನದಿ ಉತ್ಸವ ಹಮ್ಮಿಕೊಳ್ಳಲಾಗುವುದು.- ಸಸಿಕಾಂತ್ ಸೆಂಥಿಲ್, ನದಿ ಉತ್ಸವ ರೂವಾರಿ, ದ.ಕ ಜಿಲ್ಲಾಧಿಕಾರಿ